ಮುಂಬಯಿ/ಜಮ್ಮು: ಕಳೆದ ಫೆಬ್ರವರಿಯಲ್ಲಿ ಪಾಕ್ ಸೇನೆಯಿಂದ ಬಂಧಿಸಲ್ಪಟ್ಟ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ತ್ವರಿತವಾಗಿ ಸ್ವದೇಶಕ್ಕೆ ವಾಪಸಾಗಲು ಭಾರತದ ರಾಷ್ಟ್ರೀಯ ನಾಯಕತ್ವವೇ ಕಾರಣ ಎಂದು ವಾಯುಪಡೆ ಮುಖ್ಯಸ್ಥ ಬಿ.ಎಸ್. ಧನೋವಾ ಹೇಳಿದ್ದಾರೆ.
ಮುಂಬಯಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶುಕ್ರವಾರ ಮಾತನಾಡಿದ ಅವರು, “ಕಾರ್ಗಿಲ್ ಯುದ್ಧದ ವೇಳೆ ನಾವು ಫ್ಲೈಟ್ ಕಮಾಂಡರ್ ಅಜಯ್ ಅಹುಜಾರನ್ನು ಕಳೆದುಕೊಂಡೆವು. ಪಾಕ್ ಸೇನೆ ಅವರನ್ನು ಗುಂಡಿಕ್ಕಿ ಕೊಂದು ಹಾಕಿತು. ಆದರೆ, ಈ ಬಾರಿ ಅಭಿನಂದನ್ ಖಂಡಿತ ವಾಪಸಾಗುತ್ತಾರೆ ಎಂದು ಅವರ ತಂದೆಗೆ ನಾನೇ ಭರವಸೆ ನೀಡಿದ್ದೆ. ಅದರಂತೆ, ದಾಖಲೆಯ ಅವಧಿಯಲ್ಲಿ ಅವರು ಸ್ವದೇಶಕ್ಕೆ ಬರುವಂತೆ ಮಾಡಿದ್ದರ ಕ್ರೆಡಿಟ್ ರಾಷ್ಟ್ರೀಯ ನಾಯಕತ್ವಕ್ಕೆ ಸಲ್ಲಬೇಕು’ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನೆತ್ತದೆ ಶ್ಲಾಘಿಸಿದ್ದಾರೆ.
ಕೀಳಂದಾಜು ಮಾಡಿತು: ಪಾಕಿಸ್ಥಾನವು ಯಾವತ್ತೂ ಭಾರ ತದ ರಾಷ್ಟ್ರೀಯ ನಾಯಕತ್ವವನ್ನು ಕೀಳಂದಾಜು ಮಾಡುತ್ತಲೇ ಇತ್ತು. ಬಾಲಾಕೋಟ್ ದಾಳಿ ವೇಳೆಯೂ ಅದನ್ನೇ ಮಾಡಿತು. 1965ರಲ್ಲೂ ಪಾಕಿಸ್ಥಾನ ಲಾಲ್ ಬಹಾದೂರ್ ಶಾಸ್ತ್ರಿ ಅವರನ್ನು ನಿರ್ಲಕ್ಷಿಸಿತು. ಶಾಸ್ತ್ರಿ ಅವರ ಹೆಜ್ಜೆಯನ್ನು ಪಾಕ್ ನಿರೀಕ್ಷಿಸಿಯೇ ಇರಲಿಲ್ಲ. ಅನಂತರ ಕಾರ್ಗಿಲ್ ಸಂಘರ್ಷದ ವೇಳೆಯೂ ಮತ್ತೆ ಪಾಕ್‌ಗೆ ಅಚ್ಚರಿಯಾಗಿತ್ತು.ನಾವು ಬೊಫೋರ್ಸ್ ಗನ್ ಹಿಡಿದು, ಅವರನ್ನು ಹಿಮ್ಮೆಟ್ಟಿಸು ತ್ತೇವೆಂದು ಅಂದಾಜಿಸಲೇ ಇಲ್ಲ ಎಂದೂ ಸದ್ಯದಲ್ಲೇ ನಿವೃತ್ತರಾಗಲಿರುವ ಧನೋವಾ ಹೇಳಿ ದ್ದಾರೆ. ಅಲ್ಲದೆ ಭಾರತದ ವಾಯುಪಡೆಯು ಪಾಕಿಸ್ತಾ ನದ ಯಾವುದೇ ಸೇನಾ ದುಸ್ಸಾಹಸಕ್ಕೆ ಉತ್ತರಿಸಲು ಸನ್ನದ್ಧವಾ ಗಿದೆ. ಆದರೆ, ಈ ಕುರಿತು ರಾಜಕೀಯ ನಾಯಕತ್ವವೇ ನಿರ್ಧಾರ ಕೈಗೊಳ್ಳಬೇಕು ಎಂದೂ ತಿಳಿಸಿದ್ದಾರೆ.
