Advertisement

ಅಪಾಯದಲ್ಲಿದೆ ರಾಷ್ಟ್ರೀಯ ಹೆದ್ದಾರಿ!

10:21 AM Jun 25, 2019 | keerthan |

ಕುಂದಾಪುರ: ಹಲವೆಡೆ ಬಿರುಕು ಬಿಟ್ಟ ರಸ್ತೆ, ಮತ್ತೆ ಕೆಲವೆಡೆ ರಸ್ತೆ ಬದಿಯ ಮಣ್ಣು ಕುಸಿದು ಹೆದ್ದಾರಿ ಎರಡು ಹೋಳಾಗುವ ಭೀತಿ, ಇನ್ನೊಂದಷ್ಟು ಕಡೆಗಳಲ್ಲಿ ಡಿವೈಡರ್‌ ಮಧ್ಯೆ ಹಾಕಲಾದ ಮಣ್ಣೆಲ್ಲ ರಸ್ತೆಯಲ್ಲಿ -ಇದು ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ಸದ್ಯದ ಸ್ಥಿತಿ.

Advertisement

ರಾಜಾಡಿ ಸೇತುವೆ ಬಳಿಯಿಂದ ತಲ್ಲೂರು ಪೇಟೆವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬದಿಗೆ ಹಾಕಲಾದ ಮಣ್ಣೆಲ್ಲ ಕುಸಿದಿದ್ದು, ಅಲ್ಲಲ್ಲಿ ರಸ್ತೆಯೂ ಬಿರುಕು ಬಿಡಲಾರಂಭಿಸಿದೆ. ಮಳೆ ಇನ್ನಷ್ಟು ಹೆಚ್ಚಾಗುತ್ತಾ ಹೋದಂತೆ ಮತ್ತಷ್ಟು ಕಡೆಗಳಲ್ಲಿ ಬಿರುಕು ಬಿಡುವ ಅಪಾಯವಿದೆ.

ಮಣ್ಣು ಕುಸಿಯುತ್ತಿದೆ
ಮಳೆಗಾಲ ಆರಂಭ ಆಗುವುದಕ್ಕೆ ಸ್ವಲ್ಪ ಸಮಯದ ಹಿಂದಷ್ಟೇ ಇಲ್ಲಿ ಮಣ್ಣು ಹಾಕಿ ರಸ್ತೆ ಡಾಮರೀಕರಣ ಮಾಡಲಾಗಿತ್ತು. ಆ ಮಣ್ಣೆಲ್ಲ ಈಗ ಮಳೆ ನೀರಿಗೆ ಮೃದುವಾಗಿದ್ದು, ಅಲ್ಲಲ್ಲಿ ಕುಸಿಯಲು ಆರಂಭಿಸಿದೆ. ಇದರಿಂದ ಹೆದ್ದಾರಿಯ ಒಂದು ಪಾರ್ಶ್ವವಿಡೀ ಕುಸಿಯುವ ಭೀತಿ ಆವರಿಸಿದೆ.

ಈಗಲೇ ಎಚ್ಚೆತ್ತುಕೊಂಡು ಈ ಮಾರ್ಗದಲ್ಲಿ ಘನ ವಾಹನಗಳ ಸಂಚಾರ ನಿಷೇಧಿಸಿದರೆ ಉತ್ತಮ. ಇದಲ್ಲದೆ ರಾತ್ರಿ ವೇಳೆ ತಿಳಿಯದೆ ದ್ವಿಚಕ್ರ ವಾಹನ ಸವಾರರು ಬದಿಯಲ್ಲಿ ವಾಹನ ಚಲಾಯಿಸಿದರೆ ಪ್ರಪಾತಕ್ಕೆ ಬೀಳುವ ಅಪಾಯವೂ ಇದೆ. ಈ ಬಗ್ಗೆ ಕೂಡಲೇ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸಚಿವರಿಗೆ ತಿಳಿಯುವ ಪ್ರಯತ್ನ
ಈ ಸಂಬಂಧ ಜೂ.25ರಂದು ಬೈಂದೂರು ಕ್ಷೇತ್ರಕ್ಕೆ ಭೇಟಿ ನೀಡಲಿರುವ ಸಂಸದ ಬಿ.ವೈ. ರಾಘವೇಂದ್ರ ಅವರ ಗಮನಕ್ಕೂ ತಂದು, ಕೇಂದ್ರದ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವರಿಗೂ ತಿಳಿಸುವ ಪ್ರಯತ್ನ ಮಾಡಲಾಗುವುದು ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next