Advertisement

ಪ್ರಾಕೃತಿಕ ವಿಕೋಪ; ಇದು ಪ್ರತಿ ವರ್ಷದ ಆತಂಕ ; ಮತ್ತೆ ಕಾಡುತಿದೆ ಕಡಲ್ಕೊರೆತದ ಭೀತಿ

09:06 AM Jun 06, 2020 | mahesh |

ಮಂಗಳೂರು: ಮುಂಗಾರು ಶುರುವಾದಂತೆ ಕರಾವಳಿಯಲ್ಲಿ ಕಡಲ್ಕೊರೆತದ ಭೀತಿಯು ಸಮುದ್ರ ತೀರದ ಜನರ ನಿದ್ದೆಗೆಡಿಸತೊಡಗಿದೆ. ಮಳೆಗಾಲ ಶುರುವಾಗುತ್ತಿದ್ದಂತೆ ಆಗಮಿಸುವ ಜನಪ್ರತಿನಿಧಿಗಳು, ತಾತ್ಕಾಲಿಕ ಪರಿಹಾರ ಎನ್ನುವಂತೆ ನಾಲ್ಕೈದು ಲೋಡು ಕಲ್ಲುಗಳನ್ನು ಕಡಲಿನ ಬದಿಗೆ ಹಾಕಿಸುತ್ತಾರೆ. ಅವು ಕೆಲವೇ ದಿನಗಳಲ್ಲಿ ಅಲೆಗಳಿಗೆ ಸಿಲುಕಿ ಕಡಲಿನ ಪಾಲಾಗುತ್ತದೆ. ಮತ್ತೆ ರಾಜ ಕಾರಣಿಗಳು/ಅಧಿಕಾರಿಗಳ ತಂಡ ಆಗಮಿಸಿ ಒಂದಿಷ್ಟು ಪರಿಹಾರ ನೀಡುತ್ತಾರೆ.

Advertisement

ಇದು ಪ್ರತಿವರ್ಷದ ಕಥೆಯೇ ಹೊರತು ಶಾಶ್ವತ ಪರಿಹಾರ ಇದುವರೆಗೂ ಸಾಧ್ಯವಾಗಿಲ್ಲ. ತಲಪಾಡಿಯಿಂದ ಉಡುಪಿ ಜಿಲ್ಲೆಯ ಶಿರೂರು ತನಕ ಸುಮಾರು 168 ಕಿ.ಮೀ. ಉದ್ದದ ಕರಾವಳಿ ತೀರದಲ್ಲಿ ಕಡಲ್ಕೊರೆತ ಸಮಸ್ಯೆ ಪ್ರತಿ ವರ್ಷ ಇರುತ್ತದೆ. ದ.ಕ. ಜಿಲ್ಲಾ ವ್ಯಾಪ್ತಿಯ ಉಳ್ಳಾಲ – ಸಸಿಹಿತ್ಲು – ಮುಕ್ಕ ಸಹಿತ ಮಂಗಳೂರಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಅಧಿಕ ಪ್ರಮಾಣದಲ್ಲಿ ಕಡಲ್ಕೊರೆತ ಉಂಟಾಗುತ್ತಿದೆ. ಇದರಲ್ಲೂ ಉಳ್ಳಾಲ – ಸೋಮೇಶ್ವರ ಭಾಗದಲ್ಲಿ ಅತ್ಯಧಿಕವಾಗಿದೆ.

ಉಳ್ಳಾಲ, ಸುಭಾಷ್‌ನಗರ, ಕೈಕೋ ಹಿಲೇರಿಯಾ ವ್ಯಾಪ್ತಿಯಲ್ಲಿ ಹಲವು ಮನೆಗಳು ಸಮುದ್ರಪಾಲಾಗಿರುವ ಉದಾಹರಣೆ ಇದೆ. ಇದರಿಂದ ಹಲವು ಜನರು ಬೀದಿಗೆ ಬಿದ್ದಿದ್ದರು. ಈಗ ಉಚ್ಚಿಲ, ಬಟ್ಟಪ್ಪಾಡಿ, ಉಳ್ಳಾಲ ಮೊಗವೀರಪಟ್ಣ, ಕೈಕೋ, ಹಿಲರಿ ನಗರ ವ್ಯಾಪ್ತಿಯಲ್ಲಿ ಕಡಲಿನ ಅಬ್ಬರ ಈಗಾಗಲೇ ಜಾಸ್ತಿ ಆಗಿದೆ. ಈ ಕಾರಣಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯು.ಟಿ. ಖಾದರ್‌ ಅವರು ಪ್ರತ್ಯೇಕವಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಲವು ರೀತಿಯಲ್ಲಿ ಪ್ರಯೋಗಗಳು, ಸಮೀಕ್ಷೆಗಳು, ವರದಿಗಳು, ತಂತ್ರಜ್ಞಾನಗಳು ನಡೆದಿವೆ. ಕಾಂಕ್ರೀಟ್‌ ತಡೆಗೋಡೆ, ಕಡಲಿಗೆ ಕಲ್ಲು, ಮರಳು ಚೀಲ ಇಡುವುದು ಸಹಿತ ಹಲವು ರೀತಿಯಲ್ಲಿ ಕಡಲ್ಕೊರೆತ ತಡೆಗಟ್ಟಲು ಪ್ರತಿ ವರ್ಷ ಪ್ರಯತ್ನ ನಡೆಯುತ್ತಲೇ ಇದೆ. ಆದರೆ, ಕಡಲ್ಕೊರೆತ ಮಾತ್ರ ಯಥಾಸ್ಥಿತಿಯಲ್ಲೇ ಇದೆ.

