Advertisement
ಸಂಚಾರ ಸಾಹಸ ಮಯ: ಹೌದು, ಹೆದ್ದಾರಿ ಪ್ರಾಧಿಕಾರದ ಅಧೀನದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಹಾಸನದ ದೇವರಾಯಪಟ್ಟಣದ 189.700 ಕಿ. ಮೀ.ನಿಂದ ದಕ್ಷಿಣ ಕನ್ನಡ ಜಿಲ್ಲೆಯ ಅಡ್ಡಹೊಳೆಯ 263 ಕಿ.ಮೀ.. ನುಡುವಿನ 73ಕಿ.ಮೀ. ಸಂಚಾರ ಸಾಹಸ ಮಯವಾಗಿದೆ.
Related Articles
Advertisement
ಚತುಷ್ಪಥ ಕಾಮಗಾರಿ ಆರಂಭವಾದ ಆನೇಮಹಲ್ ಗ್ರಾಮದ 236 ರಿಂದ ಮಾರನಹಳ್ಳಿ 247 ಕಿ.ಮೀ. ನಡುವಿನ 11 ಕಿ.ಮೀ. ರಸ್ತೆ ತೀರ ಹದಗೆಟ್ಟ ಕಾರಣದಿಂದ 11 ಕಿ.ಮೀ. ರಸ್ತೆಯನ್ನು 15 ಕೋಟಿ ವೆಚ್ಚದಲ್ಲಿ ಕಳೆದ ಐದಾರು ತಿಂಗಳ ಹಿಂದೆ ಹೊಂಡ ಮುಚ್ಚಿ ಡಾಂಬರೀಕರಣ ನಡೆಸಲಾಗಿದೆ. ಆದರೆ, ತಾಲೂಕಿನಲ್ಲಿ ಸುರಿದ ಅಲ್ಪ ಪ್ರಮಾಣದ ಮಳೆಗೆ 15 ಕೋಟಿ ರೂ. ಕಾಮಗಾರಿ ಸಂಪೂರ್ಣ ತೊಳೆದು ಹೋಗಿದ್ದು, ಸದ್ಯ 11 ಕಿ.ಮೀ. ರಸ್ತೆಯನ್ನು ಕ್ರಮಿಸಲು ಗಂಟೆಗಳ ಕಾಲ ಹಿಡಿಯುತ್ತಿದ್ದು, ಭಾರೀ ಹೊಂಡಗಳು ಮತ್ತೆ ಬಾಯ್ದೆರೆದಿವೆ.
ಸೇತುವೆಯ ಅಸ್ತಿತ್ವಕ್ಕೆ ಧಕ್ಕೆ: ಹೆದ್ದಾರಿಯಲ್ಲಿ ಎದುರಾಗುವ ಎತ್ತಿನಹಳ್ಳ ಸೇತುವೆಯ ಮೇಲ್ಮೆ„ಯಲ್ಲಿ ಸೃಷ್ಟಿಯಾಗಿರುವ ಹೊಂಡಗಳು ಸೇತುವೆಯ ಅಸ್ತಿತ್ವಕ್ಕೆ ಧಕ್ಕೆ ತರುತ್ತಿದ್ದು, ಸೇತುವೆ ಮೇಲಿನ ಹೊಂಡದಲ್ಲಿ ಸಿಲುಕಿ ಹಲವು ವಾಹನಗಳು ದುರಸ್ತಿತಿಗೆ ಈಡಾಗುತ್ತಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಣ್ಮುಚ್ಚಿ ಕುಳಿತಿದೆ.
ರಾ.ಹೆ.75 ಕುಂಟುತ್ತಾ ಸಾಗುತ್ತಿರುವ ಕಾಮಗಾರಿ: 2015ಕ್ಕೂ ಮುನ್ನ ಶಿರಾಡಿಘಾಟಿನಲ್ಲಿದ್ದ ಡಾಂಬರ್ ರಸ್ತೆಯಲ್ಲಿ ಬಾರೀ ಹೊಂಡಗಳು ಸೃಷ್ಟಿಯಾಗುತ್ತಿದ್ದ ಪರಿಣಾಮ ಹೆದ್ದಾರಿ ಕಾಮಗಾರಿ ಸಂಚಾರ ಅಸಾಧ್ಯ ಎಂಬ ಕಾರಣಕ್ಕೆ ಹಲವು ಪ್ರತಿಭಟನೆಗಳು ನಡೆದ ನಂತರ ಸರ್ಕಾರ 237 ರಿಂದ 263 ರ ನಡುವಿನ 26 ಕಿ.ಮೀ.ಹೆದ್ದಾರಿಯನ್ನು 2014 ರಿಂದ 2018 ರವರಗೆ ಕಾಂಕ್ರಿಟೀಕರಣ ನಡೆಸಲಾಗಿದೆ. 2023 ರ ಆಗಸ್ಟ್ ತಿಂಗಳವರಗೆ ಗುತ್ತಿಗೆದಾರರು ರಸ್ತೆ ನಿರ್ವಹಣೆಯ ಮಾಡಬೇಕಾಗಿತ್ತು. ಸದ್ಯ ಗುತ್ತಿಗೆದಾರರ ಹೆದ್ದಾರಿ ನಿರ್ವಹಣೆಯ ಅವಧಿ ಮುಗಿದಿದ್ದು, ನಿರ್ವಹಣೆ ಅವಧಿ ಮುಗಿದ ಒಂದೇ ತಿಂಗಳಿನಲ್ಲಿ ಉತ್ತಮವಾಗಿರುವ ಕಾಂಕ್ರಿಟ್ ರಸ್ತೆ ಅಲ್ಲಲ್ಲಿ ಗುಂಡಿಗಳು ಬಿದ್ದಿದ್ದು, ವೇಗವಾಗಿ ಬರುವ ವಾಹನಗಳು ಗುಂಡಿಗಳಿಗೆ ಬೀಳುವಂತಾಗಿದೆ.
