ಮೈಸೂರು: ನಾವು ಮಾಡುವ ಕೆಲಸದಲ್ಲಿ ನಮ್ಮ ಶ್ರೇಷ್ಠತೆಯನ್ನು ಗಳಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಬಿ.ಪಿ. ದೇವಮಾನೆ ಅಭಿಪ್ರಾಯಪಟ್ಟರು.
ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಇಂಡಿಯನ್ ಡೆಯಟೆ ಟಿಕ್ ಅಸೋಷಿಯೇಷನ್ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಮೂಢನಂಬಿಕೆಯನ್ನು ಬಿಟ್ಟು ವೈಜ್ಞಾನಿಕ ವಿಚಾರ ಗಳ ಬಗ್ಗೆ ಹೆಚ್ಚು ಒತ್ತು ಕೊಡಬೇಕು. ಸಂವಿಧಾನವು ಮಹಿಳೆಯರಿಗೆ ಉತ್ತಮ ಶಿಕ್ಷಣ ಪಡೆಯುವ ಹಕ್ಕನ್ನು ನೀಡಿದ್ದು, ಪ್ರಸ್ತುತ ಮಹಿಳೆಯರು ಉನ್ನತ ಮಟ್ಟದ ಅಧಿಕಾರಿಗಳು, ಮಂತ್ರಿಗಳು, ಪ್ರಧಾನ ಮಂತ್ರಿಗಳಾಗುತ್ತಿದ್ದಾರೆ ಎಂದರೆ ಸಂವಿಧಾನವು ಕೊಟ್ಟಿರುವ ಕೊಡುಗೆ ಎಂದರು.
ಸಂವಿಧಾನವು ಮಹಿಳೆಯರಿಗೆ ಸಮಾನತೆಯನ್ನು ನೀಡುವುದಲ್ಲದೆ, ಸಾಮಾಜಿಕ, ಆರ್ಥಿಕ, ಶಿಕ್ಷಣ, ರಾಜಕೀಯ ಹಾಗೂ ಮೂಲಭೂತ ಹಕ್ಕುಗಳನ್ನು ಸಮಾನವಾಗಿ ನೀಡಿದೆ. ಮಹಿಳೆಯರಿಗೆ ಉದ್ಯೋಗಕ್ಕೆ ಸಂಬಂಧಿಸಿದಂತೆ ಎಲ್ಲಾ ಸಮಾನ ಅವಕಾಶಗಳನ್ನು ಕಲ್ಪಿಸಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್. ವೆಂಕಟೇಶ್ ಮಾತನಾಡಿ, ಮಕ್ಕಳಿಗೆ ಯಾವ ರೀತಿ ಪೌಷ್ಟಿಕ ಆಹಾರವನ್ನು ಸೇವಿಸಬೇಕು ಎಂಬುದನ್ನು ತಿಳಿಸಿ, ಜಂತುಹುಳು ಮುಕ್ತ ಹಾಗೂ ಆರೋಗ್ಯವಂತ ಮಕ್ಕಳಿಗಾಗಿ ಪೌಷ್ಟಿಕ ಆಹಾರ ನೀಡುವುದರ ಬಗ್ಗೆ ತಾಯಂದಿರು ಪಣ ತೊಡಬೇಕು. ಕೋವಿಡ್-19 ಭಯ ಬಿಟ್ಟು ಸುರಕ್ಷಿತವಾಗಿ ನಾವು ಕೆಲಸ ಮಾಡಬೇಕು. ದಿನನಿತ್ಯ ನಾವು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಆರೋಗ್ಯವನ್ನ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಕೆ.ಪದ್ಮಾ, ಜಿಲ್ಲಾ ನಿರೂಪಣಾಧಿಕಾರಿ ಗೀತಾಲಕ್ಷ್ಮೀ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರ್.ಸಿ.ಎಚ್ ಅಧಿಕಾರಿ ಡಾ. ರವಿ, ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎ.ಆರ್. ಮಧುಸೂದನ್, ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುಳಾ ವಿ.ಪಾಟೀಲ್, ಕೆ.ಆರ್.ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಮತಾ ಇದ್ದರು.