Advertisement

ಪ್ರಕೃತಿ ವಿಕೋಪ 74.54 ಕೋ.ರೂ. ವಿಶೇಷ ಅನುದಾನ ಬಿಡುಗಡೆಗೆ ಮನವಿ

01:00 AM Mar 03, 2019 | Harsha Rao |

ಮಡಿಕೇರಿ: ಕೊಡಗು ಜಿಲ್ಲೆಯು ಬೆಟ್ಟಗುಡ್ಡಗಳಿಂದ ಕೂಡಿದ ಮಲೆನಾಡು ಪ್ರದೇಶವಾಗಿದ್ದು, ಈ  ಜಿಲ್ಲೆಗೆ   ಕಂಟಕವೆಂಬಂತೆ ಇತ್ತೀಚೆಗೆ ಜಲಪ್ರಳಯ ಉಂಟಾಗಿ ಕೊಡಗು ಜಿಲ್ಲೆಯು ಅಕ್ಷರಶಃ ನಲುಗಿ ಹೋಗಿತ್ತು. ಆದ್ದರಿಂದ ಜಿಲ್ಲೆಯನ್ನು ಮೊದಲಿನ ಸ್ಥಿತಿಗೆ ತರುವಲ್ಲಿ ವಿಶೇಷ ಗಮನ ಹರಿಸಬೇಕಾಗಿದೆ. ಅಲ್ಲದೆ ಈ ಬಗ್ಗೆ ಈ ಹಿಂದೆಯೂ ಮನವಿ ಸಲ್ಲಿಸಿದ್ದು, ಜಿಲ್ಲೆಯ ಹಿತದೃಷ್ಟಿಯಿಂದ ಪ್ರಮುಖ ಬೇಡಿಕೆಗಳನ್ನು ಈಡೇರಿಸುವ ಮೂಲಕ ಜಿಲ್ಲೆಯ ಸಂಕಷ್ಟವನ್ನು ಬಗೆಹರಿಸುವಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಲ್ಲಿ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್‌ ಅವರು ಮನವಿ ಮಾಡಿದ್ದಾರೆ.  

Advertisement

ಜಿಲ್ಲೆಯಲ್ಲಿನ ರಸ್ತೆಗಳು, ಸೇತುವೆಗಳು, ಕೆರೆ ಕಟ್ಟೆಗಳು ಕೊಚ್ಚಿ ಹೋಗಿದ್ದು, ಈ ಬಗ್ಗೆ ಸರ್ಕಾರಕ್ಕೆ 172.62 ಕೋ.ರೂ. ಗಳ ವೆಚ್ಚದ ವರದಿಯನ್ನು ಜಿಲ್ಲಾಡಳಿತ ನೀಡಿರುವುದರಿಂದ ಕೂಡಲೇ ವಿಶೇಷವಾಗಿ ರಸ್ತೆ, ಸೇತುವೆ, ಕೆರೆ ಕಟ್ಟೆಗಳು ತಡೆಗೋಡೆ ನಿರ್ಮಿಸಲು ವಿಶೇಷ ಅನುದಾನ 74.54 ಕೋ. ರೂ. ಮಂಜೂರು ಮಾಡುವಂತೆ ಕೋರಿದರು.      

ಜಿಲ್ಲೆಯಲ್ಲಿ ಈಗಾಗಲೇ ಭತ್ತ, ಜೋಳ ಬೆಳೆದ 11,448 ಹೆಕ್ಟೇರ್‌ ವ್ಯಾಪ್ತಿಯಲ್ಲಿ ಬೆಳೆ ನಾಶವಾಗಿದ್ದು, ಈ ಬಗ್ಗೆ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡುವ ಮೂಲಕ ರೈತರಿಗೆ ದೀರ್ಘಾವಧಿಗೆ ಮರು ಸಾಲ ನೀಡುವುದು.

ಜಿಲ್ಲೆಯಲ್ಲಿನ ಹೆಚ್ಚಿನ ಸಂಖ್ಯೆಯಲ್ಲಿ ಕಾಫಿ ಬೆಳೆಗಾರರೇ ವಾಸಿಸುತ್ತಿದ್ದು, ಈ ಬಾರಿ ಜಿಲ್ಲೆಯಲ್ಲಿ ಅಂದಾಜು 9,482.61 ಲಕ್ಷ ರೂ. ಬೆಳೆ ನಷ್ಟ ಹೊಂದಿರುವುದರಿಂದ ತಾವುಗಳು ವಿಶೇಷವಾಗಿ ಕಾಫಿ ಬೆಳೆಗಾರರಿಗೆ ಪರಿಹಾರ ನೀಡುವ ಮೂಲಕ ಕಾಫಿ ಬೆಳೆಗಾರರ ಸಂಪೂರ್ಣ ಸಾಲ ಮನ್ನಾ ಮಾಡುವಂತಾಗಬೇಕು ಎಂದರು. 

