Advertisement
ಉಳ್ಳಾಲ ತಾಲೂಕಿನ ಕಲ್ಲಾಪುವಿನಿಂದ ತಲಪಾಡಿವರೆಗೆ ಸರ್ವೀಸ್ ರಸ್ತೆ ಸಮಸ್ಯೆ ಒಂದೆಡೆಯಾದರೆ, ಅಪಘಾತ ವಲಯ ಎಂದು ಉಳ್ಳಾಲ ಸಂಪರ್ಕಿಸುವ ಓವರ್‌ಬ್ರಿಡ್ಜ್ ಕ್ರಾಸ್ ರಸ್ತೆಯನ್ನು ಕಾಪಿಕಾಡು ಬಳಿ ಸ್ಥಳಾಂತರಿಸಿ ಅವೈಜ್ಞಾನಿಕವಾಗಿ ಯೂ ಟರ್ನ್ ನಿರ್ಮಾಣದಿಂದ ಇಲ್ಲಿ ಅಪಘಾತಗಳು, ಜೀವಹಾನಿಗೆ ಕಾರಣವಾಗುತ್ತಿದೆ.
Related Articles
Advertisement
ಓವರ್‌ಬ್ರಿಡ್ಜ್ ಮತ್ತು ಕಾಪಿಕಾಡು ಹೆದ್ದಾರಿಯ ಎರಡೂ ಕಡೆ ಇಳಿಜಾರಾಗಿದ್ದು ಅತೀವೇಗವಾಗಿ ಬಂದು ಯೂಟರ್ನ್ ಮಾಡುವ ವಾಹನಗಳಿಗೆ ಡಿಕ್ಕಿ ಹೊಡೆಯುವುದು ಸಾಮಾನ್ಯವಾಗಿದೆ. ಲಾರಿಯಂತಹ ಘನವಾಹನಗಳು ಏಕಕಾಲ ದಲ್ಲಿ ಯೂಟರ್ನ್ ತೆಗೆಯಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಲಾರಿ, ಕಂಟೈನರ್‌ಗಳು ಹೆದ್ದಾರಿಯನ್ನು ಸ್ಥಗಿತಗೊಳಿಸಿ ಯೂಟರ್ನ್ ಮಾಡುವುದುರಿಂದ ಹೆದ್ದಾರಿಯ ಸುಗಮ ಸಂಚಾರಕ್ಕೂ ತೊಂದರೆಯಾಗುತ್ತಿದೆ. ಕುಂಪಲ, ಪಿಲಾರ್, ಅಂಬಿಕಾರೋಡ್, ಕಾಪಿಕಾಡ್ ಜನವಸತಿ ಪ್ರದೇಶವಾದ್ದರಿಂದ ಈ ಪ್ರದೇಶದಲ್ಲಿ ಸರ್ವೀಸ್ ರಸ್ತೆಯೂ ಇಲ್ಲದೆ ವಾಹನಗಳು ವಿರುದ್ಧ ದಿಕ್ಕಿನಿಂದ (ರಾಂಗ್ ಸೈಡ್‌ನಲ್ಲಿ)ಬರುವಾಗ ಅಪಘಾತಗಳು ಹೆಚ್ಚಾಗುತ್ತಿದೆ.
ಅಂಬಿಕಾರೋಡ್‌ಗೆ ಸ್ಥಳಾಂತರಕ್ಕೆ ಆಗ್ರಹ
ಓವರ್ ಬ್ರಿಡ್ಜ್ ಬಳಿ ಕ್ರಾಸ್ ರಸ್ತೆಯನ್ನು ಕಾಪಿಕಾಡಿಗೆ ಸ್ಥಳಾಂತರಿಸಿದಾಗ ಅವೈಜ್ಞಾನಿಕವಾಗಿ ಸ್ಥಳಾಂತರಿಸಲಾಗುತ್ತದೆ ಎಂದು ಉದಯವಾಣಿ ಪತ್ರಿಕೆಯೂ ಎಚ್ಚರಿಸಿತ್ತು. ಇದೀಗ ಕಾಪಿಕಾಡ್‌ನಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದು, ಕಾಪಿಕಾಡು ಹೆದ್ದಾರಿ ಯೂಟರ್ನ್ ರದ್ದು ಮಾಡಿ ಅಂಬಿಕಾರೋಡ್‌ಗೆ ಸ್ಥಳಾಂತರಿಸುವಂತೆ ಮತ್ತು ಸರ್ವೀಸ್ ರಸ್ತೆ ನಿರ್ಮಿಸುವಂತೆ ಆಗ್ರಹಿಸಿ ತೊಕ್ಕೊಟ್ಟು, ಕಾಪಿಕಾಡ್ ಸೇರಿದಂತೆ ಹೆದ್ದಾರಿಯಿಂದ ಸಮಸ್ಯೆಗೊಳಗಾಗಿರುವ ಸ್ಥಳೀಯರು ಸೇರಿಕೊಂಡು “ತೊಕ್ಕೊಟ್ಟು ಹೆದ್ದಾರಿ ಸುರಕ್ಷತಾ ಹೋರಾಟ ಸಮಿತಿ ರಚನೆ ಮಾಡಿ ಜಿಲ್ಲಾಧಿಕಾರಿ, ಹೆದ್ದಾರಿ ಪ್ರಾಧಿಕಾರ, ಪೊಲೀಸ್ ಇಲಾಖೆ, ಸ್ಥಳೀಯ ಸಂಸದರಿಗೆ, ಶಾಸಕರಿಗೆ ಮನವಿಯನ್ನು ಸಲ್ಲಿಸಿದ್ದಾರೆ.
