Advertisement

ಆತ್ಮನಿರ್ಭರಕ್ಕೆ ಕೊಪ್ಪಳ ಆಟಿಕೆ: ದೇಶದ ಮೊದಲ ಆಟಿಕೆ ಉತ್ಪಾದನ ಕ್ಲಸ್ಟರ್‌: BSY ಟ್ವೀಟ್‌

07:22 AM Aug 31, 2020 | Hari Prasad |

ಬೆಂಗಳೂರು: ಪ್ರಧಾನಿ ಮೋದಿಯವರ ಸ್ವಾವಲಂಬಿ ರಾಷ್ಟ್ರ ನಿರ್ಮಾಣದ ‘ವೋಕಲ್‌ ಫಾರ್‌ ಲೋಕಲ್‌’ ಪರಿಕಲ್ಪನೆಗೆ ಅನುಗುಣವಾಗಿ ಆಟಿಕೆ ತಯಾರಿಕೆ ಮೂಲಕ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಗೆ ಬಲ ತುಂಬಲು ಕೊಪ್ಪಳದಲ್ಲಿ ದೇಶದ ಮೊದಲ ಆಟಿಕೆ ಉತ್ಪಾದನ ಕ್ಲಸ್ಟರ್‌ ಪ್ರಾರಂಭಿಸಲಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

Advertisement

ಈ ಬಗ್ಗೆ ಅವರು ಟ್ವೀಟ್‌ ಮಾಡಿದ್ದು, ಇಲ್ಲಿ ದೇಶ- ವಿದೇಶಗಳ ಆಟಿಕೆ ತಯಾರಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದಿದ್ದಾರೆ.

ಪ್ರಧಾನಿ ಮೋದಿ ಅವರು ಆ. 30ರ ತಮ್ಮ ‘ಮನ್‌ ಕೀ ಬಾತ್‌’ನಲ್ಲಿ ದೇಸೀಯ ಆಟಿಕೆ ಉತ್ಪಾದನೆಯ ಬಗ್ಗೆ ಮಾತನಾಡಿ, ಕರ್ನಾಟಕದ ಚನ್ನಪಟ್ಟಣದ ಗೊಂಬೆಗಳ ಸಹಿತ ಸ್ಥಳೀಯವಾಗಿ ಉತ್ಪಾದನೆಯಾಗುತ್ತಿರುವ ಆಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಸೇನೆಯಲ್ಲಿ ಬಳಕೆಯಾಗುತ್ತಿರುವ ಮುಧೋಳ ತಳಿಯ ನಾಯಿಗಳ ಬಗ್ಗೆಯೂ ಅವರು ಪ್ರಸ್ತಾವಿಸಿದ್ದಾರೆ.

ಕೊಪ್ಪಳದಲ್ಲಿ ಸುಮಾರು 400 ಎಕರೆ ಪ್ರದೇಶದಲ್ಲಿ ಆಟಿಕೆ ಕ್ಲಸ್ಟರ್‌ ತಲೆಯೆತ್ತಲಿದ್ದು, ಸುಮಾರು 5 ಸಾವಿರ ಕೋಟಿ ರೂ. ಹೂಡಿಕೆಯಾಗಲಿದೆ. 40 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದ್ದು, 2023ರ ಹೊತ್ತಿಗೆ ಮಾರುಕಟ್ಟೆಯ ಗಾತ್ರ 2,300 ಕೋಟಿ ರೂ. ಮೀರಲಿದೆ ಎಂದು ಸಿಎಂ ಟ್ವೀಟ್‌ ನಲ್ಲಿ ಹೇಳಿದ್ದಾರೆ.

ಸ್ವಾವಲಂಬಿ ರಾಷ್ಟ್ರ ನಿರ್ಮಾಣಕ್ಕಾಗಿ ಪ್ರಧಾನಿಯವರ ‘ವೋಕಲ್‌ ಫಾರ್‌ ಲೋಕಲ್‌’ ಪರಿಕಲ್ಪನೆಗೆ ಅನುಗುಣವಾಗಿ ಆಟಿಕೆ ತಯಾರಿ ಮೂಲಕ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಗೆ ಬಲ ತುಂಬಲು ದೇಶದ ಮೊದಲ ಆಟಿಕೆ ಉತ್ಪಾದನ ಕ್ಲಸ್ಟರನ್ನು ಕೊಪ್ಪಳದಲ್ಲಿ ಪ್ರಾರಂಭಿಸಲಾಗುತ್ತಿದೆ ಎಂದು ಸಿಎಂ ತಿಳಿಸಿದ್ದಾರೆ.

Advertisement

ಬಿ.ಸಿ. ಪಾಟೀಲ್‌ ಟ್ವೀಟ್‌
ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್‌ ಸ್ಥಾಪನೆ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್‌, ಮುಂದಿನ ದಿನಗಳಲ್ಲಿ ಕುಶಲಕರ್ಮಿಗಳಿಗೆ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಯಾಗುವ ವಿಶ್ವಾಸವನ್ನು ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದಾರೆ.

ಕಿನ್ನಾಳ ಕಲೆ, ಆಟಿಕೆ ಖ್ಯಾತಿಯ ಕೊಪ್ಪಳದಲ್ಲಿ ದೇಶದ ಮೊತ್ತಮೊದಲ ಆಟಿಕೆ ಕ್ಲಸ್ಟರ್‌ ಸ್ಥಾಪನೆಯಾಗುತ್ತಿರುವುದು ಅತ್ಯಂತ ಸಂತಸದ ಸಂಗತಿ. ಕುಶಲಕರ್ಮಿಗಳಿಗೆ ವಿಪುಲ ಉದ್ಯೋಗಾವಕಾಶ ಕಲ್ಪಿಸುವ ಆಟಿಕೆ ಉದ್ಯಮದಿಂದ ಮುಂಬರುವ ದಿನಗಳಲ್ಲಿ ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದಿದ್ದಾರೆ.

