Advertisement

ಚತುಷ್ಪಥ ರಸ್ತೆ: ಅರ್ಧದಷ್ಟು ಭೂಸ್ವಾಧೀನ ಪೂರ್ಣ

06:00 AM Jul 03, 2018 | |

ಕಾಸರಗೋಡು: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಮಹತ್ವಾಕಾಂಕ್ಷೆಯ ರಾಷ್ಟ್ರೀಯ  ಹೆದ್ದಾರಿ-66 ಚತುಷ್ಪಥಗೊಳಿಸಿ ಅಭಿವೃದ್ಧಿಗೊಳಿಸಲು ಅಗತ್ಯವಾದ ಭೂ ಸ್ವಾಧೀನ ಪ್ರಕ್ರಿಯೆ ಅರ್ಧದಷ್ಟು ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದ ಕಾಮಗಾರಿ ಉದ್ಘಾಟನೆ ಜುಲೈ ತಿಂಗಳ ಅಂತ್ಯದಲ್ಲಿ ಅಥವಾ ಆಗಸ್ಟ್‌ ತಿಂಗಳ ಪ್ರಥಮ ವಾರದಲ್ಲಿ ನಡೆಯಲಿದೆ ಎಂದು ಲೋಕೋಪಯೋಗಿ ಖಾತೆ ಸಚಿವ ಜಿ. ಸುಧಾಕರನ್‌ ಹೇಳಿದ್ದಾರೆ.

Advertisement

ತಲಪಾಡಿಯಿಂದ  ಭೂಸ್ವಾಧೀನ  ಪ್ರಕ್ರಿಯೆ ಬಹುತೇಕ ಸಂಪೂರ್ಣವಾಗಿದ್ದು ಕೇಂದ್ರ ಸರಕಾರದಿಂದ ಟೆಂಡರ್‌ ಪ್ರಕ್ರಿಯೆಗೆ ಅನುಮತಿ ಲಭಿಸಿದೆ. ಕಾಸರಗೋಡು ಜಿಲ್ಲೆ ಯಲ್ಲಿ 86 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ  4,300 ಕೋ. ರೂ. ನಿರೀಕ್ಷಿಸ ಲಾಗಿದೆ. ಕಾಸರಗೋಡು ಜಿಲ್ಲೆಗೆ ಈಗಾಗಲೇ 1,750 ಕೋ. ರೂ. ಮಂಜೂರಾಗಿದೆ.

ಕೇರಳ ರಾಜ್ಯ ಸರಕಾರವು ಈ ತನಕ ಒಟ್ಟು ಶೇ. 55ನಷ್ಟು ಭೂಸ್ವಾಧೀನಪಡಿಸಿದ್ದು, ಇನ್ನು ಉಳಿದಿರುವ ಶೇ. 45 ಭೂಸ್ವಾಧೀನ ವರ್ಷದೊಳಗೆ ಪೂರ್ಣಗೊಳ್ಳಲಿದೆ ಎಂದು ರಾಜ್ಯ ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

ಕಾಸರಗೋಡು ಜಿಲ್ಲೆಯ ತಲಪಾಡಿಯಿಂದ ತಿರುವನಂತಪುರದ ಕಳಕುಟ್ಟಂನವರೆಗೆ ಚಾಚಿಕೊಂಡಿರುವ ರಾ.ಹೆ.- 66 ಚತುಷ್ಪಥಗೊಳಿಸಲು ಒಟ್ಟು 2,629 ಹೆಕ್ಟೇರ್‌ ಭೂಮಿ ಅಗತ್ಯವಿದ್ದು, 610 ಕಿ.ಮೀ. ನೀಳಕ್ಕೆ ರಾಷ್ಟ್ರೀಯ ಹೆದ್ದಾರಿಯು ಒಟ್ಟು 10 ಜಿಲ್ಲೆಗಳ ಮುಖಾಂತರ ಹಾದುಹೋಗುತ್ತದೆ.

1,469 ಹೆಕ್ಟೇರ್‌ ಭೂಮಿ ಸ್ವಾಧೀನ
ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಅನೇಕ ತೊಡಕುಗಳ ಮಧ್ಯೆಯೂ ರಾಜ್ಯ ಕಂದಾಯ ಇಲಾಖೆಯು ಹತ್ತು ಜಿಲ್ಲೆ ಗಳಲ್ಲಿ 1,469 ಹೆಕ್ಟೇರ್‌ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಸೆಪ್ಟಂಬರ್‌ ತಿಂಗಳೊಳಗೆ ಉಳಿದ 1,160 ಹೆಕ್ಟೇರ್‌ ಭೂ ಸ್ವಾದೀನಪಡಿಸಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌.ಎಚ್‌. ಎ.ಐ.)ಗೆ ಹಸ್ತಾಂತರಿಸಬೇಕಿದೆ.