ಅಂಬಿಕಾರೋಡ್ ಎತ್ತರ ಪ್ರದೇಶವಿದ್ದು, ಹೆದ್ದಾರಿ ಬದಿಯಲ್ಲೂ ಅತೀ ಹೆಚ್ಚು ಅಗಲ ಪ್ರದೇಶ ಹೊಂದಿದೆ. ಇಲ್ಲಿ ಯೂಟರ್ನ್ ನಿರ್ಮಿಸಿದರೆ ಕಾಪಿಕಾಡು, ಕುಂಪಲ ಬೈಪಾಸ್‌ನಿಂದ ವಿರುದ್ಧ ದಿಕ್ಕಿನಿಂದ ಬರುವ ವಾಹನಗಳನ್ನು ತಡೆಯಲು ಸಾಧ್ಯವಿದ್ದು, ಆಪಘಾತಗಳನ್ನು ಕಡಿಮೆ ಮಾಡಬಹುದು, ಕುಂಪಲ ಬೈಪಾಸ್ ಕಡೆಗೂ ಹೆದ್ದಾರಿಯಲ್ಲಿ ಅತೀ ವೇಗವಾಗಿ ಬರುವ ವಾಹನಗಳ ವೇಗಮಿತಿಯನ್ನು ಕಡಿಮೆಗೊಳಿಸಲು ಸಾಧ್ಯವಿದೆ.
ರಾಷ್ಟ್ರೀಯ ಹೆದ್ದಾರಿ 66ರ ಕಾಪಿಕಾಡು ಸೇರಿದಂತೆ ತಲಪಾಡಿ ವರೆಗಿನ ಸಮಸ್ಯೆಗೆ ಸ್ಥಳೀಯ ಸಂಸದರು, ಜಿಲ್ಲಾಧಿಕಾರಿ, ಹೆದ್ದಾರಿ ಪ್ರಾಧಿಕಾರ ಮತ್ತು ಪೊಲೀಸ್ ಇಲಾಖೆ, ಸ್ಥಳೀಯ ಜನಪ್ರತಿನಿಧಿಗಳ ತುರ್ತು ಸಭೆ ಕರೆದು ನಿರ್ಣಯ ತೆಗೆದುಕೊಳ್ಳಬೇಕು. ತೊಕ್ಕೊಟ್ಟು ಮೇಲ್ಸೇತುವೆ ನಿರ್ಮಾಣ ಸಂದರ್ಭದಲ್ಲಿಯೇ ಈ ಅವೈಜ್ಞಾನಿಕ ಕಾಮಗಾರಿಯ ವಿರುದ್ಧ ಧ್ವನಿಯೆತ್ತಿದ್ದೆ. ಇದೀಗ ಜನರಿಗೆ ತೊಂದರೆಯಾಗುತ್ತಿದ್ದು, ರಸ್ತೆ ಸುರಕ್ಷೆ ಮತ್ತು ಸ್ಥಳೀಯರಿಗೆ ತೊಂದರೆಯಾಗದಂತೆ ಸಮಸ್ಯೆಯನ್ನು ಬಗೆಹರಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದೇನೆ. – ಯು.ಟಿ. ಖಾದರ್, ಶಾಸಕರು
ಸಮಸ್ಯೆಯ ಕುರಿತು ಈಗಾಗಲೇ ಜನಪ್ರತಿನಿಧಿಗಳಿಗೆ, ಹೆದ್ದಾರಿ ಪ್ರಾಧಿಕಾರಕ್ಕೆ, ಜಿಲ್ಲಾಧಿಕಾರಿಗಳಿ, ಪೊಲೀಸ್ ಇಲಾಖೆಗೆ ಸಮಿತಿಯಿಂದ ಮನವಿ ಮಾಡಿದ್ದು, ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಪ್ರಥಮ ಹಂತದಲ್ಲಿ ಕಾಪಿಕಾಡ್ ಯೂಟರ್ನ್ ಅಂಬಿಕಾ ರಸ್ತೆಗೆ ಸ್ಥಳಾಂತರ ಮಾಡುವುದು ಮತ್ತು ತೊಕ್ಕೊಟ್ಟು ಜಂಕ್ಷನ್‌ನಿಂದ ಕುಂಪಲ ಬೈಪಾಸ್‌ವರೆಗೆ ಎರಡೂ ಬದಿಯಲ್ಲಿ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಒತ್ತಡ ಹಾಕುವ ನಿಟ್ಟಿನಲ್ಲಿ ಸಮಿತಿ ಈಗಾಗಲೇ ಚರ್ಚಿಸಿದ್ದು ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರವಾಗುವ ನಿಟ್ಟಿನಲ್ಲಿ ಸಮಿತಿ ಹೋರಾಟ ನಡೆಸಲಿದೆ. –ಸುಕುಮಾರ್, ತೊಕ್ಕೊಟ್ಟು ಹೆದ್ದಾರಿ ಸುರಕ್ಷತಾ ಹೋರಾಟ ಸಮಿತಿ