Advertisement

ಹೆದ್ದಾರಿಯ ಈ ಭಾಗದಲ್ಲೂ ಇರಲಿ ಹೆಜ್ಜೆ ಹೆಜ್ಜೆಗೆ ಎಚ್ಚರ !

10:26 AM Sep 21, 2019 | mahesh |

ಇಲ್ಲಿ ರಾಷ್ಟ್ರೀಯ ಹೆದ್ದಾರಿ 66 ವಿಶಾಲವಾಗಿದೆ. ಹೊಂಡಗುಂಡಿಗಳಿಲ್ಲದೆ ಸಲೀಸಾಗಿದೆ.
ದೂರದಿಂದ ಕಾಣುವಾಗ ಖುಷಿಯೆನ್ನಿಸುತ್ತದೆ. ಆದರೆ ವಾಸ್ತವ ಹಾಗಿಲ್ಲ. ಇಲ್ಲದ ಸರ್ವೀಸ್‌ ರಸ್ತೆಯಿಂದಾಗಿ ವಿರುದ್ಧ ದಿಕ್ಕಿನಿಂದ ಸವಾರಿ, ಅಪಾಯಕಾರಿ ಡೈವರ್ಶನ್‌, ಬೇಕಾದಲ್ಲಿ ಅಂಡರ್‌ಪಾಸ್‌ ಅಥವಾ ಫ್ಲೈಓವರ್‌ ಕೊಡದಿರುವುದು, ಸ್ಪಷ್ಟ ನಿರ್ದೇಶನ ನೀಡುವ ಸೂಚನ ಫ‌ಲಕಗಳ ಕೊರತೆ, ಜಂಕ್ಷನ್‌ಗಳಲ್ಲಿ ಗೊಂದಲ ಹುಟ್ಟಿಸುವ ಟ್ರಾಫಿಕ್‌… ಸುಗಮ ಸಂಚಾರಕ್ಕೆ, ಸುಲಲಿತ ಪ್ರಯಾಣಕ್ಕೆ ರಕ್ತನಾಳದಂತೆ ಇರಬೇಕಾಗಿದ್ದ ಚತುಷ್ಪಥ ಹೆದ್ದಾರಿಯೇ ಇಲ್ಲಿ ದಾರಿ ತಪ್ಪಿದೆ.

Advertisement

ಉಡುಪಿ: ಕಾಪುವಿನಲ್ಲಿ ರಾಷ್ಟ್ರೀಯ ಹೆದ್ದಾರಿ 66 ಫ್ಲೈ ಓವರ್‌ ಏರಿ, ಇಳಿದು ಸಾಗುತ್ತದೆ. ಇಲ್ಲಿಂದ ತೊಡಗಿ ಕಟಪಾಡಿ ಜಂಕ್ಷನ್‌ ವರೆಗಿನ ರಸ್ತೆಯಲ್ಲಿ ವಾಹನ ಸವಾರರು – ಪಾದಚಾರಿಗಳನ್ನು ಮುಗ್ಗರಿಸುವಂತೆ ಮಾಡುವ ಸಮಸ್ಯೆಗಳೂ ಹಾಗೆಯೇ; ಏರುತ್ತ ಇಳಿಯುತ್ತ ಮುಂದುವರಿಯುತ್ತವೆ.

