Advertisement
ಚಾರಣಿಗರು, ಪ್ರಕೃತಿಪ್ರಿಯರೂ ಮೈ ಮರೆಯುವ ಮತ್ತು ಅಚ್ಚರಿಯಿಂದ ಕಣ್ಣರಳಿಸುವ, ಅಧ್ಯಯನಕ್ಕೂ ಆಹಾರವಾಗಬಲ್ಲ ಸುಂದರ ಪ್ರಕೃತಿ ತಾಣ ಬಾಂಡೀಲು.ಸಾರಡ್ಕ ದಾಟಿ ಬಂದರೆ ಪೆರ್ಲ, ಅಲ್ಲಿಂದ ಪುತ್ತಿಗೆ, ಬಾಡೂರು ದಾರಿಯಾಗಿ ಕುಂಬಳೆಗೆ ಸಾಗುವ ಹಾದಿಯಲ್ಲಿ 4 ಕಿ.ಮೀ. ದೂರ ಕ್ರಮಿಸಿದರೆ ಬೆದ್ರಂಪಳ್ಳ, ತುಸು ದೂರದಲ್ಲಿ ಬಾಂಡೀಲು ಎಂಬ ಸಣ್ಣ ಬಸ್ ತಂಗುದಾಣ ಸಿಗುತ್ತದೆ.
Related Articles
Advertisement
ಮುಂದೆ ಕಾಲು ಸಂಕ ದಾಟಿ ಸಾಗಿದರೆ ಪ್ರಕೃತಿ ಸೌಂದರ್ಯದ ಖಜಾನೆಯೇ ತೆರೆದುಕೊಳ್ಳುತ್ತದೆ. ವಿಶಾಲವಾಗಿ ಹರಡಿರುವ ಹಾಸುಪಾರೆಯ ದೊಡ್ಡ ಹಸುರಿನ ಬಯಲು (ಮಲ್ಲ ಒಡಾಲ್). ಇದು ಗೇರು ನಿಗಮದ ಅಧೀನಕ್ಕೆ ಒಳಪಟ್ಟಿದ್ದು, ಇಲ್ಲಿ ಮನೆಗಳು ಇಲ್ಲ. ಸಣ್ಣ ಕೆರೆಗಳಿದ್ದು, ಅದರಲ್ಲಿ ಕಪ್ಪೆ, ಕೇರೆ, ನೀರು ಹಾವುಗಳು ನಿರ್ಭಯವಾಗಿ ಜೀವಿಸುತ್ತಿವೆ. ನವಿಲು, ಹಕ್ಕಿಗಳನ್ನು ನೋಡುತ್ತ ಸಾಗಿದರೆ ದೂರದಿಂದ ಕಾಣುವ ಗುಂಪೆ ಗುಡ್ಡೆಯ ನೋಟ ರಮಣೀಯವಾಗಿರುತ್ತದೆ.
ಅಲ್ಲಿಂದ ತುಸು ದೂರದಲ್ಲಿ ಮರಗಳಿಂದ ಆವೃತವಾದ ಮತ್ತೂಂದು ಬಾಂಡೀಲು (ಪಿಲಿ ಬಾಂಡೀಲು) ದೊರೆಯುತ್ತದೆ. ಬೃಹದಾಕಾರದ ಗುಹೆಯೂ ಇದೆ. ಇದು ಹುಲಿಗಳ ಅಡಗುದಾಣವಾಗಿತ್ತೆಂದು ಗ್ರಾಮದ ಹಿರಿಯರಾದ ಅರೆಮಂಗಿಲ ನಾರಾಯಣ ರೈಗಳು ಹೇಳುತ್ತಾರೆ. ಈ ಗುಹೆಯೊಳಗೆ ಟಾರ್ಚ್ ಬೆಳಗಿಸುತ್ತ ಬಹಳ ದೂರ ಸಾಗಿದರೂ ಕೊನೆ ಮುಟ್ಟುತ್ತಿರಲಿಲ್ಲ. ದನಕರುಗಳು ಒಳಹೊಕ್ಕು ದಾರಿ ತಪ್ಪಬಾರದೆಂದು ಗುಹೆಯ ಬಾಗಿಲಿಗೆ ಕಲ್ಲುಗಳನ್ನು ಅಡ್ಡ ಇರಿಸಲಾಗಿದೆ. ಹಿಂದೊಮ್ಮೆ ಆ ಗ್ರಾಮವನ್ನು ನಡುಗಿಸಿದ ಕುಂಞಿರಾಮ ಎನ್ನುವ ಕಳ್ಳ ಹಗಲು ಹೊತ್ತಿನಲ್ಲಿ ಮುಖಕ್ಕೆ ಬೂದಿ ಸವರಿಕೊಂಡು ಇಲ್ಲಿ ಅಡಗಿರುತ್ತಿದ್ದನಂತೆ.
ಮುಂದೆ ಬಯಲಲ್ಲಿ ವಿಶಾಲವಾದ ಎಟ್ಟಿ (ಸಿಗಡಿ) ಪಳ್ಳವಿದೆ. ಬೇಸಗೆಯಲ್ಲೂ ಇದರಲ್ಲಿ ನೀರು ಬತ್ತುವುದಿಲ್ಲ. ತಗ್ಗಿನ ಪ್ರದೇಶ ಬೇಂಗಪದವು ಕೃಷಿಕರು ನೀರು ಹರಿಸಿಕೊಂಡು ತರಕಾರಿ ಬೆಳೆಯುತ್ತಾರೆ. ಈ ಕೆರೆಯಲ್ಲಿ ನೈದಿಲೆಯ ಗಿಡಗಳನ್ನು ಕಾಣಬಹುದು.
