Advertisement

ರಾಷ್ಟ್ರೀಯ ತಂತ್ರಜ್ಞಾನ ದಿನ 2021 : ‘ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ’

03:54 PM May 11, 2021 | ಶ್ರೀರಾಜ್ ವಕ್ವಾಡಿ |

ಪ್ರತಿವರ್ಷ ಭಾರತದಲ್ಲಿ ಮೇ 11 ರಂದು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಭಾರತೀಯರು ನೀಡಿದ ಕೊಡುಗೆಗಳನ್ನು ಮತ್ತು ಅವರ ಸಾಧನೆಯನ್ನು ಸೂಚಿಸುತ್ತದೆ. 1999 ಮೇ 11 ರಂದು ಮೊದಲ ಬಾರಿಗೆ ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಆಚರಿಸಲಾಯಿತು. ಈ ದಿನವು 1998 ಮೇ 11 ರಂದು ದೇಶ ತಂತ್ರಜ್ಞಾನ ಕ್ಷೇತ್ರದಲ್ಲಿ ಕಂಡ ಯಶಸ್ಸನ್ನು ಪ್ರತಿನಿಧಿಸುತ್ತದೆ.

Advertisement

1998 ಮೇ 11 ರಂದು ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ನೇತೃತ್ವದಲ್ಲಿ ಭಾರತವು ಆಪರೇಷನ್ ಶಕ್ತಿ ಅಡಿಯಲ್ಲಿ ರಾಜಸ್ಥಾನದ ಪೋಖ್ರಾನ್ ಟೆಸ್ಟ್ ಶ್ರೇಣಿಯಲ್ಲಿ ಮೂರು ಯಶಸ್ವಿ ಪರಮಾಣು ಪರೀಕ್ಷೆಗಳನ್ನು ನಡೆಸಿತ್ತು. ಈ ಕಾರ್ಯಾಚರಣೆಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಓ), ಬಾಬಾ ಪರಮಾಣು ಸಂಶೋಧನಾ ಕೇಂದ್ರ (ಬಾರ್ಕ್), ಪರಮಾಣು ಖನಿಜಗಳ ನಿರ್ದೇಶನಾಲಯದ ಪರಿಶೋಧನೆ ಮತ್ತು ಸಂಶೋಧನೆ (ಎ ಎಮ್‌ ಡಿ ಇ ಆರ್) ಕೇಂದ್ರಗಳ ವಿಜ್ಞಾನಿಗಳ ಸಹಯೋಗದೊಂದಿಗೆ ಭಾರತೀಯ ಸೇನೆ ನಡೆಸಿತ್ತು. ಈ ಪರೀಕ್ಷೆಗಳ ಮೂಲಕ, ಭಾರತವು ಥರ್ಮೋಕ್ಲಿಯರ್ ಶಸ್ತ್ರಾಸ್ತ್ರಗಳು ಮತ್ತು ವಿದಳನ ಬಾಂಬುಗಳನ್ನು ನಿರ್ಮಿಸುವ ಸಾಮರ್ಥ್ಯವನ್ನು ಜಗತ್ತಿನ ಮುಂದೆ ಸಾಬೀತುಪಡಿಸಿತ್ತು.

