Advertisement
ನೇತ್ರಾವತಿ/ಫಲ್ಗುಣಿ ಕಡಲಿಗೆ ಸೇರುವ ನಗರದ ತೋಟಬೆಂಗ್ರೆಯ ಅಳಿವೆಬಾಗಿಲು ವ್ಯಾಪ್ತಿಗೆ ಹೋದಾಗ ಕಡಲು ಪ್ರಕ್ಷುಬ್ಧವಾದ ಅನುಭವವಾಯಿತು. ಎರಡೂ ನದಿಗಳ ಭಾರೀ ಪ್ರಮಾಣದ ನೀರು ಸಮುದ್ರ ಸೇರುವಲ್ಲಿಯೇ ಕಡಲಿನ ಅಬ್ಬರ ಹೆಚ್ಚಾಗಿದೆ. ಉಳ್ಳಾಲದಲ್ಲೂ ಕಡಲ್ಕೊರೆತದ ದೃಶ್ಯ ಕಾಣಸಿಗುತ್ತದೆ.
ಅಳಿವೆಬಾಗಿಲು ಮೊದಲಿನಿಂದಲೂ ಮೀನುಗಾರರಿಗೆ ಅತ್ಯಂತ ಅಪಾಯಕಾರಿ ಸ್ಥಳ ಎಂಬ ಮಾತಿದೆ. ಇಲ್ಲಿಂದಾಗಿ ಬೋಟುಗಳು ಕಡಲಿಗೆ ತೆರಳುವಾಗ ಅತ್ಯಂತ ಎಚ್ಚರಿಕೆ ವಹಿಸಬೇಕಾಗುತ್ತದೆ. ಸಾಮಾನ್ಯವಾಗಿ ಪ್ರತೀ ದಿನ ಕಡಿಮೆ ಎಂದರೂ 20ರಷ್ಟು ಬೋಟುಗಳು ಮೀನುಗಾರಿಕೆಗೆ ಹೋಗಿ-ಬರುತ್ತವೆ. ಆದರೆ ಬುಧವಾರ ಒಂದೇ ಒಂದು ಬೋಟು ಕಂಡು ಬಂದಿಲ್ಲ. ವಿಚಾರಿಸಿದರೆ, ಎರಡು- ಮೂರು ದಿನಗಳಿಂದ ಬೋಟುಗಳ ಸಂಚಾರ ಇಲ್ಲ ಎಂಬ ಮಾಹಿತಿ ಅಲ್ಲಿ ದೊರೆಯಿತು. ಯಾಕೆಂದರೆ ಸಮುದ್ರ ಪ್ರಕ್ಷುಬ್ಧವಾಗಿರುವುದರಿಂದ ಬೋಟುಗಳ ಸಂಚಾರಕ್ಕೆ ಇಲ್ಲಿ ಅವಕಾಶವೇ ಇಲ್ಲ! ಈ ಬಗ್ಗೆ ಸ್ಥಳೀಯ ಮೀನುಗಾರ ಕಾರ್ಮಿಕ ಥೋಮಸ್ ಅವರನ್ನು ಮಾತನಾಡಿಸಿದಾಗ, ‘1974ರಲ್ಲಿ ಬಂದ ಭಾರೀ ನೀರಿನಿಂದಾಗಿ ಅಳಿವೆಬಾಗಿಲು ವ್ಯಾಪ್ತಿಯೇ ಮುಳುಗಡೆಯಾಗಿತ್ತು. ಅಂತಹ ನೀರು ಅಳಿವೆಬಾಗಿಲಿನಲ್ಲಿ ಮತ್ತೆ ಬಂದಿರಲಿಲ್ಲ. ಜತೆಗೆ ಅಳಿವೆಬಾಗಿಲಿನ ಬದಿಯಲ್ಲಿ ಕಲ್ಲು ಹಾಸುವ ಮೂಲಕ ಎತ್ತರ ಮಾಡಿರುವುದರಿಂದ ನೀರು ಅನಂತರ ಹೊರಭಾಗಕ್ಕೆ ಬರುತ್ತಿಲ್ಲ. ಆದರೆ, ಬೋಟುಗಳು ಸಂಚರಿಸಲು ಅಳಿವೆಬಾಗಿಲು ಸದ್ಯ ತುಂಬಾ ಡೇಂಜರ್ ಆಗಿದೆ’ ಎನ್ನುತ್ತಾರೆ.
