Advertisement
ಪ್ರಕೃತಿ ಚಿಕಿತ್ಸೆ ಅಥವಾ ನ್ಯಾಚುರೋಪತಿಇದೊಂದು ನೈಸರ್ಗಿಕ ಚಿಕಿತ್ಸಾ ವ್ಯವಸ್ಥೆಯಾಗಿದ್ದು, ಇದರಲ್ಲಿ ಯಾವುದೇ ರಾಸಾಯನಿಕ ಜನ್ಯ ಔಷಧಗಳನ್ನು ಬಳಸಲಾಗುವುದಿಲ್ಲ. ಬದಲಾಗಿ ಈ ವಿಶಿಷ್ಟ ಚಿಕಿತ್ಸಾ ವಿಧಾನವು ದೇಹವನ್ನು ಒಳಗಿನಿಂದ ಬಲಪಡಿಸುವುದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು, ಅಗತ್ಯವಿರುವಲ್ಲಿ ಜೀವನಶೈಲಿಯ ಬದಲಾವಣೆಗಳನ್ನು ಅಳವಡಿಸಿಕೊಂಡು ಉತ್ತಮ ಸುರಕ್ಷಿತ ಮತ್ತು ನೈಸರ್ಗಿಕ ವಿಧಾನದಿಂದ ನಮ್ಮ ದೇಹವು ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ. ‘ಪ್ರಕೃತಿಯು ನಮ್ಮನ್ನು ಗುಣಪಡಿಸುತ್ತದೆ, ಔಷಧಗಳಲ್ಲ’ ಎಂಬುದು ಪ್ರಕೃತಿ ಚಿಕಿತ್ಸೆಯ ಮೂಲತತ್ವವಾಗಿದೆ.
Related Articles
ಪ್ರಕೃತಿ ಚಿಕಿತ್ಸೆಯಲ್ಲಿ ವಿವಿಧ ಸಮಸ್ಯೆಗಳಿಗೆ ತಕ್ಕಂತೆ ಜಲ ಚಿಕಿತ್ಸೆ, ಮಣ್ಣಿನ ಚಿಕಿತ್ಸೆ, ಸೂರ್ಯ ಚಿಕಿತ್ಸೆ, ಬಣ್ಣ ಚಿಕಿತ್ಸೆ, ಆಯಸ್ಕಾಂತ ಚಿಕಿತ್ಸೆ, ನೈಸರ್ಗಿಕ ಆಹಾರ ಮತ್ತು ಉಪವಾಸ ಚಿಕಿತ್ಸೆ, ಸೂಜಿ ಚಿಕಿತ್ಸೆ ಹೀಗೆ ಹತ್ತು ಹಲವಾರು ಚಿಕಿತ್ಸೆಗಳಿವೆ. ಸಂಕ್ಷಿಪ್ತವಾಗಿ ಹೇಳುವುದಾದರೆ
Advertisement
– ಜಲಚಿಕಿತ್ಸೆಯು ನೋವು ನಿವಾರಿಸಲು, ರಕ್ತದ ಹರಿವನ್ನು ಸುಧಾರಿಸಲು ಮತ್ತು ದೇಹಕ್ಕೆ ವಿಶ್ರಾಂತಿಯನ್ನು ನೀಡಲು ಸಹಾಯವಾಗುತ್ತದೆ. ನೀರಿನ ತಾಪಮಾನ ಮತ್ತು ಒತ್ತಡವನ್ನು ಬಳಸಿ ಜಲಚಿಕಿತ್ಸೆಯನ್ನು ನೀಡಲಾಗುತ್ತದೆ.– ಮಣ್ಣಿನ ಚಿಕಿತ್ಸೆಯು ಮಣ್ಣು ಅಥವಾ ಜೇಡಿಮಣ್ಣನ್ನು ಬಳಸಿ ನೀಡುವ ನೈಸರ್ಗಿಕ ಚಿಕಿತ್ಸೆಯಾಗಿದೆ. ಮಣ್ಣಿನಲ್ಲಿರುವ ಖನಿಜಗಳು, ಮೆಗ್ನಿàಸಿಯಮ್ ಮತ್ತು ಕ್ಯಾಲ್ಸಿಯಂ ದೇಹದಲ್ಲಿರುವ ಕಲ್ಮಶವನ್ನು ಹೊರಹಾಕಲು ಮತ್ತು ನೋವನ್ನು ಶಮನಗೊಳಿಸಲು ಸಹಾಯ ಮಾಡುತ್ತವೆ. ಸಂಧಿವಾತ, ಚರ್ಮದ ಸಮಸ್ಯೆಗಳು ಮತ್ತು ಸ್ನಾಯುಗಳ ನೋವಿಗೆ ಉತ್ತಮ ಫಲಿತಾಂಶ ನೀಡುತ್ತದೆ.