ಓದಿ : ಲಸಿಕೆ ವಿಷಯದಲ್ಲಿ ರಾಜಕೀಯ ಬೇಡ, ಎಲ್ಲ ಅರ್ಹರಿಗೂ ವ್ಯಾಕ್ಸಿನ್ ಹಾಕಿಸಿ : ಸಿದ್ದರಾಮಯ್ಯ

ಇದು ಭಾರತದ ತಂತ್ರಜ್ಞಾನ ಕ್ಷೇತ್ರದಲ್ಲಿನ ಬಹುದೊಡ್ಡ ಯಶಸ್ಸು ಹಾಗೂ ಮಹತ್ವದ ಕ್ಷಣವಾಗಿದೆ. ಅಲ್ಲದೆ ಇದೇ ದಿನ ಕರ್ನಾಟಕದ ಬೆಂಗಳೂರಿನಲ್ಲಿ ನ್ಯಾಶನಲ್ ಏರೋಸ್ಪೆಸ್ ಲ್ಯಾಬೋರೇಟರಿ ವಿನ್ಯಾಸಗೊಳಿಸಿದ ಭಾರತದ ಮೊಟ್ಟ ಮೊದಲ ಸ್ಥಳೀಯ ವಿಮಾನ ಹನ್ಸಾ-3 ಪರೀಕ್ಷಿಸಿತ್ತು ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ಕೂಡ ಭಾರತದ ಮೇಲ್ಮೆಯಿಂದ ತ್ರಿಶೂಲ್ ಕ್ಷಿಪಣಿಯನ್ನು ಹಾರಿಸುವ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು. ಈ ಯಶಸ್ವಿ ಪರೀಕ್ಷೆಯ ನಂತರ ಕ್ಷಿಪಣಿಯನ್ನು ಭಾರತೀಯ ಸೇನೆ ಮತ್ತು ವಾಯುಪಡೆಗೆ ಸೇರಿಸಲಾಯಿತು. ಈ ಎಲ್ಲಾ ಪ್ರಗತಿಗಳು ಒಂದೇ ದಿನ ಯಶಸ್ವಿಯಾಗಿ ನಡೆದ ಕಾರಣ ಈ ದಿನವು ಭಾರತದ ತಂತ್ರಜ್ಞಾನ ಇತಿಹಾಸದಲ್ಲಿ ಮಹತ್ವದ ದಿನವಾಗಿದೆ.

1999ರಲ್ಲಿ ಭಾರತದ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಮೇ 11 ದೇಶಕ್ಕೆ ಮಹತ್ವದ ಸಾಧನೆಯ ದಿನವೆಂದು ಘೋಷಿಸಿದರು. ಅಲ್ಲದೆ ಭಾರತವು ಗಣ್ಯ ರಾಷ್ಟ್ರಗಳ ‘ನ್ಯೂಕ್ಲಿಯರ್ ಕ್ಲಬ್’ ಗೆ ಸೇರ್ಪಡೆಗೊಂಡ ಆರನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಅಂದಿನಿಂದ ತಂತ್ರಜ್ಞಾನ ಅಭಿವೃದ್ಧಿ ಮಂಡಳಿಯು ಮೇ 11 ರಂದು ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳನ್ನು ವಿಶೇಷವಾಗಿ ಗೌರವಿಸುತ್ತಿದೆ.

Advertisement

ಸಾಮಾನ್ಯವಾಗಿ ಪ್ರತಿವರ್ಷ ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆಗಾಗಿ ನವದೆಹಲಿಯಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ರಾಷ್ಟ್ರಪತಿಯವರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿರುತ್ತಾರೆ. ಅವರು ವಿಜ್ಞಾನಿಗಳಿಗೆ ಪ್ರಶಸ್ತಿಗಳನ್ನು ನೀಡುತ್ತಾರೆ ಮತ್ತು ಅವರ ಸಾಧನೆಗಳನ್ನು ಗೌರವಿಸುತ್ತಾರೆ.

ತಂತ್ರಜ್ಞಾನ ಮಂಡಳಿ  ಪ್ರತಿವರ್ಷ ಈ ದಿನ ಒಂದು ಥೀಮ್ ಅನ್ನು ಪ್ರಕಟಿಸುತ್ತದೆ. 2020 ರಲ್ಲಿ ‘RESTART’ ಶೀರ್ಷಿಕೆಯ ‘ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನಾ ಅನುವಾದಗಳ ಮೂಲಕ ಆರ್ಥಿಕತೆಯನ್ನು ರಿಬ್ಯೂಟ್ ಮಾಡುವುದು’ ಎಂಬ ವಿಷಯವಾಗಿತ್ತು. ಈ ವರ್ಷ ‘ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ’ ಎಂಬ ಥೀಮ್ ಪ್ರಕಟಿಸಿದೆ.

ನಳಿನಿ ಎಸ್ ಸುವರ್ಣ, ಜಾರ್ಕಳ ಮುಂಡ್ಲಿ.

ಓದಿ : ಕೋವಿಡ್ ವಿರುದ್ಧ ಹೋರಾಟಕ್ಕೆ ಭಾರತದ ಜೊತೆ ಕೈ ಜೋಡಿಸಿದ ‘ಟ್ವಿಟರ್’ : 110 ಕೋಟಿ ರೂ.ನೆರವು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next