Advertisement

2020 ಡಿಸೆಂಬರ್‌ನೊಳಗೆ ಪೂರ್ಣ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಡಿಸೆಂಬರ್‌ 2020ರ ವೇಳೆಗೆ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆಯನ್ನು ಪೂರ್ಣ  ಗೊಳಿಸುವ ಕಾಲಾವಧಿಯನ್ನು ಹೊಂದಿದೆ. ನಾಲ್ಕು ಮತ್ತು 6 ಪಥಗಳಲ್ಲಿ ಅಗಲೀಕರಣ ಗೊಳ್ಳಲಿರುವ ರಾ.ಹೆ. 45 ಮೀ. ಅಗಲವಿರಲಿದೆ. 3(ಎ) ನಿಯಮಾವಳಿ ಆಧಾರದಲ್ಲಿ ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ, ಮಲಪ್ಪುರಂ, ಅಲಪ್ಪುಳ, ಕೊಲ್ಲಂ ಮತ್ತು ತಿರುವನಂತಪುರ ಜಿಲ್ಲೆಗಳಲ್ಲಿ ಸ್ವಾಧೀನವಾದ ಭೂಮಿಯ ದಾಖಲೆಗಳನ್ನು ರಾ.ಹೆ. ಪ್ರಾಧಿಕಾರಕ್ಕೆ ಒಪ್ಪಿಸಲಾಗಿದೆ. ಎರ್ನಾಕುಳಂ ಜಿಲ್ಲೆ, ತೃಶ್ಶೂರಿನ ಒಂದು ತಾಲೂಕಿನ ಭೂ ಸ್ವಾಧೀನ ಪ್ರಕ್ರಿಯೆಯ ಮಾಹಿತಿ ಪ್ರಕಟಿಸಲಾಗುವುದು ಎಂದು ರಾ.ಹೆ. ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.

ಭೂ ಸ್ವಾಧೀನ ಪ್ರಕ್ರಿಯೆಯ 3(ಡಿ) ನಿಯಮಾವಳಿ ಆಧಾರದಲ್ಲಿ ನಡೆಯುತ್ತಿದೆ. ನಿವೇಶನ, ವಸತಿ ಹಾಗೂ ಅಂಗಡಿ ಮುಂಗಟ್ಟುಗಳ ನೆಲಸಮ ಪ್ರಕ್ರಿಯೆಯು ಶೀಘ್ರದಲ್ಲೆ ಆರಂಭಗೊಳ್ಳಲಿದೆ. ಈ ಪ್ರಕ್ರಿಯೆಯು 3(ಜಿ) ನಿಯಮಾವಳಿ ಆಧಾರದ ನಷ್ಟ ಪರಿಹಾರ ನೀಡಿಕೆಯ ಅನಂತರದಲ್ಲಿ ಮುಂದುವರಿಯಲಿದೆ. ಸ್ವಾಧೀನಪಡಿಸಿಕೊಂಡ‌ ಭೂಮಿಯ ಮೌಲ್ಯ ಮತ್ತು ಪರಿಹಾರವು 2013ರ ಪುನರ್ವಸತಿ ಅಧಿನಿಯಮದ ಮೇಲೆ ಅವಲಂಬಿಸಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಮೂಲಕ ಪರಿಹಾರ ಮತ್ತು ಪುನರ್ವಸತಿ ಕಾರ್ಯ ಮುಂದುವರಿಯಲಿದೆ. 

ರಾಜ್ಯದಲ್ಲಿ ಒಂದು ಕಿ.ಮೀ. ರಸ್ತೆ ಭೂ ಸ್ವಾಧೀನ ಪ್ರಕ್ರಿಯೆಗೆ ಸಚಿವಾಲಯವು ಅಂದಾಜು 6 ಕೋಟಿ ರೂ. ಮೊತ್ತವನ್ನು ಪರಿಹಾರವಾಗಿ ನೀಡಬೇಕಿದೆ ಎಂದು ರಾಜ್ಯ ಸರಕಾರ ತಿಳಿಸಿದೆ. ಉಳಿದ ರಾಜ್ಯಗಳಲ್ಲಿ ಈ ಮೊತ್ತವು 65 ಲಕ್ಷ ರೂ. ಗಳಷ್ಟಿತ್ತು ಎನ್ನಲಾಗಿದೆ. ಕೇಂದ್ರ ಸರಕಾರದ ಭಾರತಮಾಲಾ ಯೋಜನಾ ಕಾರ್ಯ ಯೋಜನೆಯ ಅಧೀನದಲ್ಲಿ ರಸ್ತೆ ನಿರ್ಮಾಣ, ನಿರ್ವಹಣೆ, ವರ್ಗಾವಣೆ (ಬಾಟ್‌)ಗೆ ಅಂದಾಜು 26,000 ಕೋಟಿ ರೂ. ತಗಲ ಬಹುದೆಂದು ಅಂದಾಜಿಸಲಾಗಿದೆ.