ಕಾಪುವಿನಲ್ಲಿ, ಫ್ಲೈ ಓವರ್‌ನ ಒಂದು ಕೊನೆಯಾಗಿ ರುವ ಹಳೆ ಮಾರಿಗುಡಿ-ವಿದ್ಯಾನಿಕೇತನ ಶಾಲೆ ಕಡೆಯ ಭಾಗದಲ್ಲಿ ಸರ್ವೀಸ್‌ ರಸ್ತೆ ಇಲ್ಲ. ಇಲ್ಲಿ ಆಗಾಗ್ಗೆ ಅಪಘಾತ ಗಳು ಸಂಭವಿಸುವುದಕ್ಕೂ ಇದು ಪ್ರಧಾನ ಕಾರಣ. ಉಚ್ಚಿಲ ಕಡೆಯಿಂದ ಬಂದು ಕಾಪು ಪೇಟೆ ಭಾಗ ಪ್ರವೇಶಿಸುವಲ್ಲಿ ನೀಡಿರುವ ತಿರುವು ಅವೈಜ್ಞಾನಿಕ ವಾಗಿರುವಂಥದ್ದು. ಇಲ್ಲಿ ಮೂರು-ನಾಲ್ಕು ದಿಕ್ಕು ಗಳಿಂದ ವಾಹನಗಳು ನುಗ್ಗುವ ಪರಿಸ್ಥಿತಿ. ಜನ ಸಂಚಾರವೂ ಸದಾ ಇರುವಂಥದ್ದೇ. ಆದರೆ ಇದನ್ನೆಲ್ಲ ನಿಭಾಯಿಸಲು ಬೇಕಾದ ಡೈವರ್ಶನ್‌ನ ನಡುವೆ ಜಾಗ ಕಿರಿದಾಗಿದೆ. ಬೆಳಗ್ಗಿನ ಅವಧಿಯಲ್ಲಿ ಕೆಲವೊಮ್ಮೆ ಇಲ್ಲಿ ಪೊಲೀಸ್‌ ಸಿಬಂದಿ ಇರುತ್ತಾರಾದರೂ ಅಪ ಘಾತಗಳು ಕಡಿಮೆಯಾಗುತ್ತಿಲ್ಲ. ಮಸೀದಿ ಎದುರಿನ ತಿರುವು ಕೂಡ ಇಷ್ಟೇ ಅಪಾಯಕಾರಿ.

ಕಾಪು ಹೊಸ ಮಾರಿ
ಗುಡಿಯಿಂದ ಸರ್ವೀಸ್‌ ರಸ್ತೆಯಲ್ಲಿ ಬರುವ ವಾಹನ ಗಳದು ಇನ್ನೊಂದು ಕತೆ. ಅವು ಮುಂದುವರಿದು ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತವೆ. ಅಪಘಾತಗಳಿಗೆ ಇದೂ ಕಾರಣ. ಸಮಸ್ಯೆ ಪರಿಹಾರ ಕಾಣಬೇಕಾದರೆ ಕಾಪು ಮಾರಿಗುಡಿಯಿಂದ ಹಳೆ ಮಾರಿಗುಡಿ ದ್ವಾರದವರೆಗಾದರೂ ಎರಡೂ ಬದಿಗಳಲ್ಲಿ ಸರ್ವೀಸ್‌ ರಸ್ತೆ ಬೇಕು. ಕಾಪುವಿನಿಂದ ಕಟಪಾಡಿ ಕಡೆಗೆ ಹೋಗುವಲ್ಲಿ ಫ್ಲೈ ಓವರ್‌ನಿಂದ ಸ್ವಲ್ಪ ಮುಂದಕ್ಕೆ ಹೆದ್ದಾರಿಯಲ್ಲಿ ಗುಂಡಿಗಳೆದ್ದಿವೆ. ತೇಪೆ ಹಾಕಲಾಗುತ್ತದೆ, ಮತ್ತೆ ಎದ್ದು ಹೋಗುತ್ತದೆ.

