Advertisement

ರಾಷ್ಟ್ರಮಟ್ಟದ ಯುವ ಚಿಂತಕರ ಸಮಾವೇಶ :ತ್ರಿಷಾ ಗೌತಮ್‌ ಪೈ, ನೇಹಾ ಉದಪುಡಿ ಶ್ರೇಷ್ಠ ಸ್ಪೀಕರ್‌

12:00 AM Jan 07, 2022 | Team Udayavani |

ಉಡುಪಿ  ರಾಜಸ್ಥಾನದ ಅಜ್ಮೀರ್ ನ ಮಯೋ ಕಾಲೇಜು ಸಂಸ್ಥೆಯ ಬೆಳ್ಳಿಹಬ್ಬದ ಸಂಭ್ರಮಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಉಡುಪಿ ಶಾರದಾ ವಸತಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯರಾದ ತ್ರಿಷಾ ಗೌತಮ್‌ ಪೈ ಮತ್ತು ನೇಹಾ ಉದಪುಡಿ ವಿಶೇಷ ಸಾಧನೆ ಮಾಡಿದ್ದಾರೆ.

Advertisement

ಮಯೋ ಕಾಲೇಜಿನಿಂದ 2021ರ ಆಗಸ್ಟ್‌ 23ರಿಂದ 27ರ ವರೆಗೆ ಹಮ್ಮಿಕೊಂಡಿದ್ದ ಯುವ ಚಿಂತಕರ ಸಮಾವೇಶದಲ್ಲಿ ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳ ಪ್ರತಿಭೆ ಹಾಗೂ ಜ್ಞಾನವನ್ನು ಪ್ರದರ್ಶಿಸಲು ವರ್ಚುವಲ್‌ ವ್ಯವಸ್ಥೆ ಮೂಲಕ ಹಲವು ಸ್ಪರ್ಧೆಗಳನ್ನು ಆಯೋಜಿಸಿತ್ತು. ಇದರಲ್ಲಿ ಉಡುಪಿಯ ಪ್ರತಿಷ್ಠಿತ ಶಾರದಾ ವಸತಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

10ನೇ ತರಗತಿಯ ತ್ರಿಷಾ ಗೌತಮ್‌ ಪೈ ಅವರು ಟರ್ನ್ ಕೋಟ್‌ ವಿಭಾಗದಲ್ಲಿ “ಅತ್ಯುತ್ತಮ ಸ್ಪೀಕರ್‌’ ಹಾಗೂ ನೇಹಾ ಉದಪುಡಿ ಅವರು ಆಶು ಭಾಷಣ ವಿಭಾಗದಲ್ಲಿ “ಅತ್ಯುತ್ತಮ ಸ್ಪೀಕರ್‌’ ಆಗಿ ಆಯ್ಕೆಯಾಗಿದ್ದಾರೆ. ಅವರಿಬ್ಬರು ತಮ್ಮ ಸಾಧನೆಯ ಅನುಭವನ್ನು “ಉದಯವಾಣಿ’ ಯೊಂದಿಗೆ ಹಂಚಿಕೊಂಡಿದ್ದಾರೆ.

ನಮ್ಮದು ಡಿಬೆಟ್‌ ಆಗಿದ್ದರಿಂದ ಯಾವೆಲ್ಲ ವಿಷಯ ಬರಬಹುದು ಎಂಬುದನ್ನು ಅಂದಾಜಿಸಿಕೊಂಡು ಶಾಲೆಯ ಶಿಕ್ಷಕರ ಸಹಾಯದೊಂದಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಒಂದಿಷ್ಟು ಸಿದ್ಧತೆ ಮಾಡಿಕೊಂಡಿದ್ದೆವು. ದೇಶದ ಬೇರೆ ಬೇರೆ ಶಾಲೆಯ ವಿದ್ಯಾರ್ಥಿ ಗಳು ಇದರಲ್ಲಿ ಭಾಗವಹಿಸುತ್ತಿರುವುದ ರಿಂದ ಅದಕ್ಕೆ ಸರಿಯಾದ ರೀತಿಯಲ್ಲಿ ಪೂರ್ವ ತಯಾರಿ ನಡೆಸಿದ್ದೆವು. ಎಲ್ಲ ಸ್ಪರ್ಧೆಗಳು ವರ್ಚುವಲ್‌ ಮೂಲಕ ನಡೆದಿವೆ. ವರ್ಚುವಲ್‌ ಇಲ್ಲದೇ ಇದ್ದಿದ್ದರೆ (ಭೌತಿಕವಾಗಿದ್ದರೆ) ನಾವು ನೇರವಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬೇರೆ ಶಾಲೆಗಳಿಗೆ ಹೋಗಬೇಕಾಗುತ್ತದೆ. ಜತೆಗೆ ನಮ್ಮೊಂದಿಗೆ ಶಿಕ್ಷಕರು ಇರುತ್ತಿದ್ದರು. ಆದರೆ ವರ್ಚುವಲ್‌ನಲ್ಲಿ ಇದ್ಯಾವುದು ಇಲ್ಲ. ಆಯೋಜಕರು ನೀಡುವ ಲಿಂಕ್‌ ಬಳಸಿ ನಾವು ಸ್ಪರ್ಧೆಯಲ್ಲಿ ಭಾಗವಹಿಸಬೇಕಾಗುತ್ತದೆ. ನಮ್ಮ ಪ್ರತಿಸ್ಪರ್ಧಿ ಯಾರು ಎಂಬುದನ್ನು ವರ್ಚುವಲ್‌ನಲ್ಲಿ ಸ್ಪಷ್ಟವಾಗಿ ತಿಳಿಯಲು ಸಾಧ್ಯವಾಗುವುದಿಲ್ಲ. ತಾಂತ್ರಿಕ ಸಮಸ್ಯೆ ಎದುರಾಗುವ ಭಯವೂ ಇರುತ್ತದೆ. ಒಟ್ಟಿನಲ್ಲಿ ವರ್ಚುವಲ್‌ ಸ್ಪರ್ಧೆ ವಿಶೇಷ ಅನುಭವ ನೀಡಿದೆ ಎಂದರು.

