Advertisement

ನ್ಯಾಶನಲ್‌ ಟೇಬಲ್‌ ಟೆನಿಸ್‌: ಶರತ್‌ ಕಮಲ್‌ 9ನೇ ಪ್ರಶಸ್ತಿ ದಾಖಲೆ

12:30 AM Jan 11, 2019 | |

ಕಟಕ್‌: ಹಿರಿಯ ಟೇಬಲ್‌ ಟೆನಿಸ್‌ ಆಟಗಾರ ಅಚಂತ ಶರತ್‌ ಕಮಲ್‌ ಸರ್ವಾಧಿಕ 9ನೇ ಸಲ ರಾಷ್ಟ್ರೀಯ ಚಾಂಪಿಯನ್‌ಶಿಪ್‌ ಪ್ರಶಸ್ತಿಯನ್ನೆತ್ತಿ ನೂತನ ದಾಖಲೆ ಸ್ಥಾಪಿಸಿದ್ದಾರೆ. ಇದೇ ವೇಳೆ ವನಿತಾ ಸಿಂಗಲ್ಸ್‌ನಲ್ಲಿ ಕರ್ನಾಟಕದ ಅರ್ಚನಾ ಕಾಮತ್‌ ಮೊದಲ ಸಲ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

Advertisement

ಬುಧವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ ಪ್ರಶಸ್ತಿ ಕಾಳಗದಲ್ಲಿ ಶರತ್‌ ಕಮಲ್‌ 4-3 ಅಂತರದಿಂದ ಜಿ. ಸಥಿಯನ್‌ ಅವರನ್ನು ಪರಾಭವಗೊಳಿಸಿದರು (11-13, 11-5, 11-6, 5-11, 10-12, 11-6, 14-12). ಇದರೊಂದಿಗೆ ಕಮಲೇಶ್‌ ಮೆಹ್ತಾ ಹೆಸರಲ್ಲಿದ್ದ 8 ರಾಷ್ಟ್ರೀಯ ಪ್ರಶಸ್ತಿಗಳ ದಾಖಲೆಯನ್ನು ಮುರಿದರು. ಇನ್ನೊಂದೆಡೆ ಸಥಿಯನ್‌ ಮೊದಲ ಸಲ ಪ್ರಶಸ್ತಿ ಎತ್ತುವ ಅವಕಾಶದಿಂದ ವಂಚಿತರಾದರು.

“ಫೈನಲ್‌ ಅತ್ಯಂತ ಪೈಪೋಟಿಯಿಂದ ಕೂಡಿತ್ತು. ನಮ್ಮಿಬ್ಬರ ಮೇಲೂ ಭಾರೀ ಒತ್ತಡವಿತ್ತು. ಸಥಿಯನ್‌ ಅತ್ಯಂತ ಆಕ್ರಮಣಕಾರಿ ಆಟದ ಮೂಲಕ ನನ್ನ ಮೇಲೆರಗಿದರು. ಅನುಭವ ನನ್ನ ನೆರವಿಗೆ ಬಂತು’ ಎಂಬುದಾಗಿ ಶರತ್‌ 
ಕಮಲ್‌ ಪ್ರತಿಕ್ರಿಯಿಸಿದರು.

ಮಣಿಕಾಗೆ ಆಘಾತವಿಕ್ಕಿದ್ದ ಅರ್ಚನಾ!
ವನಿತಾ ಸಿಂಗಲ್ಸ್‌ನಲ್ಲಿ ಅರ್ಚನಾ ಕಾಮತ್‌ ಪಶ್ಚಿಮ ಬಂಗಾಲದ ಕೃತ್ವಿಕಾ ಸಿನ್ಹಾ ವಿರುದ್ಧ 12-10, 6-11, 11-9, 12-10, 7-11, 11-3 ಅಂತರದಿಂದ ಗೆದ್ದು ಸಂಭ್ರಮಿಸಿದರು. ಸೆಮಿಫೈನಲ್‌ನಲ್ಲಿ ಕಾಮನ್ವೆಲ್ತ್‌ ಗೇಮ್ಸ್‌ ಬಂಗಾರದ ಪದಕ ವಿಜೇತೆ ಮಣಿಕಾ ಭಾತ್ರಾ ಅವರನ್ನು ಸೋಲಿಸುವ ಮೂಲಕ ಅರ್ಚನಾ ಅಪಾರ ಆತ್ಮವಿಶ್ವಾಸ ಗಳಿಸಿದ್ದರು. ಇದು ಪ್ರಶಸ್ತಿ ಕಾಳಗದಲ್ಲಿ ನೆರವಿಗೆ ಬಂತು.
“ಎಂದಿನಿಂದಲೋ ಈ ಪ್ರಶಸ್ತಿ ಗೆಲ್ಲುವುದು ನನ್ನ ಗುರಿಯಾಗಿತ್ತು. ಸರಿಯಾದ ಸಮಯದಲ್ಲಿ ಚಾಂಪಿಯನ್‌ ಆಗಿ ಮೂಡಿಬಂದಿದ್ದೇನೆ’ ಎಂದು ಅರ್ಚನಾ ಸಂಭ್ರಮಿಸಿದರು.

18ರ ಹರೆಯದ ಅರ್ಚನಾ ಕಾಮತ್‌ ವನಿತಾ ಸಿಂಗಲ್ಸ್‌ ನ್ಯಾಶನಲ್‌ ಚಾಂಪಿಯನ್‌ ಆಗಿ ಮೂಡಿಬಂದ ಕರ್ನಾಟಕದ ದ್ವಿತೀಯ ಆಟಗಾರ್ತಿ. ಇದಕ್ಕೂ ಮುನ್ನ ಉಷಾ ಸುಂದರ್‌ ರಾಜ್‌ 5 ಸಲ ನ್ಯಾಶನಲ್‌ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.