ಕಾಪು ದಂಡತೀರ್ಥ ಶಿಕ್ಷಣ ಸಂಸ್ಥೆಯ ಮುಂಭಾಗ ಶಾಲಾ ವಲಯ. ಇಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ವಿದ್ಯಾರ್ಥಿಗಳ ಸುರಕ್ಷತೆಗೆ ಕ್ರಮ ವಹಿಸಲಾಗಿದೆ. ಆದರೆ ಇಲ್ಲಿಯೂ ಸರ್ವೀಸ್‌ ರಸ್ತೆ, ಎಚ್ಚರಿಕೆ ಫ‌ಲಕಗಳ ಕೊರತೆ ಇರುವಂಥದೇ. ಕಾಪು ಕಡೆಗೆ ಹೋಗುವಾಗ ಪಾಂಗಾಳ ವಿದ್ಯಾವರ್ಧಕ ಶಾಲೆ ಸಮೀಪ ಹೆದ್ದಾರಿ ಗುಂಡಿಗಳು ಕಂಟಕವಾಗಿವೆ.

Advertisement

ಕಟಪಾಡಿಯ ಸಮಸ್ಯೆ ಹೇಳಿ ಮುಗಿಯದ್ದು
ಪಡುಬಿದ್ರಿ ಜಂಕ್ಷನ್‌ನಂಥದೇ ಇನ್ನೊಂದು ಗೊಂದಲಪುರ ಕಾಣಿಸುವುದು ಶಿರ್ವ ರಸ್ತೆ ಸಂಧಿಸುವ ಕಟಪಾಡಿ ಜಂಕ್ಷನ್‌ನಲ್ಲಿ. ಇಲ್ಲಿ ನಿತ್ಯ ನಿರಂತರ ವಾಹನ ದಟ್ಟಣೆ, ಬೇಕಾಬಿಟ್ಟಿಯಾಗಿ ನಾಲ್ಕೂ ಕಡೆಗಳಿಂದ ನುಗ್ಗುವ ವಾಹನಗಳು. ಬೆಳಗ್ಗೆ ಮತ್ತು ಸಂಜೆ ವೇಳೆ ಪೊಲೀಸರು ಸಂಚಾರ ನಿಯಂತ್ರಿಸುತ್ತಾರಾದರೂ ಸುಗಮ ಸಂಚಾರ ಕನಸೇ ಸರಿ. ಈ ಜಂಕ್ಷನ್‌ನಲ್ಲಿ ಫ್ಲೈ ಓವರ್‌ ಅಥವಾ ಓವರ್‌ ಬ್ರಿಡ್ಜ್ ಬೇಕೆಂಬ ಕೂಗು ಕೇಳಿಸದಂತೆ ಹೆದ್ದಾರಿ ಪ್ರಾಧಿಕಾರ ಕಿವಿಗೆ ಬೀಗ ಜಡಿದು ಕೂತಿದೆ. ಬಸ್‌ ನಿಲ್ದಾಣದ ಸಮಸ್ಯೆಯೂ ಬಗೆಹರಿದಿಲ್ಲ. ಸದ್ಯ ಸರ್ವೀಸ್‌ ರಸ್ತೆಯೇ ಬಸ್‌ ನಿಲ್ದಾಣ.

