Advertisement

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

01:48 AM Dec 23, 2024 | Team Udayavani |

ಕುಂದಾಪುರ: ತನ್ನ ವಿಶಿಷ್ಟ ಗುಣ ಸ್ವಭಾವದಿಂದ ಹೆಮ್ಮಾಡಿ ಸೇವಂತಿಗೆ ಇತರ ಕಡೆಯ ಸೇವಂತಿಗೆಯಿಂದ ಶ್ರೇಷ್ಠ ಸ್ಥಾನದಲ್ಲಿದ್ದು, ಇದಕ್ಕೆ ಹಾಗೂ ಮಾರಣಕಟ್ಟೆಯ ಬ್ರಹ್ಮಲಿಂಗೇಶ್ವರನಿಗೂ ಅವಿನಾಭಾವ ಸಂಬಂಧವಿದೆ. ಅರಳಿದಾಗ ಈ ಹೂವುಗಳು ಬ್ರಹ್ಮಲಿಂಗೇಶ್ವರನ ಕಡೆಗೆ ಮುಖ ಮಾಡುತ್ತವೆ ಅನ್ನುವ ಪ್ರತೀತಿಯೂ ಇದೆ. ಆದರೆ ಈ ಬಾರಿ ಪ್ರಾಕೃತಿಕ ವಿಕೋಪದಿಂದ ಹೆಮ್ಮಾಡಿ ಸೇವಂತಿಗೆಗೆ ದೊಡ್ಡ ಹೊಡೆತ ಬಿದ್ದಿದೆ.

Advertisement

ಮಕರ ಸಂಕ್ರಾಂತಿಯಂದು ನಡೆ ಯುವ ಮಾರಣಕಟ್ಟೆ ಜಾತ್ರೆಯಲ್ಲಿ ಹೆಮ್ಮಾಡಿ ಸೇವಂತಿಗೆಗೆ ಬಹುದೊಡ್ಡ ಮಾರುಕಟ್ಟೆಯಿದೆ. ಆ ದಿನ ಅಂದಾಜು 50 ಲಕ್ಷಕ್ಕೂ ಮಿಕ್ಕಿ ಹೂವುಗಳ ವಹಿವಾಟು ನಡೆಯುತ್ತದೆ. ಒಬ್ಬ ಬೆಳೆಗಾರ ಕನಿಷ್ಠ ವೆಂದರೂ 3 ಲಕ್ಷ ಹೂವುಗಳಷ್ಟು ಕೊಯ್ದು ಮಾರುತ್ತಾರೆ. ಆದರೆ ಈ ವರ್ಷ ಒಬ್ಬೊಬ್ಬರಿಗೆ ಕನಿಷ್ಠ 50 ಸಾವಿರ ಹೂ ಸಿಗುವುದು ಅನುಮಾನ. ಮಕರ ಸಂಕ್ರಾಂತಿಯಿಂದ ಮುಂದಿನ ಸಂಕ್ರಾಂತಿ ವರೆಗೆ ಒಂದು ತಿಂಗಳ ಕಾಲ ಮಾರಣಕಟ್ಟೆ ದೇವಸ್ಥಾನಕ್ಕೆ ಹೆಮ್ಮಾಡಿ ಸೇವಂತಿಗೆಗೆ ಭಾರೀ ಬೇಡಿಕೆ ಇರುತ್ತದೆ. ಆದರೆ ಈ ಬಾರಿ ಪರಿಸ್ಥಿತಿ ಕೈಕೊಟ್ಟಿದೆ ಎನ್ನುತ್ತಾರೆ ಬೆಳೆಗಾರರು.

