Advertisement

National Sports Day… ಕ್ರೀಡೆಯಲ್ಲಿ ಭಾರತಕ್ಕಿದೆ ಉಜ್ವಲ ಭವಿಷ್ಯ

10:38 PM Aug 28, 2024 | Team Udayavani |

ಎರಡು ವಾರಗಳ ಹಿಂದೆ ವಿಶ್ವದ ಅತೀ ದೊಡ್ಡ ಕ್ರೀಡಾ ಹಬ್ಬ ಒಲಿಂಪಿಕ್ಸ್‌ಗೆ ತೆರೆ ಬಿದ್ದಿತು. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತ ಗಳಿಸಿದ್ದು 6 ಪದಕ. ಇದರೊಂದಿಗೆ ಕೈ ತಪ್ಪಿದ ಪದಕಗಳು ಕೆಲವು. ಇನ್ನೇನು ವನಿತಾ ಕುಸ್ತಿಯಲ್ಲಿ ಭಾರತ ಇತಿಹಾಸ ನಿರ್ಮಿಸಿಯೇ ಬಿಟ್ಟಿತ್ತು ಎನ್ನುವಾಗಲೇ ತೂಕದ ಕಾರಣವಾಗಿ ಭಾರತೀಯ ಸ್ಪರ್ಧಿ ಅನರ್ಹ ಎನ್ನುವ ಆಘಾತಕಾರಿ ವಿಷಯ ಬಂದಪ್ಪಳಿಸಿತು. ಪದಕದ ಆಸೆಯೇನೋ ನುಚ್ಚು ನೂರಾಯಿತು. ಆದರೆ ಭರವಸೆಯ ಕಿರಣವೊಂದು ಭಾರತೀಯ ಕ್ರೀಡಾ ಬಾನಂಗಳದಲ್ಲಿ ಗೋಚರಿಸಿದ್ದಂತೂ ಸುಳ್ಳಲ್ಲ.

Advertisement

ಹೌದು, 53 ಕೆ.ಜಿ. ಕುಸ್ತಿ ವಿಭಾಗದಲ್ಲಿ ಫೈನಲ್‌ ತಲುಪಿ ಇತಿಹಾಸ ರಚಿಸುವ ಅಂಚಿನಲ್ಲಿ ವಿನೇಶ್‌ ಫೋಗಾಟ್‌ 100 ಗ್ರಾಂ ತೂಕ ಹೆಚ್ಚಿದ್ದ ಕಾರಣ 53 ಕೆ.ಜಿ. ಕುಸ್ತಿ ವಿಭಾಗದಲ್ಲಿ ಅನರ್ಹಗೊಂಡರು. ಆ ಸಂದರ್ಭ ದಲ್ಲಿ ಭಾರತದ ಕ್ರೀಡಾಭಿಮಾನಿಗಳು ಆಕೆಯೊಂದಿಗೆ ನಿಂತ ಪರಿ ನಿಜಕ್ಕೂ ಶ್ಲಾಘನೀಯ. “ನಿಯಮ ಎಂದರೆ ಎಲ್ಲರಿಗೂ ಒಂದೇ’ ಎನ್ನುವ ಕಟುಸತ್ಯದ ನಡುವೆಯೂ “ನಿನ್ನ ಜತೆಗೆ ನಾವಿದ್ದೇವೆ’ ಎಂದು ಭಾರತೀಯರು ಆಕೆಗೆ ಸಾಥ್‌ ನೀಡಿದ್ದರು.

