ನವದೆಹಲಿ: ರಸಗೊಬ್ಬರಗಳನ್ನು ಸ್ಥಳೀಯವಾಗಿಯೇ ಉತ್ಪಾದನೆ ಮಾಡುವ ಮತ್ತು ಆ ಮೂಲಕ ಆಮದಿನ ಮೇಲಿನ ಅವಲಂಬನೆಯನ್ನು ತಗ್ಗಿಸುವ ಉದ್ದೇಶದೊಂದಿಗೆ ರಾಷ್ಟ್ರೀಯ ನೀತಿಯೊಂದನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಜತೆಗೆ, ಈ ಯೋಜನೆಯ ಮಾರ್ಗಸೂಚಿಯ ಕುರಿತು ಮುಂಬರುವ ಬಜೆಟ್‌ನಲ್ಲಿ ಘೋಷಿಸುವ ಸಾಧ್ಯತೆಯಿದೆ.
ರಾಷ್ಟ್ರೀಯ ರಸಗೊಬ್ಬರ ಕರಡು ನೀತಿ ರೂಪಿಸುವ ಕೆಲಸ ಪ್ರಗತಿಯಲ್ಲಿದ್ದು, ರಸಗೊಬ್ಬರ ಘಟಕಗಳ ಸ್ಥಾಪನೆಗೆ ವಿಶೇಷ ಪ್ರೋತ್ಸಾಹ ಧನ, ಕಚ್ಚಾವಸ್ತುಗಳ ಆಮದು ಶುಲ್ಕ ಇಳಿಕೆ, ಸಾವಯವ ರಸಗೊಬ್ಬರಗಳಿಗೆ ಉತ್ತೇಜನ ಮುಂತಾದ ಅಂಶಗಳು ಇದರಲ್ಲಿ ಒಳಗೊಂಡಿರಲಿವೆ ಎಂದು ಮೂಲಗಳು ತಿಳಿಸಿವೆ.
ಆಮದು ಮಾಡಲಾಗುವ ಫಾಸಾರಿಕ್ ಆಮ್ಲ ಮತ್ತು ಅಮೋನಿಯಾದ ಆಮದು ಶುಲ್ಕ ಇಳಿಕೆ ಮಾಡಿ, ದೇಶೀಯ ರಸಗೊಬ್ಬರ ಉತ್ಪಾದಕರ ನಡುವೆ ಪೈಪೋಟಿ ಉಂಟಾಗುವಂತೆ ಮಾಡಬೇಕು ಎಂಬುದು ರಸಗೊಬ್ಬರ ಕ್ಷೇತ್ರದ ದೀರ್ಘಕಾಲದ ಬೇಡಿಕೆಯಾಗಿದೆ. ಕೃಷಿ ವಲಯದ ಪ್ರತಿನಿಧಿಗಳು ಕೇಂದ್ರ ಹಣಕಾಸು ಸಚಿವರೊಂದಿಗೆ ನಡೆಸಿದ ಬಜೆಟ್‌ಪೂರ್ವ ಸಮಾಲೋಚನೆಯಲ್ಲೂ ಈ ಬೇಡಿಕೆಯನ್ನು ಮುಂದಿಡಲಾಗಿತ್ತು.
ಸಾವಯವ ರಸಗೊಬ್ಬರ ಕೈಗಾರಿಕೆಗಳ ಉತ್ತೇಜನಕ್ಕೆ ಪ್ರೋತ್ಸಾಹ ಧನ ಒದಗಿಸುವ ಪ್ರಸ್ತಾವನೆಯೂ ಸರ್ಕಾರದ ಮುಂದಿದೆ. ಈಗಾಗಲೇ ನೀತಿ ಆಯೋಗ ಸಾವಯವ ರಸಗೊಬ್ಬರ ಉತ್ಪಾದನೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದೆ. ಆಯೋಗದ ಸದಸ್ಯ ರಮೇಶ್ ಚಾಂದ್ ಅವರ ನೇತೃತ್ವದಲ್ಲಿ ಕಾರ್ಯಪಡೆಯೊಂದನ್ನು ರಚಿಸಲಾಗಿದ್ದು, ಅದು ಸ್ಥಳೀಯ ಉತ್ಪಾದನೆಯ ಸ್ಥಿತಿಗತಿಯನ್ನು ಪರಿಶೀಲನೆ ನಡೆಸಲಿದೆ.
ಜಾನುವಾರು ಆರ್ಥಿಕತೆಯನ್ನು ಉತ್ತೇಜಿಸುವ ನೀತಿ, ಇವುಗಳನ್ನು ಆರ್ಥಿಕ ಆಸ್ತಿಯನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲೂ ಕಾರ್ಯಪಡೆ ಹೆಜ್ಜೆಯಿಡಲಿದೆ. 2021-22ನೇ ಸಾಲಿನಲ್ಲಿ 1.62 ಲಕ್ಷ ಕೋಟಿ ರೂ. ಮೊತ್ತವನ್ನು ಕೇಂದ್ರ ಸರ್ಕಾರ ರಸಗೊಬ್ಬರ ಸಬ್ಸಿಡಿಗಾಗಿ ವಿನಿಯೋಗಿಸಿದೆ. 2019-20ನೇ ಸಾಲಿಗೆ ಹೋಲಿಕೆ ಮಾಡಿದರೆ 83 ಸಾವಿರ ಕೋಟಿ ರೂ. ಹೆಚ್ಚಿನ ಮೊತ್ತವನ್ನು ಸರ್ಕಾರ ವಿನಿಯೋಗಿಸಿದೆ.