Related Articles
ಫಲ್ಗುಣಿ ನದಿಯು ಮರವೂರು ಡ್ಯಾಂ ಕಳೆದು ತೋಕೂರು, ಕೂಳೂರು ಭಾಗದಿಂದ ಹರಿದು ಅಳಿವೆಬಾಗಿಲು ಸೇರುತ್ತದೆ. ಅದ್ಯಪಾಡಿ, ಕೆಂಜಾರು, ತೋಕೂರು ಭಾಗದಲ್ಲಿ ಸದ್ಯ ಅಪಾಯಕಾರಿ ಮಟ್ಟದಲ್ಲಿ ಅಲ್ಲವಾದರೂ ನದಿ ಉಕ್ಕಿ ಹರಿಯುತ್ತಿರುವುದು ಸತ್ಯ.
Advertisement
ಮರವೂರು ಡ್ಯಾಂನ ಮೇಲ್ಭಾಗದಿಂದ ನೀರು ಓವರ್‌ಪ್ಲೋ ಆಗಿ ಹರಿಯುತ್ತಿದೆ. ಮುಂದೆ ಮರವೂರು ಮಸೀದಿ ಭಾಗದಲ್ಲಿ ನದಿ ನೀರು ಸ್ವಲ್ಪ ಮೇಲ್ಭಾಗಕ್ಕೆ ಬಂದಿದೆ. ಜತೆಗೆ ಎಂಆರ್‌ಪಿಎಲ್, ಹಳೆ ವಿಮಾನ ನಿಲ್ದಾಣ, ಬಜಪೆ, ಪೇಜಾವರ ಮಸೀದಿ ಹಿಂಭಾಗದ ತೋಡಬಾಗಿಲು ಎಂಬಲ್ಲಿ ಫಲ್ಗುಣಿಗೆ ಸೇರುವ ಭಾಗದಲ್ಲಿಯೂ ಸಮಸ್ಯೆ ಇದೆ.
ನೇತ್ರಾವತಿ ತಟದಲ್ಲಿ ಆತಂಕತುಂಬೆ ಡ್ಯಾಂ ದಾಟಿದ ಅನಂತರ ನೇತ್ರಾವತಿ ಹರಿಯುವ ಫರಂಗಿಪೇಟೆ, ಅಡ್ಯಾರ್, ಕಣ್ಣೂರು, ಜಪ್ಪು ಭಾಗದಲ್ಲಿ ನದಿ ನೀರು ಅಪಾಯದ ಮಟ್ಟದಲ್ಲಿದೆ. ಆದರೆ, ಬಂಟ್ವಾಳದಲ್ಲಿ ಆಗಿರುವ ಪರಿಸ್ಥಿತಿ ಇಲ್ಲ. ಒಂದೆರಡು ಭಾಗದಲ್ಲಿ ನದಿ ನೀರು ಅಕ್ಕಪಕ್ಕದಲ್ಲಿ ಹರಿದಿದೆ. ಯಾವುದೇ ಮನೆಗಳಿಗೆ ಹಾನಿಯಾದ ಬಗ್ಗೆ ವರದಿಯಿಲ್ಲ. ಈ ಬಗ್ಗೆ ಸ್ಥಳೀಯರನ್ನು ಮಾತನಾಡಿಸಿದಾಗ, ಸದ್ಯಕ್ಕೆ ನೇತ್ರಾವತಿಯಲ್ಲಿ ನೀರಿನ ಪ್ರಮಾಣ ಅಧಿಕವಿದೆ. ಆದರೆ, ಇಷ್ಟು ಪ್ರಮಾಣದ ನೀರು ಈ ಹಿಂದೆಯೂ ಬಂದಿತ್ತು. ನದಿ ತೀರದ ಭಾಗದಲ್ಲಿ ಸದ್ಯಕ್ಕೆ ಯಾವುದೇ ಸಮಸ್ಯೆಗಳಾಗಿಲ್ಲ ಎನ್ನುತ್ತಾರೆ. ಮನೆಗಳ ಸ್ಥಳಾಂತರ
ಫರಂಗಿಪೇಟೆಯ ರಿಯಾಝ್ ಅವರು ಮಾತನಾಡಿ, ‘1974ರಲ್ಲಿ ಬಂದ ಭಾರೀ ನೆರೆ ನೀರಿನಿಂದ ನೇತ್ರಾವತಿಯ ತೀರ ಪ್ರದೇಶದ ಜನರು ಪಾಠ ಕಲಿತಿದ್ದಾರೆ. ಅಂದು ನೂರಾರು ಮನೆಗಳು ಮುಳುಗಿದ್ದವು. ಇದರಿಂದ ನದಿ ತೀರದಲ್ಲಿದ್ದ ಮನೆಗಳನ್ನು ಸ್ವಲ್ಪ ದೂರಕ್ಕೆ ಸ್ಥಳಾಂತರಿಸಿರುವುದರಿಂದ ಸದ್ಯಕ್ಕೆ ಯಾವುದೇ ಅಪಾಯ ಇಲ್ಲ’ ಎನ್ನುತ್ತಾರೆ. ರಕ್ಷಣೆಗಿರುವ ತಡೆಗೋಡೆಯೇ ಅಪಾಯದಲ್ಲಿ!
