Advertisement

ಎಲ್ಲರಲ್ಲೂ ಮೂಡಬೇಕಿದೆ ರಾಷ್ಟ್ರೀಯತೆ

09:42 AM Jan 21, 2019 | Team Udayavani |

ಕೊಟ್ಟೂರು: ಭಾರತೀಯತೆ ಎಲ್ಲರಲ್ಲಿ ಮನೆ ಮಾಡಬೇಕೇ ಹೊರತು ಹಿಂದುತ್ವ ಯಾರಲ್ಲೂ ಒಡಮೂಡಬಾರದು. ಹಿಂದುತ್ವದ ಶಬ್ದವೇ ಪ್ರತಿಯೊಬ್ಬರನ್ನು ಪ್ರತ್ಯೇಕಿಸುವುದು ಆಗಿದೆ. ಏಕತೆ, ಸಮಗ್ರತೆ, ಸಹಬಾಳ್ವೆಯ ತತ್ವದಡಿ ರಾಷ್ಟ್ರದ ಜನ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.

Advertisement

ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಎಚ್ಕೆಎಸ್‌ ಪ್ರಕಾಶನ ಆಯೋಜಿಸಿದ್ದ ಶಿಕ್ಷಕ ಶೇಕ್ಷಾವಲಿ ಮಣಿಗಾರ ಬರೆದ ‘ಕೇರಿ ಮುಟ್ಟಿದ ಮಾವು’ ಕಾದಂಬರಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಅನಾವಶ್ಯಕವಾಗಿ ಅಲ್ಪಸಂಖ್ಯಾತರನ್ನು ಕೆಣಕುವ ಪ್ರಯತ್ನವನ್ನು ರಾಷ್ಟ್ರದಲ್ಲಿನ ಕೆಲವರು ಮಾಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಇದು ಹೆಚ್ಚಾಗುತ್ತದೆ. ಇದರಿಂದಾಗಿ ಸಹಬಾಳ್ವೆ ಸಹಿಷ್ಣುತೆ ಹಾಳಾಗಿ ಹೋಗುತ್ತಿದೆ ಎಂದು ಹೇಳಿದ ಅವರು, ರಾಷ್ಟ್ರ ನೆಮ್ಮದಿಯಿಂದ ಇರಲು, ಶ್ರೀಮಂತವಾಗಿರುವುದಕ್ಕೆ ಅಲ್ಪಸಂಖ್ಯಾತರಾದ ಮುಸ್ಲಿಮರು ಬದುಕಿ ಬಾಳುತ್ತಿರುವುದೇ ಪ್ರಮುಖ ಕಾರಣ. ಸಿಕ್ಕರು, ಬೌದ್ಧರು, ಮತ್ತಿತರರ ಅಲ್ಪಸಂಖ್ಯಾತರು ಕಾರಣರಾಗಿದ್ದಾರೆ ಎಂದರು.

ರಾಷ್ಟ್ರದಲ್ಲಿ ರಜಿಯಾ ಸುಲ್ತಾನ, ಔರಂಗಜೇಬ್‌ ಮತ್ತು ಟಿಪ್ಪು ಸುಲ್ತಾನರಂತಹ ಇತಿಹಾಸಕಾರರು ಮತ್ತು ಅವರ ಬಗೆಗಿನ ಹೆಸರುಗಳನ್ನು ಅಪಮೌಲ್ಯಗೊಳಿಸುವ ದೊಡ್ಡ ಸಂಚಕಾರ ನಡೆದಿದೆ. ಇದನ್ನು ಸಮಗ್ರವಾಗಿ ವಿರೋಧಿಸುವುದೇ ಸೃಜನಶೀಲರ ಕೆಲಸ. ಯಾವುದೇ ಕಾರಣಕ್ಕೂ ಇತಿಹಾಸವನ್ನು ತಿರುಚುವುದು ಮತ್ತು ಬದಲಾಯಿಸುವುದನ್ನು ಯಾರೊಬ್ಬರು ಒಪ್ಪಿಕೊಳ್ಳಬಾರದು ಎಂದರು.

