ಲಾಕ್‌ಡೌನ್ ನೆಪದಲ್ಲಿ ಸಿಕ್ಕಿದ ಈ ಬಿಡುವಿನ ಸಮಯವನ್ನು ಮಕ್ಕಳ ಜೊತೆ ಕಳೀತಾ ಇದ್ದೀನಿ. ಇಬ್ಬರು ಮಕ್ಕಳೂ ಈಗ ಮನೆಯಲ್ಲೇ ಇರುವ ಕಾರಣ, ಎಲ್ಲರೂ ಜೊತೆಯಲ್ಲಿ ಇರುವುದಕ್ಕೆ, ಒಟ್ಟಾಗಿ ಊಟ ಮಾಡಲಿಕ್ಕೆ, ಒಂದೊಳ್ಳೆಯ ಅವಕಾಶ ಸಿಕ್ಕಿದೆ. ಈ ಲಾಕ್ ಡೌನ್ ಅನ್ನುವುದು, ಮನೆಮಂದಿಯೆಲ್ಲಾ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳೋಕೆ ಸಿಕ್ಕಿದ ಅಪೂರ್ವ ಅವಕಾಶ ಅಂದರೆ ತಪ್ಪಾಗಲಾರದು.
ಬದುಕಿನ ಕುರಿತು ಜಗತ್ತಿನ ಸಕಲೆಂಟು ಮಂದಿಗೂ ಒಂದು ಎಚ್ಚರಿಕೆ ಕೊಡಲಿಕ್ಕೆ,ಮನುಷ್ಯರಲ್ಲಿ ಜಾಗೃತಿ ಮೂಡಿಸಲಿಕ್ಕೆ, ಆ ಪ್ರಕೃತಿ ಸೃಷ್ಟಿಸಿದ ಸಂದರ್ಭ ಇದು ಅನಿಸುತ್ತೆ. ಕೆಟ್ಟದ್ದು ಆಗಬಾರದಿತ್ತು, ಆದ್ರೆ ಆಗಿಬಿಟ್ಟಿದೆ. ನಾವೀಗ ಎಚ್ಚೆತ್ತುಕೊಂಡು ಹೇಗೆ ಬದುಕಬೇಕು, ನಮ್ಮ ಜೀವನ ವಿಧಾನವನ್ನು ಹೇಗೆ ಬದಲಿಸಿಕೊಳ್ಳಬೇಕು ಅಂತ ತಿಳಿಯೋದಕ್ಕೆ- ಕೊರೊನಾ ದ ಈ ಸಂದರ್ಭವು, ಒಳ್ಳೆಯ ಪಾಠ. ನಾಳೆ ನಾವು, ಕೆಲಸಕ್ಕೆ ಹೋಗಲು ಶುರು ಮಾಡಿದಾಗ ಹೇಗೆ ವರ್ತಿಸಬೇಕು? ಗುಂಪು ಸೇರುವುದರಿಂದ ಏನೇನು ತೊಂದರೆ ಆಗಬಹುದು?
ಸೋಂಕಿನಂಥ ತೊಂದರೆಗಳಿಂದ ದೂರ ಇರಬೇಕು ಅಂದರೆ, ಹೇಗೆ ಬದುಕಬೇಕು?ಎಂಬ ತಿಳಿವಳಿಕೆಯನ್ನು ಈಗಿನ ಸಂದರ್ಭ ನಮಗೆ ಹೇಳಿಕೊಟ್ಟಿದೆ. ಲಾಕ್‌ಡೌನ್ ಮುಗಿದ ನಂತರವೂ, ನಾವು ಸದಾ ಶುಚಿಯಾಗಿ ಇರುವುದನ್ನು, ದೈಹಿಕ ಅಂತರ ಕಾಯ್ದುಕೊಂಡು ಬದುಕುವುದನ್ನು, ರೂಢಿ ಮಾಡ್ಕೊàಬೇಕು ಅನ್ನುವುದು ನನ್ನ ಸ್ಪಷ್ಟ ಅನಿಸಿಕೆ. ಇಷ್ಟದ ಪುಸ್ತಕಗಳನ್ನು ಓದುವ ಅಭ್ಯಾಸ ನನಗೆ ಮೊದಲಿಂದಲೂ ಇದೆ.
ಹಾಗಾಗಿ ಪುಸ್ತಕ ಓದುತ್ತಾ ಕಾಲ ಕಳೀತೇನೆ. ನನ್ನ ಮಕ್ಕಳು ಪೇಂಟಿಂಗ್ ಮಾಡ್ತಾರೆ. ಅದನ್ನು ನೋಡಿ, ಸಪೋರ್ಟ್ ಮಾಡ್ತೇನೆ. ಇಬ್ಬರು ಮಕ್ಕಳೂ ಹೆಚ್ಚಾಗಿ ಬೋರ್ಡ್ ಗೇಮ್ಸ ಆಡ್ತಾರೆ. ಅವರ ಜೊತೆ ಆಟಕ್ಕೆ ನಾನೂ ಸೇರಿಕೊಳ್ತೇನೆ. ಇಷ್ಟು ಬಿಟ್ರೆ, ಎಲ್ಲರೂ ಒಟ್ಟಿಗೆ ಕೂತು ಸಿನೆಮಾ ನೋಡೋದು, ಸಿನಿಮಾ ಕುರಿತು ಚರ್ಚೆ ಮಾಡುವುದು, ಅಭಿಪ್ರಾಯ ಹಂಚಿಕೊಳ್ಳುವುದರಲ್ಲಿ ದಿನಗಳು ಉರುಳುತ್ತಾ ಇವೆ…
-ದೇವರಾಜ್, ಹಿರಿಯ ಚಿತ್ರ ನಟ