ಮೂಲೆಗೆ ಸರಿದ ಸ್ಥಳಾಂತರ ಯೋಜನೆ!
ಉಳ್ಳಾಲ ಪ್ರದೇಶದಲ್ಲಿ ಕಡಲ್ಕೊರೆತ ಪ್ರತಿ ವರ್ಷದ ಸಮಸ್ಯೆ ಆಗಿರುವ ಹಿನ್ನೆಲೆಯಲ್ಲಿ ಅಲ್ಲಿನ ಸಂತ್ರಸ್ತರಿಗೆ ಪರ್ಯಾಯ ಸ್ಥಳದಲ್ಲಿ ಶಾಶ್ವತ ಪುನರ್ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ವಹಿಸುವಂತೆ ಸಚಿವರಾಗಿದ್ದ ಯು. ಟಿ. ಖಾದರ್‌ ಸೂಚಿಸಿ ದ್ದರು. ಇದರಂತೆ ಅಂದಿನ ಜಿಲ್ಲಾಧಿಕಾರಿ ಡಾ| ಜಗದೀಶ್‌, ಆ ಬಳಿಕ ಶಶಿಕಾಂತ್‌ ಸೆಂಥಿಲ್‌ ಅವರು ಸ್ಥಳಾಂತರದ ಬಗ್ಗೆ ಆಸಕ್ತಿ ಹೊಂದಿದ್ದರು. ತೀರ ಪ್ರದೇಶದಲ್ಲಿ ಅಪಾಯದಲ್ಲಿರುವವರಿಗೆ ವವರಿಗೆ ಶಾಶ್ವತವಾಗಿ ಬೇರೆ ಕಡೆ ಪುನರ್ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸೂಕ್ತ ಸ್ಥಳ ಹುಡುಕಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಜಿಲ್ಲಾಧಿಕಾರಿ ಬದಲಾಗುತ್ತಿದ್ದಂತೆ ಪುನರ್ವಸತಿ ವಿಚಾರ ಮೂಲೆಗೆ ಸರಿದಿದೆ!

ಮಳೆಗಾಲದಲ್ಲಿ ತಾತ್ಕಾಲಿಕ ಕೆಲಸ
ಕೋಟೆಪುರ, ಮೊಗವೀರಪಟ್ಣ ಭಾಗದಲ್ಲಿ ಕಡಲ್ಕೊರತೆ ಸಮಸ್ಯೆ ಕಡಿಮೆಯಾಗಿದೆ. ಸಮ್ಮರ್‌ಸ್ಯಾಂಡ್‌, ಕೈಕೋ, ಹಿಲೆರಿನಗರ, ಸುಭಾಶ್‌ನಗರ ವ್ಯಾಪ್ತಿಯಲ್ಲಿ ಕಾಮಗಾರಿ ಆರಂಭವಾಗಿದೆ. ಕೊರೊನಾ ಕಾರಣದಿಂದ ಕಾಮಗಾರಿ ನಿಂತಿತ್ತು. ಈಗ ಉಸ್ತುವಾರಿ ಸಚಿವರು ಕೂಡ ಆ ಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಳೆಗಾಲದಲ್ಲಿ ತಾತ್ಕಾಲಿಕ ಕೆಲಸ ಮಾಡುವುದಕ್ಕೆ ಇಲ್ಲಿ ಅವಕಾಶ ಮಾಡಿಕೊಡಬೇಕಾಗಿದೆ.
-ಯು.ಟಿ. ಖಾದರ್‌, ಶಾಸಕರು, ಮಂಗಳೂರು ವಿಧಾನಸಭಾ ಕ್ಷೇತ್ರ

Advertisement

ಅಧಿಕಾರಿಗಳ ಜತೆ ಚರ್ಚೆ
ಕಡಲ್ಕೊರೆತದಿಂದಾಗಿ ಮೀನುಗಾರರಿಗೆ ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿರುವ ಅನೇಕ ಕುಟುಂಬಗಳಿಗೆ ತೊಂದರೆ ಆಗುವ ಹಿನ್ನೆಲೆಯಲ್ಲಿ ತುರ್ತಾಗಿ ತಡೆ ಗೋಡೆ ಮಾಡಬೇಕಾದ ಅಗತ್ಯವಿದೆ. 230 ಕೋ.ರೂ. ಅನುದಾನದಲ್ಲಿ ಕಡಲ್ಕೊರೆತ ತಡೆಯುವ ಕಾಮಗಾರಿ ಪ್ರಗತಿಯಲ್ಲಿದೆ. ಕಡಲಿನ ಅಬ್ಬರ, ತೀವ್ರತೆ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ಮುಂದೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಅಧಿಕಾರಿಗಳ ಜತೆಗೆ
ಚರ್ಚಿಸಲಾಗುವುದು.
-ಕೋಟ ಶ್ರೀನಿವಾಸ ಪೂಜಾರಿ,  ದ.ಕ. ಜಿಲ್ಲಾ ಉಸ್ತುವಾರಿ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next