Advertisement

ರಾ. ಹೆದ್ದಾರಿ 75 ರ 2 ಟೋಲ್‌ಗ‌ಳಲ್ಲಿ ಯಾವುದು ಸ್ಥಗಿತ ?

03:39 PM Mar 26, 2022 | Team Udayavani |

ಮುಳಬಾಗಿಲು: ರಾಷ್ಟ್ರೀಯ ಹೆದ್ದಾರಿಗಳಲ್ಲಿ 60 ಕಿ.ಮೀ. ಅಂತರದಲ್ಲಿರುವ ಎರಡು ಟೋಲ್‌ ಪೈಕಿ ಒಂದನ್ನು ಶಾಶ್ವತವಾಗಿ ಮುಚ್ಚಲಾಗುವುದೆಂದು ಕೇಂದ್ರ ಸಾರಿಗೆ, ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಘೋಷಣೆ ಮಾಡಿರುವುದರಿಂದ ಮುಳಬಾಗಿಲು ತಾಲೂಕಿನ ರಾ.ಹೆ.75ರಲ್ಲಿ ಇರುವ 2 ಟೋಲ್‌ನಲ್ಲಿ ಯಾವುದನ್ನು ಮುಚ್ಚಲಾಗುತ್ತದೆ ಎಂಬ ವಿಷಯ ಈಗ ಚರ್ಚೆಗೆ ಒಳಗಾಗಿದೆ.

Advertisement

ರಾಷ್ಟ್ರದ ಮೇರು ರಸ್ತೆಯೆಂದೇ ಪ್ರಸಿದ್ಧಿಯಾದ ರಾ.ಹೆ.4ನ್ನು ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿ ಪಡಿಸಲು ಬೆಂಗಳೂರಿನಿಂದ ಮುಳಬಾಗಿಲು ನಗರದ ಹೊರವಲಯದವರೆಗೆ ಕಾಮಗಾರಿ ಗುತ್ತಿಗೆಯನ್ನು ಹೈದರಾಬಾದ್‌ ಮೂಲದ ಲ್ಯಾಂಕೋ ಕಂಪನಿಗೆ ನೀಡಲಾಗಿತ್ತು. 2011ರ ಮಾರ್ಚ್‌ ವೇಳೆಗೆ ಕೋಟ್ಯಂತರ ರೂ. ವೆಚ್ಚದಲ್ಲಿ ಚತುಷ್ಪಥ ರಸ್ತೆ ನಿರ್ಮಾಣವಾಗಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ರಸ್ತೆ ನಿರ್ಮಾಣದಲ್ಲಿ ಗುಣಮಟ್ಟದ ಕೊರತೆಯಿದೆ ಎಂಬ ಕಾರಣದಿಂದ ಶುಲ್ಕ ವಸೂಲಿಗೆ ಅನುಮತಿ ನೀಡಿರಲಿಲ್ಲ. 2013ರ ಡಿಸೆಂಬರ್‌ 20ರಿಂದ ಲ್ಯಾಂಕೋ ಕಂಪನಿಯು ದೇವರಾಯಸಮುದ್ರ ಗೇಟ್‌ ಸಮೀಪ ನಿರ್ಮಿಸಿರುವ ಟೋಲ್‌ನಲ್ಲಿ ಶುಲ್ಕ ವಸೂಲಿ ಮಾಡಲು ಪ್ರಾರಂಭಿಸಿತ್ತು.

ಮುಳಬಾಗಿಲು ತಾಲೂಕಿನಲ್ಲಿ ಆಂಧ್ರದ ಕಡೆ ಹಾದು ಹೋಗಿರುವ ರಾ.ಹೆ.75ರ ಮದರಸಾದಿಂದ ಕರ್ನಾಟಕ ಗಡಿ ಭಾಗದವರೆಗೆ ಸುಮಾರು 15 ಕಿ.ಮೀ. ಉಳಿದ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರ ಕಾಮಗಾರಿಯನ್ನು ಹೈದರಾಬಾದ್‌ ಮೂಲದ ಜೆಎಸ್‌ಆರ್‌ ಕಂಪನಿಗೆ ನೀಡಿತ್ತು. ಅದರಂತೆ ಈ ಕಂಪನಿಯು ರಸ್ತೆ ಅಭಿವೃದ್ಧಿಪಡಿಸಿ ಎನ್‌.ಯಲುವಹಳ್ಳಿ ಬಳಿ ನಿರ್ಮಿಸಿರುವ ಟೋಲ್‌ಗೇಟ್‌ನಲ್ಲಿ 2015ರ ಜೂ. 13ರಿಂದ ಶುಲ್ಕ ವಸೂಲಿ ಮಾಡಲು ಪ್ರಾರಂಭಿಸಿತ್ತು.

ಕೋಲಾರ ಜಿಲ್ಲೆಯ ಅತ್ಯಂತ ಹಿಂದುಳಿದ ಗಡಿ ಪ್ರದೇಶವಾದ ಮುಳಬಾಗಿಲು ಕೇಂದ್ರದಿಂದ ಸುಮಾರು 30 ಕಿ.ಮೀ. ವ್ಯಾಪ್ತಿಯ ಬೌಗೋಳಿಕ ವಿಸ್ತೀರ್ಣದಲ್ಲಿರುವ ಸುಮಾರು 330ಕ್ಕೂ ಅಧಿಕ ಹಳ್ಳಿಗಳಲ್ಲಿ ಸುಮಾರು 3.30 ಲಕ್ಷಕ್ಕೂ ಅಧಿಕ ಜನರು ವಾಸವಾಗಿದ್ದರೆ. ಇವರಲ್ಲಿ ಹೆಚ್ಚಿನವರೂ ಒಂದಿಲ್ಲೊಂದು ಕಾರ್ಯದಲ್ಲಿ ಮುಳಬಾಗಿಲು ಸೇರಿದಂತೆ ಕೋಲಾರ, ಬೆಂಗಳೂರು ಹಾಗೂ ಪಕ್ಕದ ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ವಿವಿಧ ವಾಹನಗಳಲ್ಲಿ ಹೋಗಿ ಬರುತ್ತಾರೆ.

