ನಟ ಹರೀಶ್ ರಾಜ್ ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು, ಸದ್ದಿಲ್ಲದೆಯೇ ಅವರೊಂದು ಚಿತ್ರ ಮಾಡಿ ಮುಗಿಸಿದ್ದಾರೆ. ಹಾಗಂತ, ಅವರೆಲ್ಲೋ ಕಾಣೆಯಾಗಿದ್ದರು ಅಂದುಕೊಳ್ಳುವಂತಿಲ್ಲ. ತಮಿಳು, ಮಲಯಾಳಂ ಚಿತ್ರಗಳಲ್ಲಿ ನಟಿಸುವ ಮೂಲಕ ಬಿಝಿಯಾಗಿದ್ದರು. ಈ ಹಿಂದೆ “ಶ್ರೀ ಸತ್ಯನಾರಾಯಣ’ ಚಿತ್ರದಲ್ಲಿ ಹದಿನಾರು ಪಾತ್ರಗಳಲ್ಲಿ ನಟಿಸಿ, ಗಿನ್ನೆಸ್ ದಾಖಲೆಗೆ ಅರ್ಹರಾಗಿದ್ದರು.
ಈಗ ನಿರ್ದೇಶನ ಮತ್ತು ನಿರ್ಮಾಣ ಮಾಡುವ ಮೂಲಕ ಕಾಣಿಸಿಕೊಂಡಿದ್ದಾರೆ. ಹೌದು, ಅವರೀಗ “ಕಿಲಾಡಿ ಪೊಲೀಸ್’ ಚಿತ್ರ ಮಾಡಿದ್ದಾರೆ. ವಿಶೇಷವೆಂದರೆ, ಅವರು ಚಿತ್ರದ ಎರಡು ಗೀತೆಗಳನ್ನು ರಚಿಸಿದ್ದಾರೆ. “ಕಿಲಾಡಿ ಪೊಲೀಸ್ ‘ ಎಂದಾಕ್ಷಣ, ಕಳ್ಳ-ಪೊಲೀಸ್ ಆಟ ಇದ್ದೇ ಇರುತ್ತೆ ಎಂಬುದು ಸಹಜ ಮಾತು. ಇದೂ ಅಂಥದ್ದೊಂದು ಕಥೆ ಹೊಂದಿರುವ ಚಿತ್ರ.
ಆ ಬಗ್ಗೆ ಹೇಳುವುದಾದರೆ, “ಪೊಲೀಸ್ ಕ್ವಾರ್ಟಸ್‌ನಲ್ಲಿ ನಡೆಯುವ ಕಥೆಯಲ್ಲಿ ತಂದೆ ಮಗನ ಬಾಂಧವ್ಯ ಇದೆ. ಅಪ್ಪ ಪೇದೆ ಆಗಿದ್ದಾಗ ಅವರ ಕೆಲಸವನ್ನು ಹೀಯಾಳಿಸುತ್ತಲೇ, ಸೋಮಾರಿತನ ಮೈಗೂಡಿಸಿಕೊಂಡಿರುವ ಮಗ, ಮುಂದೊಂದು ದಿನ ತಾನೂ ಪೊಲೀಸ್ ಇನ್ಸ್‌ಪೆಕ್ಟರ್ ಆದಾಗ, ಪೇದೆ ಕೆಲಸ ಎಷ್ಟು ಕಷ್ಟ ಎಂಬ ಅರಿವಾಗುತ್ತದೆ.
ಆ ಬಳಿಕ ಅವ ಕಾನೂನನ್ನು ಬಳಸಿಕೊಂಡು, ಕೆಲ ವಿಷಯಗಳಲ್ಲಿ ಹೋರಾಡುತ್ತಾನೆ ಎಂಬುದು ಸಿನಿಮಾದ ಒನ್‌ಲೈನ್. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದ್ದು, ಚಿತ್ರಕ್ಕೆ ಕೊಡಗಿನ ಸಾನ್ವಿ ಪೊನ್ನಪ್ಪ ನಾಯಕಿಯಾಗಿದ್ದಾರೆ. ಅನಂತವೇಲು, ಶೋಭರಾಜ್, ರಮೇಶ್‌ಪಂಡಿತ್, ಸುಚೇಂದ್ರಪ್ರಸಾದ್, ಶ್ರೀನಿವಾಸಮೂರ್ತಿ, ಪದ್ಮಾವಾಸಂತಿ, ಮುನಿ, ಮೋಹನ್‌ಜುನೇಜ, ಗಿರಿ ಮುಂತಾದವರು ನಟಿಸಿದ್ದಾರೆ.
ಚಿತ್ರಕ್ಕೆ ಸಂತೋಷ್ ನಾಯಕ್, ವಿ.ಮನೋಹರ್ ಗೀತೆ ಬರೆದಿದ್ದಾರೆ. ಎಲ್ವಿನ್ ಜೋಶ್ವ ಸಂಗೀತವಿದೆ. ಹಿರಿಯ ಛಾಯಾಗ್ರಾಹಕ ಜಿ.ಜೆ.ಕೃಷ್ಣ ಪುತ್ರ ಜೆ.ಕೆ.ದೀಪಕ್‌ಕುಮಾರ್ ಛಾಯಾಗ್ರಾಹಕರಾಗಿದ್ದಾರೆ. ಸುರೇಶ್ ಜೀವನ್ ಸಂಕಲನ ಮಾಡಿದ್ದಾರೆ. ಮುರಳಿ ನೃತ್ಯ ನಿರ್ದೇಶಿಸಿದ್ದಾರೆ. ಶರವಣ ಪ್ರಭು ಸಂಭಾಷಣೆ ಇದೆ. ಡಿಫರೆಂಟ್ ಡ್ಯಾನಿ ಸಾಹಸವಿದೆ. ಆಡಿಯೋ ಬಿಡುಗಡೆಗೆ ಚಿತ್ರ ಸಜ್ಜಾಗಿದ್ದು, ಆಗಸ್ಟ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.