ವಾಹನ ಸವಾರರಿಗೆ ಅಡಚಣೆ: ಈ 11 ಕಿ.ಮೀ. ರಸ್ತೆ ವಾಹನ ಸವಾರರ ಪಾಲಿಗೆ ನರಕವಾಗಿದೆ. ಮಳೆ ಬಂದರೆ ರಸ್ತೆಯಲ್ಲಿ ಬಾಯಿ ತೆರೆದಿರುವ ಗುಂಡಿಗಳಲ್ಲಿ ನೀರು ನಿಂತು ಸವಾರರು ಅಪಘಾತಕ್ಕೆ ತುತ್ತಾಗುತ್ತಿದ್ದಾರೆ. ಇದೀಗ ಮಳೆ ನಿಂತಿರುವುದರಿಂದ ರಸ್ತೆ ಕಿತ್ತು ಹೋಗಿ ವಿಪರೀತ ಧೂಳು ಬರುತ್ತಿದ್ದು, ವಾಹನ ಸವಾರರಿಗೆ ಧೂಳಿನ ಪ್ರೋಕ್ಷಣೆಯಾಗುತ್ತಿದೆ.
ತೆರಿಗೆ ಹಣ ಪೋಲು: 15 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಿರುವ ಆಂಧ್ರಪ್ರದೇಶ ಮೂಲದ ಕಂಪನಿ ಹಾಗೂ ಕಾಮಗಾರಿ ಉಸ್ತುವಾರಿ ವಹಿಸಿದ್ದ ಇಂಜಿನಿಯರ್ ಮೇಲೆ ಇದುವರಗೆ ಯಾವುದೇ ಕ್ರಮ ಜರುಗಿಲ್ಲ. ಕಾಮಗಾರಿ ಉಸ್ತುವಾರಿ ಹೊಣೆ ಹೊತ್ತಿದ್ದ ಇಂಜಿನಿಯರ್ ಹುದ್ದೆಯನ್ನೇ ಬಿಟ್ಟು ಹೋಗಿದ್ದಾರೆ ಎಂದು ಇಲಾಖೆ ಹೇಳುತ್ತಿದ್ದು, ಕಳಪೆ ಕಾಮಗಾರಿ ಬಗ್ಗೆ ಮಾತನಾಡಲು ಯಾವುದೇ ಅಧಿಕಾರಿಗಳು ಸಿದ್ಧರಿಲ್ಲದ ಪರಿಣಾಮ ಜನರ ತೆರಿಗೆ ಹಣ ಅನಾವಶ್ಯಕವಾಗಿ ಪೋಲಾಗಿದೆ.
ರಸ್ತೆ ಕಳಪೆ ಕಾಮಗಾರಿ ಕುರಿತು ತನಿಖೆ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ. ಕೊಲ್ಲಹಳ್ಳಿಯಿಂದ ಪಟ್ಟಣ ಮಾರ್ಗವಾಗಿ ಮಾರನಹಳ್ಳಿವರೆಗೆ ಮತೊಮ್ಮೆ ಮರು ಡಾಂಬರೀಕರಣ ಮಾಡಬೇಕು. – ಸಿಮೆಂಟ್ ಮಂಜು, ಶಾಸಕರು
15 ಕೋಟಿ ರೂ. ವೆಚ್ಚದಲ್ಲಿ ನಡೆದ ಡಾಂಬರೀಕರಣ ಕಾಮಗಾರಿ ಕೇವಲ ಮೂರು ತಿಂಗಳಲ್ಲಿ ಕಿತ್ತು ಹೋಗಿರುವುದರಿಂದ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರು ಹಾಗೂ ಇಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಲಾಗುವುದು. – ಸಂಜೀತ್ ಶೆಟ್ಟಿ, ಅಧ್ಯಕ್ಷರು, ಶಿರಾಡಿ ಉಳಿಸಿ ಹೋರಾಟ ಸಮಿತಿ
ಮರು ಡಾಂಬರೀಕರಣ ಮಾಡಿರುವ ರಸ್ತೆ ಕೆಲವೇ ತಿಂಗಳಿಗೆ ಕಿತ್ತು ಬಂದಿರುವುದು ಬೇಸರದ ಸಂಗತಿಯಾಗಿದೆ. ಮರು ಡಾಂಬರೀಕರಣ ಹೆಸರಿನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದರೂ ಯಾವುದೇ ಕ್ರಮವನ್ನು ಕೇಂದ್ರ ಲೋಕೋಪಯೋಗಿ ಸಚಿವರು ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. – ಯಡೇಹಳ್ಳಿ ಮಂಜುನಾಥ್, ಕೆಪಿಸಿಸಿ ಸದಸ್ಯರು
-ಸುಧೀರ್ ಎಸ್.ಎಲ್.