Advertisement

ದ.ಕ.ದಲ್ಲಿ 600ಕ್ಕೂ ಅಧಿಕ ಪ್ರಕರಣ ಇತ್ಯರ್ಥ ನಿರೀಕ್ಷೆ

01:59 AM Feb 06, 2020 | mahesh |

ಮಂಗಳೂರು: ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್‌ ಫೆ. 8ರಂದು ಮಂಗಳೂರಿನ ಜಿಲ್ಲಾ ನ್ಯಾಯಾಲಯ ಮತ್ತು ಆಯಾ ತಾಲೂಕು ಕೇಂದ್ರಗಳ ನ್ಯಾಯಾಲಯಗಳಲ್ಲಿ ನಡೆಯಲಿದೆ.

Advertisement

ಬೆಳಗ್ಗೆ 10.30ರಿಂದ ಸಂಜೆ 6ರ ವರೆಗೆ ದೇಶಾದ್ಯಂತ ಎಲ್ಲ ನ್ಯಾಯಾಲಯಗಳಲ್ಲಿ ಏಕಕಾಲಕ್ಕೆ ಲೋಕ ಅದಾಲತ್‌ ನಡೆಯಲಿದೆ. ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡ ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಇಲ್ಲ. ಇತ್ಯರ್ಥಗೊಂಡ ಪ್ರಕರಣಗಳಲ್ಲಿ ಕೋರ್ಟ್‌ ಫೀ ಮೊತ್ತವನ್ನು ಹಿಂದಿರುಗಿ ನೀಡಲಾಗುತ್ತದೆ ಎಂದು ದ.ಕ. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಕಡ್ಲುರು ಸತ್ಯನಾರಾಯಣಾಚಾರ್ಯ ಬುಧವಾರ ಜಿಲ್ಲಾ ನ್ಯಾಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಳೆದ ವರ್ಷ ಒಟ್ಟು 4,820 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇದರಲ್ಲಿ 15.31 ಕೋ.ರೂ. ಮೊತ್ತದ ಪರಿಹಾರ ನೀಡಲಾಗಿದೆ. ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಸಂಬಂಧಿಸಿ 476 ಪ್ರಕರಣಗಳಲ್ಲಿ 6.15 ಕೋ. ರೂ. ಮೊತ್ತ ಬಾಕಿ ವಸೂಲಿ ಮಾಡಲಾಗಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯ 42 ನ್ಯಾಯಾಲಯಗಳಲ್ಲಿ ಒಟ್ಟು 51 ಸಾವಿರ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ. ಲೋಕ ಅದಾಲತ್‌ ಮೂಲಕ ಇತ್ಯರ್ಥ ಪಡಿಸುವ ಸಾಧ್ಯತೆಯ ಬಗ್ಗೆ 6 ಸಾವಿರ ಪ್ರಕರಣಗಳಿಗೆ ಸಂಬಂಧಿಸಿ ನೋಟಿಸ್‌ ಕಳುಹಿಸಲಾಗಿತ್ತು. ಫೆ. 8ರ ಲೋಕ ಅದಾಲತ್‌ನಲ್ಲಿ ಇತ್ಯರ್ಥ ಪಡಿಸಲು ಈಗಾಗಲೇ 618 ಪ್ರಕರಣಗಳು ಬಂದಿವೆ. ಇವುಗಳಲ್ಲಿ 300 ಕ್ರಿಮಿನಲ್‌ ಕೇಸುಗಳು. ಚೆಕ್‌ ಅಮಾನ್ಯ ಸೇರಿದಂತೆ ಕೌಟುಂಬಿಕ ವಿವಾದ ಕೇಸುಗಳೂ ಇವೆ. ಲೋಕ ಅದಾಲತ್‌ ಮೂಲಕ ಪ್ರಕರಣ ಇತ್ಯರ್ಥಪಡಿಸಲು ಇಚ್ಛಿಸುವವರು ಇನ್ನೂ ಮುಂದೆ ಬರ ಬಹುದು ಎಂದು ವಿವರಿಸಿದರು.

ಇಂದು ರಕ್ತದಾನ ಶಿಬಿರ
ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಮಂಗಳೂರು ಮತ್ತು ರೆಡ್‌ ಕ್ರಾಸ್‌ ದ.ಕ. ಜಿಲ್ಲಾ ಘಟಕದಿಂದ ಫೆ. 6ರಂದು ಬೆಳಗ್ಗೆ 9ರಿಂದ ಮಂಗಳೂರು ನ್ಯಾಯಾಲಯ ಆವರಣದಲ್ಲಿ ರಕ್ತದಾನ ಶಿಬಿರ ನಡೆಯಲಿದೆ ಎಂದು ನ್ಯಾಯಾಧೀಶರು ತಿಳಿಸಿದರು.

Advertisement

1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಶಾರದಾ, ಪ್ರಧಾನ ಸಿವಿಲ್‌ ನ್ಯಾಯಾಧೀಶ ಎ.ಜಿ. ಗಂಗಾಧರ್‌, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎನ್‌.ಎನ್‌. ಹೆಗ್ಡೆ, ಪ್ರ. ಕಾರ್ಯದರ್ಶಿ ರಾಘವೇಂದ್ರ ಉಪಸ್ಥಿತರಿದ್ದರು.

ಸೌಹಾರ್ದ ಇತ್ಯರ್ಥಕ್ಕೆ ವೇದಿಕೆ
ವ್ಯಾಜ್ಯಪೂರ್ವ ಪ್ರಕರಣ, ಕೋರ್ಟಲ್ಲಿ ಬಾಕಿ ಇರುವ ಪ್ರಕರಣ ಸೇರಿದಂತೆ ಎಲ್ಲ ರೀತಿಯ ಪ್ರಕರಣಗಳಲ್ಲಿ ಇತ್ತಂಡ ಬಯಸಿದಲ್ಲಿ ಸೌಹಾರ್ದ ಇತ್ಯರ್ಥಕ್ಕೆ ಕೋರ್ಟ್‌ ಸಿದ್ಧವಿದೆ. ಬಲವಂತಕ್ಕೆ ಅವಕಾಶ ಇಲ್ಲ. ಸ್ವಯಂ ಆಗಿ ಪ್ರಕರಣ ಶೀಘ್ರ ಇತ್ಯರ್ಥಗೊಳಿಸಲು ಇದು ಉತ್ತಮ ವೇದಿಕೆ. ಪ್ರಕರಣ ಇತ್ಯರ್ಥಗೊಳಿಸುವ ಬಗ್ಗೆ ಲೋಕ ಅದಾಲತ್‌ ಆರಂಭವಾಗುವ ಮುಂಚಿತವಾಗಿ ಜಿಲ್ಲಾ ಅಥವಾ ತಾಲೂಕು ಕಾನೂನು ಸೇವಾ ಪ್ರಾಧಿಕಾರಕ್ಕೆ ಮನವಿ ಮಾಡಿಕೊಳ್ಳಬಹುದು ಎಂದು ಕಡ್ಲುರು ಸತ್ಯನಾರಾಯಣಾಚಾರ್ಯ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next