Advertisement

ಪುಸ್ತಕ ಪ್ರೇಮ ಹುಟ್ಟಿಸಲು ರಾಷ್ಟ್ರೀಯ ಮಟ್ಟದ ಪುಸ್ತಕ ಮೇಳ 

11:58 AM Jul 19, 2018 | |

ಮಹಾನಗರ: ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಪುಸ್ತಕ ಪ್ರೇಮ ಕಡಿಮೆಯಾಗುತ್ತಿದೆ. ಹಾಗಾಗಿ ಸಾಹಿತ್ಯಾಸಕ್ತಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ. ಇದರ ಅಂಗವಾಗಿ ಈ ವರ್ಷದ ಕೊನೆಗೆ ನಗರದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪುಸ್ತಕ ಮೇಳ ಆಯೋಜನೆ ಮಾಡುವ ತಯಾರಿಯಲ್ಲಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಪುಸ್ತಕ ಪ್ರಾಧಿಕಾರದ ಜತೆ ಚರ್ಚೆ ನಡೆಸಲು ಕಸಾಪ ಮುಂದಾಗಿದೆ.

Advertisement

ವಿವಿಧ ಭಾಷೆಗಳ ಪುಸ್ತಕಗಳು ಸಾರ್ವಜನಿಕರಿಗೆ ಲಭ್ಯವಾಗುವುದಿಲ್ಲ ಎಂಬ ಕೂಗು ಕೆಲವು ವರ್ಷಗಳಿಂದಲೇ ಇವೆ. ಅಲ್ಲದೆ, ಯುವಕರಲ್ಲಿ ಕೂಡ ಓದಿನ ಹವ್ಯಾಸ ಕಡಿಮೆಯಾಗುತ್ತಿದೆ. ಯುವ ಪೀಳಿಗೆ ಪುಸ್ತಕ ಪ್ರೇಮವನ್ನು ಮೈಗೂಡಿಸಬೇಕು ಎಂಬ ನಿಟ್ಟಿನಲ್ಲಿ ರಾಷ್ಟ್ರಮಟ್ಟದ ಪುಸ್ತಕ ಮೇಳ ಆಯೋಜಿಸಲು ಚಿಂತಿಸಿದೆ. ಈ ಮೇಳದಲ್ಲಿ ಮುಖ್ಯವಾಗಿ ಕನ್ನಡ ಭಾಷೆಯ ಹಳೆ ಕನ್ನಡ ಪುಸ್ತಕದಿಂದ, ನವ್ಯ ಸಾಹಿತ್ಯದ ಕೃತಿಗಳು, ತುಳು ಭಾಷೆಯಲ್ಲಿ ಪ್ರಕಟಗೊಂಡಿರುವ ಕೃತಿ, ಸಂಸ್ಕೃತ, ಇಂಗ್ಲಿಷ್‌, ಹಿಂದಿ, ಕೊಂಕಣಿ, ತಮಿಳು, ತೆಲುಗು ಸೇರಿದಂತೆ ರಾಷ್ಟ್ರೀಯ ಮಟ್ಟದ ಎಲ್ಲ ಭಾಷೆಗಳ ಪುಸ್ತಕಗಳು ಪ್ರದರ್ಶನಗೊಳ್ಳಲಿವೆ. ರಾಷ್ಟ್ರೀಯ ಮಟ್ಟದ ಪುಸ್ತಕ ಮೇಳದಲ್ಲಿ ಪ್ರಕಾಶಕರಿಗೂ ಆಹ್ವಾನ ನೀಡಲಿದ್ದು ಅವರಿಗೂ ವೇದಿಕೆ ಕಲ್ಪಿಸಿದಂತಾಗುತ್ತದೆ ಎಂಬ ಲೆಕ್ಕಾಚಾರ ಇಲಾಖೆಯದ್ದು.

