Advertisement
ಹೌದು, 53 ಕೆ.ಜಿ. ಕುಸ್ತಿ ವಿಭಾಗದಲ್ಲಿ ಫೈನಲ್ ತಲುಪಿ ಇತಿಹಾಸ ರಚಿಸುವ ಅಂಚಿನಲ್ಲಿ ವಿನೇಶ್ ಫೋಗಾಟ್ 100 ಗ್ರಾಂ ತೂಕ ಹೆಚ್ಚಿದ್ದ ಕಾರಣ 53 ಕೆ.ಜಿ. ಕುಸ್ತಿ ವಿಭಾಗದಲ್ಲಿ ಅನರ್ಹಗೊಂಡರು. ಆ ಸಂದರ್ಭ ದಲ್ಲಿ ಭಾರತದ ಕ್ರೀಡಾಭಿಮಾನಿಗಳು ಆಕೆಯೊಂದಿಗೆ ನಿಂತ ಪರಿ ನಿಜಕ್ಕೂ ಶ್ಲಾಘನೀಯ. “ನಿಯಮ ಎಂದರೆ ಎಲ್ಲರಿಗೂ ಒಂದೇ’ ಎನ್ನುವ ಕಟುಸತ್ಯದ ನಡುವೆಯೂ “ನಿನ್ನ ಜತೆಗೆ ನಾವಿದ್ದೇವೆ’ ಎಂದು ಭಾರತೀಯರು ಆಕೆಗೆ ಸಾಥ್ ನೀಡಿದ್ದರು.
Related Articles
Advertisement
ಹೀಗಿದ್ದೂ ದೇಶದ ಕ್ರೀಡಾ ವ್ಯವಸ್ಥೆಯಲ್ಲಿ ಇನ್ನೂ ಸಾಕಷ್ಟು ಸುಧಾರಣೆಗಳಾಗಬೇಕಿದೆ ಎನ್ನುವುದನ್ನು ಮರೆಯುವಂತಿಲ್ಲ. ನಮ್ಮ ಕ್ರೀಡಾಪಟುಗಳಿಗೆ ಅಂತಾರಾಷ್ಟ್ರೀಯ ಮಟ್ಟದ ತರಬೇತಿ ಕೊಡುವ ಕೆಲಸ ಇನ್ನಷ್ಟು ಹೆಚ್ಚು ನಡೆಯಬೇಕಿದೆ. ಪ್ರತೀ ಜಿಲ್ಲೆಯಲ್ಲಿಯೂ ಕ್ರೀಡಾ ತರಬೇತಿ ಕೇಂದ್ರ ಸ್ಥಾಪನೆಯಾದಲ್ಲಿ ಅನೇಕ ಗ್ರಾಮೀಣ ಮಟ್ಟದ ಪ್ರತಿಭೆಗಳು ಮುನ್ನೆಲೆಗೆ ಬರುತ್ತವೆ. ಶಾಲಾ ಮಟ್ಟದಲ್ಲಿಯೇ ಮಕ್ಕಳಲ್ಲಿ ಕ್ರೀಡಾಸಕ್ತಿ ಹೆಚ್ಚಿಸುವ, ಕ್ರೀಡೆಯ ಮಹತ್ವವನ್ನು ಅವರಿಗೆ ಮನವರಿಕೆ ಮಾಡುವ ಕಾರ್ಯವೂ ನಡೆಯಬೇಕಿದೆ. ಹೀಗಾದಲ್ಲಿ ಭಾರತ ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ತೋರಲು ಸಾಧ್ಯ.
