Advertisement
ಅಂಟುವಾಳಕಾಯಿಯ ಶ್ಯಾಂಪೂಅಂಟುವಾಳಕಾಯಿಯ ಪುಡಿ ಅಥವಾ ಶೀತಾ ಪೌಡರ್ 1-2 ಚಮಚ ತೆಗೆದುಕೊಂಡು ಅದಕ್ಕೆ ಬಿಸಿನೀರು ಸೇರಿಸಿ ಪೇಸ್ಟ್ ತಯಾರಿಸಬೇಕು. ಇದನ್ನು ತಲೆಕೂದಲಿಗೆ ಲೇಪಿಸಿ 5 ನಿಮಿಷ ಬಿಟ್ಟು ತಲೆಸ್ನಾನ ಮಾಡಿದರೆ ಜಿಡ್ಡು, ಕೊಳೆ ನಿವಾರಣೆಯಾಗಿ ಕೂದಲು ಕಾಂತಿಯುತವಾಗುತ್ತದೆ. ಎಣ್ಣೆಯ ಅಂಶ ಅಧಿಕವಿರುವ ಕೂದಲಿಗೆ, ಈ ಶ್ಯಾಂಪೂ ಉತ್ತಮ. ಒಣಕೂದಲು ಉಳ್ಳವರು 1 ಚಮಚ ಅಂಟುವಾಳದ ಕಾಯಿಯ ಪುಡಿಗೆ 1 ಚಮಚ ಶಿಕಾಕಾಯಿ ಹುಡಿ ಬೆರೆಸಿ, 12 ಚಮಚ ದಾಸವಾಳದ ಎಲೆಯ ಪೇಸ್ಟ್ ತಯಾರಿಸಿ, ಬಿಸಿ ನೀರಿನಲ್ಲಿ ಚೆನ್ನಾಗಿ ಮಿಶ್ರಮಾಡಿ ಪೇಸ್ಟ್ ತಯಾರಿಸಬೇಕು. ಇದನ್ನು ಕೂದಲಿಗೆ ಲೇಪಿಸಿ 5 ನಿಮಿಷಗಳ ಬಳಿಕ ತಲೆಸ್ನಾನ ಮಾಡಿದರೆ ಒಣಕೂದಲು ಹೊಳಪು ಪಡೆದು ಸ್ನಿಗ್ಧವಾಗುತ್ತದೆ. ಈ ನೈಸರ್ಗಿಕ ಶ್ಯಾಂಪೂ ಗಡಸು ನೀರು ಅಥವಾ ಹಾರ್ಡ್ ವಾಟರ್ ಇರುವ ಪ್ರದೇಶದ ಜನರ ಕೂದಲಿಗೆ ಉತ್ತಮ ಶ್ಯಾಂಪೂ ಆಗಿದೆ.
