ನವದೆಹಲಿ: ಮೇ 3ಕ್ಕೆ ಅಂತ್ಯಗೊಳ್ಳುವ ದೇಶವ್ಯಾಪಿ ಲಾಕ್ ಡೌನ್ ಅನ್ನು ಮುಂದಿನ ಎರಡು ವಾರಗಳ ಕಾಲ ವಿಸ್ತರಿಸಲು ಕೇಂದ್ರಸರಕಾರ ನಿರ್ಧರಿಸಿದೆ. ಈ ಕುರಿತಾದ ಸೂಚನೆಯನ್ನು ಕೇಂದ್ರ ಗೃಹ ಇಲಾಖೆ ಇಂದು ಬಿಡುಗಡೆಗೊಳಿಸಿದೆ.
ನಿನ್ನೆಯಿಂದ ತನ್ನ ಸಚಿವ ಸಂಪುಟದ ವಿವಿಧ ಸಚಿವರೊಂದಿಗೆ ನಿರಂತರ ಸಭೆ ನಡೆಸಿದ ಬಳಿಕ ಪ್ರಧಾನಮಮಂತ್ರಿ ನರೇಂದ್ರ ಮೋದಿ ಅವರು ಲಾಕ್ ಡೌನ್ ಅನ್ನು ಇನ್ನೆರಡು ವಾರಗಳ ಕಾಲ ವಿಸ್ತರಿಸುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಕೇಂದ್ರ ಸರಕಾರದ ಮೂಲಗಳು ತಿಳಿಸಿವೆ.
ಆರ್ಥಿಕತೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಆರೆಂಜ್ ಹಾಗೂ ಕಿತ್ತಳೆ ವಲಯಗಳಲ್ಲಿ ಕೆಲವೊಂದು ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಲಾಗಿದೆ ಆದರೆ ಮೂರೂ ವಲಯಗಳಲ್ಲಿ ಸಾರ್ವಜನಿಕರ ಮುಕ್ತ ಸಂಚಾರಕ್ಕೆ ಇನ್ನೆರಡು ವಾರಗಳ ಕಾಲ ನಿರ್ಬಂಧ ಇರಲಿದೆ.
ದೇಶದ 130 ಜಿಲ್ಲೆಗಳು ರೆಡ್ ಝೋನ್ ನಲ್ಲಿವೆ. ಈ ಜಿಲ್ಲೆಗಳಲ್ಲಿ ಕಠಿಣ ಲಾಕ್ ಡೌನ್ ಪರಿಸ್ಥಿತಿ ಮೇ 17ರವರೆಗೆ ಮುಂದುವರಿಯಲಿದೆ. ದೇಶಾದ್ಯಂತ ಥಿಯೇಟರ್, ಮಾಲ್, ಜಿಮ್, ಬಾರ್ ಗಳು ಮುಚ್ಚಿಯೇ ಇರಲಿವೆ.
ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೂ ಮೇ 17ರವರೆಗೆ ನಿರ್ಬಂಧ ಮುಂದುವರಿಯಲಿದೆ.