Advertisement

ಮುಂಬಯಿ, ದಿಲ್ಲಿ, ಕೋಲ್ಕತಾ ಸಹಿತವಾಗಿ ದೇಶದ 40ಕ್ಕೂ ಅಧಿಕ ಪ್ರತಿಷ್ಠಿತ ಶಾಲೆಯ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯ ವಿಷಯಗಳು ವಿಭಿನ್ನವಾಗಿ ದ್ದವು. ಸ್ಪರ್ಧೆಯಲ್ಲಿ ಬಹುಮಾನ ಬರುತ್ತದೆ ಎಂಬ ನಿರೀಕ್ಷೆಯೂ ಇರಲಿಲ್ಲ. ಬಹುಮಾನ ಬಂದಿರುವುದು ತುಂಬ ಖುಷಿ ಕೊಟ್ಟಿದೆ.

ಮೂರು ಹಂತಗಳಲ್ಲಿ ಡಿಬೆಟ್‌ ಇತ್ತು. ಇಡೀ ಸ್ಪರ್ಧೆ ವಿಶೇಷ ಅನುಭವ ನೀಡಿದೆ. ಸ್ಪರ್ಧೆಯಲ್ಲಿ ಹೇಗೆ ಭಾಷಣ ಮಾಡಬೇಕು, ಯಾವ ರೀತಿ ಸಂವಹನ ನಡೆಸಬೇಕು ಎಂಬುದರ ಸ್ಪಷ್ಟತೆ ಸಿಕ್ಕಿದೆ ಹಾಗೂ ಭವಿಷ್ಯದಲ್ಲಿ ಇನ್ನಷ್ಟು ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೇರಣೆಯಾಗಿದೆ. ಶಾಲೆಯ ಹೆಸರಿನೊಂದಿಗೆ ನಮಗೆ ಬಹುಮಾನ ಬಂದಿರುವುದು ಇನ್ನಷ್ಟು ಹೆಮ್ಮೆ ಎನಿಸುತ್ತಿದೆ. ಇಂತಹ ಸ್ಪರ್ಧೆಗಳಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡುವುದರಿಂದ ಶಾಲೆಯ ಖ್ಯಾತಿಯೂ ಹೆಚ್ಚಲಿದೆ ಎಂದು ಅನಿಸಿಕೆ ಹಂಚಿಕೊಂಡರು.

ತ್ರಿಷಾ ಗೌತಮ್‌ ಪೈ ಅವರು ಮಣಿಪಾಲ ಟೆಕ್ನಾಲಜಿಸ್‌ನ ಕಾರ್ಯ ನಿರ್ವಾಹಕ ಅಧ್ಯಕ್ಷ ಟಿ. ಗೌತಮ್‌ ಪೈ ಹಾಗೂ ವನಿತಾ ಪೈ ದಂಪತಿಯ ಪುತ್ರಿ. ನೇಹಾ ಉದಪುಡಿಯವರು ಮುಧೋಳ ಮೂಲದ ಡಾ| ಕರಬಸಪ್ಪ ಉದಪುಡಿ ಹಾಗೂ ಡಾ| ಸವಿತಾ ಉದಪುಡಿ ದಂಪತಿ ಪುತ್ರಿ.