ಹೆಮ್ಮಾಡಿಯ ರೈತರು ಉಳಿಸಿದ ಸೇವಂತಿಗೆ ಸಸಿಗಳು ಈ ವರ್ಷದ ಮುಂಗಾರಿನ ಸುರಿದ ಭಾರೀ ಮಳೆಗೆ ಬಹುತೇಕ ನಾಶವಾಗಿವೆ. ಆದ್ದರಿಂದ ಬೆಂಗಳೂರು, ಚಿತ್ರದುರ್ಗ, ನೆಲ ಮಂಗಲ, ಚಿಕ್ಕಮಗಳೂರು ಭಾಗದಿಂದ ಗಿಡಗಳನ್ನು ತರಿಸಿಕೊಂಡಿದ್ದಾರೆ. ಇದು ಉಡುಪಿ ಜಿಲ್ಲೆಯ ಅಪರೂಪದ ಸೇವಂ ತಿಗೆಯ ತಳಿಯೊಂದು ಅಳಿವಿನಂಚಿಗೆ ಸರಿಯುತ್ತಿರುವ ಮುನ್ಸೂಚನೆ ಎನ್ನುವ ಆತಂಕ ಬೆಳೆಗಾರರದ್ದಾಗಿದೆ. ಹೆಮ್ಮಾಡಿ ಆಸುಪಾಸಿನ ಕಟ್ಟು, ಹೊಸ್ಕಳಿ, ಹರೆಗೊಡು, ಹೆಮ್ಮಾಡಿ, ಕರ್ಕಿ, ಬಾಡಬೆಟ್ಟು, ನೂಜಾಡಿ ಭಾಗದ 25 ಎಕ್ರೆಗೂ ಮಿಕ್ಕಿ ಪ್ರದೇಶಗಳಲ್ಲಿ ಹೆಮ್ಮಾಡಿ ಸೇವಂತಿಗೆ ಬೆಳೆಯಲಾಗುತ್ತಿದೆ.

ತಳಿ ಸಂರಕ್ಷಣೆ ಕಾರ್ಯ ಆಗಲಿ
ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳ ಪ್ರೋತ್ಸಾಹವಿಲ್ಲದೆ ಈ ವಿಶಿಷ್ಟ ತಳಿ ಅವನತಿಯ ಅಂಚಿನ ಲ್ಲಿದೆ. ಇಲ್ಲಿನ ಭೌಗೋಳಿಕತೆ, ಹವಾಗುಣಕ್ಕೆ ಸರಿ ಹೊಂದುವಂತಿರುವ ಈ ತಳಿಯ ಬಗ್ಗೆ ಸಮರ್ಪಕ ಅಧ್ಯಯನ ನಡೆದು, ಸಂರಕ್ಷಿಸುವ ಕಾರ್ಯ ಆಗಬೇಕಾಗಿದೆ ಎನ್ನುತ್ತಾರೆ ಹೆಮ್ಮಾಡಿ ಸೇವಂತಿಗೆ ಬೆಳೆಗಾರರ ಸಂಘದ ಅಧ್ಯಕ್ಷ ಮಹಾಬಲ ದೇವಾಡಿಗ.

ಇಲ್ಲಿಗೆ ಸರಿ ಹೊಂದುತ್ತಿಲ್ಲ
ಈ ಬಾರಿ ನಾನು ಚಿಕ್ಕಮಗಳೂರು ಭಾಗದಿಂದ 1 ಸಾವಿರದಷ್ಟು ಗಿಡಗಳನ್ನು ತರಿಸಿ ನೆಟ್ಟಿದ್ದೆ. ಅದರಲ್ಲಿ 300ರಿಂದ 400ರಷ್ಟು ಗಿಡಗಳು ನಾಶವಾಗಿವೆ. ಇಲ್ಲಿನ ವಾತಾವರಣ, ಮಣ್ಣು ಅದಕ್ಕೆ ಹೊಂದದಿರುವುದು ಇದಕ್ಕೆ ಕಾರಣ ಇರಬಹುದು. ಹೆಮ್ಮಾಡಿ ಸೇವಂತಿಗೆ ಅರಳಲು 4 ತಿಂಗಳು ಬೇಕು. ಆದರೆ ಚಿಕ್ಕಮಗಳೂರು ಭಾಗದ್ದು ಮೂರೇ ತಿಂಗಳಲ್ಲಿ ಅರಳುತ್ತವೆ. ಮೊಗ್ಗುಗಳು ಕಡಿಮೆ. ಆದರೆ ಹೆಮ್ಮಾಡಿ ಸೇವಂತಿಗೆಯಲ್ಲಿ ಮೊಗ್ಗು ಜಾಸ್ತಿ ಇರುತ್ತದೆ ಎನ್ನುತ್ತಾರೆ ಸೇವಂತಿಗೆ ಬೆಳೆಗಾರರಾದ ಪ್ರಶಾಂತ್‌ ಭಂಡಾರಿ ಹೆಮ್ಮಾಡಿ ಹಾಗೂ ರಾಜೇಶ್‌ ದೇವಾಡಿಗ ಕಟ್ಟು.

