Advertisement

ಪ್ರಾಕೃತಿಕ ವಿಕೋಪ: ಪರಿಹಾರ ಮೊತ್ತ ಅರೆಕಾಸಿನ ಮಜ್ಜಿಗೆ ! 

08:24 AM Jun 04, 2018 | |

ಮಂಗಳೂರು: ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡು ಲಕ್ಷಾಂತರ ರೂ. ನಷ್ಟ ಅನುಭವಿಸಿ ದಿಕ್ಕೆಟ್ಟು ಕುಳಿತಿರುವವರಿಗೆ ಸರಕಾರ ನೀಡುವ ಪರಿಹಾರ ಧನ ನೋಡಿದರೆ ಮತ್ತಷ್ಟು ಆಘಾತ ಖಚಿತ. ಸರಕಾರದ ಪರಿಹಾರ ಮೊತ್ತ ಅಷ್ಟು ಜುಜುಬಿ!

Advertisement

ಪ್ರಾಕೃತಿಕ ವಿಕೋಪದಿಂದ ಪಕ್ಕಾ ಮನೆ ಅಥವಾ ಕಚ್ಚಾ ಮನೆ ಸಂಪೂರ್ಣ ಹಾನಿಗೀಡಾದರೆ ಅಥವಾ ತೀವ್ರ ಹಾನಿಗೀಡಾದರೆ ಈಗ 95,100 ರೂ. ಪರಿಹಾರ ಸಿಗುತ್ತದೆ. ಗುಡ್ಡಗಾಡು ಪ್ರದೇಶದಲ್ಲಾದರೆ 1,01,900 ರೂ. ಪರಿಹಾರ ಸಿಗುತ್ತದೆ. ಪಕ್ಕಾ ಮನೆ ಶೇ. 15ರಷ್ಟು ಹಾನಿಯಾದರೆ 5,200 ರೂ., ಕಚ್ಚಾ ಮನೆಗಾದರೆ 3,200 ರೂ. ಗುಡಿಸಲು ಹಾನಿಯಾದರೆ 4,100 ರೂ. ಹಾಗೂ ಜಾನುವಾರು ಹಟ್ಟಿಗೆ ಹಾನಿಯಾದರೆ 2,100 ರೂ. ಇದು ಸರಕಾರದಿಂದ ಸಿಗುವ ಪರಿಹಾರ.

ಹಿಂದೆ ಲಭಿಸುತ್ತಿದ್ದ ಪರಿಹಾರ
ಈ ಹಿಂದೆ ಸಂಪೂರ್ಣ ಹಾನಿಗೊಳಗಾದ ಪಕ್ಕಾ ಮನೆಗೆ 35,000 ರೂ. ಮಾತ್ರ ಪರಿಹಾರ ಸಿಗುತ್ತಿತ್ತು. ಆಗ ಕಚ್ಚಾ ಮನೆಗಳಿಗೆ 15,000 ರೂ. ಮಾತ್ರ ದೊರೆಯುತ್ತಿತ್ತು. ಹೊಸ ಮನೆಗೆ ಅಡಿಪಾಯ ಹಾಕಲು ಕೂಡ ಈ ಪರಿಹಾರ ಮೊತ್ತ ಸಾಲುತ್ತಿರಲಿಲ್ಲ. ತೀವ್ರ ತರದ ಹಾನಿಗೆ ಪಕ್ಕಾ ಮನೆಗಳಿಗೆ ನೀಡುವ ಮೊತ್ತ 6,300 ರೂ., ಕಚ್ಚಾ ಮನೆಗಳಿಗೆ 3,200 ರೂ., ಪಕ್ಕಾ ಹಾಗೂ ಭಾಗಶಃ ಹಾನಿಯಾದರೆ 1,900 ರೂ., ಗುಡಿಸಲು ನಾಶವಾದರೆ 2,500 ರೂ. ಹಾಗೂ ಮನೆಗೆ ಹೊಂದಿಕೊಂಡಂತೆ ಇರುವ ಹಟ್ಟಿ ನಾಶವಾದರೆ 1,250 ರೂ. ಇತ್ತು. ಪರಿಹಾರ ಈಗ ಸ್ವಲ್ಪ ಏರಿಕೆಯಾಗಿದೆಯಾದರೂ ಇನ್ನೂ ಜುಜುಬಿ ಅನ್ನಿಸುವಷ್ಟೇ ಇದೆ.

