ನವದೆಹಲಿ: ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಲಾಗಿದೆ. ಅಷ್ಟೇ ಅಲ್ಲ ವ್ಯವಹಾರ, ವಿಮಾನ, ರೈಲು, ಬಸ್ ಸೇರಿದಂತೆ ಎಲ್ಲಾ ರೀತಿಯ ವಾಹನ ಸಂಚಾರ ಬಂದ್ ಆಗಿದ್ದು ಇದರಿಂದ ಪ್ರತಿನಿತ್ಯ ಭಾರತ 35ಸಾವಿರ ಕೋಟಿ ನಷ್ಟ ಅನುಭವಿಸುವಂತಾಗಿದೆ.
21 ದಿನಗಳ ಲಾಕ್ ಡೌನ್ ನಿಂದಾಗಿ ದೇಶದ ಆರ್ಥಿಕತೆಗೆ ಸುಮಾರು 98 ಬಿಲಿಯನ್ ಅಮೆರಿಕನ್ (ಅಂದಾಜು 7.35ಲಕ್ಷ ಕೋಟಿ) ಡಾಲರ್ ನಷ್ಟು ನಷ್ಟ ಸಂಭವಿಸಲಿದೆ ಎಂದು ಆ್ಯಕ್ಯೂಟ್ ರೇಟಿಂಗ್ ಅಂಡ್ ರಿಸರ್ಚ್ ಲಿಮಿಟೆಡ್ ತಿಳಿಸಿದೆ.
ಕೋವಿಡ್ 19 ವೈರಸ್ ಕೇವಲ ಜಾಗತಿಕ ಆರ್ಥಿಕತೆಯನ್ನು ಮಾತ್ರ ಹಾಳುಗೆಡವಿಲ್ಲ. ಅದು ಭಾರತದ ವಿವಿಧ ರಾಜ್ಯಗಳಲ್ಲಿ ಮಾರ್ಚ್ ಮೊದಲ ವಾರದಲ್ಲಿಯೇ ಶಟ್ ಡೌನ್ ಪರಿಸ್ಥಿತಿ ತಂದೊಡ್ಡಿದ್ದು, ಮಾರ್ಚ್ 25ರಿಂದ ಸಂಪೂರ್ಣವಾಗಿ ಲಾಕ್ ಡೌನ್ ಆಗುವಂತಾಗಿತ್ತು ಎಂದು ವರದಿ ವಿವರಿಸಿದೆ.
ದೇಶಾದ್ಯಂತ ಜಾರಿಯಾಗಿರುವ 21 ದಿನಗಳ ಲಾಕ್ ಡೌನ್ ಏಪ್ರಿಲ್ 14ರಂದು ಕೊನೆಗೊಳ್ಳಲಿದೆ. ಆದರೆ ಈ ಲಾಕ್ ಡೌನ್ ಮುಂದುವರಿಯಲಿದೆಯಾ ಅಥವಾ ಕೊನೆಗೊಳ್ಳಲಿದೆಯಾ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಾಗಿದೆ. ಆದರೆ ಈ ಆರ್ಥಿಕ ಹೊಡೆತದ ಪರಿಣಾಮದಿಂದ ಸುಧಾರಿಸಿಕೊಳ್ಳಲು ಕೆಲವು ಸಮಯ ಬೇಕಾಗಲಿದೆ ಎಂದು ಕ್ರೆಡಿಟ್ ರೇಟಿಂಗ್ ಏಜೆನ್ಸಿ ತಿಳಿಸಿದೆ.