ಬೆಂಗಳೂರು: ತ್ಯಾಜ್ಯದಿಂದ ಗೊಬ್ಬರ ತಯಾರಿಸಿ ಮಾರಾಟ ಮಾಡುತ್ತಿರುವ ಬಿಬಿಎಂಪಿ ಇದೀಗ ಹಸಿ ಕಸದಿಂದ ನೈಸರ್ಗಿಕ ಅನಿಲ (ಸಿಎನ್ಜಿ) ಉತ್ಪಾದಿಸಿ ಆದಾಯಗಳಿಸಲು ಮುಂದಾಗಿದ್ದು, ಅದಕ್ಕಾಗಿ ಪ್ರತಿದಿನ 50 ಟನ್ ತ್ಯಾಜ್ಯ ಸಂಸ್ಕರಿಸುವ ಸಾಮರ್ಥ್ಯದ ಬಯೋ ಮೆಥನೇಷನ್ ಘಟಕ ಸ್ಥಾಪನೆಗೆ ಯೋಜನೆ ರೂಪಿಸಿದೆ.
ಬಿಬಿಎಂಪಿ ರೂಪಿಸಿರುವ ಯೋಜನೆ ಪ್ರಕಾರ ನಿತ್ಯ 50 ಟನ್ ಹಸಿ ತ್ಯಾಜ್ಯ ಸಂಸ್ಕರಿಸುವ ಬಯೋಮೆಥನೇಷನ್ ಘಟಕ ಸ್ಥಾಪಿಸಲಾಗುತ್ತದೆ. ಜಕ್ಕೂರು ಬಳಿ ಘಟಕ ಸ್ಥಾಪನೆಯಾಗಲಿದ್ದು, ಗುತ್ತಿಗೆದಾರರ ನೇಮಕಕ್ಕೆ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಟೆಂಡರ್ ಪಡೆಯುವ ಗುತ್ತಿಗೆದಾರರಿಗೆ ಘಟಕ ಸ್ಥಾಪನೆಗಾಗಿ ಬಿಬಿಎಂಪಿಯೇ 5 ಎಕರೆ ಜಾಗ ನೀಡಲಿದೆ.
ಜಾಗ ಪಡೆಯುವ ಗುತ್ತಿಗೆದಾರರು 9 ತಿಂಗಳೊಳಗೆ ಘಟಕ ಸ್ಥಾಪಿಸಿ ಕಾರ್ಯಾರಂಭ ಮಾಡಬೇಕಿದೆ. ಜತೆಗೆ15 ವರ್ಷ ನಿರ್ವಹಣೆ ಮಾಡಿ ಬಿಬಿಎಂಪಿಗೆ ವಾಪಸ್ನೀಡುವಂತೆ ಷರತ್ತು ವಿಧಿಸಲಾಗುತ್ತದೆ.ಘಟಕ ಸ್ಥಾಪಿಸುವ ಗುತ್ತಿಗೆದಾರರು ಹಸಿ ತ್ಯಾಜ್ಯದಿಂದಪ್ರತಿದಿನ 1,900 ಕೆ.ಜಿ.ಗೂ ಹೆಚ್ಚಿನ ಸಿಎನ್ಜಿ ಉತ್ಪಾದಿಸಬೇಕಿದೆ. ಹೀಗೆ ಉತ್ಪತ್ತಿಯಾಗುವ ಸಿಎನ್ಜಿಮರಾಟ ಮಾಡುವ ಹಕ್ಕು ಗುತ್ತಿಗೆದಾರರಿಗಿರಲಿದೆ. ಆದರೆ, ಸಿಎನ್ಜಿ ಮಾರಾಟದ ನಂತರ ಬರುವ ಹಣದಲ್ಲಿ ಬಿಬಿಎಂಪಿಗೆ ಪಾಲು ನೀಡಬೇಕಿದೆ.
ಗುತ್ತಿಗೆದಾರರು ಬಿಬಿಎಂಪಿಗೆ ನೀಡಲಿರುವ ಹಣದ ಬಗ್ಗೆ ಟೆಂಡರ್ ಪ್ರಕ್ರಿಯೆ ವೇಳೆ ಮಾಹಿತಿ ನೀಡಬೇಕು. ಪಾಲಿಕೆಗೆ ಹೆಚ್ಚು ವರಮಾನ ಕೊಡುವ ಒಪ್ಪಂದಕ್ಕೆ ಸಮ್ಮತಿಸೂಚಿಸುವ ಗುತ್ತಿಗೆದಾರನಿಗೆ ಬಿಬಿಎಂಪಿ ಟೆಂಡರ್ ನೀಡಲು ನಿರ್ಧರಿಸಿದೆ.
Related Articles
ರಾಜಧಾನಿ ಬೆಂಗಳೂರಿನಲ್ಲಿ ಪ್ರತಿದಿನ 5,500 ಟನ್ ನಿಂದ 6 ಸಾವಿರ ಟನ್ವರೆಗೆ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಅದರಲ್ಲಿ ಶೇ. 75ರಿಂದ 80 ಹಸಿ ತ್ಯಾಜ್ಯವಾಗಿದೆ. ಆ ತ್ಯಾಜ್ಯ ಸಂಸ್ಕರಿಸಲು ಬಿಬಿಎಂಪಿ 7 ಹಸಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಿದ್ದರೂ ಅವುಗಳ ನಿರ್ವಹಣೆ ಕೊರತೆ ಹಾಗೂ ಇನ್ನಿತರ ಕಾರಣಗಳಿಂದ ಸದ್ಯ 4 ಘಟಕಗಳಷ್ಟೇ ಕಾರ್ಯನಿರ್ವಹಿಸುತ್ತಿವೆ.