ತುಂಬೆಯ ಕಿಂಡಿ ಅಣೆಕಟ್ಟಿನ ಬಳಿ (ಇನ್‌ಟೇಕ್ ವೆಲ್) ರೇಚಕ ಸ್ಥಾವರದ ಬಳಿ ಬೃಹತ್ ತಡೆಗೋಡೆ ಕಳೆದ ಮಳೆಯ ಸಂದರ್ಭ ಕುಸಿದು ಬಿದ್ದಿದ್ದು ಇದೀಗ ಅಪಾಯ ಆಹ್ವಾನಿಸುತ್ತಿದೆ. ಕುಸಿದು ತಡೆಗೋಡೆಯ ಬಳಿಯಲ್ಲಿಯೇ ರೇಚಕ ಸ್ಥಾವರವಿದೆ. ನೀರು ತುಂಬಿ ಹರಿಯುತ್ತಿರುವ ಕಾರಣದಿಂದ ತಡೆಗೋಡೆಗೆ ಇನ್ನಷ್ಟು ಅಪಾಯವಾಗುವ ಸಾಧ್ಯತೆ ಇದೆ. ತಡೆಗೋಡೆಗೆ ಸದ್ಯ ಭದ್ರತೆ ನೀಡಲಾಗಿದ್ದರೂ ಅದನ್ನು ತುರ್ತಾಗಿ ಮಾಡಬೇಕಾದರೆ ಸುಮಾರು 12 ಕೋ.ರೂ. ವೆಚ್ಚದ ನಿರೀಕ್ಷೆ ಇದೆ. ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಅಧಿಕಾರಿಗಳು ಇದನ್ನೆಲ್ಲ ‘ಒಕೆ’ ಹೇಳುವಾಗ ಎಷ್ಟು ಸಮಯವಾಗಬಹುದು ಎಂದು ಕಾದು ನೋಡಬೇಕಿದೆ. ನದಿ ದಾಟಿಸಲು ದೋಣಿಯಿಲ್ಲ
ಫರಂಗಿಪೇಟೆಯಿಂದ ಇನೋಳಿಗೆ ನೇತ್ರಾವತಿ ನದಿಯನ್ನು ದೋಣಿಯಲ್ಲಿ ದಾಟಿ ಸಂಚರಿಸುವವರಿದ್ದಾರೆ. ಅಡ್ಯಾರ್‌ನಿಂದ ಹರೇಕಳ, ಪಾವೂರು ವ್ಯಾಪ್ತಿಗೂ ಜನರು ದೋಣಿಯಲ್ಲಿ ಸಂಚರಿಸುತ್ತಾರೆ. ದೋಣಿಯವರಿಗೆ 5 ರೂ. ನೀಡಿದರೆ ಅವರು ದಾಟಿಸುತ್ತಾರೆ. ನದಿ ನೀರು ಏರಿಕೆಯಾಗಿರುವುದರಿಂದ ಗುರುವಾರ ದೋಣಿ ಪಯಣಕ್ಕೆ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಫರಂಗಿಪೇಟೆಯಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ದೋಣಿಗಳೆಲ್ಲ ದಡದಲ್ಲಿವೆ. ಕುದ್ರುಗಳಲ್ಲಿ ಡೇಂಜರ್!