ಕ್ರಿಕೆಟ್‌ ಪಂದ್ಯವಿದ್ದರೇ ಮಾತ್ರ ನಿದ್ದೆಗೆಟ್ಟು ನೋಡುತ್ತಿದ್ದ ಭಾರತದ ಕ್ರೀಡಾಭಿಮಾನಿಗಳು ರಾತ್ರಿ 12 ಗಂಟೆಗಿದ್ದ ಒಲಿಂಪಿಕ್ಸ್‌ ಜಾವೆಲಿನ್‌ ಥ್ರೋ ಫೈನಲ್‌ ಪಂದ್ಯವನ್ನು ನಿದ್ದೆ ಬಿಟ್ಟು ಕಣ್ತುಂಬಿಕೊಂಡರು. ಶೂಟಿಂಗ್‌ನಲ್ಲಿ ಮನು ಭಾಕರ್‌ ಹ್ಯಾಟ್ರಿಕ್‌ ಪದಕವನ್ನು ಕೆಲವೇ ಅಂಕಗಳಿಂದ ಕಳೆದುಕೊಂಡಾಗ ಇಡೀ ದೇಶವೇ ಬೇಸರಿಸಿತ್ತು. ಇವೆಲ್ಲವೂ ಭಾರತದಲ್ಲಿ “ಕ್ರೀಡೆ’ ಎಂದರೆ ಕ್ರಿಕೆಟ್‌ ಎನ್ನುವ ಕಾಲ ಬದಲಾಗಿರುವುದರ ಸಾಕ್ಷಿ ಅಲ್ಲದೇ ಇನ್ನೇನು?

ಭಾರತದಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿಗೆ ಕೊರತೆಯೇನೂ ಇಲ್ಲ. ಕೊರತೆ ಇರುವುದು ಕ್ರೀಡೆಯನ್ನು ಪ್ರೋತ್ಸಾಹಿಸುವ ಮನಸ್ಸುಗಳಿಗೆ. ಇತ್ತೀಚೆಗೆ ಈ ಕೊರತೆಯೂ ನೀಗುತ್ತಿರುವುದು ಗಮನಾರ್ಹ. ಇತ್ತೀಚಿನ ದಿನಗಳಲ್ಲಿ ಹಾಕಿ, ಕಬಡ್ಡಿಯಂತಹ ದೇಶೀಯ ಕ್ರೀಡೆಗಳಿಗೆ ದೊರೆಯಬೇಕಾದ ಮನ್ನಣೆ ದೊರೆಯುತ್ತಿದೆ. 2022ರ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ 107 ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ಇಲ್ಲಿ ಭಾರತೀಯರಿಗೆ ಅಷ್ಟಾಗಿ ಪರಿಚಯವಿಲ್ಲದ ಕ್ರೀಡೆಗಳಲ್ಲಿಯೂ ನಮ್ಮ ಕ್ರೀಡಾಪಟುಗಳು ಪದಕ ಗೆದ್ದು ಅಚ್ಚರಿ ಮೂಡಿಸಿದ್ದರು.

2017-18ರಲ್ಲಿ ಆರಂಭಿಸಲಾದ ಖೇಲೋ ಇಂಡಿಯಾ ಯೋಜನೆಯ ಮೂಲಕ ಭಾರತದಲ್ಲಿ ಗ್ರಾಮೀಣ ಮಟ್ಟದಲ್ಲಿಯೇ ಕ್ರೀಡಾಪಟು ಗಳನ್ನು ಬೆಳೆಸುವ ಕಾರ್ಯ ನಡೆಯುತ್ತಿದೆ. ಇದು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಸಾಧಿಸುವ ಛಲವನ್ನು ಮೂಡಿಸುತ್ತಿದೆ. ಹೆತ್ತವರು ತಮ್ಮ ಮಕ್ಕಳು ಕ್ರೀಡಾ ಕ್ಷೇತ್ರದಲ್ಲಿ ಬೆಳೆಯಲು ಪ್ರೋತ್ಸಾಹಿಸುವುದರ ಜತೆಗೆ ಅವರಿಗೆ ಬೆನ್ನೆಲುಬಾಗಿ ನಿಲ್ಲುತ್ತಿದ್ದಾರೆ. 2019ರಲ್ಲಿ ಕೇಂದ್ರ ಸರಕಾರ ಪರಿಚಯಿಸಿದ “ಫಿಟ್‌ ಇಂಡಿಯಾ ಅಭಿಯಾನ’ ಶಾರೀರಿಕ ಸದೃಢತೆಯ ಕುರಿತಂತೆ ದೇಶದ ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತ ಬಂದಿದೆ. ದೇಶದ ಕ್ರೀಡಾಳುಗಳು ಅದರಲ್ಲೂ ಮಹಿಳಾ ಕ್ರೀಡಾಳುಗಳು ಪುರುಷರಿಗೆ ಸರಿಸಮಾನರಾಗಿ ಸಾಧನೆಗೈಯ್ಯುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳ ಪದಕ ಪಟ್ಟಿಯಲ್ಲಿ ಭಾರತದ ಹೆಸರು ಕಾಣಿಸಿಕೊಳ್ಳತೊಡಗಿದೆ. ಸಹಜವಾಗಿಯೇ ಜನರಲ್ಲಿಯೂ ಕ್ರೀಡಾಭಿಮಾನ ಹೆಚ್ಚತೊಡಗಿದೆ. ಈ ಎಲ್ಲ ಬೆಳವಣಿಗೆಗಳು ಭಾರತದ ಕ್ರೀಡಾ ಭವಿಷ್ಯ ಉಜ್ವಲವಾಗಿದೆ ಎಂಬುದರ ದ್ಯೋತಕವಾಗಿವೆ.