– ಸೂರ್ಯನ ಚಿಕಿತ್ಸೆಯಲ್ಲಿ ನೈಸರ್ಗಿಕವಾಗಿ ಸೂರ್ಯನ ಕಿರಣಗಳನ್ನು ಬಳಸಿ ದೇಹದಲ್ಲಿ ವಿಟಮಿನ್ ಡಿ ಉತ್ಪತ್ತಿ ಮಾಡಲು ಸಹಾಯ ಮಾಡುತ್ತದೆ. ಈ ಚಿಕಿತ್ಸೆಯು ಸೋರಿಯಾಸಿಸ್‌ನಂತಹ ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಅಲ್ಲದೇ ದೇಹದ ಎಲುಬುಗಳ ಆರೋಗ್ಯಕ್ಕೆ ಒಳ್ಳೆಯದು. ಸುರಕ್ಷೆಯ ದೃಷ್ಟಿಯಿಂದ ಸೂರ್ಯನ ಬೆಳಗಿನ ಹಾಗೆಯೇ ಸಂಜೆಯ ಕಿರಣಗಳು ಉತ್ತಮ.
– ಬಣ್ಣದ ಚಿಕಿತ್ಸೆಯಲ್ಲಿ ಪ್ರತೀ ಬಣ್ಣವು ನಿರ್ದಿಷ್ಟ ಪರಿಣಾಮಗಳನ್ನು ಹೊಂದಿದೆ. ಈ ಚಿಕಿತ್ಸೆಯು ಮನಃಸ್ಥಿತಿಯನ್ನು ಸುಧಾರಿಸಲು, ಒತ್ತಡವನ್ನು ಕಡಿಮೆ ಮಾಡಲು ಮತ್ತು ದೇಹಕ್ಕೆ ವಿಶ್ರಾಂತಿಯನ್ನು ನೀಡುತ್ತದೆ.
– ಆಯಸ್ಕಾಂತ ಚಿಕಿತ್ಸೆಯು ದೇಹದ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆಯಸ್ಕಾಂತಗಳು ರಕ್ತದ ಹರಿವನ್ನು ಸುಧಾರಿಸುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ.
– ಉಪವಾಸ ಚಿಕಿತ್ಸೆಯು ದೇಹವನ್ನು ಶುದ್ಧೀಕರಿಸಲು ಮತ್ತು ರೋಗವನ್ನು ಗುಣಪಡಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ನಿರ್ದಿಷ್ಟ ಅವಧಿಯವರೆಗೆ ಆಹಾರವನ್ನು ತ್ಯಜಿಸುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ವಿರಾಮ ಸಿಗುತ್ತದೆ. ಉಪವಾಸದಲ್ಲಿ ನೀರು, ಬೇಯಿಸಿದ ಆಹಾರ, ಹಸಿ ತರಕಾರಿ ಸಲಾಡ್, ಹಣ್ಣಿನ ಜ್ಯೂಸ್‌ಗಳನ್ನು ಸೇವಿಸಬಹುದು. ಉಪವಾಸ ಮಾಡಲು ಪ್ರಕೃತಿ ಚಿಕಿತ್ಸಾ ವೈದ್ಯರ ಮಾರ್ಗದರ್ಶನ ಅಗತ್ಯ.
