Advertisement

ಕೆಸರು ಗದ್ದೆಯಾದ ರಾಷ್ಟ್ರೀಯ ಹೆದ್ದಾರಿ

09:53 PM Jul 25, 2019 | sudhir |

ಕಾಸರಗೋಡು: ಮುಂಗಾರು ಮಳೆ ಬಿರುಸುಗೊಂಡಿರುವಂತೆ ಕಾಸರ ಗೋಡು ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಬಹುಭಾಗ ಕೆಸರುಗದ್ದೆ ಯಾಗಿ ಮಾರ್ಪಾಡಾಗಿದೆ. ಕಾಸರಗೋಡಿನಿಂದ ತಲಪಾಡಿಯ ತನಕ ಅಲ್ಲಲ್ಲಿ ರಾ.ಹೆದ್ದಾರಿಯಲ್ಲಿ ಹೊಂಡಗುಂಡಿಗಳ ಸಾಮ್ರಾಜ್ಯ ವಾಗಿದೆ. ಅಲ್ಲದೆ ಅಲ್ಲಲ್ಲಿ ರಸ್ತೆ ಕೆಸರು ಗದ್ದೆಯಂತಾಗಿದೆ. ಇದರಿಂದಾಗಿ ಪಾದಚಾರಿಗಳಿಗೆ ಮತ್ತು ವಾಹನ ಸಂಚಾರಕ್ಕೆ ಅಡ್ಡಿ, ಆತಂಕ ಸೃಷ್ಟಿಯಾಗಿದೆ.

Advertisement

ಕಾಸರಗೋಡಿನಿಂದ ತಲಪಾಡಿಯ ವರೆಗಿನ ಎರಿಯಾಲ್‌, ಚೌಕಿ, ಮೊಗ್ರಾಲ್‌, ಕುಂಬಳೆ, ಪೊಸೋಟು, ಮಂಜೇಶ್ವರ, ಮಾಡ, ತೂಮಿನಾಡು, ಕುಂಜತ್ತೂರು, ಸಹಿತ ಬೃಹತ್‌ ಗಾತ್ರದ ಹೊಂಡಗಳಾಗಿ ಅಥವಾ ಕೆಸರು ಗದ್ದೆಯಾಗಿ ಬದಲಾಗಿದೆ. ಮಳೆಯ ಅಬ್ಬರಕ್ಕೆ ರಸ್ತೆ ತೀವ್ರವಾಗಿ ಕೆಟ್ಟು ಹೋಗಿದ್ದು, ವಾಹನ ಸಂಚಾರ ಸವಾಲಿನ ದ್ದಾಗಿದೆ. ರಸ್ತೆಗೆ ಹಾಕಿದ ಡಾಮರು ಕಿತ್ತು ಬಂದಿದ್ದು, ಜಲ್ಲಿ ಮೇಲೆ ಬಿದ್ದು ರಸ್ತೆಯಲ್ಲಿ ಬೃಹತ್‌ ಗಾತ್ರದ ಹೊಂಡ ಸೃಷ್ಟಿಯಾಗಿದೆ. ಹೊಂಡ ಹಾಗೂ ಕೆಸರಿನಿಂದಾಗಿ ವಾಹನ ಸುಗಮ ಸಂಚಾರಕ್ಕೆ ಅಸಾಧ್ಯವಾಗಿದೆ. ಈ ರಸ್ತೆಯಲ್ಲಿ ಸಾಗಬೇಕಾದರೆ ವಾಹನ ಚಾಲಕರು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ವಾಹನ ಚಾಲಕ ಎಚ್ಚರ ತಪ್ಪಿದರೆ ಅಪಾಯವಂತೂ ಖಚಿತ ಎಂಬಂತಹ ಪರಿಸ್ಥಿತಿ ಇದೆ. ರಸ್ತೆ ಕೆಸರು ಗದ್ದೆಯಂತಾಗಿರುವುದರಿಂದ ದ್ವಿಚಕ್ರ ವಾಹನಗಳು ಸ್ಕಿಡ್‌ ಆಗುತ್ತಿರುವುದು ಸಾಮಾನ್ಯವಾಗಿದ್ದು, ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಈಗಾಗಲೇ ಹಲವು ದ್ವಿಚಕ್ರ ವಾಹನಗಳು ಸ್ಕಿಡ್‌ ಆಗಿ ಉರುಳಿ ಬಿದ್ದು ಸವಾರರು ಗಾಯಗೊಂಡ ಘಟನೆಯೂ ನಡೆದಿದೆ.

ಚಲಿಸುವ ವಾಹನಗಳಿಂದಾಗಿ ಪಾದಚಾರಿಗಳ ಮೈಮೇಲೆ ರಸ್ತೆ ನೀರಿನ ಅಭಿಷೇಕವಾಗುತ್ತಿದೆ. ಬಟ್ಟೆ ಕೆಸರು ಮಯವಾಗುತ್ತಿರುವುದು ಸಾಮಾನ್ಯವಾಗುತ್ತಿದೆ. ಇದರಿಂದ ವಾಹನ ಚಾಲಕರ ಮತ್ತು ಪಾದಚಾರಿಗಳ ಮಧ್ಯೆ ಮಾತಿನ ಚಕಮಕಿಗೂ ಕಾರಣವಾಗುತ್ತಿದೆ. ಕೆಲವೆಡೆಗಳಲ್ಲಿ ರಸ್ತೆಯಿಂದ ಜಲ್ಲಿ ಸಿಡಿದು ವಾಹನಗಳಿಗೂ, ಪಾದಚಾರಿಗಳಿಗೂ ಬಡಿಯುತ್ತಿದೆ. ಜಲ್ಲಿ ಸಿಡಿದು ಪಾದಚಾರಿಗಳು ಗಾಯಗೊಂಡ ಘಟನೆಗಳೂ ನಡೆದಿವೆ.

Advertisement

Udayavani is now on Telegram. Click here to join our channel and stay updated with the latest news.

Next