ನೇತ್ರಾವತಿ ಹರಿಯುವ ಎಡಭಾಗದ ಕುದ್ರುಗಳು ನದಿ ನೀರಿನ ಏರಿಕೆಯಿಂದ ಅಪಾಯದಲ್ಲಿವೆ. ಪಾವೂರು ಉಳಿಯ ಕುದ್ರು, ಕೊಟ್ಟಾರಿ ಕುದ್ರು, ರಾಣಿಪುರ ಕುದ್ರು ಭಾಗದಲ್ಲಿ ನದಿ ನೀರು ಏರಿರುವುದರಿಂದ ಆತಂಕ ಎದುರಾಗಿದೆ. ಸದ್ಯ ಇಲ್ಲಿ ಅಪಾಯ ಸಂಭವಿಸದಿದ್ದರೂ ಮುಂದೆ ನದಿ ನೀರು ಏರಿಕೆಯಾದರೆ ಇಲ್ಲಿನ ಸುಮಾರು 50ರಷ್ಟು ಕುಟುಂಬಗಳಿಗೆ ಸಮಸ್ಯೆಯಾಗಲಿದೆ. ನದಿ ತೀರದಲ್ಲಿ ಎಚ್ಚರಿಕೆ ವಹಿಸಿ
ಜಿಲ್ಲೆಯಾದ್ಯಂತ ಭಾರೀ ಮಳೆ ಕಾರಣದಿಂದ ನದಿಯ ತೀರ ಪ್ರದೇಶದ ಜನರು ಅತ್ಯಂತ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಅಗತ್ಯವಿದ್ದರೆ ಜಿಲ್ಲಾಡಳಿತದ ಗಂಜಿಕೇಂದ್ರ ಅಥವಾ ಸಂಬಂಧಿಕರ ಮನೆಗೆ ಸ್ಥಳಾಂತರಗೊಳ್ಳುವ ಬಗ್ಗೆ ಸೂಚಿಸಲಾಗಿದೆ. ತಗ್ಗು ಪ್ರದೇಶಗಳ ಬಗ್ಗೆ ಎಚ್ಚರಿಕೆ ವಹಿಸುವ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ತತ್‌ಕ್ಷಣದಿಂದಲೇ ಆಯಾ ಪ್ರದೇಶಗಳಿಗೆ ನಿಯೋಜಿಸಲಾಗಿದೆ. ಅವರಿಗೆ ಸಹಾಯಕರಾಗಿ ತಾಲೂಕು ಅಧಿಕಾರಿಗಳನ್ನು ನಿಯುಕ್ತಿ ಮಾಡಲಾಗಿದೆ. ಜನರು ನೆರವಿಗೆ ಜಿಲ್ಲಾಡಳಿತದ 1077 ನಂಬರಿಗೆ ಕರೆ ಮಾಡಬಹುದು.
– ಶಶಿಕಾಂತ್ ಸೆಂಥಿಲ್, ದ.ಕ. ಜಿಲ್ಲಾಧಿಕಾರಿ ತುಂಬೆ ಡ್ಯಾಂ; ಉಕ್ಕಿ ಹರಿಯುತ್ತಿರುವ ಜೀವನದಿ!