2 ಚಮಚ ಶಿಕಾಕಾಯಿ ಪುಡಿ, 1 ಚಮಚ ನೆಲ್ಲಿಕಾಯಿ ಪುಡಿ, ಒಂದೆಲಗದ ಸೊಪ್ಪಿನ ರಸ 2 ಚಮಚ, 2 ಚಿಟಿಕೆ ದಾಲಿcàನಿ ಪುಡಿ ಇವೆಲ್ಲವನ್ನೂ ಬಿಸಿ ನೀರಿನಲ್ಲಿ ಮಿಶ್ರಮಾಡಿ ಚೆನ್ನಾಗಿ ಪೇಸ್ಟ್ ತಯಾರಿಸಬೇಕು. ಸ್ನಾನಕ್ಕೆ ಮೊದಲು ಕೂದಲಿಗೆ ಲೇಪಿಸಿ 5 ನಿಮಿಷಗಳ ಬಳಿಕ ಕೂದಲು ತೊಳೆದರೆ ಕೂದಲಿಗೆ ಪೋಷಣೆಯೂ ದೊರೆಯುತ್ತದೆ, ಜೊತೆಗೆ ಕೂದಲಿನ ಕೊಳೆ, ಜಿಡ್ಡು ನಿವಾರಣೆ ಮಾಡುವ ಉತ್ತಮ ಕ್ಲೆನ್ಸಿಂಗ್ ಶ್ಯಾಂಪೂ ಇದಾಗಿದೆ. ವಾರಕ್ಕೆ 1-2 ಸಾರಿ ಬಳಸಿದರೆ ಹಿತಕಾರಿ. ಕಡಲೆಹಿಟ್ಟು ಬೇವಿನ ಎಲೆಯ ಶ್ಯಾಂಪೂ
ಕಡಲೆಹಿಟ್ಟು 2 ಚಮಚ, ಶಿಕಾಕಾಯಿಪುಡಿ 2 ಚಮಚ, ಶ್ರೀಗಂಧದ ಪುಡಿ 1 ಚಮಚ, ಒಣಗಿಸಿದ ಕಹಿಬೇವಿನ ಎಲೆಯ ಪುಡಿ 1/2 ಚಮಚ- ಇವೆಲ್ಲವನ್ನು ಮಿಶ್ರಮಾಡಿ ಬಿಸಿ ನೀರಿನಲ್ಲಿ ಕರಗಿಸಿ ಪೇಸ್ಟ್ ತಯಾರಿಸಬೇಕು. ಕೂದಲಿಗೆ ಲೇಪಿಸಿ 5 ನಿಮಿಷಗಳ ಬಳಿಕ, ಬೆಚ್ಚಗಿನ ನೀರಲ್ಲಿ ಕೂದಲು ತೊಳೆದರೆ ಕೂದಲು ಕಾಂತಿಯುತವಾಗುತ್ತದೆ. ಚಳಿಗಾಲದಲ್ಲಿ ತುರಿಕೆ ಇರುವ ತಲೆಹೊಟ್ಟು ಉಳ್ಳವರಿಗೆ ಈ ನೈಸರ್ಗಿಕ ಶ್ಯಾಂಪೂ ಬಳಸಿದರೆ ಪರಿಣಾಮ ಶೀಘ್ರವಾಗಿ ಉಂಟಾಗುತ್ತದೆ. ಹೊಟ್ಟು ನಿವಾರಣೆಯ ಜೊತೆಗೆ ಕೂದಲು ಉದುರುವುದನ್ನೂ ಈ ಶ್ಯಾಂಪೂ ತಡೆಗಟ್ಟುತ್ತದೆ.
Related Articles
ಹುರಿದು ಹುಡಿಮಾಡಿದ ಮೆಂತ್ಯೆಯ ಪುಡಿ 2 ಚಮಚ, ಶಿಕಾಕಾಯಿ ಹುಡಿ 2 ಚಮಚ, ಒಣಗಿಸಿ ಪುಡಿಮಾಡಿದ ಕಿತ್ತಳೆ ಸಿಪ್ಪೆಯ ಹುಡಿ 1/4 ಚಮಚ- ಇವೆಲ್ಲವನ್ನೂ ಬಿಸಿನೀರಿನಲ್ಲಿ ಹಾಕಿ, ಚೆನ್ನಾಗಿ ಕಲಕಿ, 5 ನಿಮಿಷ ಹಾಗೇ ಇಡಬೇಕು. ತದನಂತರ ಕೂದಲಿಗೆ ಲೇಪಿಸಿ 5 ನಿಮಿಷದ ಬಳಿಕ ಸ್ನಾನ ಮಾಡಬೇಕು.
