Advertisement

ಪಹಣಿಯನ್ನು ಬೆಂಬಿಡದ “ರಾಷ್ಟ್ರೀಯ ಹೆದ್ದಾರಿ’ಕಂಟಕ

11:11 PM Mar 03, 2020 | mahesh |

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಮತ್ತು ಚತುಷ್ಪಥಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆ ನಡೆದು ಶೇ.90ರಷ್ಟು ಕಾಮಗಾರಿ ನಡೆದಿದ್ದರೂ, ಹೆದ್ದಾರಿ ಪಕ್ಕ ತಮಗೆ ಬೇಕಾದ ಏನೊಂದೂ ಕಾಮಗಾರಿ ನಡೆಸದ ಸ್ಥಿತಿಯಲ್ಲಿ ಭೂಮಾಲಕರಿದ್ದಾರೆ. ಪಹಣಿಯಲ್ಲಿರುವ ಸರ್ವೆ ಸಂಖ್ಯೆಗಳಲ್ಲಿ ಇನ್ನೂ ರಾಷ್ಟ್ರೀಯ ಹೆದ್ದಾರಿ ಎಂದೇ ನಮೂದಾಗಿರುವುದರಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ.

Advertisement

ಏನಾಗಬೇಕಿತ್ತು?
ಎನ್‌ಎಚ್‌ಎಐ(ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ) ಹೆಸರಲ್ಲಿ ಕುಂದಾಪುರದ ಸಹಾಯಕ ಕಮೀಷನರ್‌ ಅವರು ಭೂಸ್ವಾಧೀನ ಪ್ರಕ್ರಿಯೆ ನಡೆಸಿದ ಬಳಿಕ ಆರ್‌ಟಿಸಿ (ಪಹಣಿ)ಯಲ್ಲಿ ಭೂಮಾಲಕರ ಒಟ್ಟು ಭೂಮಿಯ ವಿಸ್ತೀರ್ಣದಿಂದ ಸ್ವಾಧೀನಪಡಿಸಿದ ಭೂಮಿಯ ವಿಸ್ತೀರ್ಣ ಕಡಿತಗೊಳ್ಳಬೇಕು. ಅದು ಪ್ರಾಧಿಕಾರದ ಹೆಸರಿಗೆ ಆದಾಗ, ಉಳಿದ ಭೂಮಿಯಲ್ಲಿ ಭೂಮಾಲಕರು ತಮ್ಮ ಜಾಗವನ್ನು ಅಭಿವೃದ್ಧಿ ಪಡಿಸಲು ಅಥವಾ, ಸರ್ವೆ ಮಾಡಿಸಲು, ಭೂ ಪರಿವರ್ತನೆ ಮಾಡಿ ಮನೆ ಕಟ್ಟಲು ಅಥವಾ ಉದ್ದಿಮೆ ಉದ್ದೇಶದ ಸಂಕೀರ್ಣಗಳನ್ನು ಕಟ್ಟಲು ಸಾಧ್ಯವಾಗುತ್ತದೆ. ಆದರೆ ಇದೀಗ ವರ್ಷಗಳೇ ಕಳೆದು ಭೂಮಿಗೆ ಪರಿಹಾರವನ್ನು ಪಡೆದಿದ್ದರೂ ಪಹಣಿಯಲ್ಲಿರುವ ದೋಷದಿಂದಾಗಿ ಕಿರಿಕಿರಿ ಅನುಭವಿಸುವಂತಾಗಿದೆ.

ಕ್ರಿಯಾಲೋಪ?
ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿರುವ ಶೇ.50ರಷ್ಟು ಪಹಣಿಗಳು ಹೀಗೆ ದೋಷ ಹೊಂದಿವೆ. ಇದು ಅಧಿಕಾರಿಗಳ ಕಣ್ತಪ್ಪಿ ನಿಂದ ಆದ ಸಮಸ್ಯೆ ಎನ್ನಲಾಗುತ್ತಿದೆ. ಕುಂದಾಪುರದಲ್ಲಿ ಚಾರುಲತಾ ಅವರು ಸಹಾಯಕ ಕಮಿಷನರ್‌ ಆಗಿದ್ದಾಗ ಶೇ.50 ರಷ್ಟು ಪಹಣಿಗಳನ್ನು ಸಮಸ್ಯೆಯಿಂದ ಹೊರತರಲಾಗಿತ್ತು. ಇನ್ನೂ ಶೇ.50ರಷ್ಟು ಉಡುಪಿ ಭಾಗದಲ್ಲಿ ಉಳಿದಿವೆ. ಈ ಕಾರ್ಯದಲ್ಲಿ ಸರ್ವೆ ಇಲಾಖೆ ಮತ್ತು ಕಂದಾಯ ಇಲಾಖೆಗಳು ಜಂಟಿಯಾಗಿ ಕರ್ತವ್ಯ ನಿರ್ವಹಿಸಿದಲ್ಲಿ ಅತಿ ಶೀಘ್ರವಾಗಿ ಇದನ್ನು ಪರಿಹರಿಸಬಹುದಾಗಿದೆ.

