ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಸದಾ ಕಾಲು ಕೆರೆದುಕೊಂಡು ಬರುತ್ತಿರುವ ಚೀನಕ್ಕೆ ಕೇಂದ್ರ ಸರಕಾರ ತಕ್ಕ ಪಾಠವನ್ನೇ ಕಲಿಸಿದೆ. ಚೀನದಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್‌ನ ಉದ್ಘಾಟನ ಮತ್ತು ಸಮಾರೋಪ ಸಮಾರಂಭಗಳನ್ನು ಭಾರತ ಬಹಿಷ್ಕರಿಸಿದೆ. ಒಲಿಂಪಿಕ್ಸ್ ಜ್ಯೋತಿಯನ್ನು ಗಾಲ್ವಾನ್ ಘರ್ಷಣೆಯಲ್ಲಿ ಭಾಗಿಯಾಗಿದ್ದ ಚೀನದ ಸೈನಿಕ ಹಿಡಿದು ಸಾಗಿರುವುದು ಜಗತ್ತಿನಾದ್ಯಂತ ಆಕ್ರೋಶ ತರಿಸಿದೆ. ಇದೇ ಕಾರಣದಿಂದ ಉದ್ಘಾಟನ ಮತ್ತು ಸಮಾರೋಪ ಸಮಾರಂಭಗಳನ್ನು ಬಹಿಷ್ಕರಿಸಿರುವುದಾಗಿ ಕೇಂದ್ರ ಸರಕಾರ ಹೇಳಿದೆ.
ಚೀನದ ವಿರುದ್ಧ ಕೇಂದ್ರ ಸರಕಾರದ ಈ ಕ್ರಮ ಸ್ವಾಗತಾರ್ಹವೇ ಸರಿ. ತಾನು ಮಾಡಿದ್ದೇ ಸರಿ ಎಂಬ ನೆರೆ ರಾಷ್ಟ್ರದ ಧೋರಣೆಯನ್ನು ಖಂಡಿಸದೇ ಹೋಗುವುದು ತಪ್ಪಾದೀತು. ಅಲ್ಲದೆ ಚೀನದ ವಿರುದ್ಧ ಇಂಥ ಕಠಿನ ಕ್ರಮ ತೆಗೆದುಕೊಳ್ಳದೇ ಹೋದರೆ ನಾವು ದುರ್ಬಲ ಎಂದು ಅನ್ನಿಸಿಕೊಳ್ಳಬೇಕಾಗುತ್ತದೆ. ಹೀಗಾಗಿಯೇ ಚಳಿಗಾಲದ ಒಲಂಪಿಕ್ಸ್‌ನ ಎರಡು ಸಮಾರಂಭ ಬಹಿಷ್ಕರಿಸಿದ್ದು ಉತ್ತಮವೇ ಆಗಿದೆ.
ಗಾಲ್ವಾನ್ ಘರ್ಷಣೆಯಲ್ಲಿ ಆರಂಭವಾದ ಭಾರತ ಮತ್ತು ಚೀನ ನಡುವಿನ ಬಿಕ್ಕಟ್ಟು ಇನ್ನೂ ಸರಿಯಾಗಿಲ್ಲ. ಈಗಾಗಲೇ ಕಮಾಂಡರ್ ಮಟ್ಟದ 14 ಸುತ್ತಿನ ಸಭೆಗಳು ಮುಗಿದಿದ್ದು, ಯಾವುದೇ ಫಲಪ್ರದವಾಗಿಲ್ಲ. ಎಲ್ಲ ಮಾತುಕತೆಗಳೂ ನಾ ಕೊಡೆ, ನೀ ಬಿಡೆ ಎಂಬಂತಾಗಿವೆ. ಜತೆಗೆ ವಾಸ್ತವ ರೇಖೆಯುದ್ಧಕ್ಕೂ ಚೀನದ ಆಟಾಟೋಪಗಳು ನಡೆಯುತ್ತಲೇ ಇವೆ. ಒಂದು ಕಡೆ ತನ್ನ ಗಡಿಯೊಳಗೆ ಮಾದರಿ ಹಳ್ಳಿಗಳ ನಿರ್ಮಾಣ ಮಾಡುವುದು, ರಸ್ತೆ ನಿರ್ಮಾಣ ಮಾಡುವುದು, ಮೂಲಸೌಕರ್ಯ ಹೆಚ್ಚಿಸುವ ಕೆಲಸಗಳನ್ನು ಮಾಡುತ್ತಲೇ ಇದೆ. ಕೇವಲ ಭಾರತಕ್ಕಷ್ಟೇ ಅಲ್ಲ, ಭೂತಾನ್ ದೇಶದ ಒಳಗೂ ನುಗ್ಗಿ ಅಲ್ಲೂ ಕಿರಿಕ್ ಮಾಡುತ್ತಲೇ ಇದೆ. ಒಟ್ಟಾರೆಯಾಗಿ ಹೇಳುವುದಾದರೆ ಚೀನ ನೆರೆಯ ದೇಶಗಳಿಗೆ ಹೊರೆಯಾಗಿದೆಯೇ ಹೊರತು, ಬೇರೇನೂ ಅಲ್ಲ.
