Advertisement

ಉಗ್ರರಿಗೆ “ಬಡ್ಡಿ’ಸಮೇತ ವಾಪಸ್‌ ನೀಡುತ್ತೇವೆ

12:30 AM Mar 02, 2019 | Team Udayavani |

ಕನ್ಯಾಕುಮಾರಿ: ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತವು ಎಂದೂ ಅಸಹಾಯಕವಾಗುವುದಿಲ್ಲ. ನವಭಾರತವು ಉಗ್ರರು ಮಾಡುವ ಹಾನಿಯನ್ನು “ಬಡ್ಡಿ ಸಮೇತ’ ವಾಪಸ್‌ ಕೊಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಶುಕ್ರವಾರ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ವಿವಿಧ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ, ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಅವರು, ಭಯೋತ್ಪಾದನೆಯ ಪ್ರಭಾವವನ್ನು ನಾವು ಬೇರು ಸಮೇತ ಕಿತ್ತು ಹಾಕುತ್ತೇವೆ ಎಂದೂ ಶಪಥ ಮಾಡಿದ್ದಾರೆ. 

Advertisement

ಈ ವೇಳೆ, ವಾಯುಪಡೆಯ ವಿಂಗ್‌ ಕಮಾಂಡರ್‌ ಅಭಿನಂದನ್‌ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಅವರು, ಪಾಕ್‌ ಸೇನೆಯ ವಶದಲ್ಲಿದ್ದು ಮರಳಿರುವಂಥ ವೀರ ಯೋಧ ಅಭಿನಂದನ್‌ ಅವರು ತಮಿಳುನಾಡಿನವರಾಗಿದ್ದು, ಅವರ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ ಎಂದು ಹೇಳಿದ್ದಾರೆ. ಭಯೋತ್ಪಾದನೆಯ ವಿರುದ್ಧದ ಸಮರವನ್ನು ಅನುಮಾನದಿಂದ ನೋಡುತ್ತಿರುವ ಪ್ರತಿಪಕ್ಷಗಳ ವಿರುದ್ಧವೂ ಅವರು ವಾಗ್ಧಾಳಿ ನಡೆಸಿದ್ದಾರೆ. ಇಡೀ ದೇಶವೇ ಸಶಸ್ತ್ರ ಪಡೆಗಳಿಗೆ ಬೆಂಬಲವಾಗಿ ನಿಂತಿದ್ದರೆ, ಅವರು ಮಾತ್ರ ಸಶಸ್ತ್ರ ಪಡೆಗಳನ್ನೇ ಅನುಮಾನದಿಂದ ನೋಡುತ್ತಾರೆ. ಅವರು ನಮ್ಮ ಸೇನಾಪಡೆಯನ್ನು ನಂಬುತ್ತಾರೋ ಅಥವಾ ತಮ್ಮ ನೆಲದಲ್ಲಿ ಉಗ್ರವಾದವನ್ನು ಪೋಷಿಸುವಂಥ ಶಕ್ತಿಗಳನ್ನು ನಂಬುತ್ತಾರೋ ಎಂಬುದನ್ನು ಸ್ಪಷ್ಟಪಡಿಸಬೇಕು. ಕೆಲವು ರಾಜಕೀಯ ಪಕ್ಷಗಳ ಈ ನಡೆಯು ಪಾಕಿಸ್ತಾನಕ್ಕೆ ವರದಾನವಾಗಿದೆ ಎಂದೂ ಮೋದಿ ಆರೋಪಿಸಿದ್ದಾರೆ. ಮೋದಿ ಬರುತ್ತಾರೆ, ಹೋಗುತ್ತಾರೆ. ಆದರೆ, ಭಾರತವು ಉಳಿಯುತ್ತದೆ ಎಂಬುದನ್ನೂ ಅವರು ಪುನರುಚ್ಚರಿಸಿದ್ದಾರೆ.

ಯುಪಿಎ ಸರ್ಕಾರದ ವಿರುದ್ಧ ಕಿಡಿ: ಹಿಂದಿನ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರವು 2008ರಲ್ಲಿ ಮುಂಬೈ ದಾಳಿ ನಡೆದಾಗ ಸರ್ಜಿಕಲ್‌ ದಾಳಿಯನ್ನು ನಡೆಸದಂತೆ ತಡೆದಿತ್ತು. 2004ರಿಂದ 2014ರ ಅವಧಿಯಲ್ಲಿ ಬೆಂಗಳೂರು, ಹೈದರಾಬಾದ್‌, ದೆಹಲಿ, ಮುಂಬೈ, ಪುಣೆಯಲ್ಲಿ ಹಲವು ಬಾಂಬ್‌ ಸ್ಫೋಟಗಳು ನಡೆದಿದುÌ. ಆದರೆ, ಇದು ನವ ಭಾರತ. ನಾವು ಉಗ್ರವಾದದ ವಿಚಾರದಲ್ಲಿ ಅಸಹಾಯಕರಾಗುವುದಿಲ್ಲ. ಉಗ್ರರು ನಮಗೆ ಏನು ಹಾನಿ ಮಾಡುತ್ತಾರೋ, ಅದನ್ನು ಬಡ್ಡಿ ಸಮೇತ ವಾಪಸ್‌ ನೀಡುತ್ತೇವೆ. ಉರಿ ದಾಳಿ ನಡೆದ ಮೇಲೆ ನಮ್ಮ ವೀರ ಯೋಧರು ಏನು ಮಾಡಿದರು, ಪುಲ್ವಾಮಾ ದಾಳಿಯ ಬಳಿಕ ನಮ್ಮ ವಾಯುಪಡೆ ಏನು ಮಾಡಿತು ಎಂಬುದನ್ನು ನೀವೇ ನೋಡಿದ್ದೀರಿ  ಎಂದೂ ಮೋದಿ ಹೇಳಿದ್ದಾರೆ. 

ಈ ನಡುವೆ, 2019ರ ಚುನಾವಣೆಯು ಸ್ಥಿರತೆ ಮತ್ತು ಅಸ್ಥಿರತೆಯ ನಡುವಿನ ಚುನಾವಣೆಯಾಗಿದೆ ಎಂದ ಅವರು, ನಮ್ಮ ದೇಶದ ಜನರಿಗೆ ಬೇಕಾಗಿರುವುದು ಡೆನಾಸ್ಟಿ(ವಂಶಾಡಳಿತ) ಅಲ್ಲ, ಹಾನೆಸ್ಟಿ(ಪ್ರಾಮಾಣಿಕತೆ) ಎಂದು ಹೇಳಿದ್ದಾರೆ. ದೇಶದ 130 ಕೋಟಿ ಜನರೇ ನನ್ನ ಕುಟುಂಬ. ನಾವು ಅವರಿಗಾಗಿಯೇ ಬದುಕುತ್ತೇನೆ, ಅವರಿಗಾಗಿಯೇ ಸಾಯುತ್ತೇನೆ ಎಂದೂ ಪ್ರಧಾನಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next