Advertisement

ರಾಷ್ಟ್ರೀಯ ಫ‌ುಟ್ಬಾಲ್‌ ತಂಡದಲ್ಲಿ  ಬಳ್ಳಾರಿ ಪ್ರತಿಭೆ

11:18 AM Sep 16, 2017 | |

ಅಪ್ಪ ಫ‌ುಟ್ಬಾಲ್‌ ತರಬೇತುದಾರ, ಹೀಗಾಗಿ ತರಬೇತಿಯ ಸಂದರ್ಭದಲ್ಲಿ ಕೆಲವೊಮ್ಮೆ ಮಗನನ್ನು ಕರೆದೊಯ್ಯುತ್ತಿದ್ದರು. ಚಿಕ್ಕ ಬಾಲಕ ಫ‌ುಟ್ಬಾಲ್‌ ಕಂಡ ತಕ್ಷಣ ಅದನ್ನು ಒದೆಯುತ್ತಾ ಆಟವಾಡುತ್ತಿದ್ದ. ಇದು ಸಹಜವಾಗಿ ಆ ಬಾಲಕನಲ್ಲಿ ಫ‌ುಟ್ಬಾಲ್‌ ಆಸಕ್ತಿಯನ್ನು ಬಾಲ್ಯದಲ್ಲಿಯೇ ಹುಟ್ಟಿಸಿತ್ತು. 

Advertisement

ಸ್ವಲ್ಪ ದೊಡ್ಡವನಾದ ಮೇಲೆ ಅಪ್ಪನಿಂದ ಮಗನಿಗೆ ಆಟದ ಕೌಶಲ್ಯದ ಬಗ್ಗೆ ಮಾಹಿತಿ ಸಿಕ್ಕಿತು. ಶಾಲೆ ಮುಗಿದಮೇಲೆ ಅಪ್ಪ ಮಗನಿಗೆ ಅದೇ ಕೆಲಸವಾಗಿತ್ತು. ಆ ಬಾಲಕನೇ ಬಳ್ಳಾರಿಯ ಜೋಯೆಲ್‌ ಕೆವಿನ್‌ ಬ್ರಗಂಝಾ. ಈಗ ರಾಜ್ಯ ತಂಡದಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಜೋಯೆಲ್‌ 18 ವರ್ಷದೊಳಗಿನ 45ನೇ ಏಷ್ಯನ್‌ ಸ್ಕೂಲ್‌ ಫ‌ುಟ್ಬಾಲ್‌ ಚಾಂಪಿಯನ್‌ಶಿಪ್‌ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಸದ್ಯ ಕ್ರೀಡಾಕೂಟ ಇರಾನ್‌ನಲ್ಲಿ ನಡೆಯುತ್ತಿದ್ದು, ಭಾರತ ತಂಡ ಗಮನಾರ್ಹ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ.

ಈ ಕೂಟಕ್ಕೆ ಭಾರತ ತಂಡದಲ್ಲಿ ಸ್ಥಾನ ಪಡೆದ ಕರ್ನಾಟಕದ ಏಕೈಕ ಆಟಗಾರ ನಮ್ಮ ಜೋಯೆಲ್‌ ಎಂಬುದು ಹೆಮ್ಮೆಯ ಅಭಿಮಾನದ ವಿಚಾರ. ಚಿಕ್ಕವಯಸ್ಸಿನಲ್ಲಿ ಫ‌ುಟ್ಬಾಲ್‌ ಬಗ್ಗೆ ಆಸಕ್ತಿ ಹೊಂದಿರುವುದು ಮತ್ತು ಸ್ವತಃ ತಂದೆಯಿಂದಲೇ ತರಬೇತಿ ಸುಗುತ್ತಿರುವುದು ಜೋಯೆಲ್‌ಗೆ ವರವಾಗಿದೆ. ಕೂಟ ಸೆ.6 ರಿಂದ ಆರಂಭವಾಗಿದೆ. ಈ ಕೂಟದ ಆರಂಭಿಕ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಲು ಭಾರತ ಯಶಸ್ವಿಯಾಗದಿದ್ದರೂ ಗಮನಾರ್ಹ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ತಂಡದ ಅಂತಿಮ 11ರಲ್ಲಿ ಆಡಿರುವ ಜೋಯೆಲ್‌ ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ. 