ನಿರಾಶ್ರಿತ ಕುಟುಂಬಕ್ಕೆ ಈ ಪರಿಹಾರ ಮೊತ್ತ ಈಗಿನ ಬೆಲೆ ಏರಿಕೆಯ ಸಂದರ್ಭ ಯಾವುದಕ್ಕೂ ಸಾಲದು. ಮನೆ ಪೂರ್ಣವಾಗಿ ನಿರ್ಮಾಣ ಮಾಡುವುದಿದ್ದಲ್ಲಿ ಲಕ್ಷಾಂತರ ರೂ. ವ್ಯಯಿಸಬೇಕಾಗುತ್ತದೆ. ಅದರಲ್ಲೂ ನಗರ ವ್ಯಾಪ್ತಿಯಲ್ಲಿ ಬಹಳಷ್ಟು ವೆಚ್ಚ ಮಾಡಬೇಕಾಗುತ್ತದೆ. ಆದರೆ ಈಗ ಮಳೆಯಿಂದ ಮನೆ ಕಳೆದುಕೊಂಡವರು ಸರಕಾರದಿಂದ ಸಿಗುವ 95,100 ರೂ. ಪಡೆದು ಹೊಸ ಮನೆ ಕಟ್ಟುವುದಾದರೂ ಹೇಗೆ ಎಂಬ ಪ್ರಶ್ನೆ ಎದುರಾಗಿದೆ.

ಪರಿಹಾರ ಹಣ ಖರ್ಚಿಗೇ ಸರಿ!
ಪ್ರಾಕೃತಿಕ ವಿಕೋಪದ ಬಹುತೇಕ ಪ್ರಕರಣಗಳಲ್ಲಿ ಪರಿಹಾರ ಪ್ರಮಾಣ ಏರಿಕೆ ಮಾಡಬೇಕು ಎಂಬುದಾಗಿ ನಿರಂತರವಾಗಿ ಮಾಡಿದ ಬೇಡಿಕೆ-ಮನವಿಗಳ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕೆಲವು ವರ್ಷಗಳ ಹಿಂದೆ ಸ್ವಲ್ಪ ಏರಿಕೆ ಮಾಡಿತ್ತು. ಕೃಷಿ ಹಾನಿ ಸೇರಿದಂತೆ ಕೆಲವು ಪ್ರಕರಣಗಳಲ್ಲಿ ದೊರೆಯುವ ಪರಿಹಾರದ ಮೊತ್ತ ಯಾವ ರೀತಿ ಇದೆ ಎಂದರೆ ಅದನ್ನು ಪಡೆಯಲು ಅಷ್ಟೇ ಮೊತ್ತವನ್ನು ಖರ್ಚು ಮಾಡಬೇಕಾಗುತ್ತದೆ.

Advertisement

ಪರಿಹಾರವೆಂಬ ಪ್ರಹಸನ !
ಪ್ರಾಕೃತಿಕ ವಿಕೋಪದ ಬಹುತೇಕ ಪ್ರಕರಣಗಳಲ್ಲಿ ನೀಡುವ ಪರಿಹಾರ ಪ್ರಸ್ತುತ ಒಂದು ಪ್ರಹಸನ ಎಂದರೆ ತಪ್ಪಲ್ಲ. ಮನೆ ಮಠ ಕಳೆದುಕೊಂಡ ಕುಟುಂಬಗಳಿಗೆ ತತ್‌ಕ್ಷಣಕ್ಕೆ ಆಡಳಿತ ವ್ಯವಸ್ಥೆ ಸ್ಪಂದಿಸುತ್ತಿದೆಯಾದರೂ ಆ ಹಣ ಯಾವುದಕ್ಕೂ ಸಾಲುತ್ತಿಲ್ಲ ಎಂಬ ಸಾಮಾನ್ಯ ಪ್ರಜ್ಞೆ  ಖುದ್ದು ಸರಕಾರಕ್ಕೆ ಇಲ್ಲದಾಗಿದೆ. ಪರಿಹಾರವನ್ನು ಹೆಚ್ಚಿಸಬೇಕು ಎಂದು ಜನಪ್ರತಿನಿಧಿಗಳು, ಸಂಘಟನೆಗಳು ನಿರಂತರವಾಗಿ ಸರಕಾರವನ್ನು ಒತ್ತಾಯಿಸುತ್ತಲೇ ಇದ್ದಾರೆ. ಆದರೆ ಪರಿಹಾರ ಮೊತ್ತ ಮಾತ್ರ ಏರಿಯೇ ಇಲ್ಲ.

ಸ್ಥಳೀಯಾಡಳಿತ ಸಂಸ್ಥೆಗಳಿಂದ ಈ ಬಗ್ಗೆ ನಿರ್ಣಯಗಳನ್ನು ಮಾಡಿ ಸರಕಾರಕ್ಕೂ ಕಳುಹಿಸಲಾಗಿದೆ. ಯಾವುದೂ ಫಲ ನೀಡಿಲ್ಲ. ಕೇವಲ ಜುಜುಬಿ ಮೊತ್ತವನ್ನು ಏರಿಸಿ ಸರಕಾರ ಸುಮ್ಮನಾ ಗಿದೆ. ಸರಕಾರ ಪೂರ್ತಿ ಅಲ್ಲದಿದ್ದರೂ ಇಂದಿನ ವಾಸ್ತವ ಸ್ಥಿತಿಗೆ ಅನುಗುಣವಾಗಿ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಮಾನದಂಡವನ್ನು ಮರು ಪರಿಷ್ಕರಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next