Advertisement
ಎಲೋವೆರಾ-ನಿಂಬೆರಸದ ಶ್ಯಾಂಪೂಎಲೋವೆರಾ ಅಥವಾ ಲೋಳೆಸರ ಗಿಡದ ಎಲೆಯ ತಿರುಳು 4 ಚಮಚ, ನಿಂಬೆರಸ 1 ಚಮಚ- ಇವೆರಡನ್ನೂ ಚೆನ್ನಾಗಿ ಕಲಸಿ, ಕೂದಲಿಗೆ ಲೇಪಿಸಬೇಕು. 10 ನಿಮಿಷದ ಬಳಿಕ ಕೂದಲನ್ನು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. ಕೂದಲಿಗೆ ಪೋಷಕಾಂಶಗಳನ್ನು ಒದಗಿಸುವ ಜಿಡ್ಡು ಕೊಳೆನಿವಾರಕ ಶ್ಯಾಂಪೂ ಇದು. ದಾಸವಾಳ ಎಲೆ ಹಾಗೂ ಹೂವಿನ ಶ್ಯಾಂಪೂ
10 ದಾಸವಾಳದ ಹೂ (ಬಿಳಿ ದಾಸವಾಳವಾದರೆ ಉತ್ತಮ. ಇಲ್ಲವಾದರೆ ಕೆಂಪು ದಾಸವಾಳ) 20 ದಾಸವಾಳದ ಎಲೆಗಳು ಇವೆರಡನ್ನೂ ಅರೆದು ಪೇಸ್ಟ್ ತಯಾರಿಸಬೇಕು. ದಾಸವಾಳದಲ್ಲಿರುವ ಮ್ಯೂಸಿಲೇಜ್‌ನಿಂದಾಗಿ ಈ ಪೇಸ್ಟ್ ಅಂಟಾಗಿರುತ್ತದೆ. ಕೂದಲಿಗೆ ಲೇಪಿಸಿ 10 ನಿಮಿಷಗಳ ಬಳಿಕ ಕೂದಲು ತೊಳೆಯಬೇಕು. ಈ ಶ್ಯಾಂಪೂ ಕೂದಲು ಉದುರುವುದನ್ನು ನಿವಾರಣೆ ಮಾಡಲು ಹಾಗೂ ಕೂದಲು ಸೊಂಪಾಗಿ ಬೆಳೆಯಲು ಸಹಕಾರಿಯಾಗಿದೆ. ಅಕ್ಕಿ ತೊಳೆದ ನೀರು ಹಾಗೂ ಶಿಕಾಕಾಯಿಯ ಶ್ಯಾಂಪೂ
ಒಂದು ಬೌಲ್‌ನಲ್ಲಿ 1/2 ಕಪ್ ಅಕ್ಕಿಯನ್ನು ಹಾಕಿ, ಅದಕ್ಕೆ 2-3 ಕಪ್ ನೀರು ಬೆರೆಸಿ, 15 ನಿಮಿಷ ಹಾಗೇ ಇಡಬೇಕು. ತದನಂತರ ಈ ನೆನೆದ ಅಕ್ಕಿಯನ್ನು ಚೆನ್ನಾಗಿ ಅದೇ ನೀರಿನಲ್ಲಿ ತೊಳೆದು, ಆ ನೀರನ್ನು ಸಂಗ್ರಹಿಸಬೇಕು. ಈ ನೀರಿಗೆ ಶಿಕಾಕಾಯಿ ಪುಡಿ ಬೆರೆಸಿ ಪೇಸ್ಟ್ ತಯಾರಿಸಬೇಕು. ಕೂದಲಿಗೆ ಲೇಪಿಸಿ 5 ನಿಮಿಷಗಳ ಬಳಿಕ ಕೂದಲು ತೊಳೆಯಬೇಕು. ಅಕ್ಕಿ ತೊಳೆದ ನೀರಿನಲ್ಲಿ “ಇನೊಸಿಟೊಲ್’ ಎಂಬ ದ್ರವ್ಯವಿದ್ದು, ಇದು ಕೂದಲಿನ ಬುಡ ಗಟ್ಟಿಯಾಗಿ ಕೂದಲು ಸೊಂಪಾಗಿ ಬೆಳೆಯಲು ಹಿತಕರ. ಜೊತೆಗೆ ಅಕ್ಕಿ ತೊಳೆದ ನೀರು ಕ್ಲೆನ್ಸಿಂಗ್ ಗುಣವನ್ನೂ ಹೊಂದಿರುವುದರಿಂದ ಶಿಕಾಕಾಯಿಯ ಪುಡಿಯ ಜೊತೆ ಶ್ಯಾಂಪೂ ರೀತಿಯಲ್ಲಿ ಬಳಸಿದರೆ, ಎಲ್ಲ ಬಗೆಯ ಕೂದಲಿನವರಿಗೆ ಉತ್ತಮ ಶ್ಯಾಂಪೂ ಆಗಿದೆ. ಉಳಿದ ಅಕ್ಕಿ ತೊಳೆದ ನೀರನ್ನು ಶ್ಯಾಂಪೂವಿನಿಂದ ಕೂದಲು ತೊಳೆದ ಬಳಿಕ, ಹೇರ್ ರಿನ್ಸ್ ನಂತೆ ಕೂದಲು ತೊಳೆಯಲು ಉಪಯೋಗಿಸಿದರೆ ಕೂದಲು ಕಾಂತಿಯುತವಾಗಿ ಹೊಳೆಯುತ್ತದೆ. ಮುಲ್ತಾನಿಮಿಟ್ಟಿ , ಎಲೋವೆರಾ ಶ್ಯಾಂಪೂ
ಮುಲ್ತಾನಿ ಮಿಟ್ಟಿ 2 ಚಮಚ, ಎಲೋವೆರಾ ಎಲೆಯ ತಿರುಳು 2 ಚಮಚ- ಇವೆರಡನ್ನೂ ನೀರಿನಲ್ಲಿ ಕರಗಿಸಿ ತೆಳ್ಳಗಿಸಿ ಪೇಸ್ಟ್ ತಯಾರಿಸಬೇಕು. ಇದನ್ನು ಕೂದಲಿಗೆ ಲೇಪಿಸಿ ಮಾಲೀಶು ಮಾಡಿ 5 ನಿಮಿಷಗಳ ಬಳಿಕ ಕೂದಲು ತೊಳೆದರೆ ಉತ್ತಮ ಹೇರ್ ಕ್ಲೆನ್ಸಿಂಗ್ ಶ್ಯಾಂಪೂ ಇದಾಗಿದೆ. ಒಣಕೂದಲು ಹಾಗೂ ಸಾಧಾರಣ ಕೂದಲು ಇರುವವರಿಗೆ ಈ ಶ್ಯಾಂಪೂ ಉತ್ತಮ. ಅಧಿಕ ಜಿಡ್ಡಿನಂಶ ಉಳ್ಳವರು ಮುಲ್ತಾನಿಮಿಟ್ಟಿ ಹಾಗೂ ಎಲೋವೆರಾದ ಜೊತೆಗೆ ಶಿಕಾಕಾಯಿಪುಡಿ 1 ಚಮಚ ಬೆರೆಸಿದರೆ ಅಧಿಕ ಜಿಡ್ಡಿನಂಶ ನಿವಾರಣೆಯಾಗಿ ಕೂದಲು ಶುಭ್ರವಾಗುತ್ತದೆ. ಸ್ವಲ್ಪ ಮೊಸರು ಬೆರೆಸಿದರೂ ಪರಿಣಾಮಕಾರಿ. ಈ ನೈಸರ್ಗಿಕ ಶ್ಯಾಂಪೂಗಳ ವಿಶೇಷತೆ ಎಂದರೆ ಕೂದಲಿನ ಧೂಳು-ಕೊಳೆ ನಿವಾರಣೆ ಮಾಡುವುದರ ಜೊತೆಗೆ ಕೂದಲಿನ ಆರೋಗ್ಯ, ಸೌಂದರ್ಯ ವರ್ಧನೆಗೆ ಉತ್ತಮ! ಡಾ. ಅನುರಾಧಾ ಕಾಮತ್