Advertisement

ಪುಲ್ವಾಮ ಉಗ್ರ ದಾಳಿಕೋರನಿಗೆ ನೆರವು ಪ್ರಮುಖ ವ್ಯಕ್ತಿಯ ಬಂಧನ

10:00 AM Feb 29, 2020 | Hari Prasad |

ಪುಲ್ವಾಮ ಉಗ್ರ ದಾಳಿ ಸಂಭವಿಸಿ ಒಂದು ವರ್ಷದ ಬಳಿಕ ಈ ದಾಳಿಗೆ ಸಂಬಂಧಿಸಿದಂತೆ ಮೊದಲ ಬಂಧನವಾಗಿದೆ. ರಾಷ್ಟ್ರೀಯ ತನಿಖಾ ದಳವು ಇಂದು ಪುಲ್ವಾಮ ದಾಳಿಕೋರನಿಗೆ ಸಹಾಯ ಮಾಡಿದ್ದ ಆರೋಪದ ಮೇಲೆ ಇಲ್ಲಿನ ಕಾಕಪೋರದ ಹಜಿಬಲ್ ನಿವಾಸಿ ಶಕೀರ್ ಬಶೀರ್ ಮ್ಯಾಗ್ರೇ ಎಂಬಾತನನ್ನು ಬಂಧಿಸಿದೆ.

Advertisement

ಪೀಠೋಪಕರಣಗಳ ಮಳಿಗೆಯ ಮಾಲಿಕನಾಗಿರುವ ಬಶೀರ್ ಪುಲ್ವಾಮ ದಾಳಿಕೋರ ಅದಿಲ್ ಅಹಮ್ಮದ್ ದಾರ್ ಗೆ ಆಶ್ರಯ ಮತ್ತು ಸ್ಪೋಟಕ ಸಾಗಾಟಕ್ಕೆ ನೆರವು ನೀಡಿದ್ದ ಆರೋಪವನ್ನು ಎದುರಿಸುತ್ತಿದ್ದಾನೆ.

ಈ ಮೂಲಕ ಕಳೆದ ವರ್ಷದ ಫೆಬ್ರವರಿ 14ರಂದು 40 ಸಿ.ಆರ್.ಪಿ.ಎಫ್. ಜವಾನರನ್ನು ಬಲಿಪಡೆದಿದ್ದ ಭೀಕರ ಉಗ್ರ ಸ್ಪೋಟ ದಾಳಿಗೆ ಸಂಬಂಧಿಸಿದಂತೆ ಎನ್.ಐ.ಎ. ಮೊದಲ ಬಂಧನವನ್ನು ಮಾಡಿದಂತಾಗಿದೆ.

ಪುಲ್ವಾಮ ದಾಳಿಕೋರ ಅದಿಲ್ ಅಹಮ್ಮದ್ ದಾರ್ ಗೆ ಬಶೀರ್ 2018ರ ಮಧ್ಯಭಾಗದಲ್ಲಿ ಪರಿಚಯವಾಗಿದ್ದ ಮತ್ತು ಮಹಮ್ಮದ್ ಉಮ್ಮರ್ ಫಾರೂಖ್ ಎಂಬ ಪಾಕಿಸ್ಥಾನದ ಉಗ್ರ ಈತನಿಗೆ ಅದಿಲ್ ನನ್ನು ಪರಿಚಯಿಸಿದ್ದ. ಮತ್ತು ಆ ಬಳಿಕ ಬಶೀರ್ ಹೊರಜಗತ್ತಿನಲ್ಲಿದ್ದುಕೊಂಡೇ ಜೈಶ್ ಉಗ್ರರಿಗೆ ನೆರವು ನೀಡುವ ಕೆಲಸವನ್ನು ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಶಕೀರ್ ಬಶೀರ್ ಪುಲ್ವಾಮ ದಾಳಿಕೋರ ಅದಿಲ್ ದಾರ್ ಸೇರಿದಂತೆ ಕೆಲವು ಜೈಶ್ ಉಗ್ರರಿಗೆ ಹಲವಾರು ಸಂದರ್ಭಗಳಲ್ಲಿ  ಶಸ್ತ್ರಾಸ್ತ್ರ ಮತ್ತು ಇನ್ನಿತರ ವಸ್ತುಗಳನ್ನು ಪೂರೈಸಿದ್ದ ಮತ್ತು ಅವರಿಂದ ಶಸ್ತ್ರಾಸ್ತ್ರಗಳನ್ನು ಪಡೆದುಕೊಂಡಿದ್ದ ಎಂಬ ಮಾಹಿತಿಯನ್ನು ಪ್ರಾಥಮಿಕ ತನಿಖೆಯ ಸಂದರ್ಭದಲ್ಲಿ ಬಾಯಿ ಬಿಟ್ಟಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

2018ರಿಂದ ಪುಲ್ವಾಮ ದಾಳಿಯ ದಿನದವರೆಗೂ ಅದಿಲ್ ಅಹಮ್ಮದ್ ದಾರ್ ಮತ್ತು ಪಾಕಿಸ್ಥಾನಿ ಉಗ್ರ ಮಹಮ್ಮದ್ ಉಮರ್ ಫಾರೂಖ್ ಅವರಿಗೆ ತನ್ನ ಮನೆಯಲ್ಲಿ ಶಕೀರ್ ಬಶೀರ್ ಆಶ್ರಯ ನೀಡಿದ್ದ ಮತ್ತು ಇದೇ ಸಂದರ್ಭದಲ್ಲಿ ಅವರಿಗೆ ಐ.ಇ.ಡಿ. ತಯಾರಿಸಲೂ ನೆರವಾಗಿದ್ದ. ತನ್ನ ಪ್ರದೇಶದಲ್ಲಿ ಸಿ.ಆರ್.ಪಿ.ಎಫ್. ಜವಾನರ ಚಲನವಲನಗಳ ಕುರಿತಾಗಿಯೂ ಈತ ಇವರಿಬ್ಬರಿಗೆ ಮಾಹಿತಿ ನೀಡುತ್ತಿದ್ದ.

Advertisement

Udayavani is now on Telegram. Click here to join our channel and stay updated with the latest news.

Next