ಉಡುಪಿ, ಅ. 11: ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ನೂರಾರು ಕಾನೂನುಗಳು ಜಾರಿಗೆ ಬಂದಿವೆ. ಆದರೆ ಮೊನ್ನೆಯ ಹತ್ರಾಸ್‌ನ ಘಟನೆ ನಡೆಯುವ ವರೆಗೂ ಈ ಕಾನೂನಿಗೆ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ ತಡೆಯಲು ಸಾಧ್ಯ ವಾಗಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಖೇದ ವ್ಯಕ್ತಪಡಿಸಿದರು.
ಮಕ್ಕಳ ಸಹಾಯವಾಣಿ 1098, ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರೋಟರಿ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಕುಕ್ಕಿಕಟ್ಟೆ ಸುಬ್ರಹ್ಮಣ್ಯ ಸಭಾಭವನದಲ್ಲಿ ರವಿವಾರ ಆಯೋಜಿಸಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣು ಮಗು ಹುಟ್ಟಿದ ತತ್‌ಕ್ಷಣ ಕಸದ ತೊಟ್ಟಿಗೆ ಎಸೆಯುವುದು, ಗಂಡು ಹುಟ್ಟಿದರೆ ಮಾತ್ರ ವಂಶ ಬೆಳೆಯುತ್ತದೆ ಎನ್ನುವ ಯೋಚನೆಗಳಿಂದ ಹೊರ ಬಂದರೆ ಮಾತ್ರ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣ ಕಡಿಮೆಯಾಗುತ್ತದೆ. ಜತೆಗೆ ಗಂಡು ಮಕ್ಕಳಲ್ಲಿ ಮಹಿಳೆಯರ ಬಗ್ಗೆ ಗೌರವ ಮೂಡಿಸುವ ಕೆಲಸ ಮಾಡಬೇಕು ಎಂದರು.
ದಿಲ್ಲಿ ಅತ್ಯಾಚಾರ ಪ್ರಕರಣದ ಬಳಿಕ, ಕಾನೂನು ಕಠಿನಗೊಳಿಸಿ ಕ್ರಿಮಿನಲ್ ಕಾಯ್ದೆ – 2013 ತಿದ್ದುಪಡಿ ಆಯಿತು. ಆದರ ಅನಂತರವೂ ಈ ಪ್ರಕರಣ ಹೆಚ್ಚಾಯಿತು. ಇದರಿಂದ ಅತ್ಯಾಚಾರ ನಡೆದರೆ ಮರಣ ದಂಡನೆ ವಿಧಿಸುವ ಕುರಿತು ಮೋದಿಯವರ ಸರಕಾರ ಸಂಸತ್ತಿನಲ್ಲಿ ತಿದ್ದುಪಡಿ ತಂದು ಜಾರಿಗೊಳಿಸಿದ್ದಾರೆ ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಕಾವೇರಿ, ಉಡುಪಿ ರೋಟರಿ ಅಧ್ಯಕ್ಷ ರಾಧಿಕಾ ಲಕ್ಷ್ಮೀನಾರಾಯಣ, ಮಕ್ಕಳ ಕಲ್ಯಾಣ ಸಮಿತಿ ಮಾಜಿ ಅಧ್ಯಕ್ಷ ಬಿ.ಕೆ. ನಾರಾಯಣ ಉಪಸ್ಥಿತರಿದ್ದರು. ಮಕ್ಕಳ ಸಹಾಯವಾಣಿ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ ಸ್ವಾಗತಿಸಿದರು, ರೋಟರಿ ಕ್ಲಬ್‌ನ ದೀಪಾ ಭಂಡಾರಿ ವಂದಿಸಿದರು. ಸಹಾಯವಾಣಿ ಆಪ್ತ ಸಮಾಲೋಚಕಿ ವೀಣಾ ಕಾರ್ಯಕ್ರಮ ನಿರೂಪಿಸಿದರು.
ಅತ್ಯಾಚಾರ ತಡೆಯುವ ರೀತಿಯನ್ನು ಚಿಂತಿಸಿ : ಹೆಣ್ಣುಮಕ್ಕಳ ದಿನಾಚರಣೆ ಆಚರಿಸುವ ಈ ಸಂದರ್ಭ ಮಹಿಳೆಯರ ಮೇಲಿನ ಅತ್ಯಾಚಾರ ಹೇಗೆ ತಡೆಯಬಹುದು ಎನ್ನುವ ಕುರಿತು ಚಿಂತಿಸಬೇಕಾಗಿದೆ. ಇದು ಕೇವಲ ಕಾನೂನಿನ ಕೈಯಿಂದ ಮಾತ್ರ ಸಾಧ್ಯವಿಲ್ಲ. ಹೆಣ್ಣು ಯಾಕೆ ಸರಕಾರದ ರಕ್ಷಣ ಕೇಂದ್ರಕ್ಕೆ ಬರುತ್ತಾರೆ ಎನ್ನುವ ಮೂಲ ಕಾರಣ ಸರಕಾರ ಹಾಗೂ ಸಾರ್ವಜನಿಕ ರಿಂದ ಶೋಧವಾಗಬೇಕಾಗಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.