– ನೈಸರ್ಗಿಕ ಆಹಾರವು ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಒಣಬೀಜಗಳನ್ನು ಒಳಗೊಂಡಿರುತ್ತದೆ. ಇವು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಪ್ರಕೃತಿ ಚಿಕಿತ್ಸೆಯು ತಾಜಾ, ಸಂಸ್ಕರಿಸಿದ ಆಹಾರವನ್ನು ಸೇವಿಸುವುದನ್ನು ಮತ್ತು ಸಂಸ್ಕರಿಸಿದ ಆಹಾರಗಳು, ಮೈದಾ, ಸಕ್ಕರೆಯನ್ನು ತ್ಯಜಿಸುವುದನ್ನು ಒತ್ತಿ ಹೇಳುತ್ತದೆ. ನಾವು ಸೇವಿಸುವ ತಪ್ಪು ಆಹಾರಗಳೇ ನಮ್ಮನ್ನು ಕೊಲ್ಲುತ್ತವೆ. ಆಯಾಯ ಪ್ರದೇಶಗಳಲ್ಲಿ ಬೆಳೆಯುವ ಆಹಾರ, ತರಕಾರಿ, ಹಣ್ಣು, ಧಾನ್ಯಗಳು ನಮ್ಮ ಆರೋಗ್ಯಕ್ಕೆ ಒಳ್ಳೆಯದು. ದೇಹಕ್ಕೆ ಸುಲಭವಾಗಿ ಪಚನವಾಗುವ ಆಹಾರವನ್ನು ಹೆಚ್ಚು ಸೇವಿಸಬೇಕು. ತಾಜಾ ಹಣ್ಣುಗಳು ಹಾಗೂ ತರಕಾರಿಯನ್ನು ಸೇವಿಸುವುದು ಅತೀ ಉತ್ತಮ. ಸೂರ್ಯ ಮುಳುಗುವ ಮೊದಲು ಆಹಾರ ಸೇವಿಸುವುದು ಉತ್ತಮ. ಅಂದರೆ ಮಲಗುವಾಗ ನಾವು ಸೇವಿಸುವ ಆಹಾರ ಜೀರ್ಣವಾಗಿರಬೇಕು. ಬೆಳಗ್ಗೆ ಬೇಗನೆ ಎದ್ದು ಬೇಗನೆ ಮಲಗುವುದು ಆರೋಗ್ಯಕ್ಕೆ ಉತ್ತಮ.
– ಇತರ ಚಿಕಿತ್ಸೆಗಳು: ಅಕ್ಯುಪಂಕ್ಚರ್, ಅಕ್ಯುಪ್ರಶರ್, ಕಪ್ಪಿಂಗ್ ಥೆರಪಿ. ಅಕ್ಯುಪಂಕ್ಚರ್ ಎನ್ನುವುದು ಶಕ್ತಿಯ ಹರಿವನ್ನು ಸಮತೋಲನಗೊಳಿಸಲು ಮತ್ತು ಗುಣಪಡಿಸುವಿಕೆಯನ್ನು ಉತ್ತೇಜಿಸಲು ದೇಹದ ನಿರ್ದಿಷ್ಟ ಬಿಂದುಗಳಿಗೆ ತೆಳುವಾದ ಸೂಜಿಗಳನ್ನು ಚುಚ್ಚುವುದು. ಅಕ್ಯುಪ್ರಶರ್ ಅಕ್ಯುಪಂಕ್ಚರ್ ಅನ್ನು ಹೋಲುತ್ತದೆ. ಆದರೆ ಅದೇ ಬಿಂದುಗಳಲ್ಲಿ ಸೂಜಿಗಳ ಬದಲಿಗೆ ಬೆರಳಿನ ಒತ್ತಡವನ್ನು ಬಳಸುತ್ತದೆ. ಇದು ನೋವನ್ನು ನಿವಾರಿಸಲು, ರಕ್ತ ಪರಿಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕಪ್ಪಿಂಗ್ ಚಿಕಿತ್ಸೆಯು ರಕ್ತದ ಹರಿವನ್ನು ಹೆಚ್ಚಿಸಿ ಸ್ನಾಯುವಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಬೆನ್ನುನೋವು, ಸ್ನಾಯು ನೋವನ್ನು, ಉರಿಯೂತ ನಿವಾರಿಸಲು ಬಳಸಲಾಗುತ್ತದೆ.
