Advertisement

8 ವರ್ಷಗಳಲ್ಲಿ ದ.ಕ.ದ ಹಳ್ಳಿಗಳಿಗೂ ಸಿಎನ್‌ಜಿ

12:14 AM Jan 16, 2021 | Team Udayavani |

ಮಂಗಳೂರು: ಕೊಚ್ಚಿಯಿಂದ ಕೊಳವೆ ಮೂಲಕ ಮಂಗಳೂರಿಗೆ ಬರುತ್ತಿರುವ ನೈಸರ್ಗಿಕ ಅನಿಲ (ಸಿಎನ್‌ಜಿ)ವನ್ನು ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯ ಗ್ರಾಮಾಂತರ ಭಾಗಗಳಿಗೂ ಸರಬರಾಜು ಮಾಡಲು ಯೋಜನೆ ರೂಪಿಸಲಾಗುತ್ತಿದೆ.

Advertisement

ದಕ್ಷಿಣ ಕನ್ನಡದಲ್ಲಿ 8 ವರ್ಷಗಳ ಒಳಗೆ ಜಿಲ್ಲೆಯ 3.50 ಲಕ್ಷ ಕುಟುಂಬಗಳು, ಕೈಗಾರಿಕೆಗಳು, ವಾಣಿಜ್ಯ ಉದ್ದೇಶಕ್ಕೆ ಸರಬರಾಜು ಮಾಡಲು ಕೇಂದ್ರ ಸರಕಾರಿ ಸ್ವಾಮ್ಯದ ಗೈಲ್‌ ಇಂಡಿಯಾ ಮುಂದಡಿ ಇರಿಸಿದೆ.

ಮಂಗಳೂರಿನಲ್ಲಿ ಸಿಎನ್‌ಜಿ ಒದಗಣೆ ಪೂರ್ಣವಾದ ಬಳಿಕ ಗ್ರಾಮಾಂತರದ 4,861 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಪೈಪ್‌ಲೈನ್‌ ಅಳವಡಿಸಲಾಗುತ್ತದೆ. ಇದಕ್ಕಾಗಿ 25 ವರ್ಷಗಳಲ್ಲಿ 2 ಸಾವಿರ ಕೋ.ರೂ. ಹೂಡಿಕೆ ಮಾಡಲು ಗೈಲ್‌ ಸಂಸ್ಥೆ ನಿರ್ಧರಿಸಿದೆ.

ಸಾರಿಗೆ ಕ್ಷೇತ್ರಕ್ಕೆ ಸಿಎನ್‌ಜಿ :

ಸಾರಿಗೆ ವಲಯಕ್ಕೆ ಸಿಎನ್‌ಜಿ ಅನಿಲ ಪೂರೈಸುವ 100 ಕೇಂದ್ರಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಎಂಸಿಎಫ್‌ನಲ್ಲಿ ಡಿ. 15ರಿಂದ ಪೂರ್ಣ ಸಾಮರ್ಥ್ಯದೊಂದಿಗೆ ಸಿಎನ್‌ಜಿ ಬಳಸಿ ಯೂರಿಯಾ ಉತ್ಪಾದನೆ ಆಗುತ್ತಿದೆ. ಎಂಸಿಎಫ್‌ನ ಗೈಲ್‌ ಕೇಂದ್ರದಿಂದ ಎಂಆರ್‌ಪಿಎಲ್‌ ಮತ್ತು ಒಎಂಪಿಎಲ್‌ಗೆ ಅನಿಲ ಸರಬರಾಜು ಪೈಪ್‌ಲೈನನ್ನು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌  ಜ. 20ರಂದು ಉದ್ಘಾಟಿಸುವ ಸಾಧ್ಯತೆಯಿದೆ.

Advertisement

ಮಂಗಳೂರು ಮತ್ತು ಉಡುಪಿ ಭಾಗಕ್ಕೆ ಸಿಟಿ ಗ್ಯಾಸ್‌ ಸರಬರಾಜು ಮಾಡುವುದಕ್ಕಾಗಿ ಮಂಗಳೂರಿನಿಂದ ಪೈಪ್‌ಲೈನ್‌ ಅಳವಡಿಕೆ ಆರಂಭಿಸಲಾಗಿದೆ. ಅದು ಪೂರ್ಣವಾದ ಬಳಿಕ ಜಿಲ್ಲೆಯಾದ್ಯಂತ ಸರಬರಾಜು ಮಾಡಲು ಪೈಪ್‌ಲೈನ್‌ ಕಾಮಗಾರಿ ಆರಂಭಿಸಲಾಗುವುದು. 8 ವರ್ಷಗಳ ಒಳಗೆ ಜಿಲ್ಲೆಯಾದ್ಯಂತ ಪೂರ್ಣ ಪ್ರಮಾಣದಲ್ಲಿ ಗ್ಯಾಸ್‌ ಸರಬರಾಜು ಆರಂಭಗೊಳ್ಳಲಿದೆ.– ವಿಜಯಾನಂದ,ಡಿಜಿಎಂ, ಗೈಲ್‌ ಲಿ., ಮಂಗಳೂರು ವಿಭಾಗ

ಸಿಎನ್‌ಜಿ ಪ್ರಯೋಜನಗಳು :

  • ಸಿಲಿಂಡರ್‌ನಷ್ಟೇ ಪ್ರಮಾಣದ ಅನಿಲ ಅದಕ್ಕಿಂತ ಶೇ. 20ರಷ್ಟು ಕಡಿಮೆ ಬೆಲೆಯಲ್ಲಿ ಲಭ್ಯ.
  • ಇಂಗಾಲ ಬಿಡುಗಡೆ ಪ್ರಮಾಣ ಎಲ್‌ಪಿಜಿಗಿಂತ ಶೇ. 50ರಷ್ಟು ಕಡಿಮೆ.
  • ಸೋರಿಕೆಯಾದರೂ ವಾತಾವರಣದಲ್ಲಿ ಲೀನವಾಗುತ್ತದೆ.
  • ಬಳಸುವ ಅನಿಲಕ್ಕಷ್ಟೇ ಹಣ ಪಾವತಿ.
  • ಸಿಲಿಂಡರ್‌ ಮರುಪೂರಣ, ಬುಕ್ಕಿಂಗ್‌ ರಗಳೆಯಿಲ್ಲ.
  • ಎಲ್‌ಪಿಜಿಗೆ ಬಳಸುವ ಒಲೆಯನ್ನೇ ಬಳಸಬಹುದು. ಆದರೆ ಬರ್ನರ್‌ ಬದಲಿಸಬೇಕು.
Advertisement

Udayavani is now on Telegram. Click here to join our channel and stay updated with the latest news.

Next