ಇಂಥ ಸಂದರ್ಭದಲ್ಲಿ ಚೀನದ ದುಷ್ಕೃತ್ಯಗಳನ್ನು ಜಗತ್ತಿನ ಮುಂದೆ ತೆರೆದಿಡಲೇಬೇಕಾದ ಅನಿವಾರ್ಯತೆಯೂ ಭಾರತದ ಮುಂದಿದೆ. ಗಾಲ್ವಾನ್ ಘರ್ಷಣೆ ಸಂದರ್ಭದಲ್ಲಿ ಸುಖಾಸುಮ್ಮನೆ ಕಾಲುಕೆರೆದುಕೊಂಡು ಜಗಳಕ್ಕೆ ಬಂದಿದ್ದ ಚೀನ, ದೊಡ್ಡ ಪೆಟ್ಟನ್ನೂ ತಿಂದಿದೆ. ಜತೆಗೆ ಅಂದು ಈ ಘರ್ಷಣೆಗೆ ಕಾರಣವಾದ ಸೈನಿಕನಿಗೆ ಒಲಿಂಪಿಕ್ಸ್ ಜ್ಯೋತಿ ಹಿಡಿಯುವಂಥ ಗೌರವ ಕೊಟ್ಟರೆ ಸಹಿಸಲು ಸಾಧ್ಯವೇ ಇಲ್ಲ. ಹೀಗಾಗಿಯೇ ಒಲಿಂಪಿಕ್ಸ್ ಸಮಾರಂಭಗಳಿಗೆ ನಿಷೇಧ ಹೇರಿದರೆ, ಇಡೀ ಜಗತ್ತಿಗೇ ಚೀನದ ಕೃತ್ಯವೇನು? ಭಾರತವೇಕೆ ಇಂಥ ಕಠಿನ ಕ್ರಮ ತೆಗೆದುಕೊಂಡಿತು ಎಂಬ ಸಂದೇಶ ರವಾನೆಯಾಗುತ್ತದೆ.
ಈ ಎಲ್ಲ ಸಂಗತಿಗಳ ನಡುವೆಯೇ 2020ರಲ್ಲಿ ನಡೆದಿದ್ದ ಗಾಲ್ವಾನ್ ಘರ್ಷಣೆ ವೇಳೆ ತನ್ನ ಕಡೆ ಎಷ್ಟು ಮಂದಿ ಸತ್ತಿದ್ದಾರೆ ಎಂಬ ಮಾಹಿತಿಯನ್ನೇ ಚೀನ ನೀಡಿರಲಿಲ್ಲ. ಅಲ್ಲದೆ ನಾಲ್ವರು ಮಾತ್ರ ಮೃತರಾಗಿದ್ದರು ಎಂದು ನಂತರದಲ್ಲಿ ಹೇಳಿಕೊಂಡಿತ್ತು. ಈಗ ಆಸ್ಟ್ರೇಲಿಯಾದ ಪತ್ರಿಕೆಯೊಂದು ಗಾಲ್ವಾನ್ ಘರ್ಷಣೆಯಲ್ಲಿ 38 ಚೀನ ಸೈನಿಕರು ಸತ್ತಿದ್ದಾರೆ ಎಂದು ಸುದ್ದಿ ಪ್ರಕಟಿಸಿದೆ. ಇದು ತನಿಖಾ ವರದಿಯಾಗಿದ್ದು, ಅಲ್ಲಿನ ಸ್ಥಳೀಯರು, ಪತ್ರಿಕೆಗಳು, ಸಾಮಾಜಿಕ ಜಾಲತಾಣಗಳಲ್ಲಿನ ವರದಿ ಆಧರಿಸಿ ಈ ಸುದ್ದಿ ಮಾಡಲಾಗಿದೆ. ಈ ಮೂಲಕ ಗಾಲ್ವಾನ್ ಘರ್ಷಣೆಯ ಬಗ್ಗೆ ಸುಳ್ಳು ಹೇಳುತ್ತಲೇ ಬಂದಿದ್ದ ಚೀನದ ಮುಖಕ್ಕೆ ಹೊಡೆದಂತಾಗಿದೆ. ಅಲ್ಲದೆ, ಭಾರತೀಯ ಯೋಧರ ಮುಂದೆ ಚೀನ ಆಟ ನಡೆಯುವುದಿಲ್ಲ ಎಂಬುದು ಜಗತ್ತಿಗೆ ತೋರಿಸಿದಂತಾಗಿದೆ.