– ಯೋಗ ಚಿಕಿತ್ಸೆಯಲ್ಲಿ ಯೋಗವನ್ನು ನೈಸರ್ಗಿಕ ಚಿಕಿತ್ಸೆ ವಿಧಾನಗಳೊಂದಿಗೆ ಸಂಯೋಜಿಸಲಾಗುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಯೋಗ ಭಂಗಿಗಳು, ಉಸಿರಾಟದ ವ್ಯಾಯಾಮಗಳು ಮತ್ತು ಧ್ಯಾನವನ್ನು ಬಳಸುತ್ತಾರೆ. ಯೋಗ ಚಿಕಿತ್ಸೆಯು ವೈಯುಕ್ತಿಕ ಅಗತ್ಯಗಳಿಗೆ ಅನುಗುಣವಾಗಿರುತ್ತದೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಯೋಗವನ್ನು ಇತರ ನೈಸರ್ಗಿಕ ಚಿಕಿತ್ಸೆಗಳೊಂದಿಗೆ ಸಂಯೋಜಿಸುತ್ತದೆ. ಯೋಗ ಚಿಕಿತ್ಸೆಯನ್ನು ಪ್ರಕೃತಿ ಚಿಕಿತ್ಸೆಯ ಜತೆಗೆ ನೀಡಲಾಗುತ್ತದೆ. ಪ್ರಕೃತಿ ಚಿಕಿತ್ಸೆಯಲ್ಲಿ ವೈದ್ಯರು ನಿತ್ಯ ಜೀವನದಲ್ಲಿ ಕಾಯಿಲೆರಹಿತ ಜೀವನ ನಡೆಸುವ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ. ಸಾಮಾನ್ಯವಾಗಿ ವೈದ್ಯರು ರೋಗಕ್ಕೆ ಮದ್ದು ಕೊಡುತ್ತಾರೆ. ಆದರೆ ಪ್ರಕೃತಿ ಚಿಕಿತ್ಸೆಯಲ್ಲಿ ರೋಗಕ್ಕೆ ಅಲ್ಲ, ವ್ಯಕ್ತಿಯನ್ನು ಗಮನಿಸಿ ಚಿಕಿತ್ಸೆ ನೀಡುತ್ತಾರೆ. ಗ್ರೀಕ್‌ನ ವೈದ್ಯಶಾಸ್ತ್ರದ ಪಿತಾಮಹ ಹಿಪಾಕ್ರಟೀಸ್, “ಆಹಾರವು ನಿಮ್ಮ ಔಷಧಯಾಗಿರಲಿ ಮತ್ತು ಔಷಧವು ನಿಮ್ಮ ಆಹಾರವಾಗಲಿ’ ಎಂದು ಹೇಳಿದ್ದರು- ಅಂದರೆ ಮಿತವಾದ ಆಹಾರ ಸೇವನೆ ಉತ್ತಮ ಆರೋಗ್ಯಕ್ಕೆ ಬುನಾದಿ ಎಂದರ್ಥ. ಈತ ಹೇಳಿದ ಎರಡು ಸೂತ್ರ ವಾಕ್ಯಗಳಿವು- “ಉಗ್ರ ವ್ಯಾಧಿಗೆ ಉಗ್ರ ಚಿಕಿತ್ಸೆ ಅಗತ್ಯ’ ಮತ್ತು “ಒಬ್ಬನ ಉಣಿಸು ಇನ್ನೊಬ್ಬನ ಗರಳ (ವಿಷ)’. ಒತ್ತಡವನ್ನು ಕಡಿಮೆ ಮಾಡಿಕೊಂಡು ಆರೋಗ್ಯಕರ ಆಹಾರ ಹಾಗೂ ಜೀವನ ಪದ್ಧತಿಗಳ ಅಳವಡಿಕೆಗಳಿಂದ ರೋಗ ನಿಯಂತ್ರಣಕ್ಕೆ ಒತ್ತು ನೀಡಲಾಗುತ್ತದೆ. ಮಹಾತ್ಮಾ ಗಾಂಧೀಜಿಯವರು 1900ರ ಸುಮಾರಿಗೆ ಐರ್ಲೆಂಡ್‌ನ ಡರ್ಬನ್‌ನಲ್ಲಿ ಇರುವಾಗ ಪ್ರಕೃತಿ ಚಿಕಿತ್ಸೆಯನ್ನು ತನ್ನ ಜೀವನದಲ್ಲಿ ಪ್ರಾರಂಭಿಸಿದರು ಮತ್ತು ಅದನ್ನು ಅಳವಡಿಸಿಕೊಂಡು ಆರೋಗ್ಯಕರ ಜೀವನ ನಡೆಸಿ ಎಂದು ಜನರಿಗೂ ಕರೆ ಕೊಟ್ಟರು. ಸಸ್ಯಾಹಾರವು ಪ್ರಕೃತಿಯ ಜತೆಗೆ ಸಾಮರಸ್ಯದಿಂದ ಬದುಕಲು ಅನುಕೂಲ ಎಂದು ಪ್ರತಿಪಾದಿಸಿದ್ದರು. 