ಜನರು ಎಲ್ಲಿ ಹೋಗಬೇಕಾದರೂ ಜೆಎಸ್‌ಆರ್‌ ಮತ್ತು ಲ್ಯಾಂಕೋ ಕಂಪನಿಗಳು ಹೆದ್ದಾರಿಯಲ್ಲಿ ನಿರ್ಮಿಸಿರುವ ಟೋಲ್‌ ಗೇಟ್‌ಗಳಲ್ಲಿ ಶುಲ್ಕ ಪಾವತಿಸಿಯೇ ಹಾದು ಹೋಗಬೇಕಿದೆ.

Advertisement

ಕೊರೊನಾ ಬಳಿಕ ಜನರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಬೆಲೆ ಏರಿಕೆಯಿಂದ ವಾಹನಗಳಿಗೆ ಪೆಟ್ರೋಲ್‌, ಡೀಸೆಲ್‌ ಹಾಕಿಸಲು ಪರದಾಡುವುದರ ನಡುವೆ ಟೋಲ್‌ ಕೂಡ ಪಾವತಿಸಬೇಕಾಗುತ್ತದೆ. ಸರ್ಕಾರ ಈ ಟೋಲ್‌ಗ‌ಳನ್ನು ಯಾವಾಗ ತೆರವುಗೊಳಿಸಲಿದೆ ಎಂದು ಜನರು ಕಾಯುತ್ತಿದ್ದಾರೆ. ಮುಳಬಾಗಿಲಿನಿಂದ ಸುಮಾರು 13 ಕಿ.ಮೀ. ದೂರದಲ್ಲಿ ಲ್ಯಾಂಕೋ ಟೋಲ್‌, 18 ಕಿ.ಮೀ. ದೂರದಲ್ಲಿ ಜೆಎಸ್‌ಆರ್‌ ಟೋಲ್‌ಇದೆ. ಕರ್ನಾಟಕದ ಆಂಧ್ರದ ಗಡಿಯಲ್ಲಿ ಎನ್‌.ಯಲುವಹಳ್ಳಿ ಜೆಎಸ್‌ಆರ್‌ ಟೋಲ್‌ನಿಂದ ದೇವರಾಯಸಮುದ್ರ ಬಳಿ ಇರುವ ಲ್ಯಾಂಕೋ ಟೋಲ್‌ಗ‌ಳ ನಡುವೆ ಸುಮಾರು 30 ಕಿ.ಮೀ.ಅಂತರ ಇರುವುದರಿಂದ ಯಾವ ಟೋಲ್‌ ಸ್ಥಗಿತಗೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.

ಮುಳಬಾಗಿಲು ತಾಲೂಕಿನ ಜನರು ಹೆದ್ದಾರಿಯಲ್ಲಿ ಒಂದು ಭಾಗದಿಂದ ಮತ್ತೂಂದು ಭಾಗಕ್ಕೆ ವಾಹನಗಳಲ್ಲಿ ತೆರಳುವಾಗ ಶುಲ್ಕ ಪಾವತಿಸುವುದು ಅನಿವಾರ್ಯವಾಗಿದೆ. ಇದು ಜನರಿಗೆ ಹೊರೆಯಾಗಿದ್ದು, ಕೇಂದ್ರ ಸರ್ಕಾರ ಟೋಲ್‌ಗ‌ಳಲ್ಲಿ ಶೀಘ್ರ ಶುಲ್ಕ ವಸೂಲಾತಿ ಮುಕ್ತಗೊಳಿಸಬೇಕು. -ರಮೇಶ್‌, ನಂಗಲಿ ಟೆಂಪೋ ಚಾಲಕ

ಸಚಿವ ನಿತಿನ್‌ ಗಡ್ಕರಿ ಅವರು ರಾಷ್ಟ್ರೀಯ ಹೆದ್ದಾರಿಯಲ್ಲಿ 60 ಕಿ.ಮೀ. ಅಂತರದಲ್ಲಿರುವ ಎರಡು ಟೋಲ್‌ಗ‌ಳ ಪೈಕಿ ಒಂದನ್ನು ಶಾಶ್ವತವಾಗಿ ಮುಚ್ಚಲಾಗುವುದೆಂದು ಘೋಷಣೆ ಮಾಡಿರುವುದು ಒಳ್ಳೆಯ ವಿಚಾರವಾಗಿದೆ. ಕೇಂದ್ರ ಸರ್ಕಾರದಿಂದ ಆದೇಶ ಬಂದರೆ ಅನುಷ್ಠಾನಗೊಳಿಸಲಾಗುವುದು.-ವೆಂಕಟ್‌ರಾಜಾ ಜಿಲ್ಲಾಧಿಕಾರಿ

-ಎಂ.ನಾಗರಾಜಯ್ಯ

Advertisement

Udayavani is now on Telegram. Click here to join our channel and stay updated with the latest news.

Next