Advertisement

ಕ್ರೀಡೆಗೆ ಒಂದುಗೂಡಿಸುವ ಶಕ್ತಿ ಇದೆ: ಶಶಿಕಾಂತ್‌ ಸೆಂಥಿಲ್‌

11:12 AM Dec 16, 2018 | Team Udayavani |

ಮಹಾನಗರ: ಕ್ರೀಡೆಗೆ ಪ್ರತಿಯೊಬ್ಬರನ್ನೂ ಒಂದುಗೂಡಿಸುವ ಶಕ್ತಿ ಇದೆ ಎಂದು ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಹೇಳಿದರು. ರಾಜ್ಯ ವಿಕಲಚೇತನ ಕಬಡ್ಡಿ ಸಂಸ್ಥೆ, ಯುವಜನ ಕ್ರೀಡಾ ಇಲಾಖೆ ಸಹಯೋಗದೊಂದಿಗೆ ಮಾತೃ ಪ್ರತಿಷ್ಠಾನ ಸಂಸ್ಥೆಯ ವತಿಯಿಂದ ರಾಜ್ಯದಲ್ಲಿ ಪ್ರಥಮ ಬಾರಿಗೆ ಶನಿವಾರದಿಂದ ಎರಡು ದಿನಗಳ ಕಾಲ ನಗರದ ಮಂಗಳಾ ಕ್ರೀಡಾಂಗಣದಲ್ಲಿ ನಡೆಯುವ ಒಂದನೇ ರಾಷ್ಟ್ರೀಯ ವಿಕಲಚೇತನರ ಕಬಡ್ಡಿ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಕಬಡ್ಡಿ ಈ ದೇಶದ ಪ್ರಮುಖ ಕ್ರೀಡೆಯಾಗಿದ್ದು, ವಿವಿಧ ರಾಜ್ಯಗಳಿಂದ ಆಗಮಿಸಿದ ಸ್ಪರ್ಧಿಗಳೆಲ್ಲರೂ ಆತ್ಮವಿಶ್ವಾಸದಿಂದ ಸ್ಪರ್ಧಿಸಬೇಕು ಎಂದರು. ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಮಾತನಾಡಿ, ಮಂಗಳೂರು ನಗರವು ಬ್ಯಾಂಕ್‌, ಶಿಕ್ಷಣ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದು, ಈಗ ಕ್ರೀಡಾ ಕ್ಷೇತ್ರದಲ್ಲಿಯೂ ಗುರುತಿಸಿಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಕಬಡ್ಡಿ ಕ್ರೀಡೆಗೆ ಹೆಚ್ಚಿನ ಪ್ರಾಮುಖ್ಯ ಇದೆ. ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡೆಯಲ್ಲಿ ಕರ್ನಾಟಕದ ಹೆಚ್ಚಿನ ಮಂದಿ ಕ್ರೀಡಾಪಟುಗಳು ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.

ವಿಶೇಷ ಶಕ್ತಿ
ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಜೀವನದ ದಾರಿ ತೋರಿಸುತ್ತದೆ. ಕ್ರೀಡೆಗೆ ವಿಶೇಷವಾದ ಶಕ್ತಿ ಇದೆ. ಸವಾಲುಗಳನ್ನು ಯಾವ ರೀತಿಯಾಗಿ ಎದುರಿಸಬಹುದು ಎಂಬುವುದನ್ನು ಕ್ರೀಡೆಯಿಂದ ಕಲಿಯಬಹುದಾಗಿದೆ. ಉಳಿದ ಕ್ರೀಡೆಗೆ ಹೋಲಿಕೆ ಮಾಡಿದರೆ ಕಬಡ್ಡಿ ಕ್ರೀಡೆಯಲ್ಲಿ ಹೆಚ್ಚಿನ ಸವಾಲುಗಳಿವೆ ಎಂದರು. ಮಾಜಿ ಶಾಸಕ ಜೆ.ಆರ್‌. ಲೋಬೋ ಮಾತನಾಡಿ, ಕ್ರೀಡೆಗಳಲ್ಲಿ ಭಾಗವಹಿಸುವುದರ ಮೂಲಕ ಭಾವೈಕ್ಯ ಮೂಡಿಬರಲಿ ಎಂದರು.

ಇಂಡಿಯನ್‌ ರೆಡ್‌ಕ್ರಾಸ್‌ ಸೊಸೈಟಿ ದ.ಕ., ಲಯನ್ಸ್‌ ಕ್ಲಬ್‌ ಇಂಟರ್‌ನ್ಯಾಶನಲ್‌ ಜಿಲ್ಲಾ 317 ಡಿ’ ಕ್ರೀಡಾಕೂಟಕ್ಕೆ ಸಹಕರಿಸಿದ್ದಾರೆ. ಇಂಡಿಯನ್‌ ರೆಡ್‌ಕ್ರಾಸ್‌ ಸೊಸೈಟಿ ರಾಜ್ಯಾಧ್ಯಕ್ಷ ಬಸ್ರೂರು ರಾಜೀವ್‌ ಶೆಟ್ಟಿ, ಜಿಲ್ಲಾಧ್ಯಕ್ಷ ಸಿಎ ಶಾಂತಾರಾಮ ಶೆಟ್ಟಿ, ಪತ್ರಕರ್ತ ವಾಲ್ಟರ್‌ ನಂದಳಿಕೆ, ಯುವಜನ ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್‌ ಡಿ’ಸೋಜಾ, ಸಂಘಟನ ಕಾರ್ಯದರ್ಶಿ ಡಿ. ಫೆರ್ನಾಂಡಿಸ್‌ ಮೊದಲಾದವರಿದ್ದರು.

12 ರಾಜ್ಯಗಳು ಭಾಗಿ
ಒಂದನೇ ರಾಷ್ಟ್ರೀಯ ವಿಕಲಚೇತನರ ಕಬಡ್ಡಿ ಕ್ರೀಡಾಕೂಟದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ತೆಲಂಗಾಣ, ಗೋವಾ, ಜಾರ್ಖಂಡ್‌, ಗುಜರಾತ್‌, ಮಧ್ಯ ಪ್ರದೇಶ, ಉತ್ತರಪ್ರದೇಶ, ರಾಜಸ್ಥಾನ, ಕೇರಳ ರಾಜ್ಯಗಳ ಸುಮಾರು 144 ಕ್ರೀಡಾಪಟುಗಳು, 12 ಮಂದಿ ಕ್ರೀಡಾಧಿಕಾರಿಗಳು ಸೇರಿದಂತೆ 156 ಮಂದಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next