ಪ್ರಗತಿ ನೋಡಲಾಗುತ್ತಿಲ್ಲ: ಇದೇ ವೇಳೆ, ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿಯ ಪಥದತ್ತ ಸಾಗುವುದನ್ನು ನೋಡಲು ಪಾಕ್ ಪ್ರಧಾನಿ ಇಮ್ರಾನ್ ಖಾನ್‌ಗೆ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿಯೇ ಅವರು ವಿಶೇಷ ಸ್ಥಾನಮಾನ ರದ್ದತಿಯನ್ನು ವಿರೋಧಿಸುತ್ತಿದ್ದಾರೆ ಎಂದು ಅಮೆರಿಕದಲ್ಲಿನ ಭಾರತದ ರಾಯಭಾರಿ ಹರ್ಷವರ್ಧನ್ ಶ್ರಿಂಗ್ಲಾ ಅಭಿಪ್ರಾಯಪಟ್ಟಿದ್ದಾರೆ. ಈ ನಡುವೆ, ವಿಶ್ವಸಂಸ್ಥೆ ಮುಖ್ಯಸ್ಥ ಗುಟೆರಸ್ ಅವರು ಮಹಾ ಧಿವೇಶನದಲ್ಲಿ ಕಾಶ್ಮೀರ ವಿಚಾರದ ಕುರಿತು ಚರ್ಚಿಸುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆಯ ವಕ್ತಾರರು ಹೇಳಿದ್ದಾರೆ.
ಆರೋಪದಲ್ಲಿ ಹುರುಳಿಲ್ಲ: ಈ ನಡುವೆ, ಜಮ್ಮು-ಕಾಶ್ಮೀರದ ಜನರಿಗೆ ಅಲ್ಲಿನ ನ್ಯಾಯಾಲಯದ ಕದ ತಟ್ಟಲೂ ಸಾಧ್ಯವಾಗುತ್ತಿಲ್ಲ ಎಂದು ಹಿರಿಯ ವಕೀಲ ಹುಜೇಫಾ ಅಹ್ಮದಿ ಮಾಡಿರುವ ಆರೋಪ ಸಂಬಂಧದ ವಿಚಾರಣೆ ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು. ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಂದ ನಾವು ವರದಿ ತರಿಸಿಕೊಂಡಿದ್ದೇವೆ. ನೀವು ಹೇಳಿದಂಥ ಸ್ಥಿತಿಯೇನೂ ಅಲ್ಲಿಲ್ಲ ಎಂದು ಅವರು ವರದಿಯಲ್ಲಿ ತಿಳಿಸಿದ್ದಾರೆ ಎಂದು ಈ ವೇಳೆ ಸುಪ್ರೀಂ ಕೋರ್ಟ್ ಅರ್ಜಿದಾರರಿಗೆ ಹೇಳಿತು. ಜತೆಗೆ, ಕೆಲವು ವ್ಯತಿರಿಕ್ತ ವರದಿಗಳೂ ಬಂದಿದ್ದು, ಅವುಗಳ ಕುರಿತು ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದೂ ನ್ಯಾಯಪೀಠ ತಿಳಿಸಿತು.
ಸೇವೆ ಇಲ್ಲದಿದ್ದರೂ ಬಂತು ಫೋನ್ ಬಿಲ್!
ವಿಶೇಷ ಸ್ಥಾನಮಾನ ವಾಪಸ್ ಪಡೆದಾಗಿನಿಂದ ಅಂದರೆ ಕಳೆದ 47 ದಿನಗಳಿಂದಲೂ ಕಣಿವೆ ರಾಜ್ಯದಲ್ಲಿ ಮೊಬೈಲ್ ಫೋನ್‌ಗಳು, ಇಂಟರ್ನೆಟ್ ಸೇವೆಗಳು ಕಾರ್ಯನಿರ್ವಹಿಸುತ್ತಿಲ್ಲ. ಆದರೂ, ದೂರಸಂಪರ್ಕ ಕಂಪೆನಿಗಳು ನಮಗೆ ಫೋನ್-ಇಂಟರ್ನೆಟ್ ಬಿಲ್‌ಗಳನ್ನು ಕಳುಹಿಸಿವೆ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಆ. 5ರಿಂದ ಫೋನುಗಳು ಕಾರ್ಯನಿರ್ವಹಿಸಿಯೇ ಇಲ್ಲ. ಆದರೂ ನಮಗೆ 700ರಿಂದ 1,000ದವರೆಗೆ ಬಿಲ್‌ಗಳು ಬರುತ್ತಿವೆ. ಇದು ಹೇಗೆ ಸಾಧ್ಯ ಎಂದು ಅನೇಕರು ಪ್ರಶ್ನಿಸಿದ್ದಾರೆ.
ಮುಂದಿನ ವಾರ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಪಾಕಿಸ್ಥಾನವು ಕಾಶ್ಮೀರದ ವಿಚಾರ ಪ್ರಸ್ತಾವ ಮಾಡುವ ಸಾಧ್ಯತೆಯಿದೆ. ಆದರೆ, ಪಾಕಿಸ್ಥಾನವು ಕೆಳಮಟ್ಟಕ್ಕಿಳಿದಷ್ಟೂ, ಭಾರತ ಮೇಲ್ಮಟ್ಟಕ್ಕೆ ಹೋಗುತ್ತಿರುತ್ತದೆ ಎಂಬುದು ನೆನಪಿರಲಿ.
ಸೈಯದ್ ಅಕ್ಬರುದ್ದೀನ್, ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