Advertisement

National Horticultural Fair: ಕೊಳೆರೋಗ, ವೈರಸ್‌ ಸುಳಿಯದ ಮೆಣಸಿನ ತಳಿ ಅಭಿವೃದ್ಧಿ

10:26 AM Mar 06, 2024 | Team Udayavani |

ಬೆಂಗಳೂರು: “ಕೊಳೆರೋಗ ಮತ್ತು ವೈರಸ್‌’ ಸುಳಿಯದ ಹೊಸ ಹೈಬ್ರಿಡ್‌ ಮೆಣಿಸಿನಕಾಯಿ ತಳಿಯನ್ನು ಅಭಿವೃದ್ಧಿ ಪಡಿಸುವ ಮೂಲಕ ಹೆಸರುಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳ ತಂಡ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

Advertisement

ಅರ್ಕಾ ನಿಹಿರ ಮತ್ತು ಅರ್ಕಾ ಧೃತಿ ಎಂಬ ಭಿನ್ನ ತಳಿಗಳನ್ನು ಅಭಿವೃದ್ಧಿಪಡಿಸಿದ್ದು ಹೆಸರುಘಟ್ಟದ “ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ’ ಈ ತಳಿಗಳ ಬಗ್ಗೆ ರೈತರು ಮಾಹಿತಿ ಕಲೆಹಾಕಿದ್ದು ಕಂಡುಬಂತು.

ಭಾರತೀಯ ತೋಟಗಾರಿಕಾ ಸಂಶೋ ಧನಾ ಸಂಸ್ಥೆಯ ತರಕಾರಿ ವಿಭಾಗದ ವಿಜ್ಞಾನಿ ಡಾ.ಮಾಧವಿ ರೆಡ್ಡಿ ನೇತೃತ್ವದ ವಿಜ್ಞಾನಿಗಳ ತಂಡ ಅರ್ಕಾ ನಿಹಿರ ಮತ್ತು ಅರ್ಕಾ ಧೃತಿ ಎಂಬ ಹೊಸ ಹೈಬ್ರಿಡ್‌ ಮೆಣಸಿನಕಾಯಿ ತಳಿಯನ್ನು ಅಭಿವೃದ್ಧಿಪಡಿಸಿದೆ. ಈಗಾಗಲೇ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದ್ದು ಇದಾದ ಬಳಿಕ ಹೈಬ್ರಿಡ್‌ ತಳಿಗಳು ಮೆಣಸಿನ ಕಾಯಿ ಬೆಳೆಗಾರರ ಹೊಲದಲ್ಲಿ ಕಾಣಸಿಗಲಿದೆ.

ಬೇರು ಕೊಳೆರೋಗ ಸುಳಿಯುವುದಿಲ್ಲ: ಮೆಣಸಿನ ಕಾಯಿ ಬೆಳೆಗೆ ಬೇರು ಮತ್ತು ಬುಡ ಕೊಳೆರೋಗ ಹೆಚ್ಚು. ಜತೆಗೆ ವೈರಸ್‌ಗಳೂ ಸುಳಿಯುತ್ತವೆ. ಇದನ್ನು ಮನಗಂಡ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ತರಕಾರಿ ವಿಭಾಗದ ವಿಜ್ಞಾನಿಗಳು ಈ ಹೈಬ್ರಿಡ್‌ ತಳಿ ಸಂಶೋಧನೆಯಲ್ಲಿ ತೊಡಗಿದ್ದಾರೆ. 6-7 ವರ್ಷಗಳಿಂದ ನಿರಂತರ ಸಂಶೋಧನೆಯಲ್ಲಿ ತೊಡಗಿದ್ದು ಶೀಘ್ರದಲ್ಲೇ ರೈತರ ಕೈ ಸೇರಲಿದೆ. ಕಪ್ಪು ಮತ್ತು ಕೆಂಪು ಮಣ್ಣಿನಲ್ಲಿ ಕೂಡ ಈ ಬೆಳೆಯನ್ನು ಬೆಳೆಯಬಹುದು.

“ಅರ್ಕಾ ನಿಹಿರ’ ಮೆಣಸಿನ ತಳಿಯಲ್ಲಿ ಖಾರ ಜಾಸ್ತಿ. ಆದರೆ ಅರ್ಕಾ ಧೃತಿಯಲ್ಲಿ ಖಾರ ಕಡಿಮೆ ಇರಲಿದೆ. ಎರಡೂ ತಳಿಗಳು ಗಾತ್ರದಲ್ಲಿ 9-10 ಸೆಂ.ಮೀ. ಉದ್ದ ಮತ್ತು 1.5 ಸೆಂ.ಮೀ. ದಪ್ಪ ಇರಲಿದೆ. ಪ್ರತಿ ಎಕರೆಗೆ ಹಸಿ 12-14 ಟನ್‌ ಮತ್ತು ಒಣ ಮೆಣಸು 3-3.5 ಟನ್‌ವರೆಗೆ ಬೆಳೆ ಸಿಗಲಿದೆ.

Advertisement

ಅರ್ಕಾ ನಿಹಿರ ಮತ್ತು ಅರ್ಕಾ ಧೃತಿ ಎಂಬ ಹೈಬ್ರಿಡ್‌ ಮೆಣಸಿನಕಾಯಿ ತಳಿ ಅಭಿವೃದ್ದಿ ಪಡಿಸಲಾಗುತ್ತಿದೆ. ಹಲವು ಹಂತಗಳಲ್ಲಿ ಪ್ರಯೋಗ ನಡೆದಿದೆ. ಮೆಣಸಿನಕಾಯಿ ಬೆಳೆಗಾರರಿಗೂ ಹೆಚ್ಚಿನ ಇಳುವರಿ ನೀಡಲಿದೆ. ಅರ್ಕಾ ನಿಹಿರ ಮೆಣಸಿನ ತಳಿಯಲ್ಲಿ ಖಾರ ಜಾಸ್ತಿ. ಆದರೆ ಅರ್ಕಾ ಧೃತಿಯಲ್ಲಿ ಖಾರ ಕಡಿಮೆ ಇರಲಿದೆ. ಡಾ.ಮಾಧವಿ ರೆಡ್ಡಿ, ಹಿರಿಯ ಸಂಶೋಧನ ವಿಜ್ಞಾನಿ, ತರಕಾರಿ ವಿಭಾಗ , ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ.

ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next