ತುಂಬೆ ವೆಂಟೆಡ್ ಡ್ಯಾಂನಲ್ಲಿ ಗುರುವಾರ ಮಧ್ಯಾಹ್ನ 8.50 ಮೀಟರ್‌ನಷ್ಟು ಎತ್ತರದಲ್ಲಿ ನೀರು ಹರಿದು ಹೋಗುತ್ತಿತ್ತು. ಸಂಜೆ 7.30ರ ಸುಮಾ ರಿಗೆ ಇದು 8.90 ಮೀಟ ರ್‌ನಷ್ಟು ಏರಿತ್ತು. ಇದು ಅಪಾಯಕಾರಿ ಮಟ್ಟವೂ ಹೌದು. ಮಳೆ ಮುಂದು ವರಿದರೆ ನದಿ ತೀರದ ಭಾಗದಲ್ಲಿ ಮುಳುಗಡೆಯಾಗುವ ಅಪಾಯವಿದೆ. ಸ್ವಾತಂತ್ರ್ಯ ದಿನದ ಮುಂಜಾನೆ ನೀರಿನ ಹರಿವು ಇಲ್ಲಿ 8.90 ಮೀಟರ್‌ನಲ್ಲಿತ್ತು. ಅದರ ಮುನ್ನಾ ದಿನ 7.10 ಮೀಟರ್ ಎತ್ತರದಲ್ಲಿ ನೀರು ಹರಿದುಹೋಗಿತ್ತು. 2013ರಲ್ಲಿ 32.5 ಫಿಟ್‌ನಷ್ಟು ಎತ್ತರದಲ್ಲಿ ತುಂಬೆ ಡ್ಯಾಂನಲ್ಲಿ ನೀರು ಹರಿದು ಹೋಗಿದ್ದು ಇಲ್ಲಿಯವರೆಗಿನ ಗರಿಷ್ಠ ಎತ್ತರವಾಗಿತ್ತು. ಇದಕ್ಕೂ ಮೊದಲು 2009ರಲ್ಲಿ 30 ಫೀಟ್ ನೀರು ಡ್ಯಾಂ ದಾಟಿ ಸಮುದ್ರಕ್ಕೆ ಹೋಗಿತ್ತು. ಅದರಲ್ಲೂ 1974ರಲ್ಲಿ ಬಂದ ಭಾರೀ ಮಳೆಯ ಆವಾಂತರದ ಸಂದರ್ಭ 39 ಫೀಟ್‌ನಷ್ಟು ನೀರು ಹರಿದುಹೋಗಿ ನದಿ ತೀರದ ಬಹುತೇಕ ಭಾಗ ಮುಳುಗಡೆಯಾಗಿತು. ಫಲ್ಗುಣಿಯ ಅಕ್ಕಪಕ್ಕ ಸಮಸ್ಯೆ
ಫಲ್ಗುಣಿ ಹರಿಯುವ ತೀರ ಪ್ರದೇಶದ ವ್ಯಾಪ್ತಿಯಲ್ಲಿ ಸದ್ಯಕ್ಕೆ ಯಾವುದೇ ಅಪಾಯವಿಲ್ಲದಿದ್ದರೂ ಕಾರ್ಕಳ ಭಾಗದಲ್ಲಿ ಭಾರೀ ಮಳೆಯಾದರೆ ಫಲ್ಗುಣಿಯೂ ಅಪಾಯದ ಮಟ್ಟ ಮೀರಿ ಹರಿಯಬಹುದು. ಕೆಲ ಕಡೆ ನದಿ ನೀರು ಅಕ್ಕಪಕ್ಕಗಳಿಗೆ ಹರಿಯುವ ಸಮಸ್ಯೆಯಿದೆ. ಇಲ್ಲಿಯವರೆಗೆ ನದಿ ತೀರದಲ್ಲಿ ದೊಡ್ಡ ಮಟ್ಟದ ಅಪಾಯ ಆದ ಬಗ್ಗೆ ಮಾಹಿತಿಯಲ್ಲ.
- ಗಣೇಶ್ ಅರ್ಬಿ, ಮಳವೂರು ಗ್ರಾ.ಪಂ. ಅಧ್ಯಕ್ಷ ಮೀನುಗಾರರಿಗೆ ಆತಂಕ
1974ರಲ್ಲಿ ಬಂದ ಭಾರೀ ನೆರೆಯ ಕಾರಣದಿಂದ ನದಿ ಬದಿಯ ಸುತ್ತ ಹಲವು ಜಾಗ ಮುಳುಗಡೆಯಾಗಿತ್ತು. ಅಳಿವೆಬಾಗಿಲು ವ್ಯಾಪ್ತಿಯಲ್ಲಿ ಸದ್ಯ ಎರಡೂ ನದಿಗಳ ನೀರಿನ ಪ್ರಮಾಣ ಏರಿಕೆಯಾಗಿರುವುದರಿಂದ ಮೀನುಗಾರಿಕಾ ದೋಣಿಗಳ ಸಂಚಾರಕ್ಕೆ ಸಮಸ್ಯೆಯಾಗಿದೆ.
– ನವೀನ್ ಕರ್ಕೇರ ಬೆಂಗ್ರೆ