Advertisement

ನವಕಾಂತ್‌ ಭಟ್‌ ಸೇರಿ ಐವರಿಗೆ ಇನ್ಫೋಸಿಸ್‌ ಪ್ರಶಸ್ತಿ

11:49 AM Nov 14, 2018 | Team Udayavani |

ಬೆಂಗಳೂರು: ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೊಡಮಾಡುವ ಇನ್ಫೋಸಿಸ್‌ ವಿಜ್ಞಾನ ಪ್ರತಿಷ್ಠಾನದ 2018ನೇ ಸಾಲಿನ ಪ್ರಶಸ್ತಿಗೆ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿರುವ ನ್ಯಾನೋ ವಿಜ್ಞಾನ ಮತ್ತು ತಾಂತ್ರಿಕ ಕೇಂದ್ರದ ಮುಖ್ಯಸ್ಥ ಧರ್ಮಸ್ಥಳ ಮೂಲದ ನವಕಾಂತ್‌ ಭಟ್‌ ಸೇರಿದಂತೆ ಐದು ಮಂದಿ ಭಾಜನರಾಗಿದ್ದಾರೆ.

Advertisement

ಜೈವಿಕ ರಸಾಯನಶಾಸ್ತ್ರದಲ್ಲಿ ಬಯೋಸೆನ್ಸಾರ್‌ ಅಭಿವೃದ್ಧಿ ಹಾಗೂ ಗ್ಯಾಸೋಯಸ್‌ ಸೆನ್ಸಾರ್‌ಗಳ ಅಭಿವೃದ್ಧಿ ಮೂಲಕ ಈಗಿನ ಮೆಟಲ್‌ ಆಕ್ಸೆ„ಡ್‌ ಸೆನ್ಸಾರ್‌ ಸಂಶೋಧನೆಗಾಗಿ ತಾಂತ್ರಿಕ ಮತ್ತು ಗಣಕ ವಿಜ್ಞಾನ (ಇಂಜಿನಿಯರಿಂಗ್‌ ಮತ್ತು ಕಂಪ್ಯೂಟರ್‌ ಸೈನ್ಸ್‌) ವಿಭಾಗದಿಂದ ನವಕಾಂತ್‌ ಭಟ್‌ ಅವರಿಗೆ ಇನ್ಫೋಸಿಸ್‌ ಪ್ರಶಸ್ತಿ ಲಭಿಸಿದೆ.

ಹವಮಾನ ಬದಲಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಸಂಶೋಧನೆ ನಡೆಸಿರುವ ಭಾರತೀಯ ವಿಜ್ಞಾನ ಸಂಸ್ಥೆಯ ವಾಯುಮಂಡಲ ಮತ್ತು ಸಾಗರ ವಿಜ್ಞಾನ ಕೇಂದ್ರದ ಪ್ರಾಧ್ಯಾಪಕ ಎಸ್‌.ಕೆ.ಸತೀಶ್‌ ಅವರನ್ನು ಭೌತ ವಿಜ್ಞಾನ ವಿಭಾಗದಿಂದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಮೊಗಲರ ಸಾಮ್ರಾಜ್ಯ, ರಜಪೂತರು ಮತ್ತು ಡೆಕ್ಕನ್‌ ಕಲೆಗಳ ಕುರಿತು ಸಂಶೋಧನೆ ಮಾಡಿರುವುದರ ಜತೆಗೆ ಐತಿಹಾಸಿಕ ಕಾರ್ಯಕ್ರಮಗಳು, ಸಂಶೋಧನಾ ಬರಹಗಳು ಮತ್ತು ವಸ್ತು ಸಂಗ್ರಹಾಲಯಗಳ ಪಾತ್ರದ ಕುರಿತು ಅಧ್ಯಯನ ನಡೆಸುತ್ತಿರುವ ಕವಿತಾ ಸಿಂಗ್‌ ಅವರಿಗೆ ಮಾನವೀಕ ವಿಜ್ಞಾನ ವಿಭಾಗದಿಂದ ಪ್ರಶಸ್ತಿ ಸಂದಿದೆ. ಸದ್ಯ ಇವರು ನವದೆಹಲಿಯಲ್ಲಿರುವ ಜವಾಹರ್‌ಲಾಲ್‌ ನೆಹರೂ ವಿಶ್ವವಿದ್ಯಾಲಯದ ಸ್ಕೂಲ್‌ ಆಫ್ ಆರ್ಟ್ಸ್ ಆಂಡ್‌ ಅಸ್ತೆಟಿಕ್ಸ್‌ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ರೂಪ್‌ ಮಲ್ಲಿಕ್‌ಗೆ ಪ್ರಶಸ್ತಿ: ಮಾಲಿಕ್ಯೂಲರ್‌ ಮೋಟರ್‌ ಪ್ರೊಟೀನ್ಸ್‌ ಕ್ಷೇತ್ರದಲ್ಲಿ ಸಂಶೋಧನೆ ನಡೆಸುತ್ತಿರುವ ಮುಂಬೈನ ಟಾಟಾ ಇನ್ಸ್‌ಟಿಟ್ಯೂಟ್‌ ಆಫ್ ಫ‌ಂಡಮೆಂಟಲ್‌ ರಿಸರ್ಚ್‌ ಅಸೋಸಿಯೇಟ್‌ ಪ್ರೊಫೆಸರ್‌ ರೂಪ್‌ ಮಲ್ಲಿಕ್‌ ಅವರನ್ನು ಜೀವ ವಿಜ್ಞಾನ ವಿಭಾಗದಿಂದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Advertisement

