ಜೇವರ್ಗಿ: ಶಿಕ್ಷಣವು ಮಾನವನಲ್ಲಿ ಅಡಗಿರುವ ಅಜ್ಞಾನ ದೂರಮಾಡಿ, ಅಮೂಲ್ಯ ಜ್ಞಾನ ನೀಡಿ ರಾಷ್ಟ್ರದ ಸದೃಢ ಮಾನವ ಸಂಪನ್ಮೂಲ ನಿರ್ಮಿಸುವ ಸಾಮಾಜಿಕ ಪರಿವರ್ತನೆಯ ಪ್ರಮುಖ ಸಾಧನವಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಮೌಲಾನಾ ಆಜಾದ್ ಪ್ರೌಢ ಶಾಲೆಯಲ್ಲಿ ನಡೆದ ಡಾ| ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರ ಜನ್ಮದಿನವಾದ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗುಣಮಟ್ಟದ ಶಿಕ್ಷಣದಿಂದ ಮಾನವ ಸಂಪನ್ಮೂಲ ಅಭಿವೃದ್ಧಿಯಾಗಲು ಸಾಧ್ಯ. ಶ್ರಮಬಲದ ಉತ್ಪಾದಕತೆ ಹೆಚ್ಚಿಸುತ್ತದೆ. ಜನರಿಗೆ ಬದುಕುವ ವಿಧಾನ ಕಲಿಸಿಕೊಡುತ್ತದೆ. ಇದರಿಂದ ಜನರು ಅಭಿವೃದ್ಧಿ ಚಟುವಟಿಕೆಗಳಲ್ಲಿ ನೇರವಾಗಿ ಭಾಗವಹಿಸುತ್ತಾರೆ. ಸಂಶೋಧನೆ ಮತ್ತು ಆವಿಷ್ಕಾರಗಳು ಹೆಚ್ಚಾಗಿ ಜರುಗಿ, ರಾಷ್ಟ್ರದ ಸರ್ವಾಂಗೀಣ ಪ್ರಗತಿಯಾಗುತ್ತದೆ. ಹೀಗಾಗಿ ಪ್ರತಿಯೊಬ್ಬರು ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು ಎಂದರು.
ಶಾಲೆಯ ಪ್ರಾಂಶುಪಾಲೆ ಲಕ್ಷ್ಮೀ ನಾಯಕ ಮಾತನಾಡಿ, ಡಾ| ಆಜಾದ್‌ರು ಸ್ವಾತಂತ್ರ್ಯ ಹೋರಾಟಗಾರರಾಗಿ, ದೇಶದ ಪ್ರಥಮ ಶಿಕ್ಷಣ ಸಚಿವರಾಗಿ, ಶಿಕ್ಷಣ ತಜ್ಞರಾಗಿ ದೇಶಕ್ಕೆ ಅಮೋಘ ಕೊಡುಗೆ ನೀಡಿದ್ದಾರೆ. ಅವರ ಹೆಸರಿನಲ್ಲಿರುವ ನಮ್ಮ ಶಾಲೆ ವಿದ್ಯಾರ್ಥಿಗಳು ಉತ್ತಮವಾಗಿ ಅಧ್ಯಯನ ಮಾಡಿ ಉನ್ನತವಾದ ಸಾಧನೆ ಮಾಡಿದರೆ, ಅದು ಆಜಾದ್ ಅವರಿಗೆ ನೀಡುವ ದೊಡ್ಡ ಗೌರವವಾಗಿದೆ ಎಂದು ಹೇಳಿದರು.
ಪಿಯು ಕಾಲೇಜಿನ ಉಪನ್ಯಾಸಕರಾದ ಚಂದ್ರಪ್ರಭ ಕಮಲಾಪುರಕರ್, ರವೀಂದ್ರಕುಮಾರ ಬಟಗೇರಿ, ನಹಿಮಾ ನಾಹಿದ್, ಮಂಜುನಾಥ ಎ.ಎಂ, ಸಹ ಶಿಕ್ಷಕರಾದ ಚಿನ್ನು ಪಟೇಲ್, ದೇವರಾಜ ಹೊಸಮನಿ, ಮಲ್ಲಿಕ್ ಶರಾಫ್, ನಗ್ಮಾ ಶೇಕ್ ಹಾಗೂ ಸಿಬ್ಬಂದಿ ಇದ್ದರು.