ದೇಶದಲ್ಲಿ ಕ್ರೀಡೆಗೆ ವಿಶೇಷ ಮಹತ್ವ ಕೊಡುವ ಸಲುವಾಗಿಯೇ 2012ರಲ್ಲಿ ದೇಶ ಕಂಡ ಅಪ್ರತಿಮ ಹಾಕಿಪಟು ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನವಾದ ಆಗಸ್ಟ್ 29 ಅನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು. ಪ್ರತೀ ವರ್ಷವೂ ಕ್ರೀಡಾ ದಿನವನ್ನು ಒಂದೊಂದು ಧ್ಯೇಯದೊಂದಿಗೆ ಆಚರಿಸಲಾಗುತ್ತಿದ್ದು, “ಶಾಂತಿಯುತ ಮತ್ತು ಅಂತರ್ಗತ ಸಮಾಜಗಳ ಉತ್ತೇಜನಕ್ಕಾಗಿ ಕ್ರೀಡೆ’ ಎನ್ನುವ ಧ್ಯೇಯದೊಂದಿಗೆ ಈ ವರ್ಷದ ಕ್ರೀಡಾ ದಿನವನ್ನು ಆಚರಿಸಲಾಗುತ್ತಿದೆ. ಕ್ರೀಡೆಯ ಮೂಲಕ ಜನರನ್ನು ಒಗ್ಗೂಡಿಸುವುದು, ತಿಳಿವಳಿಕೆಯನ್ನು ಹೆಚ್ಚಿಸುವುದು ಹಾಗೂ ಸಮುದಾಯಗಳನ್ನು ಬಲಪಡಿಸುವುದೇ ಈ ಬಾರಿಯ ರಾಷ್ಟ್ರೀಯ ಕ್ರೀಡಾ ದಿನದ ಉದ್ದೇಶವಾಗಿದೆ. ಕ್ರೀಡೆ ಕೇವಲ ಪಂದ್ಯಾಟ, ಪದಕ, ಟ್ರೋಫಿಗಳಿಗೆ ಸೀಮಿತವಾಗದೆ ಸಮಾಜದಲ್ಲಿನ ಎಲ್ಲ ತೆರನಾದ ಭೇದ-ಭಾವವನ್ನು ದೂರ ಮಾಡಿ ಇಡೀ ಸಮಾಜವವನ್ನು ಬೆಸೆಯುವ ಸೇತುವಾಗಿದೆ. ಶಾರೀರಿಕ ಸದೃಢತೆಯ ಜತೆಯಲ್ಲಿ ಮಾನಸಿಕವಾಗಿಯೂ ಇದು ನಮ್ಮನ್ನು ಹೆಚ್ಚು ಉಲ್ಲಸಿತರನ್ನಾಗಿಸುತ್ತದೆ. ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರ ವರೆಗೂ ತಂತಮ್ಮ ವಯಸ್ಸಿಗನುಗುಣವಾಗಿ ಒಂದಲ್ಲ ಒಂದು ಕ್ರೀಡೆಯಲ್ಲಿ ತೊಡಗಿಕೊಂಡಲ್ಲಿ ಅದು ಜೀವನೋತ್ಸಾಹವನ್ನು ಹೆಚ್ಚಿಸುತ್ತದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿಯೇ ರಾಷ್ಟ್ರೀಯ ಕ್ರೀಡಾ ದಿನವನ್ನು ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ದೇಶದ ವಿವಿಧೆಡೆ ಆಚರಿಸಲಾಗುತ್ತದೆ. ಇದೇ ವೇಳೆ ವಿವಿಧ ಕ್ರೀಡೆಗಳಲ್ಲಿ ಸಾಧನೆಗೈದ ಕ್ರೀಡಾಳುಗಳನ್ನು ಗೌರವಿಸುವವ ಮೂಲಕ ಮುಂದಿನ ಪೀಳಿಗೆಗೆ ಪ್ರೇರಣೆಯನ್ನು ನೀಡಲಾಗುತ್ತದೆ.
ಕಳೆದ ಐದಾರು ವರ್ಷಗಳಿಂದೀಚೆಗೆ ಎಲ್ಲ ಕ್ಷೇತ್ರಗಳಂತೆ ಕ್ರೀಡಾ ಕ್ಷೇತ್ರದಲ್ಲಿಯೂ ಭಾರತ ದಾಪುಗಾಲಿಡುತ್ತಾ ಮುನ್ನುಗ್ಗುತ್ತಿದೆ. ಕ್ರಿಕೆಟ್ ಮಾತ್ರವಲ್ಲದೇ ಇತರ ಕ್ರೀಡೆಗಳಿಗೂ ಪ್ರೋತ್ಸಾಹ ದೊರೆಯುತ್ತಿದೆ. ನಮ್ಮ ಕ್ರೀಡಾಪಟುಗಳು ಸಾಧನೆ ಶಿಖರವೇರಲು ಕಠಿನ ಪ್ರಯತ್ನ ನಡೆಸುತ್ತಿದ್ದಾರೆ. ರಾಷ್ಟ್ರೀಯ ಕ್ರೀಡಾ ದಿನದ ಈ ಸಂದರ್ಭದಲ್ಲಿ ಭಾರತದ ಕ್ರೀಡಾ ಪತಾಕೆ ಇನ್ನಷ್ಟು ಎತ್ತರಕ್ಕೆ ಹಾರಲಿ ಎಂದು ಹಾರೈಸೋಣ.– ಸುಶ್ಮಿತಾ, ನೇರಳಕಟ್ಟೆ