ಫ್ರ್ಯಾನ್ಸ್‌ ವಿಶ್ವವಿದ್ಯಾಲಯದ ಸ್ಟ್ರಾಸ್‌ಬರ್ಗ್‌ ಇನ್ಸ್‌ಟಿಟ್ಯೂಟ್‌ ಆಫ್ ಅಡ್ವಾನ್ಸ್‌ಡ್‌ ಸ್ಟಡಿಯ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ನಳಿನಿ ಅನಂತರಾಮನ್‌ ಅವರಿಗೆ ಕ್ವಾಂಟಮ್‌ ಕೆಯಾಸ್‌ ಸಂಶೋಧನೆಗಾಗಿ ಇನ್ಫೋಸಿಸ್‌ ಪ್ರಶಸ್ತಿ ದೊರೆತಿದೆ.

ಸಾಮಾಜಿಕ ವಿಜ್ಞಾನ ಕ್ಷೇತ್ರದಿಂದ ಸೆಂಥಿಲ್‌ ಮುಲ್ಲೆ„ನಾಥನ್‌ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಜಾರ್ಜ್‌ ಸಿ. ಟಿಯಾಒನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರು, ಬಿಹೇವಿಯರಲ್‌ ಎಕಾನಾಮಿಕ್ಸ್‌ ವಿಭಾಗದಲ್ಲಿ ನಡೆಸಿದ ಸಂಶೋಧನೆಗಾಗಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಯುವ ಸಂಶೋಧಕರಿಗೆ ಪ್ರೋತ್ಸಾಹಿಸಿ: ಪ್ರಶಸ್ತಿ ಪ್ರಕಟಣೆ ವೇಳೆ ಮಾತನಾಡಿದ ಇನ್ಫೋಸಿಸ್‌ ವಿಜ್ಞಾನ ಪ್ರತಿಷ್ಠಾನದ ಅಧ್ಯಕ್ಷ ಕೆ.ದಿನೇಶ್‌, ಸಂಶೋಧಕರಿಗೆ ಸೂಕ್ತ ಸಂದರ್ಭದಲ್ಲಿ ಉತ್ತೇಜನ ನೀಡಿದರೆ ಸಂಶೋಧನೆ ಯಶಸ್ವಿಯಾಗಲು ಸಾಧ್ಯವಾಗುತ್ತದೆ.