ಆ ಪೈಕಿ ನಿತ್ಯ 1 ಸಾವಿರದಿಂದ 1,500 ಟನ್ ಹಸಿ ತ್ಯಾಜ್ಯ ಸಂಸ್ಕರಿಸಲಾಗುತ್ತಿದೆ. ಉಳಿದ ಹಸಿ ತ್ಯಾಜ್ಯವನ್ನು ಮಿಟ್ಟಗಾನಹಳ್ಳಿಯಲ್ಲಿನ ಭೂಭರ್ತಿ ಪ್ರದೇಶದಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಈ ಎಲ್ಲ ಪ್ರಕ್ರಿಯೆಗಳಿಂದ ಬಿಬಿಎಂಪಿಗೆ ಯಾವುದೇ ರೀತಿಯ ಆದಾಯ ಬರುತ್ತಿಲ್ಲ. ಜತೆಗೆ ತ್ಯಾಜ್ಯ ಸಮಸ್ಯೆಗೂ ಮುಕ್ತಿ ದೊರೆಯುತ್ತಿಲ್ಲ. ಹೀಗಾಗಿ ತ್ಯಾಜ್ಯ ಸಂಸ್ಕರಣೆ ಜತೆಗೆ ಆದಾಯಗಳಿಸಲು ಹೊಸ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ. ಅದರಂತೆ ತ್ಯಾಜ್ಯದಿಂದ ಸಿಎನ್ಜಿ ಉತ್ಪಾದಿಸಿ ಅದನ್ನು ಮಾರಾಟ ಮಾಡಲು ನಿರ್ಧರಿಸಿದೆ. ನೂತನ ಘಟಕದಲ್ಲಿ ಸಿಎನ್ಜಿ ಜತೆಗೆ ಗೊಬ್ಬರ ತಯಾರಿಸಬೇಕಿದೆ. ಅದರಂತೆ ಪ್ರತಿದಿನ 7.50 ಟನ್ ನಿಂದ 10 ಟನ್ ಗೊಬ್ಬರ ತಯಾರಿಸಬೇಕು.
5 ಮಾತ್ರ ಕಾರ್ಯನಿರ್ವಹಣೆ: ಬಿಬಿಎಂಪಿ ಅಡಿಯಲ್ಲಿ ಈಗಾಗಲೆ 13 ಬಯೋ ಮೆಥನೇಷನ್ ಘಟಕಗಳಿವೆ. ಸದ್ಯ ಅವುಗಳಲ್ಲಿ 5 ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಆ ಘಟಕಗಳಲ್ಲಿ ಪ್ರತಿನಿತ್ಯ 50ರಿಂದ 60 ಟನ್ ತ್ಯಾಜ್ಯ ಮಾತ್ರ ಸಂಸ್ಕರಿಸಿ ಸಿಎನ್ಜಿ ಉತ್ಪಾದಿಸಲಾಗುತ್ತಿದೆ. ಅಲ್ಲದೆ ಹೀಗೆ ಘಟಕಗಳನ್ನು ನಿರ್ವಹಣೆ ಮಾಡುತ್ತಿರುವವರಿಗೆ ಬಿಬಿಎಂಪಿಯಿಂದಲೇ ಪ್ರತಿದಿನ 63 ಸಾವಿರ ರೂ. ನೀಡಲಾಗುತ್ತಿದೆ. ಈ ಘಟಕಗಳಿಂದ ಯಾವುದೇ ಅದಾಯ ಅಥವಾ ಪ್ರಯೋಜನ ಬಿಬಿಎಂಪಿಗೆ ಆಗುತ್ತಿಲ್ಲ. ಹೀಗಾಗಿ ಹೊಸ ಘಟಕ ಸ್ಥಾಪಿಸಲು ಬಿಬಿಎಂಪಿ ಮುಂದಾಗಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.
ತ್ಯಾಜ್ಯ ಸಂಸ್ಕರಣೆಯಿಂದ ಸಿಎನ್ಜಿ ಉತ್ಪಾದಿಸುವ ಘಟಕ ಸ್ಥಾಪನೆಗೆ ಯೋಜನೆ ರೂಪಿಸಿ ಟೆಂಡರ್ ಕರೆಯಲಾಗಿದೆ. ನೂತನ ಘಟಕದಿಂದ ಪ್ರತಿದಿನ 50ಟನ್ ಹಸಿ ತ್ಯಾಜ್ಯ ಸಂಸ್ಕರಿಸ ಲಾಗುತ್ತದೆ. ಜತೆಗೆ ಸಿಎನ್ಜಿ ಮಾರಾಟದ ಮೂಲಕ ಅದಾಯಗಳಿಸಲು ನಿರ್ಧರಿಸಲಾಗಿದೆ. -ಬಸವರಾಜ ಕಬಾಡೆ, ಮುಖ್ಯ ಎಂಜಿನಿಯರ ಘನತ್ಯಾಜ್ಯ ವಿಭಾಗ
-ಗಿರೀಶ್ ಗರಗ