ಶಾರದಾ ವಸತಿ ಶಾಲೆಯಲ್ಲಿ ಪ್ರತಿಭೆಯ ಅನಾವರಣಕ್ಕೆ ಎಲ್ಲ ವಿದ್ಯಾರ್ಥಿಗಳಿಗೂ ಮುಕ್ತ ಅವಕಾಶ ನೀಡುತ್ತೇವೆ. ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುತ್ತೇವೆ. ಭಾಷಣ, ಕ್ವಿಜ್‌ ಸೇರಿದಂತೆ ಯಾವುದೇ ರೀತಿಯ ಸ್ಪರ್ಧೆಯಿದ್ದರೂ ವಿದ್ಯಾರ್ಥಿಗಳನ್ನು ಗುರುತಿಸಿ ಅವಕಾಶ ನೀಡುತ್ತೇವೆ. ಟರ್ನ್ಕೋಟ್‌ ವಿಭಾಗದಲ್ಲಿ ಅತ್ಯುತ್ತಮ ಸ್ಪೀಕರ್‌ ಆಗಿ ಹೊರಹೊಮ್ಮಿರುವ ತ್ರಿಷಾ ಗೌತಮ್‌ ಪೈ ಹಾಗೂ ಆಶುಭಾಷಣ ವಿಭಾಗದಲ್ಲಿ ಅತ್ಯುತ್ತಮ ಸ್ಪೀಕರ್‌ ಆಗಿ ಆಯ್ಕೆಯಾಗಿರುವ ನೇಹಾ ಉದಪುಡಿ ಅವರ ಭಾಷಾ ನೈಪುಣ್ಯತೆ ತುಂಬ ಚೆನ್ನಾಗಿದೆ. ನಮ್ಮ ಶಾಲೆ ಇಂಡಿಯನ್‌ ಪಬ್ಲಿಕ್‌ ಸ್ಕೂಲ್‌ ಕಾನ್ಫರೆನ್ಸ್‌ ನಲ್ಲಿ (ಐಪಿಎಸ್‌ಸಿ) ಸದಸ್ಯತ್ವ ಪಡೆದಿರುವುದರಿಂದ ರಾಷ್ಟ್ರ ಮಟ್ಟದಲ್ಲಿ ಆಯೋಜನೆಯಾಗುವ ಇಂತಹ ಸ್ಪರ್ಧೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಭಾಗವಹಿಸಲು ಅನುಕೂಲವಾಗುತ್ತಿದೆ.
– ವಿದ್ಯಾವಂತ ಆಚಾರ್ಯ ಯು., ನಿರ್ದೇಶಕರು, ಶಾರದಾ ರೆಸಿಡೆನ್ಶಿಯಲ್‌ ಸ್ಕೂಲ್‌, ಕುಂಜಿಬೆಟ್ಟು, ಉಡುಪಿ

ಶಾರದಾ ವಸತಿ ಶಾಲೆ ಲಾಕ್‌ಡೌನ್‌ ಸಂದರ್ಭದಲ್ಲಿ ಡಿಜಿಟಲ್‌ ಕ್ಲಾಸ್‌ ಮಾಡುವ ಜತೆಗೆ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳನ್ನು ನಡೆಸಿದೆ. ಆನ್‌ಲೈನ್‌ ಮೂಲಕ ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸಿದೆ. ನಮ್ಮ ವಿದ್ಯಾರ್ಥಿಗಳು ವರ್ಚುವಲ್‌ ಮೂಲಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಾನ್ಫರೆನ್ಸ್‌ಗಳಲ್ಲಿ ಭಾಗವಹಿಸಿದ್ದರು. ಅಜೆ¾àರ್‌ನ ಮಯೋ ಕಾಲೇಜು ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಯುವ ಚಿಂತಕರ ಸಮಾವೇಶದಲ್ಲಿ ನಮ್ಮ ಸಂಸ್ಥೆಯ 10ನೇ ತರಗತಿ ವಿದ್ಯಾರ್ಥಿಗಳಾದ ತ್ರಿಷಾ ಗೌತಮ್‌ ಪೈ ಹಾಗೂ ನೇಹಾ ಉದಪುಡಿ ವರ್ಚುವಲ್‌ ಮೂಲಕ ಭಾಗವಹಿಸಿ, ಟರ್ನ್ಕೋಟ್‌ ಹಾಗೂ ಆಶುಭಾಷಣ ಸ್ಪರ್ಧೆಯಲ್ಲಿ ಅತ್ಯುತ್ತಮ ಸ್ಪೀಕರ್‌ ಆಗಿ ಆಯ್ಕೆಯಾಗುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ ಮತ್ತು ಸಂಸ್ಥೆಗೂ ಹೆಮ್ಮೆ ತಂದಿದ್ದಾರೆ.
– ಡಾ| ಎಂ. ರಾಮಚಂದ್ರನ್‌, ಪ್ರಾಂಶುಪಾಲರು, ಶಾರದಾ ರೆಸಿಡೆನ್ಶಿಯಲ್‌ ಸ್ಕೂಲ್‌, ಕುಂಜಿಬೆಟ್ಟು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next