ನವಲಗುಂದ: ಮಹದಾಯಿ, ಕಳಸಾ ಬಂಡೂರಿ ಹೋರಾಟಗಾರ ರೈತರ ಮೇಲೆ ದಾಖಲಿಸಿದ್ದ ಎಲ್ಲ ಪ್ರಕರಣ ಹಿಂಪಡೆಯಬೇಕೆಂದು ಹಿಂದಿನ ಸಿದ್ದರಾಮಯ್ಯ ಸರಕಾರ ಆದೇಶ ನೀಡಿದ್ದರೂ ಇನ್ನೂವರೆಗೂ ರೈತರಿಗೆ ಈ ಪ್ರಕರಣಗಳಿಂದ ಮುಕ್ತಿ ದೊರೆತಿಲ್ಲ. ಈ ನಡುವೆಯೇ ಮತ್ತೆ ಸುಮಾರು 25 ರೈತರ ಮೇಲೆ ಸಿಆರ್‌ಪಿಸಿ ಕಲಂ 107 ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ, ತಾಲೂಕು ದಂಡಾಧಿಕಾರಿಗಳಿಗೆ ವರದಿ ನೀಡಿದ್ದಾರೆ. ಅದರನ್ವಯ ದಂಡಾಧಿಕಾರಿಗಳ ಕೋರ್ಟ್‌ಗೆ ಫೆ. 25ರಂದು ಹಾಜರಾಗಬೇಕೆಂದು 25 ರೈತರಿಗೆ ನೋಟಿಸ್ ಜಾರಿಯಾಗಿದೆ.
ಕಳೆದ ಎರಡು ವರ್ಷಗಳ ಹಿಂದೆ ಮಹದಾಯಿ ಹೋರಾಟ ನೇತೃತ್ವ ವಹಿಸಿದ್ದ ಲೋಕನಾಥ ಹೆಬಸೂರ, ಸತ್ಯನಾರಾಯಣ ಹೆಬಸೂರ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ದೇವೇಂದ್ರಪ್ಪ ಹಳ್ಳದ ಸೇರಿದಂತೆ 25 ಜನರ ವಿರುದ್ಧ ಪೊಲೀಸ್ ಇಲಾಖೆ ಸಿಆರ್‌ಪಿಸಿ ಕಲಂ 107 ಅಡಿಯಲ್ಲಿ ಫೆ. 4ರಂದು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿ ತಾಲೂಕಾ ದಂಡಾಧಿಕಾರಿಗೆ ವರದಿ ಸಲ್ಲಿಸಿದೆ.
ನೋಟಿಸ್‌ನಲ್ಲಿ ಏನಿದೆ?: ಪೊಲೀಸ್ ವರದಿ ಅನ್ವಯ 25 ರೈತರಿಗೆ ತಾಲೂಕಾ ದಂಡಾ ಧಿಕಾರಿಗಳು ನೋಟಿಸ್ ರವಾನಿಸಿದ್ದಾರೆ. ಬರಲಿರುವ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಸಾರ್ವಜನಿಕರಲ್ಲಿ ಪ್ರಭಾವ ಬೀರುತ್ತಾ, ಆಸೆ-ಆಕಾಂಕ್ಷೆಗಳನ್ನು ನೀಡುತ್ತಾ, ಪಕ್ಷಭೇದ ಉಂಟುಮಾಡಿ ಅಕ್ರಮ ಎಸಗುವ ಸಂಭವ ಇದೆ. ಶಾಂತತಾ ಭಂಗವಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕಲಂ 107ರ ಅಡಿ ಪ್ರಕರಣವನ್ನು ಪಟ್ಟಣದ ಪೊಲೀಸ್ ಅಧಿಕಾರಿ ದಾಖಲಿಸಿದ್ದಾರೆ. ಈ ಕುರಿತಾಗಿ ಫೆ. 25ರಂದು ತಾಲೂಕಾ ದಂಡಾಧಿಕಾರಿಗಳ ಕಾರ್ಯಾಲಯಕ್ಕೆ ಖುದ್ದಾಗಿ ಹಾಜರಾಗಿ ವಿವರಣೆ ನೀಡುವುದರ ಜತೆಗೆ 50 ಸಾವಿರ ರೂ. ಮುಚ್ಚಳಿಕೆ ಬಾಂಡ್ ನೀಡಿ ಜಾಮೀನು ಏಕೆ ಪಡೆಯಬಾರದು ಎಂದು ದಂಡಾಧಿಕಾರಿಗಳಿಂದ ನೋಟಿಸ್ ಜಾರಿಯಾಗಿದೆ.
ಗಲಭೆ ನಂತರ ಶಾಂತವಾಗಿ ಹೋರಾಟ ನಡೆಸುತ್ತಿದ್ದ ರೈತ ಹೋರಾಟಗಾರಿಗೆ ಪೊಲೀಸರು ಶಾಕ್ ನೀಡಿದ್ದು, ರೈತರು ಮತ್ತೆ ಹೋರಾಟದ ಹಾದಿ ಹಿಡಿಯುವಂತೆ ಮಾಡಿದೆ.
ಮಹದಾಯಿ ನ್ಯಾಯಾಧೀಕರಣದಲ್ಲಿ ತೀರ್ಪು ನೀಡಿದರೂ ಉಭಯ ಸರಕಾರಗಳು ನೀರು ಹರಿಸಲು ಯಾವುದೇ ಪ್ರಕ್ರಿಯೆ ಆರಂಭಿಸಿಲ್ಲ. ಕೂಡಲೇ ಸರಕಾರಗಳು ಎಚ್ಚೆತ್ತುಕೊಳ್ಳದಿದ್ದರೆ ಶಾಸಕರ, ಸಂಸದರ ಮನೆ ಮುಂದೆ ಪ್ರತಿಭಟನೆಗೆ ಮುಂದಾಗಿ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ.
.ಸುಬಾಸಚಂದ್ರಗೌಡ
ಪಾಟೀಲ, ರೈತ ಮುಖಂಡ