ಜಿಲ್ಲೆಯಲ್ಲಿ ಅಂದಾಜು 551.43 ಹೆಕ್ಟೇರ್‌ ಜಮೀನು ಕೊಚ್ಚಿ ಹೋಗಿದ್ದು, ಇದರಿಂದ ರೈತರು ಆತಂಕ ಸ್ಥಿತಿಯಲ್ಲಿದ್ದಾರೆ. ಆದ್ದರಿಂದ ಈ ರೀತಿ ಜಮೀನು ಕಳೆದುಕೊಂಡ ರೈತರಿಗೆ ಈಗಾಗಲೇ ಸಿ ಮತ್ತು ಡಿ ವರ್ಗದ ಜಮೀನನ್ನು ಸರ್ಕಾರ ವಾಪಸ್ಸು ಪಡೆದಿರುವುದರಿಂದ ಇಂತಹ ಜಮೀನನ್ನು ರೈತರಿಗೆ ಹಂಚಿಕೆ ಮಾಡುವಂತಾಗಬೇಕು ಎಂದು ಶಾಸಕರು ಕೋರಿದರು.   ಸಿ ಮತ್ತು ಡಿ ಜಮೀನನ್ನು ಲ್ಯಾಂಡ್‌ ಬ್ಯಾಂಕಿನಿಂದ ಈಗಾಗಲೇ ರಾಜ್ಯ ಸರ್ಕಾರ ವಾಪಸ್ಸು ಪಡೆದಿರುವುದರಿಂದ ಅದನ್ನು ಜಮೀನು ಕಳೆದುಕೊಂಡ ರೈತರಿಗೆ ಹಂಚುವುದು ಹಾಗೂ ರೈತರು ಈಗಾಗಲೇ ಒತ್ತುವರಿ ಮಾಡಿರುವ ಜಮೀನನ್ನು ಅವರವರ ಹೆಸರಿಗೆ ಮಂಜೂರು ಮಾಡುವುದು.  

Advertisement

ಈಗಾಗಲೇ ಕೆಲವು ಕಡೆ ಗುಡ್ಡದ ಮೇಲೆ ಮನೆ ನಿರ್ಮಿಸಿಕೊಂಡಿರುವ ಕಡೆಗಳಲ್ಲಿ ಗುಡ್ಡಗಳು ಬಿರುಕು ಬಿಟ್ಟಿದ್ದು, ಮುಂದೆ ಅಪಾಯವಾಗುವ ಸಂಭವ ಹೆಚ್ಚು. ಈ ಪ್ರದೇಶ ವಾಸ ಮಾಡಲು ಸೂಕ್ತವಾಗಿರುವುದಿಲ್ಲ. ಆದುದರಿಂದ ಇಂಥ‌ವರಿಗೂ ಹೊಸದಾಗಿ ಮನೆ ನೀಡಬೇಕು. 

ಈಗಾಗಲೇ ಮನೆಯಲ್ಲಿದ್ದ ಬೆಲೆಬಾಳುವ ಸಾಮಗ್ರಿ, ಚಿನ್ನಾಭರಣ, ಆಹಾರ ಧಾನ್ಯವನ್ನೊಳಗೊಂಡಂತೆ ವಸ್ತುಗಳನ್ನು ಕಳೆದುಕೊಂಡವರಿಗೆ ಅವರ ಜೀವನ ನಿರ್ವಹಣೆಗೆ ಪರಿಹಾರ ನೀಡಬೇಕು. ಗುಡ್ಡಗಳು ಕುಸಿದು ಮಣ್ಣು ಒಂದೆಡೆ ಸೇರಿದ್ದು, ಕೆಲವು ಕಡೆ ತುಂಬಾ ಇಳಿಜಾರು ಪ್ರದೇಶವಾಗಿರುವುದನ್ನು ಸರ್ಕಾರದ ಅನುದಾನದಲ್ಲಿ ಅದನ್ನು    ಸಮತಟ್ಟು ಪಡಿಸಿ ರೈತರು ಪುನಃ ವ್ಯವಸಾಯ ಮಾಡಲು ಯೋಗ್ಯವಾಗುವಂತೆ ಭೂಮಿಯನ್ನು ಸರ್ಕಾರದ ಅನುದಾನದಲ್ಲಿಯೇ ಹದ ಮಾಡಬೇಕು ಎಂದು ಶಾಸಕರಾದ ಎಂ.ಪಿ. ಅಪ್ಪಚ್ಚುರಂಜನ್‌ ಅವರು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next