Advertisement

ಪ್ರಕೃತಿ ಚಿಕಿತ್ಸೆ ವಿಶ್ವಮಾನ್ಯ: ಸಚಿವ ಶ್ರೀಪಾದ

02:23 AM Jan 10, 2021 | Team Udayavani |

ಬೆಳ್ತಂಗಡಿ : ಪ್ರಕೃತಿಯೇ ಜೀವ ವೈವಿಧ್ಯದ ಚಿಕಿತ್ಸಾ ಕೇಂದ್ರವೆಂದು ಅರಿತು ಪ್ರಧಾನಿ ನರೇಂದ್ರ ಮೋದಿ ಅವರು ಆಶಿಸಿದಂತೆ ಆಯುಷ್‌ ಸಚಿವಾಲಯವು ಗುಣಮಟ್ಟದ ಶಿಕ್ಷಣ ಹಾಗೂ ಸಂಶೋಧನೆಗೆ ಆದ್ಯತೆ ಮತ್ತು ಪ್ರೋತ್ಸಾಹ ನೀಡಿದೆ. ಪೂರಕವಾಗಿ ಧರ್ಮಸ್ಥಳದ ಡಾ| ಡಿ. ವಿರೇಂದ್ರ ಹೆಗ್ಗಡೆ ಅವರ ಪ್ರಯೋಗಶೀಲ ಚಿಂತನೆಯಿಂದ ಪ್ರಕೃತಿ ಚಿಕಿತ್ಸೆ ಇಂದು ವಿಶ್ವಮಾನ್ಯವಾಗಿದೆ ಎಂದು ಕೇಂದ್ರ ಸರಕಾರದ ಆಯುಷ್‌ ಇಲಾಖೆಯ ಸಚಿವ ಶ್ರೀಪಾದ ಯೆಸ್ಸೋ ನಾಯಕ್‌ ಹೇಳಿದರು.

Advertisement

ಕೇಂದ್ರ ಸರಕಾರದ ಆಯುಷ್‌ ಸಚಿವಾಲಯದ ಅನುದಾನದೊಂದಿಗೆ ಧರ್ಮಸ್ಥಳದ ಶಾಂತಿವನದಲ್ಲಿ ಪ್ರಾರಂಭಿಸಿದ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಸಂಶೋಧನಾ ಶ್ರೇಷ್ಠತಾ ಕೇಂದ್ರವನ್ನು ಶನಿವಾರ ಉದ್ಘಾಟಿಸಿ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಾದರಿ ಸಂಶೋಧನಾ ಕೇಂದ್ರವಾಗಲಿ :

2014ರಲ್ಲಿ ನಾನು ಉಜಿರೆಯಲ್ಲಿ ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ರಜತ ಮಹೋತ್ಸವ ಸಮಾರಂಭಕ್ಕೆ ಬಂದಾಗ ಕಾಲೇಜಿನ ಶೈಕ್ಷಣಿಕ ಗುಣಮಟ್ಟ ಇತ್ಯಾದಿ ಗಮನಿಸಿದ್ದೆ. ಅಂದೇ ನಿರ್ಧರಿಸಿದಂತೆ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನದಲ್ಲಿ ದೇಶದಲ್ಲೇ ಪ್ರಥಮವಾಗಿ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗೆ ಸಂಶೋಧನಾ ಕೇಂದ್ರ ಮಂಜೂರು ಮಾಡಲಾಗಿದೆ. ಎಂದರು.

ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಭಾರತೀಯ ಸಂಪ್ರದಾಯ, ಆಚಾರ- ವಿಚಾರಗಳು ಮೂಢ ನಂಬಿಕೆಗಳಲ್ಲ. ಎಲ್ಲವೂ ವೈಜ್ಞಾನಿಕ ದೃಷ್ಟಿ ಕೋನವನ್ನು ಹೊಂದಿವೆ. ವಿದೇಶ ಗಳಲ್ಲಿಯೂ ಇಂದು ಯೋಗ ಮತ್ತು ಪ್ರಕೃತಿ ಚಿಕಿತ್ಸೆಯನ್ನು ಅಭ್ಯಾಸ ಮಾಡುತ್ತಿದ್ದಾರೆ ಎಂದರು.

Advertisement

ಆಯುಷ್‌ ಮಂತ್ರಾಲಯದ ನಿರ್ದೇಶಕ ವಿಕ್ರಂ ಸಿಂಗ್‌,  ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಪ್ರಶಾಂತ ಶೆಟ್ಟಿ, ರಾಜೀವ್‌ ಗಾಂಧಿ ವಿ.ವಿ. ಕುಲಪತಿ ಡಾ| ಎಸ್‌. ಸಚ್ಚಿದಾನಂದ, ಆಯುಷ್‌ ನಿರ್ದೇಶನಾಲಯದ ಆಯುಕ್ತರಾಗಿರುವ ಮೀನಾಕ್ಷಿನೇಗಿ ಮಾತನಾಡಿದರು.

ಶಾಸಕ ಹರೀಶ್‌ ಪೂಂಜ, ವಿಧಾನ ಪರಿಷತ್‌ ಸದಸ್ಯರಾದ ಕೆ. ಹರೀಶ್‌ಕುಮಾರ್‌ ಮತ್ತು ಕೆ. ಪ್ರತಾಪಸಿಂಹ ನಾಯಕ್‌, ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹಷೇಂದ್ರ ಕುಮಾರ್‌, ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಾಡಿತ್ತಾಯ ಉಪಸ್ಥಿತರಿದ್ದರು.

ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ ಸ್ವಾಗತಿಸಿದರು. ಕಾಲೇಜಿನ ಯೋಗ ವಿಭಾಗದ ಡೀನ್‌ ಡಾ| ಶಿವಪ್ರಸಾದ್‌ ಶೆಟ್ಟಿ ವಂದಿಸಿದರು. ಪ್ರೊ| ಜೋಸ್ನಾ ಕಾರ್ಯಕ್ರಮ ನಿರೂಪಿಸಿದರು.

ವಿಶ್ವಗುರು ಮಾನ್ಯತೆ :

ಕೇಂದ್ರದ ಚಿಕಿತ್ಸಾ ವಿಭಾಗವನ್ನು ಉದ್ಘಾಟಿಸಿದ ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ಪ್ರಕೃತಿ ಚಿಕಿತ್ಸೆಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಡಾ| ಹೆಗ್ಗಡೆ ಅವರಿಗೆ ಸಲ್ಲಬೇಕು. ಅದಕ್ಕಾಗಿ ಭಾರತ ವಿಶ್ವದ ಗಮನ ಸೆಳೆದು ವಿಶ್ವಗುರುವಿನ ಮಾನ್ಯತೆ ಹೊಂದಿದೆ. ಪ್ರಧಾನಿ ಮೋದಿ ಕೂಡ ಹೆಗ್ಗಡೆಯವರಿಂದ ಪ್ರೇರಣೆ ಪಡೆದು ಯೋಗವನ್ನು ಜಾಗತಿಕ ಮಟ್ಟದಲ್ಲಿ ಪಸರಿಸಿದ್ದಾರೆ ಎಂದರು.

ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಸಂಶೋಧನಾ ಕೇಂದ್ರಕ್ಕೆ ಈಗಾಗಲೇ 8.73 ಕೋಟಿ ರೂ. ನೀಡಿದ್ದು, ಇನ್ನೂ 1.27 ಕೋಟಿ ರೂ. ನೆರವು ನೀಡಲಾಗುವುದು. ಶ್ರೀಪಾದ್ ಯೆಸ್ಸೋ ನಾಯಕ್, ಕೇಂದ್ರ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next