ಪುಸ್ತಕ ಮೇಳಕ್ಕೆ ಖ್ಯಾತಿ ತಂದದ್ದು ಮಂಗಳೂರು
ಕೆಲವು ವರ್ಷಗಳಿಂದ ಕಸಾಪ ವತಿಯಿಂದ ರಾಜ್ಯ ಮಟ್ಟದ ಪುಸ್ತಕ ಮೇಳ ನಗರದಲ್ಲಿ ನಡೆಯುತ್ತಿದೆ. ಕಳೆದ ವರ್ಷ ನೆಹರೂ ಮೈದಾನದಲ್ಲಿ ನಡೆದ ರಾಜ್ಯ ಮಟ್ಟದ ಪುಸ್ತಕ ಮೇಳ ಜನಮನ್ನಣೆ ಗಳಿಸಿತ್ತು. ಅದೇ ರೀತಿ ಕಸಾಪ ವತಿಯಿಂದ ಆಯೋಜಿಸಲು ಅನೇಕ ಕಾರ್ಯಕ್ರಮಗಳಲ್ಲಿ ಪುಸ್ತಕ ಮೇಳ ನಡೆಯುತ್ತಿದೆ. ಇದನ್ನು ಮನಗೊಂಡ ಇಲಾಖೆಯು ರಾಷ್ಟ್ರೀಯ ಮಟ್ಟಕ್ಕೆ ವಿಸ್ತರಣೆ ಮಾಡುವ ಯೋಜನೆ ಹಮ್ಮಿಕೊಂಡಿದೆ.

ಪುಸ್ತಕವೇ ಬಹುಮಾನ 
ಯುವಕರಲ್ಲಿ ಪುಸ್ತಕ ಪ್ರೇಮವನ್ನು ಹೆಚ್ಚಿಸುವ ಸಲುವಾಗಿ ಕಸಾಪ ಅನೇಕ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದು, ವಿಜೇತರಿಗೆ ಹಣದ ಬದಲಾಗಿ ಪುಸ್ತಕಗಳನ್ನೇ ಬಹುಮಾನವಾಗಿ ನೀಡಲಾಗುತ್ತಿದೆ. ಅಷ್ಟೇ ಅಲ್ಲದೆ, ಅನೇಕ ಶಾಲೆಗಳಲ್ಲಿನ ಗ್ರಂಥಾಲಯಗಳಿಗೆ ಇಲಾಖೆ ವತಿಯಿಂದ ಕನ್ನಡ ಪುಸ್ತಕಗಳನ್ನು ನೀಡಲಾಗಿದೆ. ಜಿಲ್ಲೆಯ ಕೆಲವೊಂದು ಶಾಲಾ ಕಾಲೇಜುಗಳು ವಿದ್ಯಾರ್ಥಿಗಳಿಗೆ ಗ್ರಂಥಾಲಯ ಸಮಯವನ್ನು ಕಡ್ಡಾಯಗೊಳಿಸಿದೆ.

ಶೀಘ್ರದಲ್ಲೇ ಪ್ರಸ್ತಾವನೆ
ಯುವಕರು ಮೊಬೈಲ್‌ ದಾಸರಾಗುತ್ತಿರುವುದರಿಂದ ಪುಸ್ತಕ ಓದಗರು ಕಡಿಮೆಯಾಗುತ್ತಿದ್ದಾರೆ. ಇದಕ್ಕಾಗಿ ಒಂದೇ ಸೂರಿನಲ್ಲಿ ವಿವಿಧ ಭಾಷೆಯ ಪುಸ್ತಕಗಳು ಸಿಗಬೇಕೆಂದು ಪುಸ್ತಕ ಮೇಳ ನಡೆಸಲು ಯೋಚಿಸುತ್ತಿದ್ದೇವೆ. ಶೀಘ್ರದಲ್ಲೇ ಈ ಬಗ್ಗೆ ಕೇಂದ್ರ ಪುಸ್ತಕ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದೇವೆ.
– ಪ್ರದೀಪ್‌ ಕುಮಾರ್‌ ಕಲ್ಕೂರ
  ಜಿಲ್ಲಾ ಕಸಾಪ ಅಧ್ಯಕ್ಷ

Advertisement

 ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next