ಮುಸ್ಲಿಂ ಧರ್ಮದಲ್ಲಿನ ಉದಾತ್ತತೆ ಮತ್ತು ತತ್ವಗಳು ಉಳಿದೆಲ್ಲಾ ಧರ್ಮಗಳಿಗಿಂತ ಮಾದರಿಯಾಗಿದೆ. ಈ ಕಾರಣಕ್ಕಾಗಿಯೇ ಮುಂದಿನ ಜನ್ಮದಲ್ಲಿ ನಾನು ಮುಸ್ಲಿಂನಾಗಿ ಹುಟ್ಟಬೇಕೆಂದು ಬಯಸಿರುವೆ. ಈ ಮಾತನ್ನು ಹೇಳುತ್ತಿದ್ದಂತೆ ಕೆಲವರು ನನ್ನನ್ನು ನಿಂದಿಸಿದರು. ಈ ಮಾತಿಗೆ ಈಗಲೂ ನಾನು ಬದ್ಧನಾಗಿರುವೆ ಎಂದು ಮತ್ತೂಮ್ಮೆ ಪ್ರತಿಪಾದಿಸಿದರು.

Advertisement

ಗಜಲ್‌ ಕವಿ ಅಲ್ಲಾಗಿರಿರಾಜ ಕಾದಂಬರಿ ಕುರಿತು ಮಾತನಾಡಿ, ಭಾರತ ರಾಷ್ಟ್ರ ಬದಲಾವಣೆಯಾಗಬೇಕಾದರೆ ದಲಿತ ಮತ್ತು ಮುಸ್ಲಿಂರಿಂದ ಮಾತ್ರ ಸಾಧ್ಯವಿದೆ ಎಂದ ಅವರು, ಕೆಳವರ್ಗದವರ ಬಗ್ಗೆ ಇರುವ ಮನೋಭಾವವನ್ನು ಪ್ರತಿಯೊಬ್ಬರು ಬದಲಾಯಿಸಿಕೊಳ್ಳಬೇಕು. ಉತ್ತರ ಭಾರತದಲ್ಲಿ ಈಗಲೂ ಜಾತಿ ವ್ಯವಸ್ಥೆ ಮುಂದುವರಿದಿದೆ ಎಂದು ಆರೋಪಿಸಿದರು.

ವಿಷ್ಣುದೇವ ಮುಂದುವರಿದ ಜನಾಂಗದ ವ್ಯಕ್ತಿಯಲ್ಲ. ಆತ ದೇವದಾಸಿ ಮಗ ಆದರೂ ಆತನನ್ನು ಅಸ್ಪೃಶ್ಯತೆ ಇಲ್ಲದೇ ಪೂಜಿಸಲಾಗುತ್ತಿದೆ. ಆದರೆ ದಲಿತರನ್ನು ಏಕೆ ಈ ಮನೋಭಾವದಿಂದ ನೋಡಲಾಗುತ್ತಿಲ್ಲ ಎಂದು ಹೇಳಿದರಲ್ಲದೇ ಪುಸ್ತಕ ಕೇರಿ ಮುಟ್ಟಿದ ಮಾವು ಬರೆದ ಲೇಖಕ ಶೇಕ್ಷಾವಲಿ ತಮ್ಮ ಬರವಣಿಗೆಯ ಮೂಲಕ ಆತ್ಮದಿಂದ ಬರೆಯುವ ಪ್ರಯತ್ನಸಾಗಿಸುವ ಮೂಲಕ ಉಳಿದ ಲೇಖಕರಿಗೆ ದಾರಿಯಾಗಿದ್ದಾರೆ ಎಂದರು.

ಜಾನಪದ ಅಕಾಡೆಮಿ ಸದಸ್ಯ ಮಂಜಮ್ಮ ಜೋಗತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕರ ಸಂಘದ ಸಂಡೂರು ತಾಲೂಕು ಅಧ್ಯಕ್ಷೆ ಎಂ.ಆರ್‌.ಸುಮನ್‌, ರಹೀಮಾಬಿ, ಇಮಾಂಸಾಬ್‌, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಚಲನಚಿತ್ರ ಕೇಂದ್ರ ಪ್ರಾಮಾಣೀಕರಣ ಮಂಡಳಿ ಮಾಜಿ ಸದಸ್ಯ ಕೆ.ಅಬ್ದುಲ್‌ ಗನಿ ಅಧ್ಯಕ್ಷತೆ ವಹಿಸಿದ್ದರು. ಕೇರಿ ಮುಟ್ಟಿದ ಮಾವು ಕಾದಂಬರಿ ಲೇಖಕ ಶೇಕ್ಷಾವಲಿ ಮಣಿಗಾರ್‌ ಮಾತನಾಡಿದರು. ಸೈಫ್‌ ಜಾನ್ಸೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಇಮಾಂಸಾಹೇಬ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next