ಕೊಪ್ಪಳದ ಕಿನ್ನಾಳ ಕಲೆ
ಕೊಪ್ಪಳ ಹತ್ತಿರದ ಕಿನ್ನಾಳವು ಆಟಿಕೆಗಳಿಗೆ ಜಗತ್ಪ್ರಸಿದ್ಧ. ಕಿನ್ನಾಳ ಒಂದು ಕಾಲದಲ್ಲಿ ಕರಕುಶಲ ಕಲೆಗಳ ಪ್ರಮುಖ ಕೇಂದ್ರ. ಅತ್ಯಂತ ಸೊಗಸಾದ ಮರದ ಕೆತ್ತನೆಗಳಿಗೆ ಈಗಲೂ ಹೆಸರಾಗಿದೆ. ಹಂಪಿಯ ಪಂಪಾಪತೇಶ್ವರ ದೇವಾಲಯದ ಮರದ ರಥದಲ್ಲಿ ಕೆತ್ತಲಾಗಿರುವ ವರ್ಣಚಿತ್ರಗಳು ಕಿನ್ನಾಳ ಕಲೆಯ ಶ್ರೇಷ್ಠತೆಗೆ ಉದಾಹರಣೆ. ಕಿನ್ನಾಳ ಕುಶಲಕರ್ಮಿಗಳು ಆಟಿಕೆ ತಯಾರಿಗೆ ಹಗುರ ಮರ ಬಳಸುತ್ತಾರೆ.

ಮರದ ಆಟಿಕೆಗಳ ವಿವಿಧ ಭಾಗಗಳಲ್ಲಿ ಹುಣಿಸೆ ಬೀಜ ಮತ್ತು ಉರುಟು ಕಲ್ಲುಗಳನ್ನು ಬಳಸಲಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಮಣ್ಣಿನ ಆಟಿಕೆಗಳು ಮತ್ತು ಚಿತ್ರಗಳನ್ನು ಸಾಮಾನ್ಯವಾಗಿ ಸೆಗಣಿ ಮತ್ತು ಮರದ ಪುಡಿ ಬಳಸಿ ಮಾಡಲಾಗುತ್ತದೆ. ಕಿನ್ನಾಳ ಆಟಿಕೆಗಳು ಪರಿಸರಸ್ನೇಹಿಯಾಗಿವೆ.

ಎಚ್.ಡಿ.ಕೆ. ಬಜೆಟ್‌ ನಲ್ಲಿ ಘೋಷಣೆ
ಉತ್ಪಾದನ ವಲಯಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಹಿಂದಿನ ಮೈತ್ರಿ ಸರಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿಯವರು “ಕಾಂಪೀಟ್‌ ವಿತ್‌ ಚೀನ’ ಎಂಬ ಬಹು ಉದ್ದೇಶಿತ ಯೋಜನೆಯಡಿ 9 ಜಿಲ್ಲೆಗಳಲ್ಲಿ ಕೈಗಾರಿಕೆ ಕ್ಲಸ್ಟರ್‌ ಸ್ಥಾಪಿಸುವುದಾಗಿ 2019-20ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದರು. ಕೊಪ್ಪಳದ ಆಟಿಕೆ ಕ್ಲಸ್ಟರ್‌ ಕೂಡ ಅದರಲ್ಲಿ ಸೇರಿತ್ತು.

ಚನ್ನಪಟ್ಟಣದ ಗೊಂಬೆ ಉಲ್ಲೇಖ
ಚನ್ನಪಟ್ಟಣದ ಆಟಿಕೆಗಳು ಆಲೆಮರದಿಂದ ತಯಾರಾಗುತ್ತವೆ. ಇವಕ್ಕೆ ಹಚ್ಚುವ ಬಣ್ಣ ಮತ್ತು ಅರಗು ನೈಸರ್ಗಿಕ ಪದಾರ್ಥಗಳಿಂದ ತಯಾರಾಗುತ್ತವೆ. ಹೀಗಾಗಿ ಮಕ್ಕಳ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುವುದಿಲ್ಲ.
ಆದರೆ ಚೀನದ ಗೊಂಬೆಗಳು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬಂದಿವೆ. ಪ್ರಧಾನಿಯವರ ಮನ್‌ ಕೀ ಬಾತ್‌ ಚನ್ನಪಟ್ಟಣದ ಗೊಂಬೆ ಕಲಾವಿದರಲ್ಲಿ ಹೊಸ ವಿಶ್ವಾಸ ಚಿಗುರಿಸಿದೆ. ತಂತ್ರಜ್ಞಾನ, ಯಥೇಚ್ಛ ಕಚ್ಚಾ ಪದಾರ್ಥ, ತಯಾರಿ ಸ್ನೇಹಿ ಪರಿಸರ, ವಿದೇಶಿ ಮಾರುಕಟ್ಟೆ ಸೃಷ್ಟಿ- ಹೀಗೆ ಅನುಕೂಲಕರ ವಾತಾವರಣ ಕಲ್ಪಿಸಿದರೆ, ಈ ಗೊಂಬೆಗಳು ಮತ್ತೆ ವಿಶ್ವ ವ್ಯಾಪಿಯಾಗಲಿವೆ ಎಂದು ಕಲಾವಿದರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next