Advertisement

ಹೀಗಿದ್ದೂ ದೇಶದ ಕ್ರೀಡಾ ವ್ಯವಸ್ಥೆಯಲ್ಲಿ ಇನ್ನೂ ಸಾಕಷ್ಟು ಸುಧಾರಣೆಗಳಾಗಬೇಕಿದೆ ಎನ್ನುವುದನ್ನು ಮರೆಯುವಂತಿಲ್ಲ. ನಮ್ಮ ಕ್ರೀಡಾಪಟುಗಳಿಗೆ ಅಂತಾರಾಷ್ಟ್ರೀಯ ಮಟ್ಟದ ತರಬೇತಿ ಕೊಡುವ ಕೆಲಸ ಇನ್ನಷ್ಟು ಹೆಚ್ಚು ನಡೆಯಬೇಕಿದೆ. ಪ್ರತೀ ಜಿಲ್ಲೆಯಲ್ಲಿಯೂ ಕ್ರೀಡಾ ತರಬೇತಿ ಕೇಂದ್ರ ಸ್ಥಾಪನೆಯಾದಲ್ಲಿ ಅನೇಕ ಗ್ರಾಮೀಣ ಮಟ್ಟದ ಪ್ರತಿಭೆಗಳು ಮುನ್ನೆಲೆಗೆ ಬರುತ್ತವೆ. ಶಾಲಾ ಮಟ್ಟದಲ್ಲಿಯೇ ಮಕ್ಕಳಲ್ಲಿ ಕ್ರೀಡಾಸಕ್ತಿ ಹೆಚ್ಚಿಸುವ, ಕ್ರೀಡೆಯ ಮಹತ್ವವನ್ನು ಅವರಿಗೆ ಮನವರಿಕೆ ಮಾಡುವ ಕಾರ್ಯವೂ ನಡೆಯಬೇಕಿದೆ. ಹೀಗಾದಲ್ಲಿ ಭಾರತ ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ತೋರಲು ಸಾಧ್ಯ.