ಎಲ್ಲೆಲ್ಲೂ ಸರ್ವೀಸ್‌ ರಸ್ತೆ ಕೊರತೆ
ರಾ.ಹೆ. 66ರ ಉದ್ದಕ್ಕೂ ಸರಿಯಾದ ಸರ್ವೀಸ್‌ ರಸ್ತೆಗಳನ್ನು ನಿರ್ಮಿಸುವತ್ತ ಹೆದ್ದಾರಿ ಇಲಾಖೆ ಎಷ್ಟು ನಿರ್ಲಕ್ಷ್ಯ ವಹಿಸಿದೆ ಎಂಬುದಕ್ಕೆ ಇನ್ನೊಂದು ಉದಾಹರಣೆ ಎರ್ಮಾಳು ಜನಾರ್ದನ ದೇವಸ್ಥಾನ ಬಳಿ. ಇದು ಕೂಡ ನಿರಂತರ ಅಪಘಾತಗಳು ನಡೆಯುವ ತಾಣ. ಕಾರಣ – ಸರ್ವೀಸ್‌ ರಸ್ತೆಯ ಕೊರತೆ. ಉಚ್ಚಿಲ ಪೇಟೆ ಭಾಗದಲ್ಲಿಯೂ ಸರ್ವೀಸ್‌ ರಸ್ತೆ ಬೇಕಿದೆ. ಪಣಿಯೂರು ತಿರುವು ಸಮೀಪ ಡೈವಶ‌ìನ್‌ ಇದೆ; ಆದರೆ ಇದರಿಂದ ಅಪಾಯವೇ ಹೆಚ್ಚು. ಬ್ಯಾರಿಕೇಡ್‌ಗಳನ್ನು ಅಳವಡಿಸುವುದರಿಂದ ಪ್ರಯೋಜನವಿಲ್ಲ ಎಂಬುದಕ್ಕೆ ಸಿಗುವ ಇನ್ನೊಂದು ಸಾಕ್ಷಿ ಈ ಡೈವರ್ಶನ್‌. ಸರ್ವೀಸ್‌ ರಸ್ತೆಯಿಲ್ಲದೆ ಉಚ್ಚಿಲ ಪೇಟೆಯಿಂದ ಮೂಳೂರು ಕಡೆಗೆ ಹೋಗುವವರು ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವುದು ನಿಂತಿಲ್ಲ. ಈ ಭಾಗದಲ್ಲಿ ಚರಂಡಿ ವ್ಯವಸ್ಥೆಯೂ ಇಲ್ಲ. ಎರಡೂ ಬದಿ ಸರ್ವೀಸ್‌ ರಸ್ತೆಯಾಗದೆ ಸುರಕ್ಷಿತ ಸಂಚಾರ ಕಷ್ಟ.

ಬಾಡಿಗೆ ಹೆಚ್ಚಳ ಅನಿವಾರ್ಯ
ಸರ್ವೀಸ್‌ ರಸ್ತೆ ಇಲ್ಲದಿರುವುದು ದೊಡ್ಡ ಸಮಸ್ಯೆ. ನಾವು ಅನವಶ್ಯಕವಾಗಿ ತುಂಬಾ ದೂರ ಹೋಗಿ ವಾಪಸು ಬರಬೇಕು. ಹಾಗಾಗಿ ಬಾಡಿಗೆ ದರ ಹೆಚ್ಚಿಸುವುದು ಅನಿವಾರ್ಯ ವಾಗಿದೆ. ಎರ್ಮಾಳು ದೇವಸ್ಥಾನ ಪರಿಸರದಲ್ಲಿ ಯಾದರೂ ಸರ್ವೀಸ್‌ ರಸ್ತೆಗಳನ್ನು ಮಾಡಲಿ.
-ಆನಂದ್‌, ರಿಕ್ಷಾ ಚಾಲಕ, ಬಡ ಎರ್ಮಾಳು

ನೀವೂ ಸಮಸ್ಯೆ ತಿಳಿಸಿ
ಉಡುಪಿ ಜಿಲ್ಲೆಯಲ್ಲಿ ಹಾದು ಹೋಗುವ ರಾ.ಹೆ. 66ರಲ್ಲಿ ಹೆಚ್ಚುತ್ತಿರುವ ಅಪಘಾತಗಳು ಕೊನೆಯಾಗ ಬೇಕೆನ್ನುವುದು ಉದಯವಾಣಿ ಕಾಳಜಿ. ಈ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ನಿಮ್ಮ ಸಲಹೆ- ಅಭಿಪ್ರಾಯ, ಸಮಸ್ಯೆಯನ್ನು 9632369999 ಈ ಸಂಖ್ಯೆಗೆ ಫೋಟೋ ಸಮೇತ ವಾಟ್ಸಾಪ್‌ ಮಾಡಿ.

ಉದಯವಾಣಿ ವಾಸ್ತವ ವರದಿ: ಉಡುಪಿ ಟೀಮ್‌

Advertisement

Udayavani is now on Telegram. Click here to join our channel and stay updated with the latest news.

Next