ಈ ಕೆರೆಗೆ ವನವಾಸದ ಸಂದರ್ಭದಲ್ಲಿ ಪಾಂಡವರು ಬಂದಿದ್ದರಂತೆ. ರಾತ್ರಿ ಬೆಳಗಾಗುವಷ್ಟರಲ್ಲಿ ಅರಮನೆ ನಿರ್ಮಿಸಬೇಕು ಎಂದು ನಿರ್ಧರಿಸಿದ್ದರಂತೆ. ಕೃಷ್ಣನಿಗೆ ಮನಸ್ಸಿರಲಿಲ್ಲ. ಹಾಗಾಗಿ, ಕೃಷ್ಣ ಹುಂಜದ ರೂಪ ತಾಳಿ ಕೂಗಿದಾಗ ಬೆಳಗಾಯಿತೆಂದು ಪಾಂಡವರು ಅಲ್ಲಿಂದ ಹೊರಟು ವಿಟ್ಲದಲ್ಲಿ ಅರಮನೆ ನಿರ್ಮಿಸಿದರು ಎಂದು ಕಥೆ ಇದೆ.
ಅಲ್ಲಿಂದ ಕೆಳಗಿಳಿದರೆ ಜಲಪಾತ ಮಾದರಿಯ ಗುರ್ಮೆಯನ್ನು ಮನದಣಿಯೆ ನೋಡಬಹುದು. ಅಲ್ಲಿ ಮಣ್ಣು ಕುಸಿಯುತ್ತಿರುವ ಕಾರಣ ಸುರಕ್ಷತೆಯ ದೃಷ್ಟಿಯಿಂದ ಗ್ರಾಮದ ಅನುಭವಿಕರನ್ನು ಕರೆದೊಯ್ಯುವುದು ಸೂಕ್ತ.
ಈ ಪ್ರದೇಶದಲ್ಲಿರುವುದು ಬಂಡೆಕಲ್ಲುಗಳ ಮಾದರಿಯ ಪಾರೆ ಅಲ್ಲ. ಹೊರಮೈ ಕಪ್ಪಾಗಿದ್ದು, ಒಳಗೆ ಕೆಂಪಗಿರುವ ಚಿಪ್ಪು ಪಾರೆ. ಮೇಲ್ಭಾಗದಲ್ಲಿ ಪೂರ್ತಿ ಸಣ್ಣಪುಟ್ಟ ಹೊಂಡಗಳಿವೆ. ಮಳೆಗಾಲದಲ್ಲಿ ಅವುಗಳಲ್ಲಿ ನೀರು ನಿಂತಿರುತ್ತದೆ. ನೀರಿಂಗುವಿಕೆ ಇಲ್ಲಿ ಪ್ರಾಕೃತಿಕವಾಗಿ ದೊಡ್ಡ ಪ್ರಮಾಣದಲ್ಲಿ ಆಗುತ್ತದೆ ಎನ್ನಲಾಗುತ್ತಿದೆ. ಈ ಬಾಂಡೀಲುಗಳ ಆಸುಪಾಸು ಎಲ್ಲ ಕಡೆ ನೀರಿನ ಒರತೆಗಳಿವೆ. ಪೆರ್ಲ ಪೇಟೆಯಿಂದ ಸ್ವಲ್ಪ ಮೇಲೆ ಹೋದರೆ ಮಚ್ಯì ಮಸೀದಿಯ ಬಳಿಯೂ ಒಂದು ಬಾಂಡೀಲು ಇದೆ. ಈ ವಿಸ್ಮಯಗಳನ್ನು ನೀವೂ ಒಮ್ಮೆ ನೋಡಿ ಬನ್ನಿ.
ರೂಟ್ ಮ್ಯಾಪ್ · ಪೆರ್ಲದಿಂದ ಪುತ್ತಿಗೆ ಬಾಡೂರು ದಾರಿಯಾಗಿ ಕುಂಬಳಗೆ ಹೋಗುವ ನಡುವೆ ಸಿಗುವ ಬೆದ್ರಂಪಳ್ಳ ಮತ್ತು ಮಣಿಯಂಪುರ ಬಸ್ ನಿಲ್ದಾಣಗಳ ನಡುವೆ ಸಿಗುವುದೇ ಬಾಂಡೀಲು.
· ಸ್ವಲ್ಲ ಮುಂದೆ ಎಣ್ಮಕಜೆ ತರವಾಡು ಮನೆ ಎದುರಾಗುತ್ತದೆ. ಒಂದೊಮ್ಮೆ ಬಲ್ಲಾಳರ ಬೂಡು ಆಗಿದ್ದ ಇದು ಸದ್ಯ ಬಂಟರ ಸುಪರ್ದಿಯಲ್ಲಿದೆ. ಇದು ಕೂಡ ನೋಡಬಹುದಾದ ಸ್ಥಳ. – ರಾಜಶ್ರೀ ಟಿ. ರೈ ಪೆರ್ಲ