ಆಯ್ಕೆಯಾಗಿದ್ದು ಹೇಗೆ?
ಜೋಯೆಲ್‌ ಬ್ರಗಂಝಾ 2016ರಲ್ಲಿ ಪುದುಚೆರಿ, ಕರೀಂನಗರ್‌ ಹಾಗೂ ಅಂಡಮಾನ್‌ನಲ್ಲಿ ಜರುಗಿದ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು. ಕರ್ನಾಟಕ ತಂಡ ಗಮನಾರ್ಹ ಪ್ರದರ್ಶನ ನೀಡಿತ್ತು. ಕೆಲವು ಟೂರ್ನಿಗಳಲ್ಲಿ ಜಯ ಸಾಧಿಸಿತ್ತು. ರಾಜ್ಯದ ಗೆಲುವಿನ ಓಟದ ಹಿಂದೆ ಜೋಯೆಲ್‌ ಪಾತ್ರ ದೊಡ್ಡದಿತ್ತು.  

ಇದನ್ನು ಆಯ್ಕೆಗಾರರು ಗಮನಿಸಿದ್ದರು. ಈ ಪ್ರಚಂಡ ಪ್ರದರ್ಶನವೇ ಜೋಯೆಲ್‌ಗೆ ರಾಷ್ಟ್ರೀಯ ತಂಡದ ಬಾಗಿಲು ತೆರೆಸಿದೆ.ಜೋಯೆಲ್‌ ಆಟವನ್ನು ಗಮನಿಸಿದ ಸ್ಕೂಲ್‌ ಗೇಮ್ಸ್‌ ಫೆಡರೇಷನ್‌ ಆಫ್ ಇಂಡಿಯಾ ಕಳೆದ ಆಗಷ್ಟ್ ತಿಂಗಳಲ್ಲಿ ಆಗ್ರಾ ನಗರದಲ್ಲಿ ಜರುಗಿದ ಆಯ್ಕೆ ಶಿಬಿರಕ್ಕೆ ಆಹ್ವಾನ ನೀಡಿತ್ತು. ಅಲ್ಲಿ ಭಾಗವಹಿಸಿದ 59 ಫ‌ುಟ್ಬಾಲ್‌ ಪ್ರತಿಭೆಗಳ ಪೈಕಿ ಜೋಯೆಲ್‌ ಅತ್ಯುತ್ತಮ ಆಟ ಪ್ರದರ್ಶಿಸಿದ್ದಾರೆ. ಇದರಿಂದಾಗಿ ಭಾರತ ತಂಡದ 22 ಆಟಗಾರರ ತಂಡದಲ್ಲಿ ಜೋಯೆಲ್‌ಗೆ ಅವಕಾಶ ಸಿಕ್ಕಿದೆ.

Advertisement

ಜೋಯೆಲ್‌ ಸಾಧನೆಯ ಹಾದಿ
ಬಳ್ಳಾರಿಯ ಕ್ರೀಡಾಪ್ರೇಮಿ ಹಾಗೂ ಕ್ರೀಡಾಪಟುಗಳಿರುವ ಕೊಂಕಣಿ ಭಾಷಿಕರ ಗೋವನ್ನರ ಕುಟುಂಬದಲ್ಲಿ ಜನಿಸಿರುವ ಜೋಯೆಲ್‌, ಸ್ವತಃ ಫ‌ುಟ್ಬಾಲ್‌ ಕೋಚ್‌ ಆಗಿರುವ ತಂದೆ ಫೆಲಿಕ್ಸ್‌ ಬ್ರಗಂಝಾ ಅವರಿಂದ ತರಬೇತಿ ಪಡೆದವರು.ಜೋಯೆಲ್‌ ಪ್ರೌಢ ಶಾಲೆ, ಪಿಯುಸಿಯಲ್ಲಿ ಜಿಲ್ಲಾ ಮಟ್ಟ ಮತ್ತು ರಾಜ್ಯ ಮಟ್ಟದ ಫ‌ುಟ್ಬಾಲ್‌ ಟೂರ್ನಿಗಳಲ್ಲಿ  ಆಡಿದ್ದಾರೆ. ಜಿಲ್ಲಾ ಮಟ್ಟದಲ್ಲಿ ತಮ್ಮ ಶಾಲಾ ತಂಡಕ್ಕೆ ಪ್ರಥಮ ಸ್ಥಾನ ತಂದುಕೊಟ್ಟ ಕೀರ್ತಿ ಜೋಯೆಲ್‌ಗಿದೆ. 

