ಉಡುಪಿ/ಮಲ್ಪೆ : ಪ್ರಥಮ ಸ್ವಾತಂತ್ರ್ಯೋತ್ಸವದಲ್ಲಿ ಆರೋಹಣಗೊಂಡ ರಾಷ್ಟ್ರಧ್ವಜ ಇಂದಿಗೂ ಕಲ್ಮಾಡಿ ಮನೆಯೊಂದರಲ್ಲಿ ಸುರಕ್ಷಿತವಾಗಿದೆ.
1947ರಲ್ಲಿ ಸ್ವಾತಂತ್ರ್ಯ ಹೋರಾಟಗಾರ 96ರ ಹರೆಯದ ಉಡುಪಿಯ ದಿ| ಕೆ. ಗೋಪಾಲಕೃಷ್ಣ ಗುಂಡು ನಾಯಕ್ ಅವರು ಸಂತೆಕಟ್ಟೆಯಲ್ಲಿರುವ ತಮ್ಮ ಅಂಗಡಿಯ ಮೇಲೆ ಅಂದು ಆರೋಹಣಗೊಳಿಸಿದ್ದರು. ಅವರ ಕಾಲಾನಂತರ ಪ್ರಸ್ತುತ ಮಗ ಕೆ. ಮನೋಹರ ನಾಯಕ್ ಪ್ರತೀ ವರ್ಷ ಆ. 15ರಂದು ಮನೆ ಮುಂದೆ ಧ್ವಜಾರೋಹಣ ಮಾಡುತ್ತಿದ್ದಾರೆ.
ಅವಿವಾಹಿತ ಮನೋಹರ್‌ಗೆ ಈಗ 88 ವರ್ಷ. ಗುಜರಾತಿನ ವಡೋದರದಲ್ಲಿ ಪ್ರಿಂಟಿಂಗ್ ಪ್ರಸ್‌ನಲ್ಲಿ ಉದ್ಯೋಗದಲ್ಲಿದ್ದರು. ತಂಗಿ ರೇವತಿ ಶೆಣೈ ಮತ್ತು ಎಚ್.ಕೆ. ಶೆಣೈ ಅವರ ಕಲ್ಮಾಡಿಯ ಮನೆಯಲ್ಲಿ ವಾಸವಾಗಿದ್ದಾರೆ.
1934ರಲ್ಲಿ ಗಾಂಧೀಜಿ ಉಡುಪಿಗೆ ಬಂದ ವೇಳೆ ಅವರ ಜತೆ ಬಂದಿದ್ದ ಸ್ವಯಂಸೇವಕರಿಗೆ ನಿಲ್ಲಲು ಅಲ್ಲಲ್ಲಿ ಮನೆಗಳ ವ್ಯವಸ್ಥೆ ಮಾಡಿದರೆಂದು ಬ್ರಿಟಿಷರು ಗೋಪಾಲಕೃಷ್ಣರನ್ನು 4 ದಿನ ಜೈಲಿಗೆ ಹಾಕಿದ್ದರು ಎಂದು ಕೆ. ಮನೋಹರ್ ನಾಯಕ್ ನೆನಪಿಸುತ್ತಾರೆ.
1947ರ ಜುಲೈ 22ರಂದು ಸಂವಿಧಾನ ರಚನ ಸಭೆ ಅಶೋಕ ಚಕ್ರ ವಿರುವ ಧ್ವಜವನ್ನು ಅಂಗೀಕರಿಸುವ ಮುನ್ನ ಚರಕದ ಚಿಹ್ನೆ ಇರುವ ಸ್ವರಾಜ್ಯದ ಧ್ವಜವಿತ್ತು. ನಾಯಕ್ ಅವರು ಧ್ವಜಾರೋಹಣ ಮಾಡಿದ ಧ್ವಜ ಚರಕದ ಚಿಹ್ನೆ ಹೊಂದಿದೆ. 1947ರಲ್ಲಿ ಧ್ವಜ ಸಂಹಿತೆ ಇದ್ದಿರಲಿಲ್ಲ. ಈಗಿನಂತೆ ಧ್ವಜ ವಿತರಿಸುವ ವ್ಯವಸ್ಥೆಯೂ ಇದ್ದಿರಲಿಲ್ಲ. ಆದ್ದರಿಂದ ಸ್ವರಾಜ್ಯದ ಧ್ವಜಾರೋಹಣ ಮಾಡಿರುವ ಸಾಧ್ಯತೆ ಇದೆ ಎನ್ನುತ್ತಾರೆ ಎಂಜಿಎಂ ಕಾಲೇಜಿನ ಗಾಂಧೀ ಅಧ್ಯಯನ ಕೇಂದ್ರದ ಸಂಯೋಜಕ ಯು. ವಿನೀತ್ ರಾವ್.
ಇದನ್ನೂ ಓದಿ : ಮೂಲ್ಕಿ-ಮೂಡುಬಿದಿರೆ 30 ಕಿ.ಮೀ. ತಿರಂಗಾ ಯಾತ್ರೆ ಸಂಪನ್ನ : 100 ಮೀ. ಉದ್ದದ ಧ್ವಜ ಬಳಕೆ