ಬೆಂಗಳೂರು: ದೇಶದ ಅದಿರು ಉಂಡೆಗಳ (ಪೆಲೆಟೈಸೇಷನ್) ಉತ್ಪಾದನೆಯಲ್ಲಿ ಮುಂಚೂಣಿ ಸ್ಥಾನದಲ್ಲಿರುವ ಕುದುರೆಮುಖ ಕಬ್ಬಿಣ ಅದಿರು ಕಂಪೆನಿ ಲಿ., (ಕೆಐಒಸಿಎಲ್), ಅದಿರು ಗಣಿಗಾರಿಕೆ ಹಾಗೂ ಮ್ಯಾಗ್ನೆಟೈಟ್ ಅದಿರಿನ ಪ್ರಯೋಜನಕ್ಕಾಗಿ ಶ್ರಮಿಸುತ್ತಿರುವ ಮೊದಲ ಸಂಸ್ಥೆಯಾಗಿ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಉಕ್ಕು ಸಚಿವ ಚೌಧರಿ ಬಿರೇಂದ್ರ ಸಿಂಗ್ ಪ್ರಶಂಸಿಸಿದರು.
ಮಂಗಳವಾರ ನಗರದ ಕೆಐಒಸಿಎಲ್ ಕೇಂದ್ರ ಕಚೇರಿಯಲ್ಲಿ ಸರ್ದಾರ್ ವಲ್ಲಭ್‌ಬಾಯ್ ಪಟೇಲ್ 143ನೇ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ “ರಾಷ್ಟ್ರೀಯ ಏಕತಾ ದಿವಸ್’ನಲ್ಲಿ ಮಾತನಾಡಿದರು. ಕಬ್ಬಿಣದ ಅದಿರು ಉಂಡೆಗಳ ಉತ್ಪಾದನೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಕೆಐಒಸಿಎಲ್ ರಾಜ್ಯದ “ಮಿನಿ ರತ್ನ’ ಎಂಬ ಖ್ಯಾತಿ ಪಡೆದಿದೆ ಎಂದು ತಿಳಿಸಿದರು.
ಕಬ್ಬಿಣ ಗಣಿಗಾರಿಕೆ ಕ್ಷೇತ್ರದಲ್ಲಿ ಮೊದಲಿಗನಾಗಿ ಹಾಗೂ ಮ್ಯಾಗ್ನಟೈಟ್ ಅದಿರಿನ ಉಪಯೋಗವನ್ನು ಪಡೆದುಕೊಳ್ಳುತ್ತಿರುವಲ್ಲಿ ಅಭಿವೃದ್ಧಿಯತ್ತ ಸಾಗುತ್ತಿರುವ ಕೆಐಒಸಿಎಲ್ 2017ರ ಹಣಕಾಸು ವರ್ಷಾಂತ್ಯದಲ್ಲಿ 300 ಮಿಲಿಯನ್ ಟನ್ ಕಬ್ಬಿಣ ಅದಿರು ಹಾಗೂ 260 ಮಿಲಿಯನ್ ಟನ್ ಉಕ್ಕು ಉತ್ಪಾದಿಸುವ ಗುರಿ ಹೊಂದಿದೆ. ಆದರೆ ರಫ್ತಿನ ಪ್ರಮಾಣ ಎರಿಕೆಯಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಕೆಐಒಸಿಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುಬ್ಟಾ ರಾವ್ ಮಾತನಾಡಿ, ಕೆಐಒಸಿಎಲ್ ಕರ್ನಾಟಕ, ಆಂಧ್ರ ಪ್ರದೇಶದಲ್ಲಿ ಹಸಿರು ಕ್ಷೇತ್ರ ಯೋಜನೆಗಳಲ್ಲಿ ಗಣನೀಯ ಪ್ರಮಾಣದ ಹೂಡಿಕೆಯೊಂದಿಗೆ ಬಹಳ ಕಾಲದ ಯೋಜನೆಯನ್ನು ಅಂತಿಮಗೊಳಿಸುತ್ತಿದೆ. ಉಕ್ಕು ಮಂತ್ರಾಲಯದಿಂದ ಸಿಗುತ್ತಿರುವ ಬೆಂಬಲದಿಂದ ಗಣಿ ಹಂಚಿಕೆ ಹಾಗೂ ಅದಿರು ಉಂಡೆ ಘಟಕ ಸ್ಥಾಪನೆಗೆ ಸಹಾಯಕವಾಗಿದೆ.
ಇದರಿಂದ ಕೆಐಒಸಿಎಲ್ ಇಂದು ಗಣಿಗಾರಿಕೆ ಮತ್ತು ಪೆಲೆಟೈಸೇಷನ್ ಉದ್ಯಮಗಳ ಮಿನಿ ರತ್ನವಾಗಿ ಹೊರಹೊಮ್ಮಿದೆ ಎಂದು ವಿವರಿಸಿದರು. ಟಿ. ಶ್ರೀನಿವಾಸ್, ಕೆ ಐಒಸಿಎಲ್ ನಿರ್ದೇಶಕ ಎಸ್.ಕೆ. ಗೊರೈ, ಎನ್. ವಿದ್ಯಾನಂದ ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.