Advertisement

ಅಪರೂಪದ ವಿಶಿಷ್ಟ ತಳಿ
ಹೆಮ್ಮಾಡಿ ಭಾಗದಲ್ಲಿ ಮಾತ್ರ ಬೆಳೆಯುವ ಈ ಸೇವಂತಿಗೆಗೆ ಜ.14ರ ಮಕರ ಸಂಕ್ರಮಣದ ಮಾರಣಕಟ್ಟೆ ಜಾತ್ರೆಯಿಂದ ಆರಂಭಗೊಂಡು ಮಾರ್ಚ್‌ವರೆಗೂ ವಿವಿಧ ದೇಗುಲ, ದೈವಸ್ಥಾನಗಳ ಜಾತ್ರೆ, ಕೆಂಡೋತ್ಸವಗಳಿಗೆ ಭಾರೀ ಬೇಡಿಕೆ ಇರುತ್ತದೆ. ಮಾರಣಕಟ್ಟೆ ಜಾತ್ರೆ ಈ ಹೂವಿನ ದೊಡ್ಡ ಮಾರುಕಟ್ಟೆ ಇದ್ದಂತೆ. ಕಣ್ಮನ ಸೆಳೆಯುವ ಬಣ್ಣ, ಚಿಕ್ಕ ಗಾತ್ರ, ಉತ್ತಮ ಪರಿಮಳ, ಮೋಹಕ ಚೆಲುವು, ಹೆಚ್ಚು ಬಾಳಿಕೆಯ ಗುಣ ಮುಂತಾದವು ಹೆಮ್ಮಾಡಿ ಸೇವಂತಿಗೆಯ ವೈಶಿಷ್ಟ್ಯ.

ಸಂರಕ್ಷಣೆಗೆ ಆದ್ಯತೆ
ಹೆಮ್ಮಾಡಿ ಸೇವಂತಿಗೆ ತಳಿ ಸಂರಕ್ಷಣೆಗೆ ಇಲಾಖೆಯಿಂದ ಪ್ರಯತ್ನ ಮಾಡಲಾಗುವುದು. ಆದಷ್ಟು ಬೇಗ ಕೃಷಿ ವಿಜ್ಞಾನಿ ಗಳೊಂದಿಗೆ ಭೇಟಿ ನೀಡಿ, ಈ ಹೂವಿನ ತಳಿ ಸಂರಕ್ಷಣೆ ಕುರಿತಂತೆ ಕೃಷಿ ವಿಜ್ಞಾನ ಕೇಂದ್ರ, ವಲಯ ಸಂಶೋಧನ ಕೇಂದ್ರಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಶಿವಮೊಗ್ಗ ಕೃಷಿ ವಿವಿಗೂ ಮನವಿ ಸಲ್ಲಿಸಲಾಗುವುದು.” – ನಿಧೀಶ್‌ ಕೆ.ಜೆ., ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ, ಕುಂದಾಪುರ

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next