ಈ ರೀತಿ ಉತ್ತೇಜನ ನೀಡುವುದರಿಂದ ಯುವ ಸಂಶೋಧಕರು ಭವಿಷ್ಯದಲ್ಲಿ ತಮ್ಮ ಸಂಶೋಧನಾ ಕ್ಷೇತ್ರಗಳ ಮೂಲಕ ಭಾರತವನ್ನು ಪ್ರತಿನಿಧಿಸಬಹುದು. ವೈಜ್ಞಾನಿಕ ಸಮುದಾಯ ಮತ್ತು ಉದ್ಯಮದ ನಡುವೆ ಇರುವ ಅಂತರ ಸುಧಾರಣೆ ಮಾಡುವ ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೊಸ ಆವಿಷ್ಕಾರಗಳನ್ನು ಮಾಡಬಹುದು ಎಂದರು.

ಯುವ ಪೀಳಿಗೆಗೆ ಉತ್ತಮ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ವಿಜ್ಞಾನ ಮತ್ತು ಸಂಶೊಧನ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಬೇಕು. ಈ ರೀತಿ ಉತ್ತೇಜಿಸದಿದ್ದರೆ ಭವಿಷ್ಯದ ಭಾರತಕ್ಕೆ ವಿಜ್ಞಾನದ ಉಜ್ವಲ ಬೆಳಕು ಅಸಾಧ್ಯ.
-ಎನ್‌.ಆರ್‌.ನಾರಾಯಣಮೂರ್ತಿ, ಇನ್ಫೋಸಿಸ್‌ ವಿಜ್ಞಾನ ಪ್ರತಿಷ್ಠಾನದ ಟ್ರಸ್ಟಿ

ವಿಸ್ಮಯದ ವಿಶ್ವದೆಡೆಗೆ ಸಾಗಲು ಹಲವು ದಾರಿಗಳಿವೆ. ಅವುಗಳನ್ನು ಶೋಧಿಸದಬೇಕೆಂದರೆ ನಾವು ಧೃತಿಗೆಡಬಾರದು. ಶ್ರದ್ಧೆ, ಆಸಕ್ತಿಯಿಂದ ಮುಂದುವರಿದರೆ ಎಲ್ಲ ಕ್ಷೇತ್ರಗಳಲ್ಲೂ ಯಶಸ್ಸು ಸಾಧಿಸಬಹುದು.
-ನವಕಾಂತ್‌ ಭಟ್‌, ಪ್ರಶಸ್ತಿ ಪುರಸ್ಕೃತ

ಭಾರತದ ಆರ್ಥಿಕತೆಗೆ ಬಹಳ ಮುಖ್ಯವಾದುದು ಮುಂಗಾರು. ಹವಾಮಾನ ಬದಲಾವಣೆ ಮುಂಗಾರಿನ ಮೇಲೆ ತೀವ್ರ ಪರಿಣಾಮ ಬಿರುತ್ತಿದೆ. ಈ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಸುವ ಅಗತ್ಯವಿದೆ.
-ಎಸ್‌.ಕೆ.ಸತೀಶ್‌, ಪ್ರಶಸ್ತಿ ಪುರಸ್ಕೃತ

ಜ.5ರಂದು ಪ್ರಶಸ್ತಿ ಪ್ರದಾನ: 2019ರ ಜನವರಿ 5ರಂದು ಲೀಲಾ ಪ್ಯಾಲೇಸ್‌ನಲ್ಲಿ ಹಮ್ಮಿಕೊಳ್ಳಲಾಗಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ವರ್ಷ ಪ್ರತಿಯೊಬ್ಬ ಸಾಧಕರಿಗೆ 1 ಲಕ್ಷ ಅಮೆರಿಕನ್‌ ಡಾಲರ್‌ ನಗದು ಹಾಗೂ ಚಿನ್ನದ ಪದಕ ನೀಡಿ ಗೌರವಿಸಲಾಗುವುದು. ಈ ಪ್ರಶಸ್ತಿ ಮೊತ್ತವು ತೆರಿಗೆ ಮುಕ್ತವಾಗಿದ್ದು, ಬಹುಮಾನದ ಪೂರ್ಣ ಮೊತ್ತ ವಿಜೇತರಿಗೆ ಲಭಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next