ಹುಬ್ಬಳ್ಳಿ: ಇಂದಿನ ದಿನಮಾನಗಳಲ್ಲಿ ವೈದ್ಯಕೀಯ ಕ್ಷೇತ್ರವು ತುಂಬಾ ಮುಂದುವರಿಯುತ್ತಿದ್ದು, ವಿದ್ಯಾರ್ಥಿಗಳು ಅದಕ್ಕೆ ಹೊಂದಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು ಎಂದು ಕಿಮ್ಸ್ ನಿರ್ದೇಶಕ ಡಾ| ರಾಮಲಿಂಗಪ್ಪ ಅಂಟರತಾನಿ ಹೇಳಿದರು.
ಕಿಮ್ಸ್ ಸಭಾಂಗಣದಲ್ಲಿ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್)ಯ ವಿದ್ಯಾರ್ಥಿಗಳ ಸಂಘ ಹಮ್ಮಿಕೊಂಡ ರಾಷ್ಟ್ರಮಟ್ಟದ ಪಿಯು ವೈದ್ಯಕೀಯ ಸಮ್ಮೇಳನ “ಸೈನೆರ್ಗಿಯಾ-21′ ಉದ್ಘಾಟಿಸಿ ಮಾತನಾಡಿದರು.
ಎನ್‌ಎಂಸಿ ಪ್ರಕಾರ ಎಲ್ಲ ವ್ಯವಸ್ಥೆ ಬದಲಾಗಿದೆ. ಫೌಂಡೇಶನ್ ಕೋರ್ಸ್ ಸೇರಿದಂತೆ ಪ್ರಥಮ ವರ್ಷದಿಂದಲೇ ಹೊಸ ಕೋರ್ಸ್‌ಗಳು ಆರಂಭವಾಗಿವೆ. ಇವುಗಳ ಬಗ್ಗೆ ಹೆಚ್ಚಿನ ಗಮನಹರಿಸಿ. ಎರಡು ದಿನಗಳ ಕಾರ್ಯಾಗಾರವು ಕಲಿಕೆಯಲ್ಲಿನ ಪ್ರಾಯೋಗಿಕಕ್ಕೆ ಹೆಚ್ಚಿನ ಉಪಯುಕ್ತವಾಗುತ್ತವೆ. ಜೊತೆಗೆ ಪರೀಕ್ಷೆಗೂ ಸಹಕಾರಿ ಆಗುತ್ತದೆ. ಮುಂದಿನ ಅಧ್ಯಯನ, ಭವಿಷ್ಯದಲ್ಲಿ ಅವಶ್ಯವಾದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ಆಸಕ್ತಿದಾಯಕವಾಗುತ್ತದೆ ಎಂದರು.
ಕಿಮ್ಸ್ ಒಟ್ಟು 2000 ಬೆಡ್ ಸಾಮರ್ಥ್ಯವುಳ್ಳ ಆಸ್ಪತ್ರೆಯಾಗಿದ್ದು, 1500 ಆಕ್ಸಿಜನ್ ಬೆಡ್ ಗಳಿವೆ. 200 ವೆಂಟಿಲೇಟರ್‌ಗಳಿವೆ. ಎಂಸಿಎಚ್, ಕಾರ್ಡಿಯಾಲಜಿ, ನ್ಯೂರೋಲಾಜಿ, ನ್ಯೂರೋ ಸರ್ಜರಿ, ಟ್ರಾಮಾ ಕೇರ್, ಪಿಡ್ರಿಯಾಟಿಕ್ ಸರ್ಜರಿ ಸೇರಿದಂತೆ ಎಲ್ಲ ವಿಭಾಗಗಳ ಸುಪರ್ ಸ್ಪೆಶಾಲಿಟಿ ಆಸ್ಪತ್ರೆ ಹೊಂದಿದೆ. ಕೋವಿಡ್ -19ರ ಸಂದರ್ಭದಲ್ಲಿ ಕಿಮ್ಸ್ ರಾಜ್ಯದಲ್ಲೇ ಉತ್ತಮ ನಿರ್ವಹಣೆ ಮಾಡಿದೆ. ಆ ಮೂಲಕ ಸರಕಾರ ಹಾಗೂ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕ ಮಾತನಾಡಿದ ಸೈನೆರ್ಗಿಯಾ-21 ಸಂಘಟನಾ ಅಧ್ಯಕ್ಷ ಡಾ| ಸಿ.ಎ. ಗೋಪಾಲಕೃಷ್ಣ ಮಿತ್ರಾ, ಬೇಸಿಕ್ ಸರ್ಜಿಕಲ್ ಸ್ಕಿಲ್ಸ್, ಬೇಸಿಕ್ ಲೈಫ್ ಸಪೋರ್ಟ್, ಸರ್ಜರಿ, ಮೆಡಿಸನ್, ಪಿಡಿಯಾರ್ಟಿಕ್ಸ್, ಒಬಿಜಿ, ಮನೋರೋಗ ಚಿಕಿತ್ಸೆ (ಸೈಕ್ಯಾಟ್ರಿ) ಸೇರಿದಂತೆ ಹ್ಯಾಂಡ್ಸ್ ಆನ್ ಲರ್ನಿಂಗ್ ಎಂಬ ವಿವಿಧ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ವೈದ್ಯಕೀಯ ರಸಪ್ರಶ್ನೆ ಮತ್ತು ಸಂವಾದ ಒಳಗೊಂಡು 20 ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ವಿಜೇತರಿಗೆ ಬಹುಮಾನ ನೀಡಲಾಗುವುದು.
ಸಮ್ಮೇಳನದಲ್ಲಿ ಎಐಐಎಂಎಸ್ ದೆಹಲಿ, ಭುವನೇಶ್ವರ, ಮುಂಬಯಿ, ಚೆನ್ನೈ,ಹೈದರಾಬಾದ್ ಸೇರಿದಂತೆ ವಿವಿಧ ರಾಜ್ಯಗಳ 600 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ ಎಂದರು. ಕಿಮ್ಸ್ ಪ್ರಾಂಶುಪಾಲ ಡಾ| ಈಶ್ವರ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ, ಡಾ| ಸೂರ್ಯಕಾಂತ ಕೆ., ಡಾ| ಶಕ್ತಿಪ್ರಸಾದ ಹಿರೇಮಠ, ಮಿಥುನ ಕಂಪ್ಲಿ, ಡಾ| ರಾಜಶೇಖರ ದ್ಯಾಬೇರಿ ಇದ್ದರು. ಸ್ವಾತಿ ಬುಧ್ಯ ವಂದಿಸಿದರು.