ದೇಶದಲ್ಲಿ ಕ್ರೀಡೆಗೆ ವಿಶೇಷ ಮಹತ್ವ ಕೊಡುವ ಸಲುವಾಗಿಯೇ 2012ರಲ್ಲಿ ದೇಶ ಕಂಡ ಅಪ್ರತಿಮ ಹಾಕಿಪಟು ಮೇಜರ್‌ ಧ್ಯಾನ್‌ ಚಂದ್‌ ಅವರ ಜನ್ಮದಿನವಾದ ಆಗಸ್ಟ್‌ 29 ಅನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು. ಪ್ರತೀ ವರ್ಷವೂ ಕ್ರೀಡಾ ದಿನವನ್ನು ಒಂದೊಂದು ಧ್ಯೇಯದೊಂದಿಗೆ ಆಚರಿಸಲಾಗುತ್ತಿದ್ದು, “ಶಾಂತಿಯುತ ಮತ್ತು ಅಂತರ್ಗತ ಸಮಾಜಗಳ ಉತ್ತೇಜನಕ್ಕಾಗಿ ಕ್ರೀಡೆ’ ಎನ್ನುವ ಧ್ಯೇಯದೊಂದಿಗೆ ಈ ವರ್ಷದ ಕ್ರೀಡಾ ದಿನವನ್ನು ಆಚರಿಸಲಾಗುತ್ತಿದೆ. ಕ್ರೀಡೆಯ ಮೂಲಕ ಜನರನ್ನು ಒಗ್ಗೂಡಿಸುವುದು, ತಿಳಿವಳಿಕೆಯನ್ನು ಹೆಚ್ಚಿಸುವುದು ಹಾಗೂ ಸಮುದಾಯಗಳನ್ನು ಬಲಪಡಿಸುವುದೇ ಈ ಬಾರಿಯ ರಾಷ್ಟ್ರೀಯ ಕ್ರೀಡಾ ದಿನದ ಉದ್ದೇಶವಾಗಿದೆ. ಕ್ರೀಡೆ ಕೇವಲ ಪಂದ್ಯಾಟ, ಪದಕ, ಟ್ರೋಫಿಗಳಿಗೆ ಸೀಮಿತವಾಗದೆ ಸಮಾಜದಲ್ಲಿನ ಎಲ್ಲ ತೆರನಾದ ಭೇದ-ಭಾವವನ್ನು ದೂರ ಮಾಡಿ ಇಡೀ ಸಮಾಜವವನ್ನು ಬೆಸೆಯುವ ಸೇತುವಾಗಿದೆ. ಶಾರೀರಿಕ ಸದೃಢತೆಯ ಜತೆಯಲ್ಲಿ ಮಾನಸಿಕವಾಗಿಯೂ ಇದು ನಮ್ಮನ್ನು ಹೆಚ್ಚು ಉಲ್ಲಸಿತರನ್ನಾಗಿಸುತ್ತದೆ. ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರ ವರೆಗೂ ತಂತಮ್ಮ ವಯಸ್ಸಿಗನುಗುಣವಾಗಿ ಒಂದಲ್ಲ ಒಂದು ಕ್ರೀಡೆಯಲ್ಲಿ ತೊಡಗಿಕೊಂಡಲ್ಲಿ ಅದು ಜೀವನೋತ್ಸಾಹವನ್ನು ಹೆಚ್ಚಿಸುತ್ತದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿಯೇ ರಾಷ್ಟ್ರೀಯ ಕ್ರೀಡಾ ದಿನವನ್ನು ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ದೇಶದ ವಿವಿಧೆಡೆ ಆಚರಿಸಲಾಗುತ್ತದೆ. ಇದೇ ವೇಳೆ ವಿವಿಧ ಕ್ರೀಡೆಗಳಲ್ಲಿ ಸಾಧನೆಗೈದ ಕ್ರೀಡಾಳುಗಳನ್ನು ಗೌರವಿಸುವವ ಮೂಲಕ ಮುಂದಿನ ಪೀಳಿಗೆಗೆ ಪ್ರೇರಣೆಯನ್ನು ನೀಡಲಾಗುತ್ತದೆ.

ಕಳೆದ ಐದಾರು ವರ್ಷಗಳಿಂದೀಚೆಗೆ ಎಲ್ಲ ಕ್ಷೇತ್ರಗಳಂತೆ ಕ್ರೀಡಾ ಕ್ಷೇತ್ರದಲ್ಲಿಯೂ ಭಾರತ ದಾಪುಗಾಲಿಡುತ್ತಾ ಮುನ್ನುಗ್ಗುತ್ತಿದೆ. ಕ್ರಿಕೆಟ್‌ ಮಾತ್ರವಲ್ಲದೇ ಇತರ ಕ್ರೀಡೆಗಳಿಗೂ ಪ್ರೋತ್ಸಾಹ ದೊರೆಯುತ್ತಿದೆ. ನಮ್ಮ ಕ್ರೀಡಾಪಟುಗಳು ಸಾಧನೆ ಶಿಖರವೇರಲು ಕಠಿನ ಪ್ರಯತ್ನ ನಡೆಸುತ್ತಿದ್ದಾರೆ. ರಾಷ್ಟ್ರೀಯ ಕ್ರೀಡಾ ದಿನದ ಈ ಸಂದರ್ಭದಲ್ಲಿ ಭಾರತದ ಕ್ರೀಡಾ ಪತಾಕೆ ಇನ್ನಷ್ಟು ಎತ್ತರಕ್ಕೆ ಹಾರಲಿ ಎಂದು ಹಾರೈಸೋಣ.
– ಸುಶ್ಮಿತಾ, ನೇರಳಕಟ್ಟೆ

Advertisement

Udayavani is now on Telegram. Click here to join our channel and stay updated with the latest news.