ಕಾಪು ತಾ| ಬಹಳಷ್ಟು ಹಿಂದೆ
ಸ್ವಾಧೀನ ಬಳಿಕ ಪಹಣಿಯಲ್ಲಿ ರಾ.ಹೆ. ಹೆಸರನ್ನು ಮೂಲದಾಖಲೆಗಳಿಂದ ತೆಗೆಯುವುದು ಸರ್ವೆ ಮತ್ತು ಕಂದಾಯ ಇಲಾಖೆ ಕೆಲಸವಾಗಿದೆ. ಜಿಲ್ಲಾಧಿಕಾರಿ ಅವರ ಮೂಲಕ ಅಧಿಕಾರಿಗಳು ಈ ಕೆಲಸ ಮಾಡಬೇಕು. ಆದೇಶ ಬಳಿಕ ಮರು ದಾಖಲೀಕರಣಗಳಾಗಬೇಕು. ಆದರೆ ತಹಶೀಲ್ದಾರ್‌ ಸಹಿತ ಇತರ ಅಧಿಕಾರಿಗಳು ಈ ಬಗ್ಗೆ ಉತ್ತರಿಸುತ್ತಿಲ್ಲ. ಇದರ ಹೊಣೆ ನಮ್ಮದಲ್ಲ ಎನ್ನುತ್ತಾರೆ. ಕಾಪು ತಾಲೂಕಿನಲ್ಲಂತೂ ಇದಕ್ಕೆ ಸಂಬಂಧಿಸಿ ನಕ್ಷೆ ಅಥವಾ ದಾಖಲೆಗಳು ಬಂದಿಲ್ಲ. ಕಾಪು ತಾಲೂಕು ಪೂರ್ಣ ಪ್ರಮಾಣದಲ್ಲಿ ಆಗದೇ ಇರುವುದು ಇದಕ್ಕೆ ಕಾರಣವಾಗಿರಬಹುದು ಎಂದು ಸ್ಥಳೀಯರಾದ ದಿವಾಕರ್‌ ಎಂ.ಕೆ. ಹೇಳುತ್ತಾರೆ.

ಸಮಸ್ಯೆ ಪರಿಹರಿಸಲು ಕ್ರಮ
ಕಳೆದ ಸುಮಾರು 4 – 5 ತಿಂಗಳುಗಳಲ್ಲಿ ಸುಮಾರು 2000ದಷ್ಟು ಪಹಣಿಗಳಿಂದ ಹೆಸರು ತೆಗೆಯಲಾಗಿದೆ. ಭೂ ಸ್ವಾಧೀನ ಪ್ರಕ್ರಿಯೆ ಬಳಿಕ ಕೋರ್ಟ್‌ನಲ್ಲಿ ಪರಿಹಾರದ ಮೊತ್ತ ಠೇವಣಿಗೊಂಡಿರುವ ಒಂದಷ್ಟು ಪ್ರಕರ‌ಣಗಳೂ ಇದರಲ್ಲಿ ಸೇರಿಕೊಂಡಿದೆ. ಕಾಪು ತಾಲೂಕಿನಲ್ಲೂ ಶೀಘ್ರ ಭೂನ್ಯಾಯ ಮಂಡಳಿ ರಚನೆ ಆಗಬೇಕಿದ್ದು, ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು.
-ರಾಜು ಕೆ., ಸಹಾಯಕ ಕಮಿಷನರ್‌, ಕುಂದಾಪುರ

Advertisement
Advertisement

Udayavani is now on Telegram. Click here to join our channel and stay updated with the latest news.

Next