ಎಲ್ಲೆಲ್ಲಿ  ಭೂಸ್ವಾಧೀನ ಬಾಕಿ?
ಕುಂಜತ್ತೂರು, ಕೋಡಿಬೈಲು, ಶಿರಿಯಾ, ಮೊಗ್ರಾಲ್‌, ಅಡ್ಕತ್ತಬೈಲು, ಕಾಸರಗೋಡು, ಚೆಂಗಳ, ಪನಯಾಲ, ಪುಲ್ಲೂರು, ಅಜಾನೂರು, ಹೊಸದುರ್ಗ ವಿಲೇಜುಗಳಲ್ಲಿ ಸ್ಥಳ ಹಸ್ತಾಂತರ ಪ್ರಕ್ರಿಯೆ ಮತ್ತು ನಷ್ಟ ಪರಿಹಾರ ನೀಡಿಕೆಯ ಕಾರ್ಯ ಬಾಕಿ ಉಳಿದಿದೆ. ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಒಳಪಟ್ಟ  ಸ್ಥಳಗಳಲ್ಲಿರುವ ಕಟ್ಟಡಗಳ ಬೆಲೆ ನಿರ್ಣಯ ಪ್ರಕ್ರಿಯೆಯೂ ಮುಗಿದಿದೆ. ಜಿಲ್ಲೆಯ ಮೊಗ್ರಾಲ್‌ಪುತ್ತೂರು, ಅರಿಕ್ಕಾಡಿ, ಕೊಯಿಪ್ಪಾಡಿ, ತೆಕ್ಕಿಲ್‌, ಉದ್ಯಾವರ ಗ್ರಾಮ ಕಚೇರಿಗೆ ಒಳಪಟ್ಟ  ಸ್ಥಳಗಳು ಚಿನ್ನದ  ಬೆಲೆಗೆ ಹಸ್ತಾಂತರಗೊಂಡಿವೆ. ಸಿಪಿಸಿಆರ್‌ಐ, ಮೃಗ ಸಂರಕ್ಷಣಾ ಕೇಂದ್ರ ಕಚೇರಿ, ಜುಮಾ ಮಸೀದಿ, ಕಾಸರಗೋಡು ನಗರಸಭೆ, ಕುಂಬಳೆ ಗ್ರಾ.ಪಂ, ಸಹಿತ ಕುಟುಂಬ ಕ್ಷೇಮ ಆರೋಗ್ಯ ಕೇಂದ್ರ, ಚೆಮ್ನಾಡ್‌ ಗ್ರಾ.ಪಂ. ಒಳಪಟ್ಟ ಸ್ಥಳಗಳ ಹಸ್ತಾಂತರವು  ಅವಲೋಕನದ  ಬಳಿಕ ನಡೆಯಲಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.

ಭೂಸ್ವಾಧೀನಕ್ಕೆ  206.65 ಕೋ.ರೂ.
ಕೇಂದ್ರ ಸರಕಾರವು 600 ಕಿ.ಮೀ. ಮಲೆನಾಡು ಸಹಿತ ಕರಾವಳಿ ಹೆದ್ದಾರಿಯನ್ನು ವಾಮದಪದವಿನಿಂದ ಕಲ್ಲಿಕೋಟೆಯ ತನಕ ನಿರ್ಮಿಸಲು ಸಹಕರಿಸಲಿದೆ ಎಂದು ಈ ಹಿಂದೆ ತಿಳಿಸಿತ್ತು. ರಾ. ಹೆದ್ದಾರಿಯ ಅಗಲೀಕರಣಕ್ಕೆ ಅಗತ್ಯವಿರುವ ಜಿಲ್ಲೆಯ 143.19 ಹೆಕ್ಟೇರ್‌ ಭೂಮಿಯನ್ನು ಹಸ್ತಾಂತರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಜಿಲ್ಲೆಯ ಸುಮಾರು 4 ಸಾವಿರ ಮಂದಿಯ ಸ್ಥಳವನ್ನು ರಾ.ಹೆ. ಪ್ರಾಧಿಕಾರದ ಉಪ ನಿರ್ದೇಶಕರು ಮೌಲ್ಯ ನಿರ್ಣಯದ ಬಳಿಕ ಇಲಾಖೆಗೆ ಹಸ್ತಾಂತರಿಸಲಿದ್ದಾರೆ. 517 ಮಂದಿಗೆ ಸ್ಥಳದ ನಷ್ಟ ಪರಿಹಾರವಾಗಿ ಒಟ್ಟು 86.65 ಕೋ. ರೂ. ರಾಷ್ಟ್ರೀಯ ಹೆದ್ದಾರಿ ಇಲಾಖೆ ಅನುಮೋದಿಸಿದೆ. 190 ಮಂದಿಗೆ 35 ಕೋ.ರೂ. ಪರಿಹಾರ ಧನಸಹಾಯವನ್ನು ನೀಡಲಾಗಿದೆ. ಉಳಿದ 620 ಮಂದಿಯ ಭೂ ಸ್ವಾಧೀನಪಡಿಸಿಕೊಳ್ಳ‌ಲು 120 ಕೋ.ರೂ.ಆವಶ್ಯಕತೆಯಿರುವುದಾಗಿ ಪ್ರಾಧಿಕಾರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next