17 ವರ್ಷದೊಳಗಿನ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿ ಅನೇಕ ಪ್ರಶಸ್ತಿ ಪಡೆದಿದ್ದಾರೆ. ನಗರದ ನಂದಿ ಪಿಯು ಕಾಲೇಜಿನಲ್ಲಿ ಓದುತ್ತಾ ಅಪ್ಪನ ತರಬೇತಿಯಲ್ಲಿ ಜೋಯೆಲ್‌ ಉತ್ತಮ ಸಾಧನೆ ಮಾಡಿ ರಾಷ್ಟ್ರ ತಂಡಕ್ಕೆ ಆಯ್ಕೆಯಾಗಿ ಬಳ್ಳಾರಿಗೆ ಕೀರ್ತಿ ತಂದಿದ್ದಾನೆ.

ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ದೊರೆತಿರುವುದು ಸಂತಸ ತಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಸಾಧನೆ ಮಾಡಲು ಜೆಎಸ್‌ಡಬ್ಲೂ ಸಂಸ್ಥೆ ವಿಶೇಷ ತರಬೇತಿ ಶಾಲೆ ಆರಂಭಿಸಿದೆ. ಅಲ್ಲಿ ತರಬೇತಿ ಪಡೆದು, ಫ‌ುಟ್ಬಾಲ್‌ನಲ್ಲಿ ಅತ್ಯುತ್ತಮ ಸಾಧನೆ ಮಾಡುವ ಕನಸನ್ನು ಹೊಂದಿದ್ದೇನೆ. 
 ಜೋಯೆಲ್‌ ಕೆವಿನ್‌ ಬ್ರಗಂಝಾ, ಫ‌ುಟ್ಬಾಲ್‌ ಆಟಗಾರ

ದೇವರ ಕೃಪೆಯಿಂದ ಈ ಮಹತ್ವದ ಅವಕಾಶ ಲಭಿಸಿದೆ. ನನಗೆ ಜೋಯೆಲ್‌ನ ಆಟದ ಮೇಲೆ ವಿಶ್ವಾಸವಿದೆ. ನಮ್ಮ ದೇಶದಿಂದ ಸೂಕ್ತ ಸಿದ್ಧತೆಗಳೊಂದಿಗೆ ಇಂತಹ ಕ್ರೀಡಾಕೂಟಗಳಿಗೆ ಕ್ರೀಡಾಪಟುಗಳನ್ನು ಕಳುಹಿಸಿದರೆ ಉತ್ತಮ ಪ್ರದರ್ಶನ ಹಾಗೂ ಫ‌ಲಿತಾಂಶ ದೊರೆಯುತ್ತದೆ.
 ಫೆಲಿಕ್ಸ್‌ ಬ್ರಗಂಝಾ, 
ಜೋಯೆಲ್‌ನ ತಂದೆ ಹಾಗೂ ಫ‌ುಟ್ಬಾಲ್‌ ಕೋಚ್‌.

 ಎಂ.ಮುರಳಿ ಕೃಷ್ಣ

Advertisement

Udayavani is now on Telegram. Click here to join our channel and stay updated with the latest news.

Next