ಬೀಳಗಿ: ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳ ರೈತ ವಿರೋಧಿ ನೀತಿ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ಬೀಳಗಿ ಕ್ರಾಸ್ ಬಳಿಯಲ್ಲಿನ ರಾಷ್ಟ್ರೀಯ ಹೆದ್ದಾರಿ 218 ನ್ನು ಕೆಲ ಕಾಲ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಸಂಯುಕ್ತ ಹೋರಾಟ ಕರ್ನಾಟಕ ರೈತ ದಲಿತ ಮಹಿಳಾ ವಿದ್ಯಾರ್ಥಿ ಯುವಜನ ಕನ್ನಡಪರ ಸಂಘಟನೆಗಳ ಸಮನ್ವಯ ಸಮಿತಿ ಹಾಗೂ ರೈತ ಸಂಘಗಳ ವತಿಯಿಂದ ಚಾರಿತ್ರಿಕ ದೆಹಲಿ ರೈತ ಆಂದೋಲನ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ರೈತ ವಿರೋಧಿ ನೀತಿ ಖಂಡಿಸಿ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಪರಶುರಾಮ ಮಂಟೂರ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರೊಂದಿಗೆ ಬಡವರೊಂದಿಗೆ ಆಟವಾಡುತ್ತಿವೆ. ಸರ್ಕಾರದ ನೀತಿಗಳಿಂದ ರೈತರಿಗೆ ತೊಂದರೆಯಾಗುತ್ತಿದೆ. ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳು ರದ್ದಾಗಬೇಕು. ವಿದ್ಯುತ್ ತಿದ್ದುಪಡಿ ಮಸೂದೆ ವಾಪಸ್ ಪಡೆಯಬೇಕು. ಕಬ್ಬಿನ ದರ ನಿಗದಿ ಮತ್ತು ಬಾಕಿ ಬಿಲ್ ಶೀಘ್ರ ನೀಡಬೇಕು. ಕನಿಷ್ಟ ಬೆಂಬಲ ಬೆಲೆ ಕಾನೂನು ಘೋಷಿಸಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಶೈಲ ನಾಯಕ ಮಾತನಾಡಿ, ರೈತ ವಿರೋಧಿ ಕಾಯ್ದೆಗಳ ವಿರುದ್ಧ ರೈತರ ಹೋರಾಟ ನಿರಂತರವಾಗಿರುತ್ತದೆ. ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಯ ರೈತರ ಬಾಕಿ ಹಣ ಸಂದಾಯ ಮಾಡುವಂತೆ ಕ್ರಮ ಕೈಗೊಂಡು ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಉಪಾಧ್ಯಕ್ಷ ಗೋವಿಂದಪ್ಪ ಸೊಕನಾದಗಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಡಿ.ಎಂ. ನಧಾಪ್, ಬಸು ಹಲಕಿ, ಸದಾಶಿವ ಆಗೋಜಿ, ರಾಜೇಂದ್ರ ಪಾಟೀಲ, ರಾಮಣ್ಣ ಕುರಿ ಇದ್ದರು.