ಕುಂದಾಪುರ: ಅಪಾಯಕಾರಿ ವಿದ್ಯುತ್ ಕಂಬ, ತಂತಿ ಬದಲಾಯಿಸಬೇಕು. ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳು ವಿದ್ಯುತ್ ಕಂಬಕ್ಕೆ ತಗುಲಿ ಕೊಂಡಿರುವ ಮರ ತೆರವು ಮಾಡಬೇಕು. ರಸ್ತೆ ಬದಿ ನೀರು ಹರಿದು ಹೋಗಲು ಕ್ರಮ, ಪಾದಚಾರಿಗಳಿಗೆ, ವಾಹನ ಸವಾರರಿಗೆ ಅನುಕೂಲವಾಗುವಂತೆ ಸೂಕ್ತ ಸೂಚನಾ ಫಲಕ, ಹೆದ್ದಾರಿ ಬದಿಯಲ್ಲಿ ಚರಂಡಿ ಕಾಮಗಾರಿ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಗುತ್ತಿಗೆದಾರರಿಗೆ ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಡಾ| ಎಸ್.ಎಸ್.ಮಧುಕೇಶ್ವರ ಸೂಚನೆ ನೀಡಿದರು.
ಇಲ್ಲಿನ ತಾ.ಪಂ.ನ ಡಾ| ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಪ್ರಕೃತಿ ವಿಕೋಪ ಮುಂಜಾಗ್ರತೆ ಸಲುವಾಗಿ ಅಧಿಕಾರಿಗಳು ಕೈಗೊಳ್ಳಬೇಕಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಾವಿ ನೀರು ಕಲುಷಿತಗೊಂಡಿದ್ದರೆ ಶುದ್ದೀಕರಿಸುವ ವ್ಯವಸ್ಥೆ ಮಾಡಬೇಕು. ಹೊಟೇಲ್‌ಗಳಲ್ಲಿ ಬಿಸಿ ನೀರು ಸೌಲಭ್ಯ ನೀಡುವಂತೆ ಎಲ್ಲ ಹೊಟೇಲ್ ಮಾಲಕರಿಗೆ ಆರೋಗ್ಯ ಇಲಾಖೆ ಸೂಚನೆ ನೀಡಬೇಕು. ಮರವಂತೆ, ತ್ರಾಸಿ, ಕೋಡಿ, ಕಡಲ ತೀರ ಪ್ರದೇಶಗಳಲ್ಲಿ ಪ್ರವಾಸಿಗರು ಆಗಮಿಸುವುದರಿಂದ ಮಳೆಗಾಲದಲ್ಲಿ ಗೊತ್ತಿಲ್ಲದೆ ಸಮುದ್ರಕ್ಕಿಳಿಯದಂತೆ ಎಚ್ಚರ ವಹಿಸುವ ಕುರಿತು ಕ್ರಮ ಕೈಗೊಳ್ಳಬೇಕು. ನೆರೆ ಸಂಭವಿಸಿದರೆ, ತುರ್ತು ಸಂದರ್ಭ ಶಾಲಾ ಶಿಕ್ಷಕರನ್ನು ನೆರೆ ಪರಿಹಾರ ಕಾರ್ಯಕ್ಕೆ ಬಳಸಿಕೊಳ್ಳಲು ಸೂಚಿಸಲಾಯಿತು. ಗಂಜಿ ಕೇಂದ್ರದಲ್ಲಿ ಸಂತ್ರಸ್ತರಿಗೆ ಊಟದ ವ್ಯವಸ್ಥೆ ಬಗ್ಗೆ ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ ಹಾಗೂ ಸಂಬಂಧಪಟ್ಟ ಶಾಲಾ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಬೇಕು ಎಂದರು.
ಕುಂದಾಪುರ ತಹಶೀಲ್ದಾರ್ ಎಚ್.ಕೆ. ತಿಪ್ಪೇಸ್ವಾಮಿ, ಬೈಂದೂರು ತಹಶೀಲ್ದಾರ್ ಬಿ.ಪಿ. ಪೂಜಾರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕಿರಣ್ ಪೆಡೆ°àಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಉಪಸ್ಥಿತರಿದ್ದರು.
ಕಾಲುಸಂಕ: ವರದಿ ನೀಡಿ
ಕಾಲು ಸಂಕ ದಾಟಿ ಶಾಲೆಗೆ ಬರುವ ಮಕ್ಕಳಿದ್ದರೆ ಆ ಬಗ್ಗೆ ವರದಿ ನೀಡಿ. ತೀರ ಅಪಾಯವುಂಟಾಗುವ ಸಾಧ್ಯತೆಯಿರುವ ಶಾಲಾ ಕಟ್ಟಡಗಳನ್ನು ಪರಿಶೀಲಿಸಿ ದುರಸ್ತಿಗಾಗಿ ಜಿ.ಪಂ.ಗೆ ಪ್ರಸ್ತಾವನೆ ಸಲ್ಲಿಸಿ, ಸರಕಾರಿ ಸ್ಥಳದಲ್ಲಿರುವ ತೆರೆದ ಕೊಳವೆ ಬಾವಿ ಹಾಗೂ ಇಂಗುಗುಂಡಿ, ಕೊಚ್ಚೆಹೊಂಡ, ಕಲ್ಲುಕೋರೆ ಹೊಂಡ ಇರುವಲ್ಲಿ ರೇಡಿಯಂನಿಂದ ಕೂಡಿರುವ ಫಲಕಗಳನ್ನು ಅಳವಡಿಸಬೇಕು. ಖಾಸಗಿ ಸ್ಥಳಗಳಲ್ಲಿರುವ ಅಪಾಯಕಾರಿ ಹೊಂಡಗಳನ್ನು ಸಂಬಂಧಪಟ್ಟ ಜಾಗದ ಮಾಲಕರಿಂದ ಮುಚ್ಚುವ ಅಥವಾ ಸುರಕ್ಷಾ ಕ್ರಮ ಕೈಗೊಳ್ಳುವ ಕುರಿತು ಎಲ್ಲ ಪಿಡಿಒಗಳು ಗಮನಹರಿಸಬೇಕು ಎಂದು ಎಸಿಯವರು ನಿರ್ದೇಶನ ನೀಡಿದರು.