1932ರಲ್ಲಿ ಡಾ| ದಿನ್ಶಾ ಮೆಹ್ರಾ ಅವರು ಗಾಂಧೀಜಿಯವರನ್ನು ಪುಣೆಯಲ್ಲಿ ಬೇಟಿಯಾಗಿದ್ದರು ಮತ್ತು ಅವರ ಚಿಕಿತ್ಸಕರಾಗಿದ್ದರು. ಗಾಂಧೀಜಿಯವರು 1945ರಲ್ಲಿ ಪುಣೆಯ ಆಲ್ ಇಂಡಿಯಾ ನೇಚರ್ ಕ್ಯೂರ್ ಫೌಂಡೇಶನ್ ಟ್ರಸ್ಟ್ ಅನ್ನು ಸ್ಥಾಪಿಸಿದರು. ಈಗ National Institutte of Naturopathy Pune ಎನ್ನುವ ಹೆಸರಿನಲ್ಲಿ ನ್ಯಾಚುರೋಪತಿಗೆ ಸಂಬಂಧಿಸಿದಂತೆ ಕಾಲೇಜು ಮತ್ತು ಆಸ್ಪತ್ರೆಯನ್ನು ಆಯುಷ್ ಇಲಾಖೆ ನಡೆಸುತ್ತಿದೆ. ಪ್ರಸ್ತುತ ಪ್ರಕೃತಿ ಚಿಕಿತ್ಸೆ ಆಯುಷ್ ಇಲಾಖೆಯಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಎನ್ನುವ ಹೆಸರಿನಲ್ಲಿ ಅನೇಕ ಕಾಲೇಜು, ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರಕೃತಿ ಚಿಕಿತ್ಸೆಯು ಜರ್ಮನಿಯಲ್ಲಿ 1822ರಲ್ಲಿ ಪ್ರಾರಂಭಗೊಂಡು, ಮುಂದುವರಿದು ಯುರೋಪಿನಲ್ಲಿ 1895ರಲ್ಲಿ ಜಾನ್ ಸ್ಕೀಲ್ ಎನ್ನುವವರಿಂದ ಮುಂದುವರಿದು 1970ರಲ್ಲಿ ಬೆನೆಡಿಕ್ಟ್ ಲಿನ್ ಅವರು “ಪರಿಪೂರ್ಣ ಆರೋಗ್ಯ’ ಎನ್ನುವ ಹೆಸರನಲ್ಲಿ ಮುಂದುವರೆಸಿದರು. ಮಾನವನು ತನ್ನ ಜೀವನದ ಭೌತಿಕ, ಮಾನಸಿಕ, ನೈತಿಕ ಮತ್ತು ಆಧ್ಯಾತ್ಮಿಕ ಆಯಾಮಗಳಲ್ಲಿ ನಿಸರ್ಗದ ರಚನಾತ್ಮಕ ನಿಯಮಗಳೊಂದಿಗೆ ಸಾಮರಸ್ಯವನ್ನು ಇಟ್ಟುಕೊಂಡು ಅದಕ್ಕೆ ಗುರುತರವಾದ ಆರೋಗ್ಯವರ್ಧಕ, ರೋಗ ತಡೆಗಟ್ಟುವ, ಚಿಕಿತ್ಸಾತ್ಮಕ ಹಾಗೂ ಮೊದಲಿನ ಶಕ್ತಿ ಮತ್ತು ಆರೋಗ್ಯವನ್ನು ನೀಡುವ ಸಾಮರ್ಥ್ಯವಿದೆ. “ರೋಗವನ್ನು ಗುಣಪಡಿಸುವುದಕ್ಕಿಂತ ರೋಗ ಬರದಂತೆ ತಡೆಯುವುದೇ ಪ್ರಕೃತಿ ಚಿಕಿತ್ಸೆಯ ಉದ್ದೇಶ.’ ಡಾ| ಆತ್ಮಿಕಾ ಶೆಟ್ಟಿ, ಅಸಿಸ್ಟೆಂಟ್ ಪ್ರೊಫೆಸರ್, ಯೋಗ ವಿಭಾಗ, ಸಿಐಎಂಆರ್, ಮಾಹೆ, ಮಣಿಪಾಲ